ವಾಷಿಂಗ್ಟನ್: 'ಯಾವುದೇ ಕಾರಣಕ್ಕೂ ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಲು ಬಿಡುವುದಿಲ್ಲ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ.
ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವೆ ನಡೆದ ಸಂಧಾನ ಮಾತುಕತೆಯು ವಿಫಲಗೊಂಡಿತ್ತು.
ಇದಾದ ಬೆನ್ನಲ್ಲೇ ಇರಾನ್‌ನ ಎಲ್ಲ ಬಂದರುಗಳಿಗೆ ಅಮೆರಿಕ ದಿಗ್ಬಂಧನ ವಿಧಿಸಿತ್ತು.
'ನಾವು ಬಹಳಷ್ಟು ವಿಷಯಗಳನ್ನು ಒಪ್ಪಿಕೊಂಡಿದ್ದೇವೆ. ಆದರೆ ಅವರು (ಇರಾನ್) ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ಸಾಧ್ಯವೇ ಇಲ್ಲ. ನಾವದನ್ನು ನಾಶಪಡಿಸಲಿದ್ದೇವೆ' ಎಂದು ಹೇಳಿದ್ದಾರೆ.
'ಸದ್ಯಕ್ಕೆ ಯಾವುದೇ ಕದನ ನಡೆಯುತ್ತಿಲ್ಲ. ನಾವು ದಿಗ್ಬಂಧನ ವಿಧಿಸಿದ್ದೇವೆ. ಇರಾನ್ ಎಂದಿಗೂ ಪರಮಾಣು ಹೊಂದಲು ಬಿಡುವುದಿಲ್ಲ' ಎಂದು ಹೇಳಿದ್ದಾರೆ.
'ಅವರು (ಇರಾನ್) ನಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳಲು ಕಾತರದಲ್ಲಿದ್ದಾರೆ. ಒಪ್ಪಂದಕ್ಕೆ ಬರದಿದ್ದರೆ ಅವರಿಗೆ ಒಳಿತಾಗದು' ಎಂದು ಎಚ್ಚರಿಸಿದ್ದಾರೆ.
'ಅಂತಿಮವಾಗಿ ಒಪ್ಪಂದ ನಡೆಯುತ್ತದೆಯೇ ಇಲ್ಲವೋ ಎಂಬುದು ನಮಗೆ ವಿಷಯವಲ್ಲ. ನಾವು ನಮ್ಮ ಗುರಿಯನ್ನು ಸಾಧಿಸಲಿದ್ದೇವೆ' ಎಂದಿದ್ದಾರೆ.

