ನವದೆಹಲಿ: ಇರಾನ್‌ನ ಮಾಜಿ ಪರಮೋಚ್ಚ ನಾಯಕ, ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಭಾರತದ ಪ್ರಸಿದ್ಧ ಜೈನ ಸನ್ಯಾಸಿ ಹಾಗೂ ಆಧ್ಯಾತ್ಮಿಕ ನಾಯಕ ಆಚಾರ್ಯ ಲೋಕೇಶ್ ಮುನಿ ಅವರಿಗೆ ಇರಾನ್ ಸರ್ಕಾರ ಅಧಿಕೃತ ಆಹ್ವಾನ ನೀಡಿದೆ.
ಅಹಿಂಸಾ ವಿಶ್ವ ಭಾರತಿ ಸಂಸ್ಥೆಯ ಸಂಸ್ಥಾಪಕರಾದ ಆಚಾರ್ಯ ಲೋಕೇಶ್ ಮುನಿ ಅವರು ಜಾಗತಿಕ ಮಟ್ಟದಲ್ಲಿ ಶಾಂತಿ ಮತ್ತು ಸರ್ವಧರ್ಮ ಸಮನ್ವಯಕ್ಕಾಗಿ ಶ್ರಮಿಸುತ್ತಿರುವ ಪ್ರಮುಖ ಧರ್ಮಗುರು.
ಇರಾನ್‌ನ ಪರಮೋಚ್ಚ ನಾಯಕರ ಕಚೇರಿಯ ಅಂತರರಾಷ್ಟ್ರೀಯ ಸಂಬಂಧಗಳ ವಿಭಾಗದ ನಿರ್ದೇಶಕ ಮೊಹ್ಸೆನ್ ಕುಮ್ಮಿ ಅವರು ಈ ಅಧಿಕೃತ ಆಹ್ವಾನ ಪತ್ರವನ್ನು ಕಳುಹಿಸಿದ್ದಾರೆ.
ಆಹ್ವಾನ ಪತ್ರದಲ್ಲೇನಿದೆ?
ಪತ್ರದಲ್ಲಿ ಭಾರತ ಮತ್ತು ಇರಾನ್ ನಡುವಿನ ಹಳೆಯ ಸ್ನೇಹ ಸಂಬಂಧದ ಬಗ್ಗೆ ಉಲ್ಲೇಖಿಸಲಾಗಿದೆ. 'ಭಾರತದ ಪ್ರಮುಖ ಅತಿಥಿಯಾಗಿ ಈ ಶೋಕಸಭೆಯಲ್ಲಿ ಪಾಲ್ಗೊಳ್ಳುವಂತೆ ನಿಮಗೆ ಗೌರವಪೂರ್ವಕ ಆಹ್ವಾನ ನೀಡುತ್ತಿದ್ದೇವೆ. ನಿಮ್ಮ ಉಪಸ್ಥಿತಿಯು ಉಭಯ ಪುರಾತನ ನಾಗರಿಕತೆಗಳ ನಡುವಿನ ಗಾಢವಾದ ಸ್ನೇಹ ಮತ್ತು ಗೌರವಕ್ಕೆ ಸಾಕ್ಷಿಯಾಗಲಿದೆ' ಎಂದು ಬರೆಯಲಾಗಿದೆ.
ಇಸ್ರೇಲ್ ಮತ್ತು ಅಮೆರಿಕ ಪಡೆಗಳು ಫೆಬ್ರುವರಿ 28ರಂದು ಇರಾನ್ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಖಮೇನಿ ಹತರಾಗಿದ್ದರು. ಇದರ ಬೆನ್ನಲ್ಲೇ ಪಶ್ಚಿಮ ಏಷ್ಯಾ ಸಂಘರ್ಷ ತೀವ್ರಗೊಂಡಿದ್ದರಿಂದ ಅವರ ಅಂತ್ಯಕ್ರಿಯೆಯನ್ನು ಮುಂದೂಡಲಾಗಿತ್ತು. ಆಯತೊಲ್ಲಾ ಅಲಿ ಖಮೇನಿ ಸ್ಥಾನಕ್ಕೆ ಅವರ ಪುತ್ರ ಮೊಜ್ತಬಾ ಖಮೇನಿ (56) ಮಾರ್ಚ್‌ನಲ್ಲಿ ನೇಮಕಗೊಂಡಿದ್ದರು.
ಟೆಹರಾನ್ ಮತ್ತು ಕೊಮ್ ನಗರದಲ್ಲಿ ಜುಲೈ 5, 6 ಮತ್ತು 7ರಂದು ಅಂತ್ಯಕ್ರಿಯೆಯ ವಿಧಿಗಳು ನಡೆಯಲಿವೆ. ಖಮೇನಿ ಅವರ ತವರು ಮಶಾದ್‌ನಲ್ಲಿ ಜುಲೈ 9ರಂದು ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.
ಭಾರತದ ಪರವಾಗಿ ಇಬ್ಬರು ಗಣ್ಯರ ಭಾಗಿ:
ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಅವರು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಧಿಕೃತ ಆಹ್ವಾನ ಕಳುಹಿಸಿದ್ದರು. ಈಗ ಭಾರತದ ಪ್ರತಿನಿಧಿಗಳಾಗಿ ಬಿಹಾರದ ರಾಜ್ಯಪಾಲ ಸಯ್ಯದ್ ಅತಾ ಹಸ್ನೈನ್ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪಬಿತ್ರ ಮಾರ್ಗರಿಟಾ ಅವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಂತ್ಯಸಂಸ್ಕಾರದ ವಿಧಿವಿಧಾನಗಳು ಜುಲೈ 4ರಿಂದ ಮೂರು ದಿನಗಳವರೆಗೆ ಟೆಹರಾನ್‌ನಲ್ಲಿ ನಡೆಯಲಿವೆ. ಜುಲೈ 4ರಂದು ಟೆಹರಾನ್‌ನ ಇಮಾಮ್ ಖೊಮೇನಿ ಪ್ರಾರ್ಥನಾ ಮಂದಿರದಲ್ಲಿ ಬೆಳಿಗ್ಗೆ 6 ರಿಂದ ರಾತ್ರಿ 8 ರವರೆಗೆ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಜುಲೈ 5ರಂದು ಮುಂಜಾನೆ ಅಂತಿಮ ಪ್ರಾರ್ಥನೆಗಳು ನಡೆಯಲಿವೆ. ನಂತರ, ಜುಲೈ 7ರಂದು ಕೋಮ್ ನಗರದಲ್ಲೂ ವಿಧಿವಿಧಾನಗಳು ಜರುಗಲಿವೆ. ಖಮೇನಿ ಅವರ ಹುಟ್ಟೂರು ಮಶಾದ್‌ನಲ್ಲಿ ಜುಲೈ 9ರಂದು ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿದೆ.
ಖಮೇನಿ ಅಂತ್ಯಕ್ರಿಯೆ: ಪ್ರಧಾನಿ ಮೋದಿಗೆ ಇರಾನ್ ಆಹ್ವಾನ
