2026ರ ಫಿಫಾ ವಿಶ್ವಕಪ್ ಟೂರ್ನಿಯು ಅತ್ಯಂತ ರೋಚಕ ಹಂತವನ್ನು ತಲುಪಿದೆ. ಈಗಾಗಲೇ 32ರ ಹಂತದ ಎರಡು ಪಂದ್ಯಗಳು ಪೆನಾಲ್ಟಿ ಶೂಟೌಟ್ ಮೂಲಕ ವಿಜಯಶಾಲಿಯನ್ನು ನಿರ್ಧರಿಸಿತು. ಮೊರಕ್ಕೊ ವಿರುದ್ಧ ನೆದರ್ಲೆಂಡ್ಸ್ ಮತ್ತು ಜರ್ಮನಿ ವಿರುದ್ಧ ಪರಗ್ವೆ ಪಂದ್ಯಗಳು ನಿಗದಿತ ಅವಧಿಯಲ್ಲಿ 1-1 ಗೋಲುಗಳಿಂದ ಸಮಬಲಗೊಂಡಿದ್ದವು.
ನಂತರ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ಜರ್ಮನಿ ಇತಿಹಾಸದಲ್ಲೇ ಮೊದಲ ಬಾರಿಗೆ ಸೋಲನುಭವಿಸಿದರೆ, ಮೊರಕ್ಕೊ ಭರ್ಜರಿ ಜಯ ಸಾಧಿಸಿತು.
ಹಾಗಾದರೆ, ನಾಕೌಟ್ ಪಂದ್ಯಗಳಲ್ಲಿ ಜಯಶಾಲಿಯನ್ನು ನಿರ್ಧರಿಸುವ ಈ 'ಎಕ್ಸ್‌ಟ್ರಾ ಟೈಮ್', 'ಪೆನಾಲ್ಟಿ ಶೂಟೌಟ್' ಹಾಗೂ ಸಡನ್ ಡೆತ್ ನಿಯಮಗಳು ಏನು ಹೇಳುತ್ತವೆ? ಇಲ್ಲಿದೆ ವಿವರ:
ಎಕ್ಸ್‌ಟ್ರಾ ಟೈಮ್ (ಹೆಚ್ಚುವರಿ ಸಮಯ) ಎಂದರೇನು?
ನಾಕೌಟ್ ಹಂತದ ಪಂದ್ಯಗಳಲ್ಲಿ ನಿಗದಿತ 90 ನಿಮಿಷಗಳ ಆಟ ಮುಗಿದ ಮೇಲೆಯೂ ಉಭಯ ತಂಡಗಳು ಸಮಬಲ ಸಾಧಿಸಿದರೆ, ವಿಜೇತರನ್ನು ನಿರ್ಣಯಿಸಲು 'ಎಕ್ಸ್‌ಟ್ರಾ ಟೈಮ್' ನೀಡಲಾಗುತ್ತದೆ. ಪೆನಾಲ್ಟಿ ಶೂಟೌಟ್‌ಗೂ ಮುನ್ನ ತಂಡಗಳಿಗೆ ಗೆಲ್ಲಲು ಸಿಗುವ ಕೊನೆಯ ಅವಕಾಶ ಇದಾಗಿದೆ.
ಹೆಚ್ಚುವರಿ ಸಮಯ ಎಷ್ಟು ಸಮಯ ಇರುತ್ತದೆ?
ಎಕ್ಸ್‌ಟ್ರಾ ಟೈಮ್ ಒಟ್ಟು 30 ನಿಮಿಷ ಇರುತ್ತದೆ. ಇದನ್ನು ತಲಾ 15 ನಿಮಿಷಗಳ ಎರಡು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಮೊದಲ 15 ನಿಮಿಷ ಮುಗಿದ ನಂತರ, ನಿಗದಿತ ಪಂದ್ಯದಂತೆಯೇ ಉಭಯ ತಂಡಗಳು ಮೈದಾನದ ತಮ್ಮ ಬದಿಗಳನ್ನು ಬದಲಾಯಿಸಿಕೊಳ್ಳುತ್ತವೆ.
ಪೆನಾಲ್ಟಿ ಶೂಟೌಟ್ ಯಾವಾಗ ನಡೆಯುತ್ತದೆ?
30 ನಿಮಿಷಗಳ ಎಕ್ಸ್‌ಟ್ರಾ ಟೈಮ್ ಮುಗಿದ ಮೇಲೆಯೂ ಪಂದ್ಯದ ಸ್ಕೋರ್ ಸಮಬಲವಾಗಿಯೇ ಉಳಿದರೆ, ಕೊನೆಯದಾಗಿ 'ಪೆನಾಲ್ಟಿ ಶೂಟೌಟ್' ಮೊರೆ ಹೋಗಲಾಗುತ್ತದೆ. ಇದರಲ್ಲಿ ಎರಡೂ ತಂಡಗಳ ಆಟಗಾರರು ಒಬ್ಬರ ನಂತರ ಒಬ್ಬರಂತೆ ನೇರವಾಗಿ ಗೋಲು ಬಾರಿಸಲು ಅವಕಾಶ ಪಡೆಯುತ್ತಾರೆ.
ಪೆನಾಲ್ಟಿ ಶೂಟೌಟ್‌ನ ಪ್ರಮುಖ ನಿಯಮಗಳು:
1. ಟಾಸ್: ಪೆನಾಲ್ಟಿ ಶೂಟೌಟ್ ಯಾವ ಕಡೆಯ ಗೋಲ್ ಪೋಸ್ಟ್‌ನಲ್ಲಿ ನಡೆಯಬೇಕು ಎಂಬುದನ್ನು ರೆಫರಿ ಟಾಸ್ ಮೂಲಕ ನಿರ್ಧರಿಸಲಾಗುತ್ತದೆ. ಎರಡನೇಯದಾಗಿ ಟಾಸ್ ಗೆದ್ದ ತಂಡ ಮೊದಲು ಕಿಕ್ ಮಾಡಬೇಕೇ ಅಥವಾ ಬೇಡವೇ ಎಂಬುದನ್ನು ಆಯ್ಕೆ ಮಾಡಿಕೊಳ್ಳುತ್ತದೆ.
2.ಐದು ಅವಕಾಶಗಳು: ಆರಂಭಿಕ ಸುತ್ತಿನಲ್ಲಿ ಎರಡೂ ತಂಡಗಳಿಗೆ ತಲಾ 5 ಪೆನಾಲ್ಟಿ ಕಿಕ್‌ಗಳ ಅವಕಾಶ ನೀಡಲಾಗುತ್ತದೆ. ತಂಡಗಳು ಸರದಿಯ ಪ್ರಕಾರ (ಮೊದಲು ತಂಡ ಎ, ನಂತರ ತಂಡ ಬಿ) ಕಿಕ್ ಮಾಡಬೇಕು.
3. ಅರ್ಹತೆ: ಎಕ್ಸ್‌ಟ್ರಾ ಟೈಮ್ ಮುಗಿದು ರೆಫರಿ ಅಂತಿಮ ಸೀಟಿ ಊದಿದಾಗ ಮೈದಾನದಲ್ಲಿದ್ದ ಆಟಗಾರರು ಮಾತ್ರ ಪೆನಾಲ್ಟಿ ಕಿಕ್ ಮಾಡಲು ಅರ್ಹರಾಗಿರುತ್ತಾರೆ. ಇದರಲ್ಲಿ ಗೋಲ್‌ಕೀಪರ್ ಕೂಡ ಸೇರಿದ್ದಾರೆ.
4. ಸಡನ್ ಡೆತ್:
ಒಂದು ವೇಳೆ ಮೊದಲ 5 ಸುತ್ತುಗಳ ಮುಕ್ತಾಯಕ್ಕೂ ಉಭಯ ತಂಡಗಳು ಸಮಾನ ಗೋಲುಗಳೊಂದಿಗೆ (ಉದಾಹರಣೆಗೆ 4-4 ಅಥವಾ 5-5) ಮತ್ತೆ ಸಮಬಲ ಸಾಧಿಸಿದರೆ, ಪಂದ್ಯವು 'ಸಡನ್ ಡೆತ್' ಹಂತಕ್ಕೆ ತಲುಪುತ್ತದೆ.
ನಿಯಮ ಹೀಗಿದೆ: ಇಲ್ಲಿಂದ ಮುಂದೆ ತಲಾ ಒಂದು ಕಿಕ್‌ನ ಒಂದೊಂದು ಸುತ್ತು ಇರುತ್ತದೆ. ಒಂದು ಸುತ್ತಿನಲ್ಲಿ ಒಂದು ತಂಡ ಗೋಲು ಗಳಿಸಿ, ಎದುರಾಳಿ ತಂಡ ಗೋಲು ಗಳಿಸಲು ವಿಫಲವಾದರೆ ಪಂದ್ಯ ಅಲ್ಲಿಗೇ ಕೊನೆಗೊಳ್ಳುತ್ತದೆ. ಗೋಲು ಹೊಡೆದ ತಂಡ ತಕ್ಷಣವೇ ವಿಜಯಶಾಲಿಯಾಗಿ ಹೊರಹೊಮ್ಮುತ್ತದೆ.
ಎಲ್ಲರಿಗೂ ಅವಕಾಶ: ಮೈದಾನದಲ್ಲಿರುವ ಗೋಲ್‌ಕೀಪರ್ ಸೇರಿದಂತೆ ಎಲ್ಲಾ 11 ಆಟಗಾರರು ತಲಾ ಒಂದು ಬಾರಿ ಕಿಕ್ ಮಾಡುವವರೆಗೂ ಯಾವುದೇ ಆಟಗಾರನಿಗೆ ಎರಡನೇ ಅವಕಾಶ ಸಿಗುವುದಿಲ್ಲ.
5. ಗೋಲ್‌ಕೀಪರ್ ನಿಯಮ: ಎದುರಾಳಿ ಆಟಗಾರ ಚೆಂಡನ್ನು ಕಿಕ್ ಮಾಡುವವರೆಗೆ ಗೋಲ್‌ಕೀಪರ್ ಗೋಲ್ ಲೈನ್ ಮೇಲೆಯೇ ನಿಂತಿರಬೇಕು. ಅವರು ಲೈನ್ ಮೇಲೆ ಎಡ-ಬಲಕ್ಕೆ ಚಲಿಸಬಹುದು, ಆದರೆ ಲೈನ್ ಬಿಟ್ಟು ಮುಂದಕ್ಕೆ ಬರುವಂತಿಲ್ಲ.
ಇತಿಹಾಸದ ಪುಟ ಸೇರಿದ 'ಗೋಲ್ಡನ್ ಗೋಲ್'
ಇದೇ ವೇಳೆ, ಫುಟ್‌ಬಾಲ್ ಇತಿಹಾಸದಲ್ಲಿ 1990 ಹಾಗೂ 2000ರ ದಶಕದ ಆರಂಭದಲ್ಲಿ 'ಗೋಲ್ಡನ್ ಗೋಲ್' ಎಂಬ ಮತ್ತೊಂದು ಮಾದರಿಯ 'ಸಡನ್ ಡೆತ್' ನಿಯಮ ಚಾಲ್ತಿಯಲ್ಲಿತ್ತು. ಹೆಚ್ಚುವರಿ 30 ನಿಮಿಷಗಳ ಆಟದಲ್ಲಿ ಯಾರು ಮೊದಲು ಗೋಲು ಗಳಿಸುತ್ತಾರೋ, ಆ ತಕ್ಷಣವೇ ಪಂದ್ಯ ಮುಗಿದು ಅವರು ವಿಜೇತ ತಂಡವೆಂದು ಘೋಷಿಸಲಾಗುತ್ತಿತ್ತು. ಆದರೆ, ಈ ನಿಯಮದಿಂದಾಗಿ ತಂಡಗಳು ರಕ್ಷಣಾತ್ಮಕ ಆಟಕ್ಕೆ ಶರಣಾಗಿದ್ದರಿಂದ, ಆಟದ ರೋಚಕತೆ ಕಾಪಾಡಲು ಫಿಫಾ 2004ರಲ್ಲಿ ಈ ನಿಯಮವನ್ನು ರದ್ದುಗೊಳಿಸಿತು. ಪ್ರಸ್ತುತ ಫುಟ್‌ಬಾಲ್‌ನಲ್ಲಿ ಪೆನಾಲ್ಟಿ ಶೂಟೌಟ್ ವೇಳೆ ಮಾತ್ರವೇ ಈ ಸಡನ್ ಡೆತ್ ನಿಯಮ ಅನ್ವಯವಾಗುತ್ತಿದ್ದು, ಕ್ರೀಡಾಂಗಣದಲ್ಲಿ ಅಭಿಮಾನಿಗಳ ಉಸಿರು ಬಿಗಿಹಿಡಿಯುವಂತೆ ಮಾಡುವಲ್ಲಿ ಇದು ಯಶಸ್ವಿಯಾಗಿದೆ.
ವಿಶ್ವಕಪ್ ಇತಿಹಾಸದ ಪ್ರಸಿದ್ಧ ಪೆನಾಲ್ಟಿ ಶೂಟೌಟ್‌ಗಳು:
1994: ಬ್ರೆಜಿಲ್ ಮತ್ತು ಇಟಲಿ ನಡುವಿನ ಫೈನಲ್ ಪಂದ್ಯವು ವಿಶ್ವಕಪ್ ಇತಿಹಾಸದಲ್ಲೇ ಪೆನಾಲ್ಟಿ ಶೂಟೌಟ್ ಮೂಲಕ ನಿರ್ಧಾರವಾದ ಮೊದಲ ಫೈನಲ್ ಆಗಿದೆ. ಇದರಲ್ಲಿ ಬ್ರೆಜಿಲ್ 3-2 ಅಂತರದಲ್ಲಿ ಗೆದ್ದಿರುವುದು ಇತಿಹಾಸ ಪುಟ ಸೇರಿದೆ.
1990: ಸೆಮಿಫೈನಲ್‌ನಲ್ಲಿ ಪಶ್ಚಿಮ ಜರ್ಮನಿ ತಂಡ ಇಂಗ್ಲೆಂಡ್ ವಿರುದ್ಧ (4-3) ಹಾಗೂ ಅರ್ಜೆಂಟೀನಾ ತಂಡ ಇಟಲಿ ವಿರುದ್ಧ (4-3) ಪೆನಾಲ್ಟಿ ಶೂಟೌಟ್ ಮೂಲಕವೇ ಗೆದ್ದು ಫೈನಲ್ ಪ್ರವೇಶಿಸಿದ್ದವು.
2006: ಜರ್ಮನಿಯಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಇಟಲಿ ತಂಡ ಫ್ರಾನ್ಸ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 5-3 ಅಂತರದಿಂದ ಗೆದ್ದು ಚಾಂಪಿಯನ್ ಆಗಿತ್ತು.
ಜರ್ಮನಿ 'ಸಡನ್ ಡೆತ್'
ಪ್ರಸಕ್ತ ಸಾಗುತ್ತಿರುವ ಫಿಫಾ ವಿಶ್ವಕಪ್ ಟೂರ್ನಿಯ 32ರ ಹಂತದ ಪಂದ್ಯದಲ್ಲಿ ನಿಗದಿತ 90 ನಿಮಿಷ ಹಾಗೂ ಹೆಚ್ಚುವರಿ 30 ನಿಮಿಷಗಳ ಅವಧಿಯಲ್ಲಿ ಜರ್ಮನಿ ಹಾಗೂ ಪರಗ್ವೆ ನಡುವಣ ಪಂದ್ಯವು 1-1ರ ಸಮಬಲ ಸಾಧಿಸಿದ್ದವು. ಬಳಿಕ ಪೆನಾಲ್ಟಿ ಶೂಟೌಟ್‌ನಲ್ಲೂ 3-3ರ ಸಬಲ ಸಾಧಿಸಿದ್ದವು. ಇದರಿಂದಾಗಿ ಸಡನ್ ಡೆತ್ ಮೂಲಕ ವಿಜೇತರನ್ನು ನಿರ್ಣಯಿಸಲಾಯಿತು. ಸಡನ್ ಡೆತ್‌ನಲ್ಲಿ ಗೋಲು ಗಳಿಸಿದ ಪರಗ್ವೆ ವಿಜಯಶಾಲಿಯಾಯಿತು. ಇದರೊಂದಿಗೆ ಜರ್ಮನಿಯ ಟ್ರೋಫಿ ಕನಸು ಭಗ್ನಗೊಂಡಿತ್ತು.
ಫಿಫಾ: ಹೆಚ್ಚು ಟ್ರೋಫಿ ಗೆದ್ದವರು, ಗೋಲು ಗಳಿಸಿದವರು, ಪ್ರಶಸ್ತಿ ಮೊತ್ತ...ಫಿಫಾ ವಿಶ್ವಕಪ್: ಗುಂಪು ಹಂತದ ಅಂತಿಮ ಪಂದ್ಯಗಳು ಏಕಕಾಲಕ್ಕೆ ನಡೆಯುತ್ತವೆ ಏಕೆ?
