Dailyhunt
ಗಾಜಿಪುರ ಅತ್ಯಾಚಾರ ಪ್ರಕರಣದಲ್ಲಿ ದಲಿತ, ಬಡ ಹೆಣ್ಣುಮಕ್ಕಳೇ ಬಲಿಪಶು: ರಾಹುಲ್

ಗಾಜಿಪುರ ಅತ್ಯಾಚಾರ ಪ್ರಕರಣದಲ್ಲಿ ದಲಿತ, ಬಡ ಹೆಣ್ಣುಮಕ್ಕಳೇ ಬಲಿಪಶು: ರಾಹುಲ್

ವದೆಹಲಿ: ಉತ್ತರ ಪ್ರದೇಶದ ಗಾಜಿಪುರದಲ್ಲಿ ವಿಶ್ವಕರ್ಮ ಸಮುದಾಯದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ, ತಕ್ಷಣವೇ ಸೂಕ್ತ ನ್ಯಾಯ ಒದಗಿಸಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶನಿವಾರ ಒತ್ತಾಯಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ಮಗಳ ಸಾವಿನ ಬಗ್ಗೆ ಎಫ್‌ಐಆರ್ ದಾಖಲಿಸಲು ಪೋಷಕರು ಅಧಿಕಾರಿಗಳ ಮುಂದೆ ಬೇಡುವಂತಹ ಸ್ಥಿತಿ ಯಾವ ರಾಜ್ಯ ಅಥವಾ ದೇಶದಲ್ಲಿರುತ್ತದೆಯೋ, ಅಲ್ಲಿನ ಸರ್ಕಾರಕ್ಕೆ ಅಧಿಕಾರದಲ್ಲಿ ಉಳಿಯಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಕಿಡಿಕಾರಿದ್ದಾರೆ.‌‌

ಹತ್ರಾಸ್, ಕತುವಾ, ಉನ್ನಾವೊ.. ಈಗ ಗಾಜಿಪುರ.. ಇದೊಂದು ವ್ಯವಸ್ಥಿತ ಮಾದರಿಯಾಗಿಬಿಟ್ಟಿದೆ. ಮಣಿಪುರದ ಮಗಳು ನ್ಯಾಯಕ್ಕಾಗಿ ಕಾಯುತ್ತಲೇ ಕೊನೆಯುಸಿರೆಳೆದಳು. ಪ್ರತಿ ಬಾರಿಯೂ ದಲಿತರು, ಹಿಂದುಳಿದವರು, ಆದಿವಾಸಿಗಳು ಮತ್ತು ಬಡವರೇ ಬಲಿಪಶುಗಳಾಗಿರುತ್ತಾರೆ. ಅಪರಾಧಿಗೆ ರಕ್ಷಣೆ ಮತ್ತು ಸಂತ್ರಸ್ತರಿಗೆ ಕಿರುಕುಳ ನೀಡುವುದು ಸಾಮಾನ್ಯವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧ ವಾಗ್ಡಾಳಿ ನಡೆಸಿದ ರಾಹುಲ್‌, ‌ ನಿಮ್ಮ ಆಡಳಿತದಲ್ಲಿ ಹೆಣ್ಣುಮಕ್ಕಳು ಇಷ್ಟೊಂದು ಅಸುರಕ್ಷಿತರಾಗಿರುವುದು ಏಕೆ?. ಉತ್ತರ ನೀಡಿ ಎಂದು ಆಗ್ರಹಿಸಿದ್ದಾರೆ.

ಘಟನೆ ಖಂಡಿಸಿದ ಪ್ರಿಯಾಂಕಾ :

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಘಟನೆಯನ್ನು ಖಂಡಿಸಿದ್ದಾರೆ. ಬಿಜೆಪಿ ಆಡಳಿತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ. ಪ್ರಕರಣ ದಾಖಲಿಸಲು ಹಿಂದೇಟು ಹಾಕುವುದು ಮತ್ತು ಸಂತ್ರಸ್ತರ ಕುಟುಂಬಕ್ಕೆ ಬೆದರಿಕೆ ಹಾಕುವುದು ಬಿಜೆಪಿಯ ಅಲಿಖಿತ ಕಾನೂನು ಎಂದು ಟೀಕಿಸಿದ್ದಾರೆ.

ಘಟನೆಯ ಹಿನ್ನೆಲೆ:

ಏಪ್ರಿಲ್ 15ರಂದು ಗಾಜಿಪುರ ಜಿಲ್ಲೆಯ ಕರಂಡಾ ಪ್ರದೇಶದಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಅತ್ಯಾಚಾರ ಎಸಗಿದ ಅಪರಾಧಿಗೆ 20 ವರ್ಷ ಜೈಲು

Dailyhunt
Disclaimer: This content has not been generated, created or edited by Dailyhunt. Publisher: Prajavani