Dailyhunt Logo
  • Light mode
    Follow system
    Dark mode
    • Play Story
    • App Story
ಗಯಾನಾದಲ್ಲಿ ಕನ್ನಡಿಗನ ಕೃಷಿ ಸಾಧನೆ: ನಿಪ್ಪಾಣಿಯ ಅಭಿಲಾಷ್ ಯಶೋಗಾಥೆ

ಗಯಾನಾದಲ್ಲಿ ಕನ್ನಡಿಗನ ಕೃಷಿ ಸಾಧನೆ: ನಿಪ್ಪಾಣಿಯ ಅಭಿಲಾಷ್ ಯಶೋಗಾಥೆ

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಗಯಾನಾದಲ್ಲಿ ಕನ್ನಡಿಗನ ಕೃಷಿ ಸಾಧನೆ: ನಿಪ್ಪಾಣಿಯ ಅಭಿಲಾಷ್ ಯಶೋಗಾಥೆ

ಒಂದು ಸಾಲಿನಲ್ಲಿನಿಪ್ಪಾಣಿಯ ಅಭಿಲಾಷ್ ಅವರು ಗಯಾನಾದಲ್ಲಿ 500 ಎಕರೆ ಪ್ರದೇಶದಲ್ಲಿ ಯಶಸ್ವಿ ತೆಂಗಿನ ಕೃಷಿ ಕೈಗೊಳ್ಳುವ ಮೂಲಕ ವಿದೇಶದಲ್ಲಿ ಕನ್ನಡಿಗರ ಕೀರ್ತಿ ಪತಾಕೆ ಹಾರಿಸಿದ್ದಾರೆ.

ಪ್ರಮುಖ ಪ್ರಶ್ನೋತ್ತರ


ಗಯಾನಾದಲ್ಲಿ ಅಭಿಲಾಷ್ ಕೈಗೊಂಡಿರುವ ಕೃಷಿ ಸಾಧನೆ ಏನು?

ಅಭಿಲಾಷ್ ಅವರು ಗಯಾನಾದಲ್ಲಿ ಸುಮಾರು 500 ಎಕರೆ ಪ್ರದೇಶದಲ್ಲಿ 29 ಸಾವಿರ ಶಾರ್ಟ್ ಡ್ವಾರ್ಫ್ ತಳಿಯ ತೆಂಗಿನ ಸಸಿಗಳನ್ನು ಬೆಳೆಸುವ ದೊಡ್ಡ ಕೃಷಿ ಯೋಜನೆಯನ್ನು ನಿರ್ವಹಿಸುತ್ತಿದ್ದಾರೆ.


ಅಭಿಲಾಷ್ ಕೃಷಿ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಹೇಗೆ?

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ನಂತರ, ಮೊಸಾಂಬಿಕ್‌ನಲ್ಲಿ ಸಿಕ್ಕ ಫಾರ್ಮ್ ಮ್ಯಾನೇಜರ್ ಅವಕಾಶ ಅವರ ಜೀವನದಲ್ಲಿ ದೊಡ್ಡ ತಿರುವು ನೀಡಿತು.


ಅಭಿಲಾಷ್ ಎದುರಿಸಿದ ಪ್ರಮುಖ ಸವಾಲುಗಳೇನು?

ಮೊಸಾಂಬಿಕ್‌ನಲ್ಲಿ ಭಾಷೆ ಮತ್ತು ಕಾರ್ಮಿಕರ ಮುಷ್ಕರದ ಸಮಸ್ಯೆಗಳನ್ನು ಎದುರಿಸಿದರೆ, ಗಯಾನಾದಲ್ಲಿ ಕಾರ್ಮಿಕರ ತೀವ್ರ ಕೊರತೆಯನ್ನು ನಿಭಾಯಿಸಬೇಕಾಯಿತು.


ಕೃಷಿಗಾಗಿ ಅಭಿಲಾಷ್ ಅನುಸರಿಸುತ್ತಿರುವ ತಂತ್ರಜ್ಞಾನ ಯಾವುದು?

ಅವರು ಗಯಾನಾದಲ್ಲೂ ಭಾರತೀಯ ಕೃಷಿ ಪದ್ಧತಿಗಳು ಮತ್ತು ಭಾರತದ ಕೃಷಿ ವಿಜ್ಞಾನಿಗಳು ಶಿಫಾರಸು ಮಾಡಿದ ತಾಂತ್ರಿಕತೆಗಳನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿದ್ದಾರೆ.


ಭವಿಷ್ಯದಲ್ಲಿ ಅಭಿಲಾಷ್ ಅವರ ಗುರಿ ಏನು?

ತಮ್ಮದೇ ಆದ ಸ್ವಂತ ಕೃಷಿ ಸಂಸ್ಥೆಯನ್ನು ಗಯಾನಾದಲ್ಲಿ ಆರಂಭಿಸಿ, ಹೊಸ ಕೃಷಿ ತಂತ್ರಜ್ಞಾನಗಳೊಂದಿಗೆ ಹೆಚ್ಚಿನ ಸಾಧನೆ ಮಾಡುವ ಗುರಿಯನ್ನು ಅವರು ಹೊಂದಿದ್ದಾರೆ.

ಪ್ರಮುಖ ಅಂಕಿಅಂಶಗಳು

500 ಎಕರೆತೆಂಗಿನ ತೋಟದ ವಿಸ್ತೀರ್ಣ29 ಸಾವಿರನಾಟಿ ಮಾಡಲಾದ ತೆಂಗಿನ ಸಸಿಗಳ ಸಂಖ್ಯೆ5 ಸಾವಿರಫಸಲು ನೀಡುತ್ತಿರುವ ತೆಂಗಿನ ಮರಗಳು

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಗಯಾನಾ. ವಿಸ್ತೀರ್ಣದಲ್ಲಿ ಕರ್ನಾಟಕಕ್ಕಿಂತ ಕಡಿಮೆ ಇರುವ ದಕ್ಷಿಣ ಅಮೆರಿಕದ ಈ ಪುಟ್ಟ ದೇಶದ ಹೆಸರು ಬಹುಶಃ ತುಂಬ ಜನರಿಗೆ ಅಪರಿಚಿತವಾಗಿರಬಹುದು. ಆದರೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಮೂಲದ ಅಭಿಲಾಷ್‌ಗೆ ಆ ದೇಶ ಈಗ ಎರಡನೇ ಮನೆ. ಕಳೆದ ಕೆಲವು ವರ್ಷಗಳಿಂದ ಅಲ್ಲಿ 500 ಎಕರೆ ತೆಂಗಿನ ತೋಟ ಮಾಡಿದ್ದಾರೆ. ಸುಮಾರು 29 ಸಾವಿರ ಶಾರ್ಟ್ ಡ್ವಾರ್ಫ್ ತಳಿಯ ತೆಂಗಿನ ಸಸಿಗಳ ನಿರ್ವಹಣೆ ಅವರ ಜವಾಬ್ದಾರಿ. ಅವುಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಸಸಿಗಳು ಈಗಾಗಲೇ ಫಲ ನೀಡುತ್ತಿವೆ.

ಇಂಗ್ಲೆಂಡ್‌ನಲ್ಲಿ ಭೀಕರ ಬರ, ಉಷ್ಣಾಂಶ ಏರಿಕೆ; ಆಹಾರ ಕೊರತೆ, ಕಾಡ್ಗಿಚ್ಚಿನ ಆತಂಕ

ಒಂದು ಅವಕಾಶ, ಹೊಸ ದಾರಿ

ನಿಪ್ಪಾಣಿಯಲ್ಲಿ ಪಿಯುಸಿ ಮುಗಿಸಿದ ಅಭಿಲಾಷ್, ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ (ಕೃಷಿ) ಪದವಿ ಪಡೆದಿದ್ದಾರೆ. ಬಳಿಕ ಕೃಷಿ ವೇರ್‌ಹೌಸಿಂಗ್ ಸಂಸ್ಥೆಯಲ್ಲಿ ಕೆಲಸ ಆರಂಭಿಸಿದರು. ಮೊಸಾಂಬಿಕ್‌ನಲ್ಲಿ ಕೃಷಿ ಯೋಜನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾಲೇಜಿನ ಹಿರಿಯರೊಬ್ಬರಿಂದ ಸಿಕ್ಕಿದ 'ಫಾರ್ಮ್ ಮ್ಯಾನೇಜರ್' ಅವಕಾಶ ಅವರ ಬದುಕನ್ನೇ ಬದಲಿಸಿತು.

'ಒಮ್ಮೆ ಹೋಗಿ ನೋಡೋಣ ಅಂದುಕೊಂಡೆ. ಅದೇ ನನ್ನ ಜೀವನದ ದೊಡ್ಡ ತಿರುವಾಯಿತು' ಎನ್ನುತ್ತಾರೆ ಅಭಿಲಾಷ್.

ಮೊಸಾಂಬಿಕ್‌ಗೆ ಹೋದಾಗ ಅಭಿಲಾಷ್‌ಗೆ ಎಲ್ಲವೂ ಹೊಸದು. ಹೊಸ ದೇಶ, ಹೊಸ ಜನ, ಹೊಸ ಭಾಷೆ. ಸುತ್ತಲೂ ಕೇಳಿಸುತ್ತಿದ್ದದ್ದು ಪೋರ್ಚುಗೀಸ್ ಭಾಷೆ. ಕನ್ನಡ ಮತ್ತು ಇಂಗ್ಲಿಷ್ ಮಾತ್ರ ಗೊತ್ತಿದ್ದ ಅವರಿಗೆ ಮೊದಲ ದಿನಗಳು ಸವಾಲಿನದ್ದಾಗಿದ್ದವು.

'ಮೊದಲ ಎರಡು-ಮೂರು ತಿಂಗಳು ಯಾರ ಮಾತೂ ಸರಿಯಾಗಿ ಅರ್ಥವಾಗುತ್ತಿರಲಿಲ್ಲ. ಕೆಲಸ ಮಾಡಬೇಕಾದರೆ ಭಾಷೆ ಕಲಿಯಲೇಬೇಕು ಅನ್ನಿಸಿತು. ನಂತರ ಪೋರ್ಚುಗೀಸ್ ಕಲಿತೆ. ಈಗ ಆ ಭಾಷೆಯಲ್ಲೂ ಮಾತನಾಡಬಲ್ಲೆ' ಅವರ ಮಾತಿನಲ್ಲಿ ಆತ್ಮವಿಶ್ವಾಸ ಇತ್ತು. ಸಸ್ಯಾಹಾರಿಯಾಗಿರುವ ಅವರಿಗೆ ಊಟದ ಸಮಸ್ಯೆ ಮಾತ್ರ ನಿತ್ಯದ್ದು.

ಕೆಲಸದವರೊಂದಿಗೆ ಅಭಿಲಾಷ್

ಕೃಷಿಯಷ್ಟೇ ಅಲ್ಲ, ಜನರನ್ನೂ ನಿಭಾಯಿಸಬೇಕಿತ್ತು

ಮೊಸಾಂಬಿಕ್‌ನಲ್ಲಿ ಅಭಿಲಾಷ್ ಅವರಿಗೆ ಕೃಷಿಗಿಂತ ಹೆಚ್ಚು ಸವಾಲಾಗಿದ್ದು ಕಾರ್ಮಿಕರ ನಿರ್ವಹಣೆ. ತೋಟದಲ್ಲಿ ಕೆಲಸ ನಿಗದಿಯಂತೆ ಸಾಗಬೇಕಾದರೆ ಕಾರ್ಮಿಕರ ಸಹಕಾರ ಅತ್ಯಗತ್ಯ. ಆದರೆ ಕಾರ್ಮಿಕರ ಮುಷ್ಕರ, ರಸ್ತೆ ತಡೆಗಳು ಆಗಾಗ ನಡೆಯುತ್ತಿದ್ದವು. ಪರಿಣಾಮ, ಯೋಜನೆಗಳು ವಿಳಂಬವಾಗುತ್ತಿತ್ತು.

ಮೇಲಧಿಕಾರಿಗಳು ಕೆಲಸವನ್ನು ನಿಗದಿತ ಸಮಯಕ್ಕೆ ಮುಗಿಸುವ ಹೊಣೆ ನೀಡುತ್ತಿದ್ದರು. ಆದರೆ ಒಂದೆಡೆ ಗಡುವು, ಇನ್ನೊಂದೆಡೆ ಕಾರ್ಮಿಕರ ಸಮಸ್ಯೆ. ಎರಡನ್ನೂ ಸಮತೋಲನಗೊಳಿಸಿ ಕೆಲಸ ಮುನ್ನಡೆಸಬೇಕಾಗುತ್ತಿತ್ತು. 'ಕೆಲವೊಮ್ಮೆ ಬೆಳೆಗಿಂತ ಹೆಚ್ಚು ಸಮಯ ಕಾರ್ಮಿಕರ ಸಮಸ್ಯೆ ಬಗೆಹರಿಸುವುದಕ್ಕೇ ಹೋಗುತ್ತಿತ್ತು' ಎಂದರು ಅವರು.

ಗಯಾನಾದಲ್ಲಿ ಮತ್ತೊಂದು ಸವಾಲು

ಮೊಸಾಂಬಿಕ್‌ನ ನಂತರ ಅವರಿಗೆ ಗಯಾನಾದಲ್ಲಿ ಅವಕಾಶ ಸಿಕ್ಕಿತು. ಇಂಗ್ಲಿಷ್ ಮಾತನಾಡುವ ದೇಶವಾಗಿದ್ದರಿಂದ ಈ ಬಾರಿ ಭಾಷೆಯ ಸಮಸ್ಯೆ ಇರಲಿಲ್ಲ. ಭಾರತ ಮೂಲದ ಜನರು ಹೆಚ್ಚಿರುವುದರಿಂದ ಹೊಂದಿಕೊಳ್ಳುವುದು ಸುಲಭವಾಯಿತು.

ಆದರೆ ಇಲ್ಲಿ ಮತ್ತೊಂದು ಸಮಸ್ಯೆ ಎದುರಾಯಿತು. ಕಾರ್ಮಿಕರ ಕೊರತೆ. 'ಮೊಸಾಂಬಿಕ್‌ನಲ್ಲಿ ನೂರಾರು ಕಾರ್ಮಿಕರು ಸಿಗುತ್ತಿದ್ದರು. ಇಲ್ಲಿ ಕಾರ್ಮಿಕರೇ ಸಿಗುತ್ತಿರಲಿಲ್ಲ. ಕೊನೆಗೆ ಭಾರತದಿಂದ ಸುಮಾರು 20 ಮಂದಿಯನ್ನು ಕರೆಸಿ ಕೆಲಸ ಆರಂಭಿಸಿದೆವು' ಎಂದರು ಅವರು.

ಮೊಸಾಂಬಿಕ್‌ನ ಕೃಷಿ ಅವರಿಗೆ ಹೊಸ ಅನುಭವ. ಅಲ್ಲಿಯದು ಅರಣ್ಯ ಬೇಸಾಯ ಪದ್ಧತಿ. ದಟ್ಟ ಕಾಡಿನ ಮಧ್ಯೆ ತೋಟ. ಕೆಲಸಕ್ಕೆ ಹೋಗುವಾಗ ಕಾಡುಪ್ರಾಣಿಗಳೂ ಕೂಡ ಕಾಣಿಸಿಕೊಳ್ಳುತ್ತವೆಯಂತೆ.

ಅಭಿಲಾಷ್ ಗಯಾನಾಕ್ಕೆ ಬಂದಾಗ 500 ಎಕರೆ ವ್ಯಾಪ್ತಿಯ ಆ ಜಾಗ ಕಾಡಿನಿಂದ ತುಂಬಿತ್ತು. ವರ್ಷಗಳ ಪರಿಶ್ರಮದ ನಂತರ ಅದೇ ಜಾಗ ಇಂದು ಹಸಿರು ತೆಂಗಿನ ತೋಟವಾಗಿ ರೂಪುಗೊಂಡಿದೆ. ಸಾಲು ಸಾಲಾಗಿ ನಿಂತಿರುವ ಸುಮಾರು 29 ಸಾವಿರ ಶಾರ್ಟ್ ಡ್ವಾರ್ಫ್ ತಳಿಯ ತೆಂಗಿನ ಮರಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಮರಗಳು ಈಗಾಗಲೇ ಫಸಲು ನೀಡುತ್ತಿವೆ.

ಭಾರತದ ಕಾರ್ಮಿಕರು

ಅಮೆರಿಕದಲ್ಲಿ ಎಚ್‌-1ಬಿ ವೀಸಾ ನಿಯಮ ಬಿಗಿ: ಭಾರತೀಯ ಟೆಕ್ಕಿಗಳಿಗೆ ಭಾರಿ ಪೆಟ್ಟು?

ಗಯಾನಾದಲ್ಲಿ ಫಲ ಕೊಟ್ಟ ಭಾರತದ ಪಾಠ

ಗಯಾನಾದಲ್ಲಿ ಯಂತ್ರೋಪಕರಣಗಳ ಕೊರತೆಯಿಲ್ಲ. ಟ್ರ್ಯಾಕ್ಟರ್‌ನಿಂದ ಹಿಡಿದು ಕೃಷಿ ಉಪಕರಣಗಳವರೆಗೆ ಬಹುತೇಕ ಎಲ್ಲವೂ ಅಮೆರಿಕ ಸೇರಿದಂತೆ ಹಲವು ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಆದರೆ ಕೃಷಿಗೆ ಅಭಿಲಾಷ್ ಭಾರತೀಯ ಪದ್ಧತಿಯನ್ನೇ ಆಯ್ದುಕೊಂಡಿದ್ದಾರೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಕಲಿತ ಪಾಠಗಳು, ಭಾರತದಲ್ಲಿನ ಕೃಷಿ ವಿಶ್ವವಿದ್ಯಾಲಯಗಳ ಸಂಶೋಧನೆಗಳು ಮತ್ತು ಭಾರತೀಯ ಕೃಷಿ ವಿಜ್ಞಾನಿಗಳ ಶಿಫಾರಸುಗಳು ಇಂದಿಗೂ ಅವರ ಕೆಲಸಕ್ಕೆ ಮಾರ್ಗದರ್ಶಿಯಾಗಿವೆ.

'ನೀರಾವರಿ, ಗೊಬ್ಬರ ನಿರ್ವಹಣೆ, ಕೀಟ ಮತ್ತು ರೋಗ ನಿಯಂತ್ರಣ... ಹೀಗೆ ಹಲವು ವಿಷಯಗಳಲ್ಲಿ ಭಾರತದ ಕೃಷಿ ವಿಶ್ವವಿದ್ಯಾಲಯಗಳ ಸಂಶೋಧನೆಯನ್ನೇ ನಾವು ಅನುಸರಿಸುತ್ತೇವೆ. ಭಾರತೀಯ ಕೃಷಿ ತಂತ್ರಜ್ಞಾನವನ್ನು ಇಲ್ಲಿ ಅಳವಡಿಸಿಕೊಂಡ ಬಳಿಕ ಅದರ ಫಲವೂ ಕಾಣುತ್ತಿದೆ' ಎಂದು ಅವರು ಹೇಳುತ್ತಾರೆ.

ಗಯಾನಾದ ಭೂಮಿ ಮತ್ತು ಹವಾಮಾನ ಕೃಷಿಗೆ ಪೂರಕವಾಗಿವೆ. ಅಕ್ಕಿ, ಕಬ್ಬು, ತೆಂಗು ಸೇರಿದಂತೆ ಹಲವು ವಾಣಿಜ್ಯ ಬೆಳೆಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಅನೇಕ ಭೂಮಾಲೀಕರು ಅಮೆರಿಕ ಮತ್ತು ಕೆನಡಾದಲ್ಲಿ ನೆಲೆಸಿರುವುದರಿಂದ ಫಾರ್ಮ್‌ಗಳ ನಿರ್ವಹಣೆಗೆ ವೃತ್ತಿಪರ ಮ್ಯಾನೇಜರ್‌ಗಳ ಅಗತ್ಯವೂ ಹೆಚ್ಚಿದೆ. ಅಭಿಲಾಷ್ ಅವರ ಅನುಭವದ ಪ್ರಕಾರ, ಕೃಷಿ ಪದವೀಧರರಿಗೆ ಗಯಾನಾದಲ್ಲಿ ಉತ್ತಮ ಅವಕಾಶಗಳಿವೆ.

ಆಗಸ್ಟ್‌ 15 ಅನ್ನು 'ಇಂಡಿಯಾ ಡೇ' ಎಂದು ಘೋಷಿಸಿದ ಮ್ಯಾಸಚೂಸೆಟ್ಸ್

ತೋಟದಲ್ಲಿ ಅಭಿಲಾಷ್

ಕಾಡುವ ಮನೆಯ ನೆನಪುಗಳು

ಗಯಾನಾದಲ್ಲಿನ ತೋಟ ಅಲ್ಲಿನ ಜನ, ಅಲ್ಲಿನ ದಿನಚರಿ ಎಲ್ಲವೂ ಅವರ ಬದುಕಿನ ಭಾಗವೇ ಆಗಿದ್ದರೂ, ಸಾವಿರಾರು ಕಿಲೋಮೀಟರ್ ದೂರದ ನಿಪ್ಪಾಣಿ ಮಾತ್ರ ನಿತ್ಯದ ಧ್ಯಾನ. ‌ ತಂದೆ-ತಾಯಿಯ ನೆನಪುಗಳು ಕಾಡುತ್ತವೆ. ವರ್ಷಕ್ಕೊಮ್ಮೆ ಡಿಸೆಂಬರ್‌ನಲ್ಲಿ ಊರಿಗೆ ಬರುತ್ತಾರೆ.. ಆ ಕೆಲವು ದಿನಗಳನ್ನು ಮನೆಯವರ ಜೊತೆ ಕಳೆದು ಮತ್ತೆ ಗಯಾನಾಕ್ಕೆ ಮರಳುತ್ತಾರೆ.

'ಅವರಿಗೆ ವಯಸ್ಸಾಗುತ್ತಿದೆ. ಅವರ ಜೊತೆ ಹೆಚ್ಚು ಸಮಯ ಇರಬೇಕು ಅನ್ನಿಸುತ್ತದೆ. ಆದರೆ ಕೆಲಸದ ಜವಾಬ್ದಾರಿಗಳಿಂದ ವರ್ಷಕ್ಕೆ ಒಮ್ಮೆ ಮಾತ್ರ ಬರುತ್ತೇನೆ' ಕೆಲಸಕ್ಕಾಗಿ ಊರು ಬಿಟ್ಟು ಬಂದವರ ನೋವಿನ ಪ್ರತಿಧ್ವನಿ ಕೇಳಿದ ಹಾಗಿತ್ತು. ಗಯಾನಾದಲ್ಲೇ ತಮ್ಮದೇ ಕೃಷಿ ಸಂಸ್ಥೆ ಆರಂಭಿಸುವ ಗುರಿ ಅವರದು. ಹೊಸ ತಂತ್ರಜ್ಞಾನಗಳನ್ನು ಅಳವಡಿಸಿ ಕೃಷಿಯಲ್ಲಿ ಸಾಧನೆ ಮಾಡುವ ಕನಸು ಬಿಚ್ಚಿಟ್ಟರು.

ಇಂದು ಗಯಾನಾದ 500 ಎಕರೆ ತೋಟದ ಮಧ್ಯೆ ನಿಂತು ಸಾಲು ಸಾಲಾಗಿ ಬೆಳೆದಿರುವ 29 ಸಾವಿರ ತೆಂಗಿನ ಸಸಿಗಳನ್ನು ನೋಡಿದಾಗ' 'ನಾನು ಹಾಕಿದ ಶ್ರಮ ವ್ಯರ್ಥವಾಗಿಲ್ಲ ಅನ್ನಿಸುತ್ತದೆ' ಇದೇ ನನ್ನ ಕೆಲಸಕ್ಕೆ ಉತ್ತೇಜನ ನೀಡುತ್ತದೆ' ಮಾತು ಮುಗಿಸಿದರು ಅಭಿಲಾಷ್.

ಅಭಿಲಾಷ್ ಅವರ ಸಂಪರ್ಕ: https://wa.me/5926175559

ವಿಶ್ಲೇಷಣೆ: ಭಾರತ-ಯುಕೆ ವ್ಯಾಪಾರ ಒ‍ಪ್ಪಂದ ಕರ್ನಾಟಕಕ್ಕೂ ದೊಡ್ಡ ಅವಕಾಶ
Dailyhunt
Disclaimer: This content has not been generated, created or edited by Dailyhunt. Publisher: Prajavani