ನ್ಯೂಜರ್ಸಿ: ಸ್ಪೇನ್‌ನ ಯುವ ತಾರೆ ಲಮಿನ್ ಯಮಾಲ್ ಅವರ ತಂದೆ ಮುನೀರ್ ನಸ್ರಾವಿ ಅವರು ಆರೋಗ್ಯ ಸಮಸ್ಯೆಯಿಂದಾಗಿ ಇಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ನ ಫೈನಲ್ ಪಂದ್ಯವನ್ನು ಖುದ್ದಾಗಿ ವೀಕ್ಷಿಸಲು ಸಾಧ್ಯವಾಗುತ್ತಿಲ್ಲ ಎಂದು ಬಹಿರಂಗಪಡಿಸಿದ್ದಾರೆ.
ಈ ವಿಶ್ವಕಪ್ ಟೂರ್ನಿಯುದ್ದಕ್ಕೂ ಯಮಾಲ್ ಅವರ ತಾಯಿ, ಕಿರಿಯ ಸಹೋದರ ಮತ್ತು ಗೆಳತಿ ಗ್ಯಾಲರಿಯಲ್ಲಿ ಕುಳಿತು ಯಮಾಲ್‌ನನ್ನು ಪ್ರೋತ್ಸಾಹಿಸುತ್ತಿದ್ದು, ತಂದೆ ನಸ್ರಾವಿ ಅನಾರೋಗ್ಯ ಕಾರಣದಿಂದ ತಾಯ್ನಾಡಿನಲ್ಲೇ ಉಳಿದುಕೊಂಡಿದ್ದಾರೆ.
ಸ್ಪ್ಯಾನಿಷ್ ಸುದ್ದಿ ವಾಹಿನಿ 'ಆಂಟೆನಾ 3' ಜೊತೆ ಮಾತನಾಡಿರುವ ನಸ್ರಾವಿ, ನರ ಸಂಬಂಧಿತ ಅನಾರೋಗ್ಯದಿಂದ ಬಳಲುತ್ತಿದ್ದು ಪ್ರತಿದಿನ ಔಷಧ ತೆಗೆದುಕೊಳ್ಳಬೇಕಾಗುತ್ತದೆ, ನಮ್ಮ ದೇಶದಿಂದ ಲಾಸ್ ಏಂಜಲೀಸ್ ಸುಮಾರು 18,000 ಕಿ.ಮೀಟರ್ ದೂರದಲ್ಲಿದ್ದು ಸುದೀರ್ಘ ಪ್ರಯಾಣ ಮಾಡುವುದು ಅಪಾಯಕಾರಿ ಎಂದು ವೈದ್ಯರು ಸಲಹೆ ಮಾಡಿದ್ದಾರೆ. ಹಾಗಾಗಿ ಖುದ್ದಾಗಿ ಪಂದ್ಯ ವೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಐತಿಹಾಸಿಕ ಕ್ಷಣದಲ್ಲಿ ಮಗನ ಜೊತೆ ಇರಲು ಸಾಧ್ಯವಾಗದಿರುವುದು ತುಂಬಾ ಬೇಸರ ತಂದಿದೆ ಎಂದು ನಸ್ರಾವಿ ಹೇಳಿದ್ದಾರೆ.
ಒಂದು ವೇಳೆ ನ್ಯೂಜೆರ್ಸಿಗೆ ತೆರಳಿದರೆ ಅಲ್ಲಿನ ಒತ್ತಡ ಮತ್ತು ಅತಿಯಾದ ಭಾವುಕತೆ ನನ್ನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಮನೆಯಲ್ಲೇ ಉಳಿದು ಟಿವಿಯಲ್ಲಿ ಪಂದ್ಯ ವೀಕ್ಷಿಸುವುದು ಉತ್ತಮ ಎಂದು ಹೇಳಿದ್ದಾರೆ.
ಸ್ಪೇನ್ ತಂಡದ ಪಂದ್ಯಗಳನ್ನು ಖುದ್ದಾಗಿ ಮೈದಾನದಲ್ಲಿ ವೀಕ್ಷಿಸಲು ಸಾಧ್ಯವಾಗದಿದ್ದರೂ, ಮಗನ ಸಾಧನೆಗಳ ಬಗ್ಗೆ ನಸ್ರಾವಿ ಅಪಾರ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಸ್ಪೇನ್ ಸಾಧಿಸಿರುವ ಯಶಸ್ಸಿನ ಬಗ್ಗೆ ನನಗೆ ಹೆಮ್ಮೆಯಿದೆ. ನನ್ನ ಮಗ ಅದ್ಭುತವಾಗಿ ಆಡಿ ತಂಡದ ಯಶಸ್ಸಿಗೆ ಕಾರಣವಾಗಿದ್ದಾನೆ. ಫೈನಲ್ ತಲುಪಿದ ನಂತರ ಯಮಾಲ್ ಜೊತೆ ದೂರವಾಣಿ ಮೂಲಕ ಮಾತನಾಡಿದ್ದೇನೆ ಎಂದು ನಸ್ರಾವಿ ಹೇಳಿದ್ದಾರೆ.
ಪ್ರಶಸ್ತಿ ಬೇಟೆಯಲ್ಲಿ ಸ್ಪೇನ್: ಇತ್ತೀಚೆಗಷ್ಟೇ 19ನೇ ಜನ್ಮದಿನ ಆಚರಿಸಿಕೊಂಡ ಯಮಾಲ್, 2026ರ ವಿಶ್ವಕಪ್‌ನಲ್ಲಿ ಸ್ಪೇನ್ ಪರ ಏಳು ಪಂದ್ಯಗಳನ್ನಾಡಿದ್ದು, ಒಂದು ಗೋಲು ಬಾರಿಸಿ, ಒಂದು ಗೋಲು ಗಳಿಸಲು ನೆರವಾಗಿದ್ದಾರೆ.
ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ಇಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಸ್ಪೇನ್ ತಂಡವು ಅರ್ಜೆಂಟೀನಾವನ್ನು ಎದುರಿಸಲಿದೆ. ಸ್ಪೇನ್ ತಂಡಕ್ಕೆ ಎರಡನೇ ಬಾರಿಗೆ ವಿಶ್ವಕಪ್ ಟ್ರೋಫಿ ತಂದುಕೊಡುವ ಮಹತ್ತರ ಜವಾಬ್ದಾರಿ ಯುವ ತಾರೆ ಯಮಾಲ್ ಮೇಲಿದೆ.
ಫಿಫಾ ವಿಶ್ವಕಪ್ ಫೈನಲ್: ತಾಳ್ಮೆಯಿಂದ ವರ್ತಿಸಿ; ಫುಟ್‌ಬಾಲ್ ಅಭಿಮಾನಿಗಳಿಗೆ ಸಿಎಂ ಫಿಫಾ ವಿಶ್ವಕಪ್: ಸ್ಪೇನ್-ಅರ್ಜೆಂಟೀನಾ ಮುಖಾಮುಖಿ ಸಾಧನೆ ಹೇಗಿದೆ? ಇಲ್ಲಿದೆ ವಿವರ
