Dailyhunt Logo
  • Light mode
    Follow system
    Dark mode
    • Play Story
    • App Story
ಇರಾನ್‌ ಬ್ರಹ್ಮಾಸ್ತ್ರ: ನೃತ್ಯ ಮಾಡುತ್ತಲೇ ಶತ್ರು ನೆಲೆಗೆ ಅಪ್ಪಳಿಸುವ ಘಾತಕ

ಇರಾನ್‌ ಬ್ರಹ್ಮಾಸ್ತ್ರ: ನೃತ್ಯ ಮಾಡುತ್ತಲೇ ಶತ್ರು ನೆಲೆಗೆ ಅಪ್ಪಳಿಸುವ ಘಾತಕ

ರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ 17ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಇರಾನ್‌ ಇದೇ ಮೊದಲ ಬಾರಿಗೆ ತನ್ನ ಬತ್ತಳಿಕೆಯಲ್ಲಿರುವ 'ಸೆಜ್ಜಿಲ್‌' ಎಂಬ ಬ್ರಹ್ಮಾಸ್ತ್ರವನ್ನು ಇಸ್ರೇಲ್‌ ಮೇಲೆ ಪ್ರಯೋಗಿಸಿದೆ.‌ ಸೆಜ್ಜಿಲ್‌ ಕ್ಷಿಪಣಿ ಇರಾನ್‌ ಪಾಲಿನ ಬ್ರಹ್ಮಾಸ್ತ್ರ ಏಕೆ?, ಕ್ಷೀಪಣಿಯ ವಿಶೇಷತೆಗಳೇನು?, ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ, ಹಾಗೂ ಇದರ ಸಾಮರ್ಥ್ಯದ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಇದೇ ಮಾರ್ಚ್‌ 15ರಂದು ಇರಾನ್‌ ಆಪರೇಷನ್ ಟೂ ಪ್ರಾಮಿಸ್ 4 ಎನ್ನುವ ಕಾರ್ಯಾಚರಣೆಯಲ್ಲಿ 54 ಅಲೆಯ ದಾಳಿಯನ್ನು ನಡೆಸಿತು. ಈ ದಾಳಿಯಲ್ಲಿ ಇಸ್ರೇಲಿನ ಗುಪ್ತಚರ ಮತ್ತು ಮಿಲಿಟರಿ ಕಮಾಂಡ್ ಕೇಂದ್ರದ ಕಟ್ಟಡಗಳನ್ನು ಗುರಿಯಾಗಿಸಿಕೊಂಡಿತ್ತು. ಈ ದಾಳಿಗೆ ಸೆಜ್ಜಿಲ್‌ ಕ್ಷಿಪಣಿಯನ್ನು ಬಳಸಿದೆ.

ಇರಾನ್‌ ದೇಶದ ಅತ್ಯಂತ ಮುಂದುವರಿದ ಖಂಡಾಂತರ ಕ್ಷಿಪಣಿ ವ್ಯವಸ್ಥೆಯಲ್ಲಿ, ಸೆಜ್ಜಿಲ್ ಕ್ಷಿಪಣಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಸೆಜ್ಜಿಲ್ ಕ್ಷಿಪಣಿಯನ್ನು ಇರಾನ್‌ ದೇಶಿಯವಾಗಿ ನಿರ್ಮಿಸಿಕೊಂಡಿದ್ದು, ಎರಡು ಹಂತಗಳಿಂದ ಕೂಡಿದೆ. ಅಲ್ಲದೇ ಈ ಕ್ಷಿಪಣಿಗೆ ದ್ರವ ಇಂಧನದ ಬದಲಿಗೆ, ಘನ ಇಂಧನ ಬಳಸಬಹುದಾಗಿದೆ. ಇದೊಂದು ಮಧ್ಯಮ-ಶ್ರೇಣಿಯ ಖಂಡಾಂತರ ಕ್ಷಿಪಣಿಯಾಗಿದ್ದು, ಅಶುರ, ಅಶೌರ ಎಂಬ ಹೆಸರಿನಿಂದಲೂ ಗುರುತಿಸಲಾಗುತ್ತದೆ.

ಸೆಜ್ಜಿಲ್ ಕ್ಷಿಪಣಿಯು ಸುಮಾರು 2 ಸಾವಿರ ಕಿಲೋಮೀಟರ್‌ ದೂರದಲ್ಲಿರುವ ತನ್ನ ಗುರಿಯನ್ನು ತಲುಪುವ ಸಾಮರ್ಥ್ಯ ಹೊಂದಿದೆ ಎಂದೇ ಹೇಳಲಾಗುತ್ತದೆ. ಬಹುತೇಕ ಮಧ್ಯಪ್ರಾಚ್ಯದ ದೇಶಗಳನ್ನು ಆರಾಮವಾಗಿ ಗುರಿಯಾಗಿಸುವ ಸಾಮರ್ಥ್ಯ ಈ ಕ್ಷಿಪಣಿಗಿದೆ ಎನ್ನುತ್ತಾರೆ ರಕ್ಷಣಾ ತಜ್ಞರು. ಸಿಎಸ್‌ಐಎಸ್‌ ವರದಿ ಪ್ರಕಾರ ಈ ಕ್ಷಿಪಣಿ ಸುಮಾರು 700 ಕೆ.ಜಿ ತೂಕದ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲದ್ದಾಗಿದೆ.

ಘನ ಇಂಧನವೇ, ಪ್ಲಸ್‌ ಪಾಯಿಂಟ್‌..

ಸಾಮಾನ್ಯವಾಗಿ ಹೆಚ್ಚಿನ ಕ್ಷಿಪಣಿಗಳಿಗೆ ದ್ರವ ರೂಪದ ಇಂಧನವನ್ನು ಬಳಕೆ ಮಾಡಲಾಗುತ್ತದೆ. ಆದರೆ ಸೆಜ್ಜಿಲ್‌ಗೆ ಘನ ಇಂಧನ ಸಾಕಾಗುತ್ತದೆ. ದ್ರವ ಇಂಧನ ವ್ಯವಸ್ಥೆಯುಳ್ಳ ಕ್ಷಿಪಣಿಗಳಿಗಿಂತ ತುರ್ತಾಗಿ ಘನ ಇಂಧನವುಳ್ಳ ಕ್ಷಿಪಣಿಗಳನ್ನು ಉಡಾಯಿಸಬಹುದು. ಇವು ರೆಡಾರ್‌ಗಳ ಕಣ್ಣು ತಪ್ಪಿಸುವ ಸಾಧ್ಯತೆಯೂ ಇದ್ದು, ಯಾವುದೇ ಗಟ್ಟಿಯಾದ ಸ್ಥಳದಿಂದ ಮೊಬೈಲ್‌ ವ್ಯವಸ್ಥೆಯಿಂದಲೂ ಉಡಾಯಿಸಬಹುದಾಗಿದೆ.

ಸೆಜ್ಜಿಲ್‌ನ ಅಭಿವೃದ್ಧಿ ಆರಂಭವಾಗಿದ್ದು ಯಾವಾಗ?

ಸೆಜ್ಜಿಲ್ ಕ್ಷಿಪಣಿಯ ಅಭಿವೃದ್ಧಿ ಕಾರ್ಯ 1990ರ ದಶಕದ ಉತ್ತರಾರ್ಧದಲ್ಲಿ ಪ್ರಾರಂಭವಾಯಿತು. 2008ರಲ್ಲಿ ಮೊದಲ ಬಾರಿಗೆ ಸೆಜ್ಜಿಲ್‌ ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಯಿತು. ಅಂದಿನಿಂದ ಇರಾನ್ ಮೌನವಾಗಿ ಈ ಕ್ಷಿಪಣಿಯನ್ನು ನಿರಂತರವಾಗಿ ಅಭಿವೃದ್ಧಿ ಪಡಿಸುತ್ತ ಬಂದಿದೆ. ನಂತರದ ಪರೀಕ್ಷೆಗಳಲ್ಲಿ ಸುಮಾರು 1,900 ಕಿಲೋಮೀಟರ್ ಸಾಗಿದೆ. 2021ರಲ್ಲಿ ಸೆಜ್ಜಿಲ್‌ ಕ್ಷಿಪಣಿಯನ್ನು ಮಿಲಿಟರಿ ವ್ಯಾಯಾಮದ ಭಾಗವಾಗಿ ಇರಾನ್‌ ಉಡಾಯಿಸಿತ್ತು.

ಕುಣಿಯುತ್ತ ಸಾಗುವ ನೃತ್ಯ ಪಟು!

ಸಾಮಾನ್ಯವಾಗಿ ಮಿಸೈಲ್‌ಗಳು ನಿಗದಿತ ಗುರಿಯನ್ನು ನೇರವಾಗಿ ತುಲುಪುತ್ತವೆ. ಆದರೆ ಸೆಜ್ಜಿಲ್ ತುಸು ಭಿನ್ನವಾಗಿ ಶತ್ರುಗಳ ಮೇಲೆ ದಾಳಿ ನಡೆಸುತ್ತದೆ. ನುರಿತ ನೃತ್ಯಪಟು ಕುಶಲವಾಗಿ ನರ್ತಿಸುವ ರೀತಿಯಲ್ಲಿ ಈ ಕ್ಷಿಪಣಿಯೂ ಗಾಳಿಯಲ್ಲಿ ಬೇಕಾದಂತೆ ಬಾಗಿ, ಬಳುಕಿ ಸಾಗುತ್ತದೆ. ಇದನ್ನು ರೆಡಾರ್‌ಗೂ ಸುಲಭವಾಗಿ ಗುರುತಿಸಲು ಸಾಧ್ಯವಿಲ್ಲ. ಯಾವುದೇ ರಕ್ಷಣಾ ವ್ಯವಸ್ಥೆಗೂ ಇದನ್ನು ಸುಲಭವಾಗಿ ತಡೆಗಟ್ಟಲು ಸಾಧ್ಯವಿಲ್ಲ. ಅಲ್ಲದೇ ಹಾರುವಾಗ ತನ್ನ ಪಥವನ್ನು ಬದಲಿಸುವ ಸಾಮರ್ಥ್ಯವೂ ಈ ಕ್ಷಿಪಣಿಗಿದೆ. ಇದು ಐರನ್‌ ಡೋಮ್‌ಗೂ ಗೊಂದಲ ಸೃಷ್ಟಿಸುತ್ತದೆ ಎನ್ನುತ್ತಾರೆ ತಜ್ಞರು.

ಸೆಜ್ಜಿಲ್ ರುದ್ರ ನರ್ತನ: ಅಂತಿಮ ಹೊಡೆತದ ಏಳು ನಿಮಿಷಗಳು..

ಆನೆ ಗಾತ್ರದ ಘಾತಕ

ರಾಕೆಟ್‌ನಂತೆ ಸೆಜ್ಜಿಲ್ ಕ್ಷಿಪಣಿ ಎರಡು ಹಂತಗಳನ್ನು ಹೊಂದಿದೆ. ಮೊದಲ ಹಂತ ಕ್ಷಿಪಣಿ ಹಾರಲು ಸಹಾಯ ಮಾಡಿದರೆ, ಎರಡನೇ ಹಂತ ಸಿಡಿತಲೆಗಳನ್ನು ಸಾಗಿಸಲು ಸಹಕಾರಿಯಾಗಿದೆ. ಇದು ಸುಮಾರು 18 ಮೀಟರ್ ಉದ್ದವಿದ್ದು, 1.25 ಮೀಟರ್ ವ್ಯಾಸವನ್ನು ಹೊಂದಿದೆ. ಮಿಸೈಲ್‌ನ ಸರಾಸರಿ ತೂಕ 23,600 ಕೆ.ಜಿಯಾಗಿದ್ದು, ಶಬ್ದಕ್ಕಿಂತ 7 ಪ‌ಟ್ಟು ವೇಗದಲ್ಲಿ ದಾಳಿ ಮಾಡುವ ಸಾಮರ್ಥ್ಯ ಇದಕ್ಕಿದೆ.

ಇರಾನ್‌ ಪಾಲಿಗೆ ಬ್ರಹ್ಮಾಸ್ತ್ರ!

ಸೆಜ್ಜಿಲ್‌ ಮಿಸೈಲ್‌ ವ್ಯಾಪ್ತಿಗೆ ಮಧ್ಯಪ್ರಾಚ್ಯದ ದೇಶಗಳು ಸೇರಿದಂತೆ, ಯೂರೋಪ್‌ನ ಇತರೆ ದೇಶಗಳು ಸಿಗುತ್ತವೆ. ಇದರಲ್ಲಿ ಅಮೆರಿಕಾದ ನೆಲೆಗಳೂ ಸೇರಿವೆ. ಅಲ್ಲದೇ ಅಣ್ವಸ್ತ್ರವನ್ನು ಸಾಗಿಸುವ ಸಾಮರ್ಥ್ಯವಿದೆ. ದೂರದ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಇರಾನ್‌ಗೆ ಈ ಮಿಸೈಲ್ ಅತ್ಯವಶ್ಯಕವಾಗಿದೆ. ಅಲ್ಲದೇ ನಿಖರ ದಾಳಿಗೂ ಇದು ಸಹಕಾರಿಯಾಗುತ್ತದೆ ಎನ್ನುತ್ತಾರೆ ಮಿಲಿಟರಿ ವಿಶ್ಲೇಷಕರು.

ಸೆಜ್ಜಿಲ್ ಹಿಂದಿದೆಯೇ ಚೀನಾ?

ಸೆಜ್ಜಿಲ್ ಕ್ಷಿಪಣಿ ವ್ಯವಸ್ಥೆ ಸ್ವದೇಶಿ ನಿರ್ಮಿತ ಎಂದು ಇರಾನ್‌ ಹೇಳಿಕೊಂಡರೂ, ಇದರ ಹಿಂದೆ ಚೀನಾದ ತಾಂತ್ರಿಕ ಸಹಕಾರವಿದೆ ಎಂದೂ ವರದಿಯಾಗಿದೆ. ಆದರೆ ಈ ಬಗ್ಗೆ ಚೀನಾ ಅಥವಾ ಇರಾನ್ ಒಪ್ಪಿಕೊಂಡಿಲ್ಲ. ವರದಿಗಳ ಪ್ರಕಾರ ಸೆಜ್ಜಿಲ್‌ ಕ್ಷಿಪಣಿಗೆ ಬಳಸುವ ಘನ ಇಂಧನದ ತಂತ್ರಜ್ಞಾನಕ್ಕೆ ಚೀನಾದ ನೆರವಿದೆ. ಇಂಧನಕ್ಕೆ ಬೇಕಾದ ಅಗತ್ಯ ಕಚ್ಚಾವಸ್ತುಗಳನ್ನು ಚೀನಾ ಪೂರೈಸುತ್ತಿದೆ. ಮಿಸೈಲ್‌ ದಾಳಿಯನ್ನು ನಿಖರತೆಯನ್ನು ಇನ್ನಷ್ಟು ಹೆಚ್ಚಿಸಲು ಇರಾನ್‌ ಚೀನಾದ 'ಬೈದೂ' ಉಪಗ್ರಹದ ನ್ಯಾವಿಗೇಷನ್ ವ್ಯವಸ್ಥೆಯನ್ನು ಬಳಸುತ್ತಿರಬಹುದು ಎಂದು ಹೇಳಲಾಗುತ್ತದೆ.

ಸೆಜ್ಜಿಲ್‌ 3 ಅಭಿವೃದ್ದಿಗೂ ಇರಾನ್ ಸಜ್ಜು..

ಇರಾನ್ ಹೀಗಾಗಲೇ ಸೆಜ್ಜಿಲ್‌ ಕ್ಷಿಪಣಿ ಸರಣಿಯ ಮುಂದುವರೆದ ಸೆಜ್ಜಿಲ್‌-3 ಅಭಿವೃದ್ಧಿಗೆ ಸಿದ್ಧವಾಗಿದೆ ಎಂದು ವರದಿಯಾಗಿದೆ. ಸೆಜ್ಜಿಲ್‌-3 ಕ್ಷಿಪಣಿಯ ವ್ಯಾಪ್ತಿ ಸುಮಾರು 4,000 ಕಿ.ಮೀ ಇರಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಆದರೆ ಇರಾನ್ ಈ ಬಗ್ಗೆ ಅಧಿಕೃತವಾಗಿ ಏನನ್ನು ಹೇಳಿಲ್ಲ.

Dailyhunt
Disclaimer: This content has not been generated, created or edited by Dailyhunt. Publisher: Prajavani