ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಹಮ್ಮಿಕೊಂಡ 'ಹುಬ್ಬಳ್ಳಿ ಚಲೊ' ಪಾದಯಾತ್ರೆ ಶನಿವಾರ ಚನ್ನಮ್ಮನ ಕಿತ್ತೂರು ಪ್ರವೇಶ ಮಾಡಿತು. ಇಲ್ಲಿನ ಐತಿಹಾಸಿಕ ರಾಣಿ ಚನ್ನಮ್ಮ ವೃತ್ತದಲ್ಲಿ ಅಪಾರ ಸಂಖ್ಯೆಯ ರೈತರು ಕಿಕ್ಕಿರಿದು ಸೇರಿದರು.
ಇದೇ ಸ್ಥಳದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರೈತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಎಂ.ಕೆ.ಹುಬ್ಬಳ್ಳಿಯಲ್ಲಿ ಕರೆದಿದ್ದ ರಾಜ್ಯಮಟ್ಟದ ರೈತ ಮುಖಂಡರ ಸಭೆ ಕಿತ್ತೂರಿನಲ್ಲೇ ನಡೆಯಲಿದೆ. ಅದಕ್ಕೂ ಶಿವಕುಮಾರ್ ಸಾಕ್ಷಿಯಾಗಲಿದ್ದಾರೆ.
ಮುಖ್ಯಮಂತ್ರಿ ಬರುವ ವಿಚಾರ ತಿಳಿದು ಜಿಲ್ಲೆಯ ಮೂಲೆಮೂಲೆಯಿಂದ ಅಪಾರ ಸಂಖ್ಯೆಯ ರೈತರು ಧಾವಿಸಿಬಂದರು.
ಕ್ರಾಂತಿಯ ನೆಲ ಕಿತ್ತೂರಿನಲ್ಲಿ ರೈತ ಸೇನೆಯ ಘೋಷಣೆಗಳು ಮುಗಿಲು ಮುಟ್ಟಿದವು. ಹಸಿರು ಟವಲ್ ಗಾಳಿಯಲ್ಲಿ ಬಾವುಟಗಳಾಗಿ ಹಾರಿದವು. ರಾಣಿ ಚನ್ನಮ್ಮನಿಗೆ ಜೈಕಾರ, ಸರ್ಕಾರಕ್ಕೆ ಧಿಕ್ಕಾರಗಳು ನಿರಂತರ ಮೊಳಗಿದವು.
ರೈತರ ಕೂಗು ಒಡಲ ಧ್ವನಿಯಾಗಿ ಹೊರಹೊಮ್ಮಿತು.
ನಾಲ್ಕನೇ ದಿನದ ಪಾದಯಾತ್ರೆಯಲ್ಲಿ ಮುಂಚೂಣಿ ವಹಿಸಿದ ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ, ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ರೈತರನ್ನು ಸಮಾಧಾನ ಪಡಿಸಲು ಯತ್ನಿಸಿದರು.
ಕಬ್ಬಿಗೆ ₹5,500 ದರ ನೀಡಬೇಕು, ಸಕ್ಕರೆಗೆ ₹60 ಎಂಎಸ್ಪಿ ಘೋಷಿಸಬೇಕು ಹಾಗೂ ಎಥನಾಲ್ ಅನ್ನು ಸಂಪೂರ್ಣ ಖರೀದಿ ಮಾಡಬೇಕು ಎಂಬ ಮೂರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ರೈತರು ಈ ಹೋರಾಟ ನಡೆಸಿದ್ದಾರೆ. ಮುಖ್ಯಮಂತ್ರಿ ಭೇಟಿಯ ಕಾರಣ ₹1,000 ಎಸ್ಎಪಿ ನೀಡಬೇಕು ಎಂದೂ ಘೋಷಣೆ ಮೊಳಗಿಸಿದರು.
ಭರವಸೆಗೆ ಮಣಿಯುವುದಿಲ್ಲ; ಬೇಡಿಕೆ ಈಡೇರುವವರೆಗೆ ನಿಲ್ಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
'ರೈತರ ಸಮಸ್ಯೆ ಬಗೆಹರಿಸಲು' ಕಿತ್ತೂರಿನತ್ತ ಮುಖ್ಯಮಂತ್ರಿ ಶಿವಕುಮಾರ್ಕಬ್ಬಿಗೆ ಲಾಭದಾಯಕ ಬೆಲೆ ನೀಡುವಂತೆ ಆಗ್ರಹ: ರೈತರಿಂದ ರಾಣಿ ಚನ್ನಮ್ಮ ವೃತ್ತ ಬಂದ್
