ಬೆಂಗಳೂರು: ಬಾಗಲೂರು ರಸ್ತೆಯಲ್ಲಿ ವ್ಯಕ್ತಿಯೊಬ್ಬ ಪ್ರಜ್ಞೆ ತಪ್ಪಿದಂತೆ ವಿಚಿತ್ರವಾಗಿ ವರ್ತಿಸಿದ್ದ ವಿಡಿಯೊಕ್ಕೆ ವಿಚಾರವಾಗಿ ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸ್ಪಷ್ಟನೆ ನೀಡಿದ್ದು, 'ಅಪಪ್ರಚಾರ ನಡೆಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಎಚ್ಚರಿಕೆ ನೀಡಿದ್ಧಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊವೊಂದು ಹರಿದಾಡುತ್ತಿದೆ. ವಿಡಿಯೊದಲ್ಲಿರುವ ವ್ಯಕ್ತಿ 'ಝಾಂಬಿ' ಡ್ರಗ್ಸ್ ತೆಗೆದುಕೊಂಡು ಆ ರೀತಿ ವರ್ತಿಸುತ್ತಿದ್ಧಾನೆ ಎಂಬ ಶಂಕೆ ವ್ಯಕ್ತವಾಗಿತ್ತು. ನಗರಕ್ಕೆ ಹೊಸ ಮಾದರಿಯ ಮಾದಕ ವಸ್ತು ಪೂರೈಕೆ ಆಗುತ್ತಿದೆಯಾ? ಎಂಬ ಆತಂಕ ಎದುರಾಗಿತ್ತು.
ವಿಡಿಯೊದಲ್ಲಿ ಏನಿತ್ತು?:
ವ್ಯಕ್ತಿಯೊಬ್ಬ ಮೈಮೇಲೆ ಪ್ರಜ್ಞೆ ಇಲ್ಲದವನಂತೆ ವಿಚಿತ್ರವಾಗಿ ಕೈ-ಕಾಲುಗಳನ್ನು ಆಡಿಸುತ್ತಾ ನಿಂತಿದ್ದ. ಆತ ಎಲ್ಲಿಗೆ ಹೋಗುತ್ತಿದ್ದಾನೆ ಅಥವಾ ಏನು ಮಾಡುತ್ತಿದ್ದಾನೆ ಎಂಬ ಅರಿವಿಲ್ಲದಂತೆ ವರ್ತಿಸುತ್ತಿದ್ದ. ಇದನ್ನು ಗಮನಿಸಿದ್ದ ಸ್ಥಳೀಯರು, ವಿದೇಶಗಳಲ್ಲಿ ಕಂಡುಬರುವ 'ಝಾಂಬಿ' ಡ್ರಗ್ಸ್ ಅಥವಾ 'ಝೈಲಾಜಿನ್' ನಶೆಯಲ್ಲಿ ವಿಚಿತ್ರವಾಗಿ ವರ್ತನೆ ಮಾಡುತ್ತಿರಬಹುದು ಎಂದು ಶಂಕಿಸಿ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು.
'ವಿಡಿಯೊದಲ್ಲಿ ಇರುವ ವ್ಯಕ್ತಿಯನ್ನು ಪತ್ತೆ ಮಾಡಲಾಗಿದೆ. ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಆತನ ರಕ್ತದ ಮಾದರಿಯಲ್ಲಿ ಯಾವುದೇ ರೀತಿಯ ಡ್ರಗ್ಸ್ ಅಥವಾ ಅಮಲು ಪದಾರ್ಥಗಳ ಅಂಶ ಪತ್ತೆಯಾಗಿಲ್ಲ. ನಗರದಲ್ಲಿ ನೆಲಸಿದ್ದ ವ್ಯಕ್ತಿ ಅಲ್ಲ. ಹೊರಗಿನಿಂದ ಬೆಂಗಳೂರಿಗೆ ಬಂದಿದ್ದ. ಆತ ಅನಾರೋಗ್ಯದಿಂದ ಬಳಲುತ್ತಿದ್ದ' ಎಂದು ಸೀಮಾಂತ್‌ಕುಮಾರ್ ಸಿಂಗ್ ತಿಳಿಸಿದರು.
'ಅನಾರೋಗ್ಯದ ಕಾರಣಕ್ಕೆ ಕೆಲವು ಔಷಧಿಗಳನ್ನು ಸೇವಿಸಿದ್ದ. ಅದರ ಜೊತೆಗೆ ಸ್ವಲ್ಪ ಪ್ರಮಾಣದಲ್ಲಿ ಮದ್ಯಪಾನಸಹ ಮಾಡಿದ್ದ. ಔಷಧಿಯ ಅಡ್ಡಪರಿಣಾಮ ಹಾಗೂ ಕುಡಿತದ ನಶೆಯಿಂದ ಆತನ ದೇಹದ ಸಮತೋಲನ ತಪ್ಪಿ ವಿಚಿತ್ರವಾಗಿ ವರ್ತಿಸಿದ್ದಾನೆ' ಎಂದು ಮಾಹಿತಿ ನೀಡಿದರು.
'ಯಾವುದೇ ಒಂದು ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವ ಮುನ್ನ ಅದರ ಸತ್ಯಾಸತ್ಯತೆ ಪರಿಶೀಲಿಸಬೇಕು. ಬೆಂಗಳೂರಿಗೆ ಕೆಟ್ಟ ಹೆಸರು ತರುವ ಪ್ರಯತ್ನವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಾಕಿ ಅಪಪ್ರಚಾರ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಸೀಮಾಂತ್‌ಕುಮಾರ್ ಎಚ್ಚರಿಕೆ ನೀಡಿದರು.
ಪ್ರಜ್ಞೆ ಇಲ್ಲದೆ 2 ತಾಸು ನಿಂತಲ್ಲೇ ನಿಂತ ಡೆಲಿವರಿ ಬಾಯ್: ಏನಿದು ಝಾಂಬಿ ಎಫೆಕ್ಟ್?ಬೆಂಗಳೂರಿನಲ್ಲಿ ಝಾಂಬಿ ಡ್ರಗ್ಸ್? ಪೊಲೀಸರಿಗೆ ದುನಿಯಾ ವಿಜಯ್ ವಿಶೇಷ ಮನವಿ
