Dailyhunt Logo
  • Light mode
    Follow system
    Dark mode
    • Play Story
    • App Story
ಮಾತುಕತೆ ನಡೆಯುತ್ತಿದೆ, ಒಪ್ಪಂದಕ್ಕೆ ಇರಾನ್ ಸಿದ್ಧವಿಲ್ಲ: ಡೊನಾಲ್ಡ್ ಟ್ರಂಪ್

ಮಾತುಕತೆ ನಡೆಯುತ್ತಿದೆ, ಒಪ್ಪಂದಕ್ಕೆ ಇರಾನ್ ಸಿದ್ಧವಿಲ್ಲ: ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಇನ್ನೇನು ಮುಗಿದೇ ಹೋಯಿತು ಎನ್ನುವಷ್ಟರಲ್ಲಿ ಮತ್ತೆ ಮತ್ತೆ ಭುಗಿಲೇಳುತ್ತಿದೆ. ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿ ಅಂತ್ಯಕ್ರಿಯೆ ಬಳಿಕ ತೀವ್ರಗೊಂಡಿದ್ದ ಕಾದಾಟವು ತಹಬದಿಗೆ ಬರುವ ಲಕ್ಷಣ ಕಾಣುತ್ತಿಲ್ಲ. ಈ ನಡುವೆ, ಯುದ್ಧ ಅಂತ್ಯಕ್ಕೆ ಮಾತುಕತೆ ನಡೆಯುತ್ತಿದೆ.

ಆದರೆ, ಇರಾನ್ ಒಪ್ಪಂದಕ್ಕೆ ಸಿದ್ದವಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

'ನಾವು ಅವರೊಂದಿಗೆ(ಇರಾನ್) ಮಾತುಕತೆ ನಡೆಸುತ್ತಿದ್ದೇವೆ. ಅವರು(ಇರಾನ್) ಈ ವಿಷಯದಲ್ಲಿ ಗಂಭೀರವಾಗಿದ್ದಾರೆಂದೇ ನನಗೆ ಅನ್ನಿಸುತ್ತದೆ. ಆದರೆ, ಇದರರ್ಥ ನಾವು ಅಂತಿಮ ಹಂತವನ್ನು ತಲುಪುತ್ತೇವೆಂದಲ್ಲ. ಅವರು ಒಪ್ಪಂದಕ್ಕೆ ಸಿದ್ಧರಾಗಿಲ್ಲ. ಮುಂದೆ ಏನಾಗುತ್ತದೆ ಎಂಬುದನ್ನು ನೋಡೋಣ'ಎಂದು ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಟ್ರಂಪ್ ಹೇಳಿದ್ದಾರೆ.

ಈ ನಡುವೆ, ಇರಾನ್‌ಗೆ ರಷ್ಯಾ ಮತ್ತು ಚೀನಾ ಶಸ್ತ್ರಾಸ್ತ್ರ ನೀಡಿದರೆ ಅವರ ಪರಿಸ್ಥಿತಿ ಬಹಳ ಕೆಟ್ಟದಾಗಿರಲಿದೆ ಎಂದೂ ಟ್ರಂಪ್ ಎಚ್ಚರಿಸಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮುಂದಿನ ವಾರ ಅಮೆರಿಕಕ್ಕೆ ಬರಲಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಇತ್ತ, ಪಶ್ಚಿಮ ಏಷ್ಯಾ ವಲಯದಲ್ಲಿ ದಾಳಿ ಮುಂದುವರಿಸಿರುವ ಇರಾನ್, ಶುಕ್ರವಾರ ಭಾರತದ 28 ಮಂದಿ ಸಿಬ್ಬಂದಿ ಇದ್ದ ಎಲ್‌ಪಿಜಿ ಟ್ಯಾಂಕರ್ ಹಡಗು 'ದಿಶಾ' ಮೇಲೆ ದಾಳಿ ಮಾಡಿದೆ. ಭಾರತದ ಎಲ್ಲ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ವರದಿ ತಿಳಿಸಿದೆ.

ಜುಲೈ 14ರಂದು ಇರಾನ್ ನಡೆಸಿದ ಇದೇ ರೀತಿಯ ದಾಳಿಯಲ್ಲಿ ಭಾರತೀಯ ನಾವಿಕರೊಬ್ಬರು ಮೃತಪಟ್ಟಿದ್ದರು.

ಈ ನಡುವೆ ಹೊರ್ಮುಜ್ ಜಲಸಂಧಿ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವ ಇರಾನ್ ಪಡೆಗಳ ಮೇಲೆ ಅಮೆರಿಕ 14ನೇ ದಿನವೂ ದಾಳಿ ಮುಂದುವರಿಸಿದೆ. ಅಲ್ಲದೆ, ಇರಾನ್‌ ಬಂದರುಗಳ ಮೇಲೆ ಅಮೆರಿಕ ನಿರ್ಬಂಧ ಮೀರಿ ಚಲಿಸಲು ಯತ್ನಿಸಿದ ಟ್ಯಾಂಕರ್‌ವೊಂದರ ಮೇಲೆ ಅಮೆರಿಕ ದಾಳಿ ನಡೆಸಿದೆ.

ಹೊರ್ಮುಜ್ ಸಂಬಂಧಿತ ತಮ್ಮ ಬೇಡಿಕೆಗೆ ಒಪ್ಪಿಕೊಳ್ಳುವವರೆಗೂ ಯುದ್ಧ ವಿರಾಮ ಒಪ್ಪಿಕೊಳ್ಳುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ರಣನೀತಿಗೆ ಜಗ್ಗದ ಇರಾನ್: ಇಕ್ಕಟ್ಟಿನಲ್ಲಿ ಅಮೆರಿಕ ಅಧ್ಯಕ್ಷ
Dailyhunt
Disclaimer: This content has not been generated, created or edited by Dailyhunt. Publisher: Prajavani