ಭಾರತೀಯ ಬಾಹ್ಯಾಕಾಶ ಸಂಸ್ಥೆಯು(ಇಸ್ರೊ) ಮುಂದಿನ ಪೀಳಿಗೆಯ ನ್ಯಾವಿಗೇಶನ್ ಉಪಗ್ರಹ 'ಎನ್ವಿಎಸ್-03' ಅನ್ನು ಯಶಸ್ವಿಯಾಗಿ ಕಕ್ಷೆ ಸೇರಿಸಿದೆ. ಭಾರತದ ಸ್ವತಂತ್ರ ಉಪಗ್ರಹ ನ್ಯಾವಿಗೇಶನ್ ವ್ಯವಸ್ಥೆಯನ್ನು(ನ್ಯಾವಿಕ್) ಬಲಪಡಿಸುವ ದೃಷ್ಟಿಯಿಂದ ಇದು ಅತ್ಯಂತ ಮುಖ್ಯವಾಗಿದೆ.
ಶುಕ್ರವಾರ ರಾತ್ರಿ 11.51ರ ಸುಮಾರಿಗೆ, ಆಂಧ್ರ ಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಲಾಂಚ್ ಪ್ಯಾಡ್ನಿಂದ ಈ ಉಡ್ಡಯನ ನಡೆದಿದೆ. ಉಡ್ಡಯನದ 20 ನಿಮಿಷಗಳ ಬಳಿಕ ಜಿಎಸ್ಎಲ್ವಿ ರಾಕೆಟ್, ಉಪಗ್ರಹವನ್ನು ನಿಗದಿತ ಕಕ್ಷೆಗೆ ಸೇರಿಸಿತು ಎಂದು ಇಸ್ರೊ ಅಧ್ಯಕ್ಷ ವಿ ನಾರಾಯಣನ್ ಹೇಳಿದ್ದಾರೆ. ಈ ಉಡ್ಡಯನದ ಹಿಂದೆ ಕೆಲಸ ಮಾಡಿದ ಸಿಬ್ಬಂದಿ ಮತ್ತು ಎಂಜಿನಿಯರ್ಗಳಿಗೆ ಅಭಿನಂದನೆ ತಿಳಿಸಿದ್ದಾರೆ.
ಇಸ್ರೊದ ಎರಡನೇ ಪೀಳಿಗೆಯ ನ್ಯಾವಿಗೇಶನ್ ಉಪಗ್ರಹ ಸರಣಿಯ ಮೂರನೇ ಉಪಗ್ರಹ ಇದಾಗಿದೆ. ನ್ಯಾವಿಕ್ ಅಡಿಯಲ್ಲಿ ನ್ಯಾವಿಗೇಷನ್ ಸೇವೆಗಳನ್ನು ಸುಧಾರಿಸಲು ಮತ್ತು ನಿರಂತರತೆ ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ.
ನ್ಯಾವಿಗೇಶನ್ ವ್ಯವಸ್ಥೆಯಲ್ಲಿ ಸ್ಧಾವಲಂಬನೆ ಸಾಧಿಸಲು ಮುಂದಾಗಿರುವ ಭಾರತಕ್ಕೆ ಇದು ಅತ್ಯಂತ ಪ್ರಮುಖವಾಗಿದೆ. ನಾಗರಿಕ, ವಾಣಿಜ್ಯ ಮತ್ತು ಕಾರ್ಯತಂತ್ರದ ಅನ್ವಯಿಕೆಗಳಿಗೆ ಉಪಗ್ರಹ ಆಧಾರಿತ ನ್ಯಾವಿಗೇಷನ್ ನಿರ್ಣಾಯಕವಾಗಿರುವ ಸಮಯದಲ್ಲಿ ಈ ಉಡ್ಡಯನ ಮಹತ್ವ ಪಡೆದುಕೊಂಡಿದೆ.
ಭಾರತಕ್ಕೆ ಎನ್ವಿಎಸ್-03 ಉಪಗ್ರಹ ಬಹಳ ಮುಖ್ಯ ಏಕೆ?
ನ್ಯಾವಿಕ್, ಅಮೆರಿಕದ ಜಿಪಿಎಎಸ್ಗೆ ಭಾರತದ ದೇಶೀಯವಾಗಿ ಸಂಶೋಧಿಸಿರುವ ಪರ್ಯಾಯ ನ್ಯಾವಿಗೇಶನ್ ತಂತ್ರಜ್ಞಾನವಾಗಿದೆ.
ಭಾರತದ ಭೂಭಾಗದಾದ್ಯಂತ ಹಾಗೂ ದೇಶದ ಭೌಗೋಳಿಕ ಗಡಿರೇಖೆಗಳಿಂದ ಸುಮಾರು 1,500 ಕಿ.ಮೀ.ವರೆಗಿನ ಪ್ರದೇಶದಲ್ಲಿ ಸ್ಥಾನ ನಿರ್ಧಾರ ಮತ್ತು ಸಮಯ ನಿರ್ಧಾರ ಸೇವೆಗಳನ್ನು ಒದಗಿಸುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.
ರಸ್ತೆ ಮತ್ತು ಸಮುದ್ರಯಾನ ಮಾರ್ಗದರ್ಶನದಿಂದ ಹಿಡಿದು, ವಿಪತ್ತು ನಿರ್ವಹಣೆ, ಕೃಷಿ ಹಾಗೂ ಸಶಸ್ತ್ರ ಪಡೆಗಳ ಕಾರ್ಯತಂತ್ರದ ಕಾರ್ಯಾಚರಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಿಖರ ಮಾಹಿತಿಗಳನ್ನು ಈ ವ್ಯವಸ್ಥೆಯು ಒದಗಿಸುತ್ತದೆ.
ಎನ್ವಿಎಸ್-03 ಉಪಗ್ರಹದಲ್ಲಿ ವಿದೇಶದಿಂದ ಖರೀದಿಸಿದ ಪರಮಾಣು ಕ್ಲಾಕ್ ಜೊತೆಗೆ ಸ್ವದೇಶಿ ನಿರ್ಮಿತ ಪರಮಾಣು ಕ್ಲಾಕ್ ಇದೆ. ನಿರ್ಣಾಯಕ ನ್ಯಾವಿಗೇಷನ್ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸುವ ಭಾರತದ ಪ್ರಯತ್ನಗಳಲ್ಲಿ ಇದೊಂದು ಮಹತ್ವದ ಬೆಳವಣಿಗೆಯಾಗಿದೆ.
ಈಗ ಇರುವ ಎಲ್5 ಮತ್ತು ಎಸ್-ಬ್ಯಾಂಡ್ ಸಿಗ್ನಲ್ ಜೊತೆಗೆ ಎಲ್1 ಆವರ್ತನ ಸಿಗ್ನಲ್ ಅನ್ನು ಸಹ ಇದು ಪರಿಚಯಿಸುತ್ತದೆ. ಎಲ್1 ಸೇರ್ಪಡೆಯಿಂದ ನ್ಯಾವಿಗೇಶನ್ ರಿಸೀವರ್ಗಳು ಮತ್ತು ಗ್ರಾಹಕ ಸಾಧನಗಳೊಂದಿಗೆ ಹೊಂದಾಣಿಕೆ ಸುಧಾರಿಸುವ ನಿರೀಕ್ಷೆ ಇದೆ.
ಎನ್ವಿಎಸ್-02 ಹಿನ್ನಡೆ ಬಳಿಕ ನಿರ್ಣಾಯಕ ಮಿಷನ್
2025ರ ಜನವರಿಯಲ್ಲಿ ಜಿಎಸ್ಎಲ್ವಿ-ಎಫ್15 ಮೂಲಕ ಎನ್ವಿಎಸ್-02 ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿತ್ತು. ಆದರೆ, ಅದರ ಗೊತ್ತುಪಡಿಸಿದ ಕಾರ್ಯಾಚರಣೆಯ ಕಕ್ಷೆಯನ್ನು ತಲುಪಲು ವಿಫಲವಾಗಿತ್ತು. ಎನ್ವಿೆಸ್-03ನಲ್ಲಿ ಸಮಸ್ಯೆ ತಲೆದೋರಿದರೆ, ತನ್ನಷ್ಟಕ್ಕೆ ತಾನೇ ಸರಿಪಡಿಸುವ ವ್ಯವಸ್ಥೆ ಇದೆ.
ಉಪಗ್ರಹದ ಪ್ರಯಾಣ ಅದರ ಯಶಸ್ವಿ ಉಡ್ಡಯನದೊಂದಿಗೆ ಕೊನೆಗೊಳ್ಳುವುದಿಲ್ಲ. ಆನ್ಬೋರ್ಡ್ ಪ್ರೊಪಲ್ಷನ್ ವ್ಯವಸ್ಥೆಯು ಗೊತ್ತುಪಡಿಸಿದ ಜಿಯೋಸಿಂಕ್ರೋನಸ್ ಕಾರ್ಯಾಚರಣೆಯ ಕಕ್ಷೆ ತಲುಪಿ, ನಿಗದಿತ ಕೆಲಸ ಆರಂಭಿಸಬೇಕು.
ನಿಗದಿತ ಕಕ್ಷೆ ಸೇರಿದ 'ಎನ್ವಿಎಸ್-03' ಉಪಗ್ರಹ
