ನವದೆಹಲಿ:ಎಥೆನಾಲ್ ಮಿಶ್ರಣವಿರುವ ಪೆಟ್ರೋಲ್ (ಇ20) ಬಳಕೆಯಿಂದ ಐಷಾರಾಮಿ ಕಾರುಗಳ ಮೈಲೇಜ್ ಗಣನೀಯವಾಗಿ ಕುಸಿಯುತ್ತದೆ ಎಂದು ವಿಡಿಯೊ ಬ್ಲಾಗರ್ ಒಬ್ಬರು ಆರೋಪಿಸಿದ್ದಾರೆ.
ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಮರ್ಸಿಡಿಸ್ ಬೆಂಜ್ ಇಂಡಿಯಾ ಸಂಸ್ಥೆಯು, ಇ20 ಇಂಧನವು ತನ್ನ ಕಂಪನಿಯ ಬಿಎಸ್-VI ನಿಬಂಧನೆಯ ಎಲ್ಲಾ ಪೆಟ್ರೋಲ್ ಕಾರುಗಳಿಗೆ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಸ್ಪಷ್ಟನೆ ನೀಡಿದೆ.
ವಿಡಿಯೊ ಬ್ಲಾಗರ್ ಸೌರಭ್ ಜೋಶಿ ಎಂಬವರು ಇತ್ತೀಚೆಗೆ ಯೂಟ್ಯೂಬ್ನಲ್ಲಿ ವಿಡಿಯೊ ಒಂದನ್ನು ಹಂಚಿಕೊಂಡಿದ್ದರು. ಅದರಲ್ಲಿ, 'ಸ್ಥಳೀಯ ಪೆಟ್ರೋಲ್ ಬಂಕ್ಗಳಲ್ಲಿ ಸಿಗುತ್ತಿರುವ ಎಥೆನಾಲ್ ಮಿಶ್ರಿತ ಇ20 ಪೆಟ್ರೋಲ್ ಬಳಸಿದ ಕೇವಲ 48 ಗಂಟೆಗಳಲ್ಲಿ ಮರ್ಸಿಡಿಸ್ ಬೆಂಜ್ ಎಸ್ಯುವಿ ಕಾರಿನ ಮೈಲೇಜ್ ಪ್ರತಿ ಲೀಟರ್ಗೆ 17 ಕಿ.ಮೀ.ನಿಂದ ಕೇವಲ 5 ಕಿ.ಮೀ.ಗೆ ಕುಸಿದಿದೆ' ಎಂದಿದ್ದರು.
'ಒಮ್ಮೆ ಪೂರ್ತಿ ಟ್ಯಾಂಕ್ ಇಂಧನ ತುಂಬಿಸಿದರೆ 800 ಕಿ.ಮೀ ಚಲಿಸುತ್ತಿದ್ದ ಕಾರು, ಈಗ ಕೇವಲ 480 ಕಿ.ಮೀ ವ್ಯಾಪ್ತಿಯನ್ನು ತೋರಿಸುತ್ತಿದೆ' ಎಂದು ಅವರು ಆತಂಕ ವ್ಯಕ್ತಪಡಿಸಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತಲ್ಲದೆ ಗ್ರಾಹಕರಲ್ಲಿ ಆತಂಕ ಮೂಡಿಸಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ಮರ್ಸಿಡಿಸ್ ಬೆಂಜ್ ಇಂಡಿಯಾ, 'ನಮ್ಮ ಗ್ರಾಹಕರ ಸುರಕ್ಷತೆ, ವಾಹನದ ವಿಶ್ವಾಸಾರ್ಹತೆ ಮತ್ತು ಕಾರ್ಯಕ್ಷಮತೆಗೆ ನಾವು ಅತ್ಯುನ್ನತ ಆದ್ಯತೆ ನೀಡುತ್ತೇವೆ. ಕಂಪನಿಯು 2020ರಿಂದ ಭಾರತದಲ್ಲಿ ಮಾರಾಟ ಮಾಡುತ್ತಿರುವ ಬಿಎಸ್-VI ಮಾದರಿಯ ಎಲ್ಲಾ ಪೆಟ್ರೋಲ್ ಕಾರುಗಳು ಶೇಕಡ 20 ರಷ್ಟು ಎಥೆನಾಲ್ ಮಿಶ್ರಿತ ಇಂಧನವನ್ನು (ಇ20) ತಡೆದುಕೊಳ್ಳುವ ತಂತ್ರಜ್ಞಾನ ಹೊಂದಿದ್ದು, ಸಂಬಂಧಪಟ್ಟ ಸರ್ಕಾರಿ ಸಂಸ್ಥೆಗಳಿಂದ ಪ್ರಮಾಣೀಕೃತಗೊಂಡಿವೆ. ಗ್ರಾಹಕರು ಈ ಬಗ್ಗೆ ಯಾವುದೇ ಆತಂಕಪಡುವ ಅಗತ್ಯವಿಲ್ಲ' ಎಂದು ಗ್ರಾಹಕ ಸಲಹಾ ಪ್ರಕಟಣೆಯಲ್ಲಿ ತಿಳಿಸಿದೆ.
ತಾಂತ್ರಿಕ ನೆರವು ಅಥವಾ ಸಂದೇಹಗಳಿದ್ದಲ್ಲಿ ಗ್ರಾಹಕರು ನೇರವಾಗಿ ಕಂಪನಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಿರುವ ಸಂಸ್ಥೆಯು, ಪರಿಸರಸ್ನೇಹಿ ಮತ್ತು ಸುಸ್ಥಿರ ಸಾರಿಗೆ ವ್ಯವಸ್ಥೆಗೆ ಬದ್ಧವಾಗಿರುವುದಾಗಿ ತಿಳಿಸಿದೆ.
ಈ ಮೊದಲು ಶೇ 20ರಷ್ಟು ಎಥೆನಾಲ್ ಮಿಶ್ರಣವಿರುವ ಪೆಟ್ರೋಲ್ (ಇ20) ಬಳಕೆಯಿಂದ ಕೆಲವು ವಾಹನಗಳ ಇಂಧನ ದಕ್ಷತೆಯ (ಮೈಲೇಜ್) ಸಾಮರ್ಥ್ಯವು ಶೇಕಡ 3ರಿಂದ ಶೇ 5ರಷ್ಟು ಕಡಿಮೆ ಆಗಬಹುದು ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಿಳಿಸಿತ್ತು. ಆದರೆ, ಇ20 ಪೆಟ್ರೋಲ್ ಬಳಕೆಯಿಂದ ವಾಹನಗಳಲ್ಲಿ ಇಂಧನದ ದಹನಶಕ್ತಿ ಹೆಚ್ಚಾಗಿ, ಕಾರ್ಯಕ್ಷಮತೆಯೂ ಹೆಚ್ಚುತ್ತದೆ. ಎಂಜಿನ್ ಕಾರ್ಯಾಚರಣೆ ಸುಗಮವಾಗುವುದರ ಜೊತೆಗೆ ಇಂಗಾಲ ಹೊರಸೂಸುವಿಕೆ ತಗ್ಗುವುದರಿಂದ ಪರಿಸರದ ಮೇಲಿನ ಹೊರೆಯೂ ಕಡಿಮೆ ಆಗುತ್ತದೆ ಎಂದು ಹೇಳಿತ್ತು.
ಯಲ್ಲಾಪುರ: ಅರಬೈಲ್ ಘಟ್ಟದಲ್ಲಿ ಎಥನಾಲ್ ಟ್ಯಾಂಕರ್ಗೆ ಬೆಂಕಿರಾಜ್ಯದಲ್ಲಿ ಸಾವಿರ ಪೆಟ್ರೋಲ್ ಬಂಕ್ ಸ್ಥಾಪನೆ ಗುರಿ: ನಿರಾಣಿ
