Dailyhunt Logo
  • Light mode
    Follow system
    Dark mode
    • Play Story
    • App Story
ವಿಚಿತ್ರ ವರ್ತನೆ: ಟ್ರಂಪ್ ಮಾನಸಿಕ ಆರೋಗ್ಯದ ಬಗ್ಗೆ ಹತ್ತಾರು ಪ್ರಶ್ನೆಗಳು

ವಿಚಿತ್ರ ವರ್ತನೆ: ಟ್ರಂಪ್ ಮಾನಸಿಕ ಆರೋಗ್ಯದ ಬಗ್ಗೆ ಹತ್ತಾರು ಪ್ರಶ್ನೆಗಳು

ಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ವರ್ತನೆ ಮತ್ತು ಕೋ‍ಪೋದ್ರಿಕ್ತ ಹೇಳಿಕೆಗಳು, ಒಂದು ದಶಕದಿಂದ ಅಮೆರಿಕದ ರಾಜಕೀಯ ರಂಗದಲ್ಲಿ ಕೇಳಿ ಬರುತ್ತಿರುವ 'ಅವರು ಬುದ್ಧಿವಂತಿಕೆಯಿಂದ ವರ್ತಿಸುತ್ತಿದ್ದಾರೆಯೇ ಅಥವಾ ನಿಜವಾಗಿಯೂ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆಯೇ?'

ಎನ್ನುವ ಚರ್ಚೆಯನ್ನು ಮತ್ತೆ ಮುನ್ನಲೆಗೆ ತಂದಿದೆ.

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ


ವಿಚಿತ್ರ ವರ್ತನೆ: ಟ್ರಂಪ್ ಮಾನಸಿಕ ಆರೋಗ್ಯದ ಬಗ್ಗೆ ಹತ್ತಾರು ಪ್ರಶ್ನೆಗಳು

ಒಂದು ಸಾಲಿನಲ್ಲಿಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವರ್ತನೆ ಮತ್ತು ಮಾನಸಿಕ ಸ್ಥಿರತೆಯ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಹಾಗೂ ಕಳವಳ ವ್ಯಕ್ತವಾಗುತ್ತಿದೆ.ಪ್ರಮುಖ ಅಂಶಗಳು• ವಿಚಿತ್ರ ವರ್ತನೆ ಮತ್ತು ಟೀಕೆಗಳುಟ್ರಂಪ್ ಅವರ ಇರಾನ್ ವಿರೋಧಿ ಹೇಳಿಕೆಗಳು ಮತ್ತು ಪೋಪ್ ವಿರುದ್ಧದ ವಾಗ್ದಾಳಿಗಳು ಅವರ ಮಾನಸಿಕ ಸ್ಥಿತಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.• ಸಂವಿಧಾನದ 25ನೇ ತಿದ್ದುಪಡಿ ಚರ್ಚೆಟ್ರಂಪ್ ಅಸಮರ್ಥರೆಂದು ಪರಿಗಣಿಸಿ, ಅವರನ್ನು ಅಧಿಕಾರದಿಂದ ಪದಚ್ಯುತಗೊಳಿಸಲು ಸಂವಿಧಾನದ 25ನೇ ತಿದ್ದುಪಡಿಯನ್ನು ಬಳಸಬೇಕೆಂದು ರಾಜಕೀಯ ವಿರೋಧಿಗಳು ಆಗ್ರಹಿಸುತ್ತಿದ್ದಾರೆ.• ಮಾಜಿ ಸಹೋದ್ಯೋಗಿಗಳ ಅಪಸ್ವರಒಮ್ಮೆ ಟ್ರಂಪ್ ಅವರ ಆಪ್ತರಾಗಿದ್ದವರು ಮತ್ತು ಶ್ವೇತಭವನದ ಮಾಜಿ ಅಧಿಕಾರಿಗಳು ಈಗ ಟ್ರಂಪ್ ಅವರ ಆಡಳಿತ ಶೈಲಿ ಮತ್ತು ಮಾನಸಿಕ ಸ್ಥಿರತೆಯ ಬಗ್ಗೆ ಸಾರ್ವಜನಿಕವಾಗಿ ಟೀಕಿಸುತ್ತಿದ್ದಾರೆ.• ಸಾರ್ವಜನಿಕ ಅಭಿಪ್ರಾಯ ಮತ್ತು ಸಮೀಕ್ಷೆಅಮೆರಿಕದ ಜನಸಾಮಾನ್ಯರಲ್ಲಿ ಟ್ರಂಪ್ ಅವರ ವರ್ತನೆಯ ಬಗ್ಗೆ ಭೀತಿ ಹೆಚ್ಚಾಗಿದೆ; ಶೇ 61 ರಷ್ಟು ಮಂದಿ ಅವರು ವಿಚಿತ್ರವಾಗಿ ವರ್ತಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.• ಸಮರ್ಥನೆ ಮತ್ತು ಬೆಂಬಲಿಗರ ನಿಲುವುಟ್ರಂಪ್ ಮತ್ತು ಅವರ ಬೆಂಬಲಿಗರು ಈ ವರ್ತನೆಯನ್ನು ಒಂದು ರಾಜಕೀಯ ತಂತ್ರದ ಭಾಗವೆಂದು ಬಿಂಬಿಸುತ್ತಿದ್ದು, ಇದು ಅಂತರಾಷ್ಟ್ರೀಯ ಒತ್ತಡ ಹೇರಲು ಬಳಸುತ್ತಿರುವ ದಾಳವೆಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.ಪ್ರಮುಖ ಅಂಕಿಅಂಶಗಳುಶೇ 61ಟ್ರಂಪ್ ಮಾನಸಿಕವಾಗಿ ಸರಿ ಇಲ್ಲಎಂದು ಹೇಳಿದವರುಶೇ 45ಮಾನಸಿಕವಾಗಿ ಚುರುಕಾಗಿದ್ದಾರೆ ಎಂದು ಹೇಳಿದವರ ‍ಪ್ರಮಾಣಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಪಶ್ಚಿಮ ಏಷ್ಯಾ ಸಂಘರ್ಷ: ಟ್ರಂಪ್ -ಪೋಪ್ ಲಿಯೊ ಜಟಾಪಟಿ ತೀವ್ರ

ಇರಾನ್ ಅನ್ನು ಭೂಪಟದಿಂದಲೇ ಅಳಿಸಿ ಹಾಕುತ್ತೇನೆ. ಇಂದು ರಾತ್ರಿ ಇಡೀ ನಾಗರಿಕತೆಯೇ ಅಂತ್ಯವಾಗಲಿದೆ ಎಂದು ಬೆದರಿಕೆ ಹಾಕಿದ್ದರು. ಇದಾದ ಬಳಿಕ ಕ್ರೈಸ್ತರ ಧರ್ಮಗುರು ಪೋಪ್ ವಿರುದ್ಧ ತೀಕ್ಷ್ಣ ಶಬ್ದಗಳಿಂದ ವಾಗ್ದಾಳಿ ನಡೆಸಿದ್ದರು. ಅವರ ಈ ನಡವಳಿಕೆ ಅನೇಕರಲ್ಲಿ ಅಧಿಕಾರದ ಅಮಲಿನಲ್ಲಿರುವ ಅಸ್ಥಿರ ಮನಸ್ಥಿತಿಯ ಸರ್ವಾಧಿಕಾರಿ ಎಂಬ ಅಭಿಪ್ರಾಯ ಮೂಡಿಸಿವೆ.

ಆದರೆ ಇದನ್ನು ಶ್ವೇತಭವನ ತಿರಸ್ಕರಿಸಿದ್ದು, ಟ್ರಂಪ್ ಅತ್ಯಂತ ಚುರುಕಾಗಿದ್ದಾರೆ, ತಮ್ಮ ಎದುರಾಳಿಗಳನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ ಎಂದು ಹೇಳಿದೆ.

ಯುದ್ಧದ ಸಮಯದಲ್ಲಿ ಟ್ರಂಪ್ ಅವರ ವರ್ತನೆಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಈ ಹಿಂದೆ 80 ವರ್ಷದ ಜೋ ಬೈಡನ್ ಅವರ ಸಾಮರ್ಥ್ಯದ ಬಗ್ಗೆ ಸಾರ್ವಜನಿಕವಾಗಿ ಚರ್ಚೆಗಳಾಗಿದ್ದರೂ, ಆಧುನಿಕ ಇತಿಹಾಸದಲ್ಲಿ ಅಧ್ಯಕ್ಷರೊಬ್ಬರ ಮಾನಸಿಕ ಸ್ಥಿರತೆಯ ಬಗ್ಗೆ ಇಷ್ಟೊಂದು ವ್ಯಾಪಕವಾಗಿ ಮತ್ತು ಗಂಭೀರವಾಗಿ ಚರ್ಚೆಯಾಗುತ್ತಿರುವುದು ಇದೇ ಮೊದಲು.

ಹೊರ್ಮುಜ್‌ನಲ್ಲಿ ಹಡಗುಗಳಿಗೆ ತಡೆ ಹಾಕಿ,ಇರಾನ್ ಅನ್ನು ಮುಗಿಸುತ್ತೇವೆ: ಟ್ರಂಪ್

ಟ್ರಂಪ್ ಅವರ ಮಾನಸಿಕ ಆರೋಗ್ಯವನ್ನು ದೀರ್ಘಕಾಲದಿಂದ ಪ್ರಶ್ನಿಸುತ್ತಿರುವ ಡೆಮಾಕ್ರಟಿಕ್ ಪಕ್ಷದ ನಾಯಕರು, ಟ್ರಂಪ್ ಅಸಮರ್ಥರಾಗಿದ್ದು, ಅವರನ್ನು ಅಧಿಕಾರದಿಂದ ಕಿತ್ತುಹಾಕಲು ಸಂವಿಧಾನದ 25ನೇ ತಿದ್ದುಪಡಿಯನ್ನು ಬಳಸಬೇಕೆಂದು ಮತ್ತೆ ಒತ್ತಾಯಿಸಿದ್ದಾರೆ. ಟ್ರಂಪ್ ಅವರ ಮಾನಸಿಕ ಆರೋಗ್ಯದ ಬಗ್ಗೆ ಅನುಮಾನ ಕೇವಲ ರಾಜಕೀಯ ವಿರೋಧಿಗಳು ಅಥವಾ ಮಾನಸಿಕ ಆರೋಗ್ಯ ತಜ್ಞರಿಗೆ ಮಾತ್ರವಲ್ಲ, ನಿವೃತ್ತ ಜನರಲ್‌ಗಳು, ರಾಜತಾಂತ್ರಿಕರು ಮತ್ತು ವಿದೇಶಿ ಅಧಿಕಾರಿಗಳಲ್ಲೂ ಈ ಚರ್ಚೆ ಕೇಳಿಬರುತ್ತಿದೆ. ಆಶ್ಚರ್ಯವೆಂದರೆ ಟ್ರಂಪ್ ಅವರ ಹಿಂದಿನ ಮಿತ್ರರಾಗಿದ್ದ ಬಲಪಂಥೀಯ ರಾಜಕಾರಣಿಗಳೂ ಈಗ ಇದೇ ದಾಟಿಯಲ್ಲಿ ಮಾತನಾಡುತ್ತಿದ್ದಾರೆ.

ಈ ಹಿಂದೆ ಟ್ರಂಪ್ ‍ಪರವಾಗಿದ್ದು, ಈಗ ಅವರ ವಿರುದ್ಧ ತಿರುಗಿಬಿದ್ದಿರುವ ಜಾರ್ಜಿಯಾದ ರಿಪಬ್ಲಿಕನ್ ಪಕ್ಷದ ಮಾಜಿ ಪ್ರತಿನಿಧಿ ಮಾರ್ಜೋರಿ ಟೇಲರ್ ಗ್ರೀನ್, ಟ್ರಂಪ್ ಅವರನ್ನು ಪದಚ್ಯುತಗೊಳಿಸುವ ಸಂವಿಧಾನದ 25ನೇ ತಿದ್ದುಪಡಿಗೆ ಬೆಂಬಲ ಸೂಚಿಸಿದ್ದಾರೆ. ಇರಾನ್ ನಾಗರಿಕತೆಯನ್ನು ನಾಶಪಡಿಸುತ್ತೇನೆ ಎಂದು ಬೆದರಿಕೆ ಹಾಕುವುದು ಧೈರ್ಯದ ಮಾತುಗಳಲ್ಲ, ಬದಲಿಗೆ ಹುಚ್ಚುತನ ಎಂದು ಅವರು ಸಿಎನ್‌ಎನ್‌ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ತೀವ್ರ ಬಲಪಂಥೀಯ ಎಂದೆನಿಸಿಕೊಂಡಿರುವ ಪಾಡ್‌ಕಾಸ್ಟರ್ ಕ್ಯಾಂಡೇಸ್ ಓವೆನ್ಸ್ ಕೂಡ ಇಂತಹದೇ ಮಾತುಗಳನ್ನು ಆಡಿದ್ದಾರೆ. ಟ್ರಂಪ್ 'ಜನಾಂಗೀಯ ಹತ್ಯೆಯ ತಿಕ್ಕಲ' ಎಂದಿದ್ದಾರೆ. ಟ್ರಂಪ್ ಮಿದುಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದನಿಸುತ್ತದೆ ಎಂದು ರೇಡಿಯೊ ಉದ್ಘೋಷಕ ಅಲೆಕ್ಸ್ ಜೋನ್ಸ್ ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕ-ಇರಾನ್ 21 ಗಂಟೆಗಳ ಚರ್ಚೆ: ಮೂಡದ ಒಮ್ಮತ, ಇಸ್ಲಾಮಾಬಾದ್ ಮಾತುಕತೆ ವಿಫಲ

ಅಧ್ಯಕ್ಷರಿಗೆ ಅವರಿಗೆ ಹುಚ್ಚು ಹಿಡಿದಿದ್ದು ಸ್ಪಷ್ಟ ಎಂದು ಟ್ರಂಪ್ ಅವರ ಮೊದಲ ಅವಧಿಯಲ್ಲಿ ಶ್ವೇತಭವನದ ವಕೀಲರಾಗಿದ್ದ ಟೈ ಕಾಬ್

ಹೇಳಿದ್ದಾರೆ. ಟ್ರಂಪ್ ಅವರು ಇತ್ತೀಚೆಗೆ ಮಧ್ಯರಾತ್ರಿ ಸಾಮಾಜಿಕ ಜಾಲತಾಣ ಪೋಸ್ಟ್‌ಗಳು ಅವರು ಮಾನಸಿಕವಾಗಿ ಸ್ಥಿರವಾಗಿಲ್ಲ ಎನ್ನುವುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ. ಶ್ವೇತಭವನದ ಮಾಜಿ ಪತ್ರಿಕಾ ಕಾರ್ಯದರ್ಶಿ ಸ್ಟೆಫನಿ ಗ್ರಿಶಾಮ್ ಕೂಡ, ಟ್ರಂಪ್ ಅವರ ಆರೋಗ್ಯ ಸುಸ್ಥಿತಿಯಲ್ಲಿಲ್ಲ ಎಂದು ಬರೆದುಕೊಂಡಿದ್ದರು.

ಈ ಟೀಕೆಗಳಿಗೆ ಪ್ರತಿಕ್ರಿಯಿಸಿದ್ದ ಟ್ರಂಪ್, ಟೀಕೆ ಮಾಡುತ್ತಿರುವರೆಲ್ಲಾ 'ಕಡಿಮೆ ಐಕ್ಯೂ ಇರುವ ಮೂರ್ಖರು. ಪ್ರಚಾರಕ್ಕಾಗಿ ಏನೇನೋ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಆಡಳಿತರೂಢ ರಿಪಬ್ಲಿಕನ್ ಪಕ್ಷದ ಸಂಸದರು ಟ್ರಂಪ್ ಪರವಾಗಿಯೇ ಇದ್ದರೂ, ಜನಸಾಮಾನ್ಯರಲ್ಲಿ ಅವರ ಬಗ್ಗೆ ಆತಂಕ ಹೆಚ್ಚುತ್ತಿದೆ.

ವಯಸ್ಸಾದಂತೆ ಟ್ರಂಪ್ ಹೆಚ್ಚು ವಿಚಿತ್ರವಾಗಿ ವರ್ತಿಸುತ್ತಿದ್ದಾರೆ ಎಂದು ಶೇ 61ರಷ್ಟು ಅಮೆರಿಕನ್ನರು ಅಭಿಪ್ರಾಯಪಟ್ಟಿದ್ದಾರೆ ಎಂದು ರಾಯಿಟರ್ಸ್/ಇಪ್ಸೋಸ್ ಸಮೀಕ್ಷೆಯ ವರದಿ ಹೇಳಿದೆ. ಫೆಬ್ರುವರಿ ತಿಂಗಳಲ್ಲಿ ಈ ಸಮೀಕ್ಷೆ ನಡೆದಿತ್ತು. ಶೇ 45ರಷ್ಟು ಮಂದಿ ಟ್ರಂಪ್ ಮಾನಸಿಕವಾಗಿ ಚುರುಕಾಗಿದ್ದಾರೆ ಎಂದು ನಂಬಿದ್ದಾರೆ.

ಎರಡು ದಶಕಗಳ ಕಾರ್ಯತಂತ್ರ: ಚೀನಾಗೆ ತಟ್ಟದ ಕೊಲ್ಲಿ ಯುದ್ಧದ 'ಇಂಧನ ಬಿಸಿ'

ಟ್ರಂ‍ಪ್ ಅಸ್ವಸ್ಥ ಹಾಗೂ ನಿಯಂತ್ರಣ ತಪ್ಪಿದ ವ್ಯಕ್ತಿ ಎಂದು ಡೆಮಾಕ್ರಿಟಿಕ್ ಪಕ್ಷದ ನಾಯಕರು ಟೀಕಿಸಿದ್ದಾರೆ. ಟ್ರಂಪ್ ಅವರಲ್ಲಿ ಬುದ್ಧಿಮಾಂದ್ಯತೆ ಮತ್ತು ಅರಿವಿನ ಕೊರತೆಯ ಲಕ್ಷಣಗಳು ಕಾಣಿಸುತ್ತಿವೆ ಎಂದು ಶ್ವೇತಭವನದ ವೈದ್ಯರಿಗೆ ಮೇರಿಲ್ಯಾಂಡ್‌ನ ಸಂಸದ ಜೇಮಿ ರಾಸ್ಕಿನ್ ಪತ್ರ ಬರೆದಿದ್ದಾರೆ.

ಆದರೆ ಇದೆಲ್ಲಾ ಕಾರ್ಯತಂತ್ರದ ಭಾಗ ಎಂದು ಟ್ರಂಪ್ ಬೆಂಬಲಿಗರು ಸಮರ್ಥಿಸಿಕೊಳ್ಳುತ್ತಿದ್ದಾರೆ. ತಾವೇನು ಮಾಡುತ್ತಿದ್ದೇವೆ ಎಂದು ಟ್ರಂಪ್‌ಗೆ ಸ್ಪಷ್ಟವಾಗಿ ತಿಳಿದಿದೆ. ಇರಾನ್ ವಿರುದ್ಧ ಒತ್ತಡ ಹೇರಲು ಅವರು ಈ ತಂತ್ರ ಬಳಸುತ್ತಿದ್ದಾರೆ ಎಂದು ಲೇಖಕಿ ಲಿಜ್ ಪೀಕ್ ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ಮಾನಸಿಕ ಸ್ಥಿತಿಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, 'ನನಗೆ ಅಂತಹದ್ದೇನೂ ಗೊತ್ತಿಲ್ಲ. ಒಂದು ವೇಳೆ ಅದು ನಿಜವೇ ಆಗಿದ್ದರೂ, ನನ್ನಂತಹವರ ಅಗತ್ಯ ದೇಶಕ್ಕೆ ಹೆಚ್ಚಿದೆ' ಎಂದು ಸಮರ್ಥಿಸಿಕೊಂಡಿದ್ದಾರೆ. ಟ್ರಂಪ್ ಅತ್ಯಂತ ಚುರುಕಾಗಿದ್ದಾರೆ ಎಂದು ಶ್ವೇತಭವನದ ವಕ್ತಾರ ಡೇವಿಸ್ ಇಂಗಲ್ ತಿಳಿಸಿದ್ದಾರೆ.

ಟ್ರಂಪ್ ಅವರ ಮಾನಸಿಕ ಸ್ಥಿರತೆಯ ವಿಷಯ 2016ರಿಂದಲೂ ಚರ್ಚೆಯಲ್ಲಿದೆ. ಟ್ರಂಪ್ ಅವರ ವರ್ತನೆಯನ್ನು ಅರ್ಥಮಾಡಿಕೊಳ್ಳಲು ಅವರ ಮೊದಲ ಅವಧಿಯಲ್ಲಿ ಚೀಫ್ ಆಫ್ ಸ್ಟಾಫ್ ಆಗಿದ್ದ ಜಾನ್ ಎಫ್. ಕೆಲ್ಲಿಯವರು ತಜ್ಞರು ಬರೆದ ಪುಸ್ತಕಗಳನ್ನು ಓದಿದ್ದರು. ಆ ಬಳಿಕ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ ಎಂಬ ತೀರ್ಮಾನಕ್ಕೆ ಬಂದಿದ್ದರು.

ಎ.ಐ ವಲಯದಲ್ಲಿ ತಲ್ಲಣ ಸೃಷ್ಟಿಸಿದ ಕೊಲ್ಲಿ ಸಂಘರ್ಷ

ಈ ಹಿಂದೆ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್, ವುಡ್ರೋ ವಿಲ್ಸನ್ ಮತ್ತು ರೊನಾಲ್ಡ್ ರೇಗನ್ ಅವರ ಆರೋಗ್ಯದ ಬಗ್ಗೆಯೂ ಪ್ರಶ್ನೆಗಳು ಎದ್ದಿದ್ದವು. ಟ್ರಂಪ್ ಕೆಲವೊಮ್ಮೆ ರಿಚರ್ಡ್ ನಿಕ್ಸನ್ ಅವರ 'ಮ್ಯಾಡ್‌ಮನ್ ಥಿಯರಿ' (ಹುಚ್ಚನಂತೆ ವರ್ತಿಸಿ ಎದುರಾಳಿಯನ್ನು ಹೆದರಿಸುವ ತಂತ್ರ) ಬಳಸುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಆದರೆ ತಾನು ನಟಿಸುತ್ತಿಲ್ಲ ಎಂದು ಖುದ್ದು ಟ್ರಂಪ್ ಇತ್ತೀಚೆಗೆ ಹೇಳಿದ್ದಾರೆ.

ನಿಕ್ಸನ್ ಕಾಲಕ್ಕಿಂತಲೂ ಈಗಿನ ಪರಿಸ್ಥಿತಿ ಗಂಭೀರವಾಗಿದೆ. ಟ್ರಂಪ್ ಎರಡನೇ ಅವಧಿಯಲ್ಲಿ ಯಾವುದೇ ಹತೋಟಿ ಇಲ್ಲದೆ ವರ್ತಿಸುತ್ತಿದ್ದಾರೆ. ತಮ್ಮ ತಂದೆ ಜರ್ಮನಿಯಲ್ಲಿ ಹುಟ್ಟಿದ್ದು ಎಂದು ಸುಳ್ಳು ಹೇಳಿದ್ದರು. ಆದರೆ ಅವರು ಹುಟ್ಟಿದ್ದು ನ್ಯೂಯಾರ್ಕ್‌ನ ಬ್ರಾಂಕ್ಸ್‌ನಲ್ಲಿ. ದೇಶಗಳ ಹೆಸರುಗಳನ್ನು ಗೊಂದಲ ಮಾಡಿಕೊಳ್ಳುವುದು ಮತ್ತು ಅಸಂಬದ್ಧ ಕಲ್ಪಿತ ಕಥೆಗಳನ್ನು ಹೇಳುವುದು ಹೆಚ್ಚಾಗಿದೆ ಎಂದು ಇತಿಹಾಸಕಾರ ಜೂಲಿಯನ್ ಇ. ಜೆಲಿಜರ್ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅವರು ಇರಾನ್ ಅಧ್ಯಕ್ಷರ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ತಮ್ಮನ್ನು ಟೀಕೆ ಮಾಡುತ್ತಿರುವವರ ಬಗ್ಗೆ ಮರಣದಂಡನೆ ವಿಧಿಸಬೇಕಾದ ದೇಶದ್ರೋಹದ ಆರೋಪಗಳನ್ನು ಮಾಡುತ್ತಿದ್ದಾರೆ. ಟ್ರಂಪ್ ಅವರ ಮೊದಲ ಅವಧಿಯಲ್ಲಿ ಅವರನ್ನು ನಿಯಂತ್ರಿಸಲು ಜಾನ್‌ ಎಫ್. ಕೆಲ್ಲಿಯಂತಹ ಅಧಿಕಾರಿಗಳಿದ್ದರು, ಆದರೆ ಈಗ ಅವರ ಸುತ್ತ ಇರುವವರು ಅವರ ಯಾವುದೇ ತಪ್ಪುಗಳನ್ನು ಪ್ರಶ್ನಿಸುತ್ತಿಲ್ಲ ಎಂದು ಜೆಲಿಜರ್ ಕಳವಳ ವ್ಯಕ್ತಪಡಿಸಿದ್ದಾರೆ. ಆದರೂ, ಟ್ರಂಪ್ ಅವರ ಬೆಂಬಲಿಗರು ಅವರ ಈ ಆಕ್ರಮಣಕಾರಿ ಶೈಲಿಯನ್ನೇ ಇಷ್ಟಪಡುತ್ತಿರುವುದು ರಾಜಕೀಯ ವಿಪರ್ಯಾಸವಾಗಿದೆ ಎನ್ನುವುದು ತಜ್ಞರ ಅಭಿಪ್ರಾಯ.

(ಆಧಾರ: ದಿ ನ್ಯೂಯಾರ್ಕ್ ಟೈಮ್ಸ್, ರಾಯಿಟರ್ಸ್)

ಕೊಲ್ಲಿ ಯುದ್ಧ ಪರಿಣಾಮ: ಪರ್ಯಾಯ ಇಂಧನ ಮೂಲ ಹುಡುಕಾಟದಲ್ಲಿ ರಾಷ್ಟ್ರಗಳು
Dailyhunt
Disclaimer: This content has not been generated, created or edited by Dailyhunt. Publisher: Prajavani