ಉತ್ತರಾಖಂಡದ 2013ರ ಜಲಪ್ರಳಯದಿಂದ ಹಿಡಿದು ಮೊನ್ನೆ (26ನೇ ಆಗಸ್ಟ್ 26 2026)ಯ ನೇಪಾಳ-ಟಿಬೆಟ್ ಗಡಿ ಪ್ರದೇಶದ ಪ್ರವಾಹದವರೆಗೆ ಹಿಮಾಲಯ ಮತ್ತೆ ಮತ್ತೆ ತನ್ನ ಮಿತಿಗಳನ್ನು ನಮಗೆ ನೆನಪಿಸುತ್ತಿದೆ.
ಆದರೆ, ದುರಂತ ಸಂಭವಿಸಿದಾಗ ಮಾತ್ರ ಎಚ್ಚೆತ್ತುಕೊಳ್ಳುವ ನಮ್ಮ ಆಡಳಿತ ವ್ಯವಸ್ಥೆ, ಈ ದುರಂತಗಳ ಹಿಂದಿರುವ ದೊಡ್ಡ ಪ್ರಶ್ನೆಯನ್ನು ಇನ್ನೂ ಸಮರ್ಪಕವಾಗಿ ಎದುರಿಸಿಲ್ಲ.
ಮೂಲಭೂತ ಪ್ರಶ್ನೆ ಇರುವುದು: ಹಿಮಾಲಯವನ್ನು ನಾವು ಹೇಗೆ ನೋಡಬೇಕು, ಹೇಗೆ ಬಳಸಬೇಕು ಮತ್ತು ಹೇಗೆ ರಕ್ಷಿಸಬೇಕು?
ಈ ಪ್ರಶ್ನೆಗೆ ಉತ್ತರ ಹುಡುಕುವಾಗ ಒಂದು ಸಂಗತಿಯನ್ನು ಮೊದಲು ಒಪ್ಪಿಕೊಳ್ಳಬೇಕು. ಹಿಮಾಲಯ ರಾಜಕೀಯ(ಭೌಗೋಳಿಕ)ವಾಗಿ ನಾಲ್ಕು ದೇಶಗಳಾದ ಭಾರತ, ನೇಪಾಳ, ಭೂತಾನ್ ಮತ್ತು ಚೀನಾದ ಭೂಭಾಗದಲ್ಲಿ ಹರಡಿಕೊಂಡಿದೆ. ಆದರೆ, ಪ್ರಕೃತಿಗೆ ಮನುಷ್ಯರು ಹಾಕಿಕೊಂಡ ಈ ಗಡಿಗಳ ಅರಿವಿಲ್ಲ. ಒಂದು ದೇಶದ ಪರ್ವತದಲ್ಲಿ ಹಿಮನದಿ ಕರಗಿದರೆ ಅದರ ನೀರು ಮತ್ತೊಂದು ದೇಶದ ಗಡಿ ದಾಟಿ ಅಲ್ಲಿನ ನದಿಯನ್ನು ಸೇರುತ್ತದೆ. ಒಂದು ಪ್ರದೇಶದಲ್ಲಿ ಹಿಮಸರೋವರ ಒಡೆದರೆ ಅದರ ಪ್ರವಾಹ ಅಂತರರಾಷ್ಟ್ರೀಯ ಗಡಿಯನ್ನು ಮೀರಿ ಉಕ್ಕಬಹುದು. ಒಂದು ಕಣಿವೆಯಲ್ಲಿ ಪರಿಸರದ ಮೇಲೆ ನಡೆದ ಹಸ್ತಕ್ಷೇಪದ ಪರಿಣಾಮ ಕೆಳಭಾಗದ ಮತ್ತೊಂದು ದೇಶದ ಜನರನ್ನು ಆಪೋಷನ ತೆಗೆದುಕೊಳ್ಳಬಹುದು. ಆದರೆ, ಪರಿಸರಕ್ಕಿಲ್ಲದ ಗಡಿಯನ್ನು ನಾವು ಹಂಚಿಕೊಂಡಿದ್ದೇವೆ. ಇದಕ್ಕೆ ಹಿಮಾಲಯವೂ ಹೊರತಲ್ಲ.
ಹೀಗಿರುವಾಗ ಹಿಮಾಲಯದ ರಕ್ಷಣೆಯ ನೀತಿ ನಾಲ್ಕು ಪ್ರತ್ಯೇಕ ದೇಶಗಳ ನಾಲ್ಕು ಪ್ರತ್ಯೇಕ ನೀತಿಗಳಾಗಿ ಉಳಿಯುವುದು ಎಷ್ಟು ಸಮರ್ಥನೀಯ?
ಇದೇ ಕಾರಣಕ್ಕೆ ಹಿಮಾಲಯಕ್ಕಾಗಿ ಸಮಾನ ಮನಸ್ಕ ಅಂತರರಾಷ್ಟ್ರೀಯ ನೀತಿ ರೂಪಿಸುವ ವೇದಿಕೆಯೊಂದರ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ಹಾಗೆಂದು ಇದು ಕೇವಲ 'ಹವಾಮಾನ ಸಮ್ಮೇಳನ' ನಡೆಸುವ ಮತ್ತೊಂದು ವೇದಿಕೆಯಾಗಿರಬಾರದು. ಹಿಮಾಲಯದ ಭೂವಿಜ್ಞಾನ, ಹಿಮನದಿಗಳು, ಹಿಮಸರೋವರಗಳು, ನದಿಗಳು, ಪರ್ಮಾಫ್ರಾಸ್ಟ್, ಜೀವವೈವಿಧ್ಯ, ಪ್ರವಾಸೋದ್ಯಮ ಮತ್ತು ಮಾನವ ವಸತಿಗಳ ಕುರಿತು ಸಾಮಾನ್ಯ ವೈಜ್ಞಾನಿಕ ಮಾನದಂಡಗಳನ್ನು ರೂಪಿಸುವ ಶಾಶ್ವತ ವ್ಯವಸ್ಥೆಯಾಗಬೇಕು.
ಹಿಮಾಲಯ ಭೌಗೋಳಿಕವಾಗಿ ಇನ್ನೂ ಶೈಶವ ಪರ್ವತ ಶ್ರೇಣಿ. ಭಾರತೀಯ ಮತ್ತು ಯುರೇಷಿಯನ್ ಭೂಫಲಕಗಳ ನಿರಂತರ ಚಲನೆಯಿಂದ ರೂಪುಗೊಂಡಿರುವ ಈ ಪರ್ವತ ವ್ಯವಸ್ಥೆ ಸಹಜವಾಗಿಯೇ ಸೂಕ್ಷ್ಮ. ಭೂಕಂಪ, ಭೂಕುಸಿತ, ಹಿಮಪಾತ, ಅತಿವೃಷ್ಟಿ ಮತ್ತು ಹಿಮಸರೋವರ ಸ್ಫೋಟದ ಅಪಾಯ ಇಲ್ಲಿನ ಭೂಪ್ರಕೃತಿಯ ಭಾಗವೇ ಆಗಿದೆ. ಈ ಹಿನ್ನೆಲೆಯಲ್ಲಿ ಇಂಥ ಭೂಭಾಗದ ಮೇಲೆ ಸಮತಟ್ಟು ಪ್ರದೇಶಗಳಲ್ಲಿ ಅನುಸರಿಸುವ ಅಭಿವೃದ್ಧಿಯ ಮಾದರಿಯನ್ನೇ ಹೇರುವುದು ಎಷ್ಟು ಸರಿ? ಮಾತ್ರವಲ್ಲ ಇದು ತೀರಾ ಅಪಾಯಕಾರಿ.
ಆದರೆ, ನಾವು ಮಾಡುತ್ತಿರುವುದೇನು? ರಸ್ತೆಗಾಗಿ ಪರ್ವತ ಸಾಲನ್ನೇ ಸೀಳುತ್ತಿದ್ದೇವೆ. ಸುರಂಗಗಳಿಗಾಗಿ ಭೂಮಿಯ ಒಡಲನ್ನೇ ಸ್ಫೋಟಿಸುತ್ತಿದ್ದೇವೆ. ನದಿಯ ಹರಿವನ್ನು ತುಂಡರಿಸಿ ಅಡ್ಡಡ್ಡ ಅಣೆಕಟ್ಟು ಕಟ್ಟುತ್ತಿದ್ದೇವೆ. ಇಳಿಜಾರುಗಳಲ್ಲಿ ಕಟ್ಟಡಗಳ ಸಾಲನ್ನು ನಿರ್ಮಿಸುತ್ತಿದ್ದೇವೆ. ಪ್ರವಾಸೋದ್ಯಮದ ಹೆಸರಿನಲ್ಲಿ ತಲೆಯವರೆಗೂ ಮೋಟಾರು ವಾಹನಗಳನ್ನು ಹತ್ತಿಸಿ, ಇಂಗಾಲದ ದಟ್ಟಣೆಯನ್ನು ಹೆಚ್ಚಿಸುತ್ತಿದ್ದೇವೆ. ಪರ್ವತದ ಸಹಜ ಸ್ಥಿರತೆಯನ್ನು ಅರ್ಥಮಾಡಿಕೊಳ್ಳುವುದಕ್ಕಿಂತ ಅದರ ಮೇಲೆ ನಮ್ಮ ಅಗತ್ಯಗಳನ್ನು ಹೇರುವುದಕ್ಕೆ ಹೆಚ್ಚು ಒತ್ತು ನೀಡುತ್ತಿದ್ದೇವೆ.
ಇದರ ಜತೆಜತೆಗೇ ಎಲ್ಲೆಡೆಯ ಸಾಮಾನ್ಯ ಸಂಗತಿಯೆನಿಸಿದ ಹವಾಮಾನ ಬದಲಾವಣೆಯ ಒತ್ತಡವೂ ಹಿಮಾಲಯ ಶ್ರೇಣಿಯನ್ನು ಬಾಧಿಸುತ್ತಿದೆ. ಏರುತ್ತಿರುವ ತಾಪಮಾನದಿಂದ ಹಿಮನದಿಗಳು ಕುಗ್ಗುತ್ತಿವೆ. ಅವುಗಳ ಹಿಂದೆ ಹಿಮಸರೋವರಗಳು ರೂಪುಗೊಳ್ಳುತ್ತಿವೆ. ಪರ್ಮಾಫ್ರಾಸ್ಟ್ ಕರಗುವುದರಿಂದ ಪರ್ವತದ ಇಳಿಜಾರುಗಳ ಸ್ಥಿರತೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಹೆಚ್ಚುತ್ತಿದೆ. ಹೀಗಾಗಿ ಪ್ರಕೃತಿ ಅಪಾಯಗಳು ಬದಲಾಗುತ್ತಿರುವಾಗ ಮಾನವ ಹಸ್ತಕ್ಷೇಪ ಮಾತ್ರ ಹೆಚ್ಚುತ್ತಲೇ ಇದೆ.
ಹಿಮಾಲಯದ ಕೊರಳಿಗೆ ನಾವೇ ಪೋಣಿಸಿರುವ ಸಾವಿನ ಸರಮಾಲೆಸಂಪಾದಕೀಯ Podcast: ಸಾವಿನ ಪ್ರವಾಹ; ಕಂಗೆಟ್ಟ ನೇಪಾಳ ಹಿಮಾಲಯದ ನಿಗಾ ಅಗತ್ಯಸಮಗ್ರ ವೈಜ್ಞಾನಿಕ ನಕ್ಷೆ ಬೇಕು: ಇದಕ್ಕೆ ಉತ್ತರವಾಗಿ ಮೊದಲ ಹೆಜ್ಜೆ ಹಿಮಾಲಯದ ಸಮಗ್ರ ವೈಜ್ಞಾನಿಕ ನಕ್ಷೆ ಆಗಬೇಕು. ನಾಲ್ಕೂ ದೇಶಗಳು ತಮ್ಮಲ್ಲಿರುವ ಹಿಮನದಿ, ಹಿಮಸರೋವರ, ಭೂಕುಸಿತ, ಪರ್ಮಾಫ್ರಾಸ್ಟ್, ಮಳೆಯ ತೀವ್ರತೆ ಮತ್ತು ನದಿಗಳ ಹರಿವಿನ ಮಾಹಿತಿಯನ್ನು ಹಂಚಿಕೊಳ್ಳಬೇಕು. ಉಪಗ್ರಹಗಳು, ಭೂಮಟ್ಟದ ಸಂವೇದಕಗಳು ಮತ್ತು ನೈಜ-ಸಮಯದ ಹವಾಮಾನ ದತ್ತಾಂಶಗಳನ್ನು ಒಟ್ಟುಗೂಡಿಸಿ ಪ್ರಾದೇಶಿಕ ಮುನ್ನೆಚ್ಚರಿಕೆ ವ್ಯವಸ್ಥೆ ರೂಪಿಸಬೇಕು.
ಸಾಮಾನ್ಯ ಪರಿಸರ ಮಾನದಂಡ: ಎರಡನೆಯದಾಗಿ, ಹಿಮಾಲಯದ ಅಭಿವೃದ್ಧಿಗೆ ಸಾಮಾನ್ಯ ಪರಿಸರ ಮಾನದಂಡಗಳು ರೂಪುಗೊಳ್ಳಬೇಕು. ಒಂದು ದೇಶದಲ್ಲಿ ಅತ್ಯಂತ ಅಪಾಯಕಾರಿ ಎಂದು ಗುರುತಿಸಲಾದ ಇಳಿಜಾರಿನಲ್ಲಿ ಬೃಹತ್ ನಿರ್ಮಾಣಕ್ಕೆ ಅವಕಾಶವಿಲ್ಲದಿದ್ದರೆ, ಅದೇ ಭೌಗೋಳಿಕ ಸ್ವರೂಪದ ಪ್ರದೇಶದಲ್ಲಿ ಮತ್ತೊಂದು ದೇಶ ಬೇರೆ ನಿಯಮ ಅನುಸರಿಸುವಂತಿರಬಾರದು. ಕನಿಷ್ಠ ಸಾಮಾನ್ಯ ಸುರಕ್ಷತಾ ಮಾನದಂಡಗಳಾದರೂ ನಾಲ್ಕೂ ದೇಶಗಳಿಗೆ ಅನ್ವಯಿಸಬೇಕು.
ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಗಡಿ ಇಲ್ಲದ ಹಿಮಾಲಯದ ರಕ್ಷಣೆಗೆ ಒಂದಾಗಬೇಕು, ನೀತಿ ರೂಪಿಸಬೇಕು ನಾಲ್ಕೂ ರಾಷ್ಟ್ರಗಳು
ಒಂದು ಸಾಲಿನಲ್ಲಿಹಿಮಾಲಯದ ರಕ್ಷಣೆಗೆ ಭಾರತ, ನೇಪಾಳ, ಭೂತಾನ್ ಮತ್ತು ಚೀನಾ ದೇಶಗಳು ಗಡಿ ಮೀರಿದ ಜಂಟಿ ಪರಿಸರ ನೀತಿ ಮತ್ತು ವೈಜ್ಞಾನಿಕ ಸಹಕಾರವನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ.
ಏನು? ಏಕೆ? ಹೇಗೆ?
ಹಿಮಾಲಯದ ರಕ್ಷಣೆಗೆ ಅಂತರರಾಷ್ಟ್ರೀಯ ಸಹಕಾರ ಏಕೆ ಅಗತ್ಯ?
ಪ್ರಕೃತಿಗೆ ಗಡಿಗಳ ಅರಿವಿಲ್ಲ; ಒಂದು ದೇಶದ ಪರಿಸರ ಹಸ್ತಕ್ಷೇಪ ಅಥವಾ ಹಿಮನದಿ ಕರಗುವಿಕೆ ಇಡೀ ಹಿಮಾಲಯದ ಸೂಕ್ಷ್ಮ ಪರಿಸರ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
ಪರ್ವತ ಪ್ರದೇಶಗಳಲ್ಲಿ ಅಭಿವೃದ್ಧಿ ಮಾದರಿ ಹೇಗಿರಬೇಕು?
ಸಮತಟ್ಟಾದ ಪ್ರದೇಶಗಳ ಅಭಿವೃದ್ಧಿ ಮಾದರಿಯನ್ನು ಹಿಮಾಲಯದಲ್ಲಿ ಹೇರುವುದು ಅಪಾಯಕಾರಿ; ಬದಲಾಗಿ ಪರ್ವತದ ಧಾರಣ ಸಾಮರ್ಥ್ಯಕ್ಕೆ ತಕ್ಕಂತೆ ಪರಿಸರ-ಸ್ನೇಹಿ ಅಭಿವೃದ್ಧಿ ಅಗತ್ಯ.
ನಾಲ್ಕು ರಾಷ್ಟ್ರಗಳು ಕೈಗೊಳ್ಳಬೇಕಾದ ಮೊದಲ ಹೆಜ್ಜೆ ಏನು?
ಹಿಮನದಿಗಳು, ಹಿಮಸರೋವರಗಳು ಮತ್ತು ಭೂಕುಸಿತದ ಅಪಾಯಗಳ ಕುರಿತು ನಾಲ್ಕು ದೇಶಗಳು ವೈಜ್ಞಾನಿಕ ಮಾಹಿತಿಯನ್ನು ಹಂಚಿಕೊಂಡು ಸಮಗ್ರವಾದ ನಕ್ಷೆಯನ್ನು ತಯಾರಿಸಬೇಕು.
ಹಿಮಾಲಯದ ಸುರಕ್ಷತೆಗಾಗಿ ಯಾವ ವೈಜ್ಞಾನಿಕ ವ್ಯವಸ್ಥೆ ಇರಬೇಕು?
ನೈಜ-ಸಮಯದ ಹವಾಮಾನ ದತ್ತಾಂಶಗಳು, ಉಪಗ್ರಹಗಳ ಮತ್ತು ಸಂವೇದಕಗಳ ಮೂಲಕ ಪ್ರಾದೇಶಿಕ ಮುನ್ನೆಚ್ಚರಿಕೆ ವ್ಯವಸ್ಥೆಯನ್ನು ರೂಪಿಸಿ ಸಾಮಾನ್ಯ ಸುರಕ್ಷತಾ ಮಾನದಂಡಗಳನ್ನು ಜಾರಿಗೆ ತರಬೇಕು.
ಸಮಸ್ಯೆಗಳನ್ನು ಪರಿಹರಿಸಲು ಯಾವ ವೇದಿಕೆ ಕೆಲಸ ಮಾಡಬೇಕು?
ಕೇವಲ ಹವಾಮಾನ ಸಮ್ಮೇಳನಗಳಿಗಷ್ಟೇ ಸೀಮಿತವಾಗದೆ, ವಿಜ್ಞಾನಿಗಳು ಮತ್ತು ತಜ್ಞರನ್ನು ಒಳಗೊಂಡ ಶಾಶ್ವತ ವೈಜ್ಞಾನಿಕ ಸಹಕಾರ ವೇದಿಕೆಯು ಹಿಮಾಲಯದ ರಕ್ಷಣೆಯ ಜವಾಬ್ದಾರಿ ವಹಿಸಿಕೊಳ್ಳಬೇಕು.
ಪ್ರಮುಖ ಅಂಕಿಅಂಶಗಳು
2013ಉತ್ತರಾಖಂಡ ಜಲಪ್ರಳಯ ಸಂಭವಿಸಿದ ವರ್ಷ26ನೇ ಆಗಸ್ಟ್ 2026ನೇಪಾಳ-ಟಿಬೆಟ್ ಗಡಿ ಪ್ರದೇಶದ ಪ್ರವಾಹ ಸಂಭವಿಸಿದ ದಿನಾಂಕ
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಧಾರಣ ಸಾಮರ್ಥ್ಯ ನಿರ್ಧಾರವಾಗಲಿ: ಮೂರನೆಯದಾಗಿ, ಪ್ರತಿಯೊಂದು ಪರ್ವತ ಪ್ರದೇಶದ ಧಾರಣ ಸಾಮರ್ಥ್ಯವನ್ನು ವೈಜ್ಞಾನಿಕವಾಗಿ ನಿರ್ಧರಿಸಬೇಕು. ಎಷ್ಟು ಪ್ರವಾಸಿಗರು, ಎಷ್ಟು ವಾಹನಗಳು, ಎಷ್ಟು ಕಟ್ಟಡಗಳು ಮತ್ತು ಎಷ್ಟು ಮೂಲಸೌಕರ್ಯವನ್ನು ಒಂದು ಕಣಿವೆ ಅಥವಾ ಪಟ್ಟಣ ತಡೆದುಕೊಳ್ಳಬಲ್ಲದು ಎಂಬುದಕ್ಕೆ ವೈಜ್ಞಾನಿಕ ಮಿತಿ ಇರಬೇಕು. ಆ ಮಿತಿಯನ್ನು ಮೀರುವ ಅಭಿವೃದ್ಧಿ ಯೋಜನೆಗಳಿಗೆ ಅವಕಾಶ ನೀಡಬಾರದು.
ಅಭಿವೃದ್ಧಿ ಯೋಜನೆಗೆ ಮಿತಿ: ಜಲವಿದ್ಯುತ್ ಯೋಜನೆಗಳ ವಿಚಾರದಲ್ಲೂ ಇದೇ ಸಾಮಾನ್ಯ ದೃಷ್ಟಿಕೋನ ಅಗತ್ಯ. ನವೀಕರಿಸಬಹುದಾದ ಶಕ್ತಿ ಎಂಬ ಕಾರಣಕ್ಕೆ ಪರ್ವತದ ಮೇಲೆ ನಡೆಸುವ ಪ್ರತಿಯೊಂದು ಹಸ್ತಕ್ಷೇಪವೂ ಸಮರ್ಥನೀಯವಾಗುವುದಿಲ್ಲ. ದೊಡ್ಡ ಅಣೆಕಟ್ಟುಗಳು, ಸುರಂಗಗಳು ಮತ್ತು ಸ್ಫೋಟಕಗಳ ಬಳಕೆಯ ಪರಿಣಾಮವನ್ನು ಇಡೀ ನದಿ ಕಣಿವೆಯ ದೃಷ್ಟಿಯಿಂದ ಪರಿಶೀಲಿಸಬೇಕು.
ಅಂತಹ ಅಂತಾರಾಷ್ಟ್ರೀಯ ವೇದಿಕೆಯೊಂದು ರಾಜಕೀಯ ಸಂಘರ್ಷಗಳ ವೇದಿಕೆಯಾಗಬಾರದು; ವೈಜ್ಞಾನಿಕ ಸಹಕಾರದ ವೇದಿಕೆಯಾಗಬೇಕು. ನಾಲ್ಕೂ ದೇಶಗಳ ಸರ್ಕಾರಗಳ ಜೊತೆಗೆ ಭೂವಿಜ್ಞಾನಿಗಳು, ಹಿಮನದಿ ತಜ್ಞರು, ಹವಾಮಾನ ವಿಜ್ಞಾನಿಗಳು, ಜಲತಜ್ಞರು, ಪರಿಸರ ತಜ್ಞರು ಮತ್ತು ಸ್ಥಳೀಯ ಸಮುದಾಯಗಳ ಪ್ರತಿನಿಧಿಗಳೂ ಅದರ ಭಾಗವಾಗಬೇಕು.
ಹಿಮಾಲಯ ಚಾರಣ ಹೊರಟಿದ್ದೀರಾ? ಶೆರ್ಪಾಗಳೇ ನಿಮ್ಮ ಜೀವಕ್ಕೆ ಕುತ್ತು ತಂದಾರು ಹುಷಾರ್!ಇದಕ್ಕೆ ಒಂದು ಮುಖ್ಯ ತತ್ವವಿರಬೇಕು: 'ಒಂದು ಪರ್ವತ-ಒಂದು ಪರಿಸರ ವ್ಯವಸ್ಥೆ-ಸಾಮಾನ್ಯ ಜವಾಬ್ದಾರಿ'. ಈ ತತ್ವದಡಿ ಎಲ್ಲ ವೈರತ್ವ-ವೈರುಧ್ಯಗಳನ್ನು ಮರೆತು ಹಿಮಾಲಯದ ಮಟ್ಟಿಗೆ ಒಂದಾಗಲೇಬೇಕಿದೆ. ಏಕೆಂದರೆ ಹಿಮಾಲಯವನ್ನು ನಾಲ್ಕು ದೇಶಗಳು ಹಂಚಿಕೊಂಡಿರಬಹುದು. ಆದರೆ ಅದರ ಹಿಮ, ನೀರು, ನದಿಗಳು ಮತ್ತು ಪರಿಸರ ವ್ಯವಸ್ಥೆಯನ್ನು ರಾಜಕೀಯ ಗಡಿಗಳಲ್ಲಿ ಬಂಧಿಸಲು ಸಾಧ್ಯವಿಲ್ಲ. ಹಾಗಾಗಿ ಹಿಮಾಲಯವನ್ನು ರಕ್ಷಿಸುವ ಹೊಣೆಗಾರಿಕೆಯೂ ಗಡಿಗಳನ್ನು ಮೀರಿ ಹಂಚಿಕೊಳ್ಳಬೇಕಾಗಿದೆ.
ಇದು ಅಭಿವೃದ್ಧಿಯನ್ನು ವಿರೋಧಿಸುವ ಮಾತಲ್ಲ. ಹಿಮಾಲಯಕ್ಕೆ, ಆ ಸೂಕ್ಷ್ಮ ಪ್ರದೇಶಕ್ಕೆ ಹೊಂದಾಣಿಕೆಯಾಬಲ್ಲ ಅಭಿವೃದ್ಧಿಯನ್ನು ಒತ್ತಾಯಿಸುವ ಮಾತು. ಪರ್ವತವನ್ನು ಗೆಲ್ಲುವ ಅಭಿವೃದ್ಧಿಯ ಬದಲು ಪರ್ವತದೊಂದಿಗೆ ಬದುಕುವ ಅಭಿವೃದ್ಧಿ ಬೇಕು.
ಹಿಮಾಲಯ ನಾಲ್ಕು ದೇಶಗಳಲ್ಲಿ ಹರಡಿಕೊಂಡಿರುವುದರಿಂದ ಅದನ್ನು ನಾಲ್ಕು ನೀತಿಗಳಿಂದ ರಕ್ಷಿಸಲು ಸಾಧ್ಯವಿಲ್ಲ. ಹಿಮಾಲಯಕ್ಕಾಗಿ ಸಾಮಾನ್ಯ ವೈಜ್ಞಾನಿಕ ಮಾನದಂಡ, ಸಾಮಾನ್ಯ ಪರಿಸರ ನೀತಿ ಮತ್ತು ಸಾಮಾನ್ಯ ವಿಪತ್ತು ನಿರ್ವಹಣಾ ವ್ಯವಸ್ಥೆಯನ್ನು ರೂಪಿಸುವ ಅಂತರರಾಷ್ಟ್ರೀಯ ವೇದಿಕೆ ಈಗ ತುರ್ತು ಅಗತ್ಯ.
ಹಿಮಾಲಯ ಪ್ರದೇಶವನ್ನು ದೇಶದ ಇತರೆ ಸಮತಟ್ಟು ಭೂಭಾಗಗಳಂತೆ ಪರಿಗಣಿಸಿ ಯೋಜನೆಗಳನ್ನು ರೂಪಿಸುವುದು ಅತ್ಯಂತ ಅಪಾಯಕಾರಿ. ಹಿಮಾಲಯದ ನಿಸರ್ಗವು ತನ್ನ ಸಹನೆಯ ಗಡಿ ದಾಟಿದೆ ಎಂಬುದನ್ನು ಈ ಸರಣಿ ದುರಂತಗಳು ನಿರೂಪಿಸಿವೆ. ಸರ್ಕಾರಗಳು ಮತ್ತು ಸಮಾಜವು ವಿಜ್ಞಾನಿ ಹಾಗೂ ಪರಿಸರಾಸಕ್ತರ ಧ್ವನಿಗೆ ಕಿವಿಗೊಟ್ಟು, ಹಿಮಾಲಯಕ್ಕಾಗಿಯೇ ಪ್ರತ್ಯೇಕ 'ಪರಿಸರ-ಆಧಾರಿತ ಅಭಿವೃದ್ಧಿ ಮಾದರಿ'ಯನ್ನು ಜಾರಿಗೆ ತರದಿದ್ದರೆ, ಮುಂದಿನ ದಿನಗಳಲ್ಲಿ ನಿಸರ್ಗ ನೀಡುವ ಉತ್ತರ ಇನ್ನಷ್ಟು ಕಠೋರವಾಗಿರಲಿದೆ.
ಹಿಮಾಲಯದ ಎಚ್ಚರಿಕೆಗಳನ್ನು ಇನ್ನೂ ನಿರ್ಲಕ್ಷಿಸಿದರೆ ಮುಂದಿನ ದುರಂತಗಳು ನಮಗೆ ಮತ್ತೊಂದು ಪ್ರಶ್ನೆ ಕೇಳಬಹುದು: ಪರ್ವತದ ಸಹನೆಯ ಮಿತಿಯನ್ನು ಅರಿಯಲು ಇನ್ನೆಷ್ಟು ಜೀವಗಳ ಬೆಲೆ ತೆರಬೇಕಿದೆ?
ಆದ್ಯತೆಯ ಸಂಶೋಧನಾ ಕ್ಷೇತ್ರಗಳು
ಹಿಮಸರೋವರಗಳ (GLOF) ನಕ್ಷೆ ಮತ್ತು ನಿರಂತರ ಮೇಲ್ವಿಚಾರಣೆ: ಕರಗುತ್ತಿರುವ ಹಿಮನದಿಗಳಿಂದ ಸೃಷ್ಟಿಯಾಗುತ್ತಿರುವ ಅಪಾಯಕಾರಿ ಸರೋವರಗಳನ್ನು (Glacial Lakes) ಉಪಗ್ರಹ ತಂತ್ರಜ್ಞಾನದ ಮೂಲಕ ನಿರಂತರವಾಗಿ ಪರಿಶೀಲಿಸಬೇಕು. ಯಾವುದೇ ಕ್ಷಣದಲ್ಲಿ ಇವು ತುಳುಕಿ ಹರಿಯುವ ಅಪಾಯವಿರುವುದರಿಂದ ತಕ್ಷಣದ ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆಗಳನ್ನು (Real-time Early Warning Systems) ರೂಪಿಸುವುದು ಮೊದಲ ಆದ್ಯತೆಯಾಗಬೇಕು.
ಪರ್ಮಾಫ್ರಾಸ್ಟ್ ಅಧ್ಯಯನ: ಹಿಮಾಲಯದ ಮೇಲ್ಭಾಗದಲ್ಲಿ ಆಳವಾಗಿ ಹೆಪ್ಪುಗಟ್ಟಿರುವ ಮಣ್ಣು ಮತ್ತು ಬಂಡೆಗಳು (ಪರ್ಮಾಫ್ರಾಸ್ಟ್) ತಾಪಮಾನದಿಂದ ಹೇಗೆ ಬದಲಾಗುತ್ತಿವೆ ಮತ್ತು ಇಳಿಜಾರುಗಳ ದೃಢತೆಯ ಮೇಲಾಗುತ್ತಿರುವ ಪರಿಣಾಮವೇನು ಎಂಬುದರ ಕುರಿತು ಆಳವಾದ ವೈಜ್ಞಾನಿಕ ವಿಶ್ಲೇಷಣೆ ನಡೆಯಬೇಕು.
ಧಾರಣ ಸಾಮರ್ಥ್ಯ (Carrying Capacity) ಮಾದರಿ: ಪ್ರತಿಯೊಂದು ಪರ್ವತ ಪ್ರದೇಶಕ್ಕೂ ತನ್ನದೇ ಆದ ಸಾಮರ್ಥ್ಯದ ಮಿತಿ ಇದೆ. ಉತ್ತರಾಖಂಡ ಮತ್ತು ನೇಪಾಳದ ನಗರಗಳು ಎಷ್ಟು ಜನಸಂಖ್ಯೆ, ವಾಹನ ಹಾಗೂ ಕಟ್ಟಡಗಳ ಭಾರವನ್ನು ಹೊರಬಲ್ಲವು ಎಂಬುದನ್ನು ಖಚಿತಪಡಿಸಿಕೊಳ್ಳಲು ವೈಜ್ಞಾನಿಕ 'ಧಾರಣ ಸಾಮರ್ಥ್ಯ' ಮೌಲ್ಯಮಾಪನ ತಕ್ಷಣವೇ ಅಗಬೇಕಿದೆ.

