'ನಾನು ಪ್ರತಿದಿನ ಹೇಳುತ್ತೇನೆ. ಆದರೂ ನನ್ನ ಮಗ ಪುಸ್ತಕಗಳನ್ನು ಜೋಡಿಸಿ ಇಡುವುದಿಲ್ಲ'.
ಇದು ಬೆಂಗಳೂರಿನ ಒಬ್ಬ ಉದ್ಯೋಗಸ್ಥ ತಾಯಿಯ ಅಳಲು. ಮಗನಿಗೆ ಎಂಟು ವರ್ಷ. ಪ್ರತಿದಿನ ಅದೇ ಸೂಚನೆ, ಅದೇ ಬೈಗುಳ. ಆದರೆ ಯಾವುದೇ ಬದಲಾವಣೆ ಕಾಣಿಸುತ್ತಿರಲಿಲ್ಲ. ನಾವು ಪೋಷಕರಾಗಿ ಮಕ್ಕಳಲ್ಲಿ ಒಳ್ಳೆಯ ಅಭ್ಯಾಸಗಳು ಬೆಳೆಯಬೇಕು ಎಂದು ಬಯಸುತ್ತೇವೆ.
ಆದರೆ ಅನೇಕ ಬಾರಿ ನಾವು ಬಳಸುವ ವಿಧಾನವೇ ಮಕ್ಕಳಲ್ಲಿ ಪ್ರತಿರೋಧವನ್ನು ಉಂಟುಮಾಡುತ್ತದೆ. 'ಹತ್ತು ಬಾರಿ ಹೇಳಿದೆ', 'ನೀನು ಯಾವಾಗಲೂ ಹೀಗೇ', 'ನಿನ್ನಿಂದ ಏನೂ ಆಗುವುದಿಲ್ಲ' ಎಂಬ ಮಾತುಗಳು ಮಕ್ಕಳ ವರ್ತನೆಯನ್ನು ಬದಲಾಯಿಸುವುದಕ್ಕಿಂತ ಅವರ ಆತ್ಮವಿಶ್ವಾಸವನ್ನು ಕುಗ್ಗಿಸುವ ಸಾಧ್ಯತೆ ಹೆಚ್ಚು.
ಹಿಂದಿನ ಲೇಖನದಲ್ಲಿ ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳುವ ಅಗತ್ಯವನ್ನು ಚರ್ಚಿಸಿದ್ದೆವು. ಇಂದು ಮಕ್ಕಳಲ್ಲಿ ಉತ್ತಮ ವರ್ತನೆಗಳನ್ನು ಬೆಳೆಸಲು ಸಹಾಯ ಮಾಡುವ ಒಂದು ಪ್ರಮುಖ ಮನೋವೈಜ್ಞಾನಿಕ ಪರಿಕಲ್ಪನೆಯಾದ 'ಬಲವರ್ಧನೆ' ಕುರಿತು ತಿಳಿಯೋಣ.
ಮಗು ಮಾತು ಕೇಳುತ್ತಿಲ್ಲವೇ? ಮೊದಲು ಮನಸ್ಸನ್ನು ಅರ್ಥಮಾಡಿಕೊಳ್ಳಿ!ಸರಳವಾಗಿ ಹೇಳುವುದಾದರೆ, ಬಲವರ್ಧನೆ ಎಂದರೆ ಮಕ್ಕಳಲ್ಲಿ ನಾವು ನೋಡಲು ಬಯಸುವ ಉತ್ತಮ ವರ್ತನೆಗಳನ್ನು ಹೆಚ್ಚಿಸುವ ಪ್ರಕ್ರಿಯೆ. ಇದರ ಮುಖ್ಯ ಉದ್ದೇಶ ಮಕ್ಕಳ ಒಳ್ಳೆಯ ಅಭ್ಯಾಸಗಳು ಮತ್ತು ನಡವಳಿಕೆಗಳನ್ನು ಮತ್ತಷ್ಟು ಬಲಪಡಿಸುವುದು.
ಬಲವರ್ಧನೆ ಎರಡು ವಿಧಗಳಿವೆ - ಧನಾತ್ಮಕ ಬಲವರ್ಧನೆ ಮತ್ತು ಋಣಾತ್ಮಕ ಬಲವರ್ಧನೆ.
ಇಲ್ಲಿ 'ಧನಾತ್ಮಕ' ಎಂದರೆ ಒಳ್ಳೆಯದು ಮತ್ತು 'ಋಣಾತ್ಮಕ' ಎಂದರೆ ಕೆಟ್ಟದು ಎಂಬ ಅರ್ಥವಲ್ಲ. ಧನಾತ್ಮಕ ಎಂದರೆ ಮಗುವಿಗೆ ಇಷ್ಟವಾಗುವ ಯಾವುದನ್ನಾದರೂ ನೀಡುವುದು. ಋಣಾತ್ಮಕ ಎಂದರೆ ಮಗುವಿಗೆ ಇಷ್ಟವಿಲ್ಲದ ಯಾವುದನ್ನಾದರೂ ತೆಗೆದುಹಾಕುವುದು.
ಉದಾಹರಣೆಗೆ, ನಿಮ್ಮ ಮಗು ಸಮಯಕ್ಕೆ ಹೋಂವರ್ಕ್ ಮಾಡಿದರೆ ಹೆಚ್ಚುವರಿ ಹತ್ತು ನಿಮಿಷಗಳ ಆಟದ ಸಮಯ ನೀಡುವುದು ಧನಾತ್ಮಕ ಬಲವರ್ಧನೆ. ಇಲ್ಲಿ ಮಗುವಿಗೆ ಇಷ್ಟವಾದುದನ್ನು ನೀಡುವ ಮೂಲಕ ಉತ್ತಮ ವರ್ತನೆಯನ್ನು ಉತ್ತೇಜಿಸಲಾಗುತ್ತಿದೆ.
ಅದೇ ಸಂದರ್ಭದಲ್ಲಿ, 'ನೀನು ಸಮಯಕ್ಕೆ ಹೋಂವರ್ಕ್ ಮಾಡಿದರೆ ಇಂದು ಆಟಿಕೆಗಳನ್ನು ಜೋಡಿಸುವ ಕೆಲಸವನ್ನು ನಾನು ಮಾಡುತ್ತೇನೆ' ಎಂದು ಹೇಳಿದರೆ ಅದು ಋಣಾತ್ಮಕ ಬಲವರ್ಧನೆ. ಇಲ್ಲಿ ಮಗುವಿಗೆ ಇಷ್ಟವಿಲ್ಲದ ಒಂದು ಕೆಲಸವನ್ನು ತೆಗೆದುಹಾಕುವ ಮೂಲಕ ಉತ್ತಮ ವರ್ತನೆಯನ್ನು ಉತ್ತೇಜಿಸಲಾಗುತ್ತಿದೆ.
ಒಬ್ಬ ತಾಯಿ ತಮ್ಮ ಮಗ ಪ್ರತಿದಿನ ಶಾಲೆಗೆ ತಯಾರಾಗಲು ತಡಮಾಡುತ್ತಿದ್ದಾನೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದರು. ಪ್ರತಿದಿನ ಬೈದರೂ ಯಾವುದೇ ಬದಲಾವಣೆ ಕಂಡುಬರಲಿಲ್ಲ. ನಂತರ ಅವರು ಒಂದು ಸಣ್ಣ ಬದಲಾವಣೆ ಮಾಡಿದರು. ಸಮಯಕ್ಕೆ ಸಿದ್ಧವಾದ ದಿನಗಳಲ್ಲಿ ಕ್ಯಾಲೆಂಡರ್ನಲ್ಲಿ ಒಂದು ಸ್ಟಾರ್ ಗುರುತು ಹಾಕಲು ಆರಂಭಿಸಿದರು. ಐದು ಸ್ಟಾರ್ ಸೇರಿದಾಗ ಮಗುವಿಗೆ ಇಷ್ಟವಾದ ಆಟಿಕೆ ಉಡುಗೊರೆಯಾಗಿ ನೀಡಿದರು. ಕೆಲವೇ ವಾರಗಳಲ್ಲಿ ಮಗು ಸ್ವತಃ ಸಮಯಕ್ಕೆ ಎದ್ದು ಸಿದ್ಧವಾಗತೊಡಗಿತು.
ಇನ್ನೊಂದು ಕುಟುಂಬದಲ್ಲಿ ಊಟ ಮಾಡುವಾಗ ಮೊಬೈಲ್ ನೋಡುವ ಅಭ್ಯಾಸ ದೊಡ್ಡ ಸಮಸ್ಯೆಯಾಗಿತ್ತು. 'ಮೊಬೈಲ್ ಇಡು' ಎಂಬ ಮಾತು ಪ್ರತಿದಿನ ಕೇಳಿಸುತ್ತಿತ್ತು. ಆದರೆ ಪ್ರಯೋಜನವಾಗಲಿಲ್ಲ. ನಂತರ ಪೋಷಕರು ಒಂದು ನಿಯಮ ರೂಪಿಸಿದರು. ಮೊಬೈಲ್ ಇಲ್ಲದೆ ಊಟ ಮಾಡಿದರೆ ಊಟದ ನಂತರ ಕುಟುಂಬದೊಂದಿಗೆ ಒಂದು ಆಟ ಆಡುವ ಅವಕಾಶ ನೀಡಲಾಯಿತು. ಕೆಲವೇ ದಿನಗಳಲ್ಲಿ ಮಗು ಮೊಬೈಲ್ ಇಲ್ಲದೆ ಊಟ ಮಾಡಲು ಆರಂಭಿಸಿತು.
ಮಕ್ಕಳ ಹಲ್ಲುಜ್ಜುವ ಅಭ್ಯಾಸದಲ್ಲಿಯೂ ಇದೇ ತತ್ವ ಅನ್ವಯಿಸುತ್ತದೆ. ದಿನಕ್ಕೆ ಎರಡು ಬಾರಿ ಹಲ್ಲುಜ್ಜಿದರೆ ವಾರಾಂತ್ಯದಲ್ಲಿ ಉದ್ಯಾನವನಕ್ಕೆ ಕರೆದೊಯ್ಯುವುದು ಧನಾತ್ಮಕ ಬಲವರ್ಧನೆಯ ಉದಾಹರಣೆ. ಮಗು ದಂತವೈದ್ಯರ ಬಳಿ ಹೋಗಲು ಇಷ್ಟಪಡದಿದ್ದರೆ, ನಿಯಮಿತವಾಗಿ ಹಲ್ಲುಜ್ಜಿದರೆ ಅನಗತ್ಯ ದಂತ ತಪಾಸಣೆಗಳನ್ನು ತಪ್ಪಿಸಬಹುದು ಎಂದು ತಿಳಿಸುವುದು ಋಣಾತ್ಮಕ ಬಲವರ್ಧನೆಯ ಉದಾಹರಣೆಯಾಗಬಹುದು.
ನಾನು ಮೊದಲಿಗೆ ಉಲ್ಲೇಖಿಸಿದ ತಾಯಿಗೆ ಒಂದು ಸಲಹೆ ನೀಡಿದೆ. 'ಅವನು ಪುಸ್ತಕಗಳನ್ನು ಜೋಡಿಸಿದ ದಿನ ಅವನನ್ನು ಮೆಚ್ಚಿ ನೋಡಿ' ಎಂದು ಹೇಳಿದೆ. ಕೆಲವು ದಿನಗಳ ನಂತರ ಅವರು ಸಂತೋಷದಿಂದ ಕರೆ ಮಾಡಿ, 'ಈಗ ನಾನು ಹೇಳುವುದಕ್ಕೂ ಮುಂಚೆಯೇ ಪುಸ್ತಕಗಳನ್ನು ಜೋಡಿಸುತ್ತಾನೆ' ಎಂದು ಹೇಳಿದರು.
ಮಕ್ಕಳು ನಮ್ಮ ಗಮನ ಮತ್ತು ಮೆಚ್ಚುಗೆಗಾಗಿ ಹಂಬಲಿಸುತ್ತಾರೆ. ನಾವು ಅವರ ತಪ್ಪುಗಳನ್ನು ಗಮನಿಸುವಷ್ಟು ಅವರ ಒಳ್ಳೆಯ ಕೆಲಸಗಳನ್ನು ಗಮನಿಸುವುದಿಲ್ಲ. ತಮ್ಮ ಆಟಿಕೆಗಳನ್ನು ಜೋಡಿಸಿ ಇಟ್ಟಾಗ, ತಮ್ಮ ಸಹೋದರ ಅಥವಾ ಸಹೋದರಿಗೆ ಸಹಾಯ ಮಾಡಿದಾಗ, ಅಥವಾ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದಾಗ ಒಂದು ಮೆಚ್ಚುಗೆ ಒಂದು ನಗು ಅಥವಾ ಒಂದು ಅಪ್ಪುಗೆ ಅವರಿಗೆ ದೊಡ್ಡ ಪ್ರೇರಣೆಯಾಗಬಹುದು.
ಗಿಡವೊಂದು ಚೆನ್ನಾಗಿ ಬೆಳೆಯಬೇಕಾದರೆ ನಾವು ಅದಕ್ಕೆ ನೀರು, ಗೊಬ್ಬರ ಮತ್ತು ಆರೈಕೆಯನ್ನು ನೀಡುತ್ತೇವೆ. ಪ್ರತಿದಿನ ಅದರ ಮೇಲೆ ಕೋಪಗೊಳ್ಳುವುದಿಲ್ಲ. ಅದೇ ರೀತಿ ಮಕ್ಕಳ ಒಳ್ಳೆಯ ಗುಣಗಳನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಅವರ ವ್ಯಕ್ತಿತ್ವವೂ ಸುಂದರವಾಗಿ ಅರಳುತ್ತದೆ.
ಆದ್ದರಿಂದ ಮುಂದಿನ ಬಾರಿ ನಿಮ್ಮ ಮಗು ಒಳ್ಳೆಯ ಕೆಲಸ ಮಾಡಿದಾಗ ಅದನ್ನು ಸಹಜವೆಂದು ಕಡೆಗಣಿಸಬೇಡಿ. ಒಂದು ಮೆಚ್ಚುಗೆಯ ಮಾತು, ಒಂದು ಪ್ರೋತ್ಸಾಹದ ನಗು ಅಥವಾ ಒಂದು ಸಣ್ಣ ಪ್ರಶಂಸೆ ಅವರ ಜೀವನದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಬಹುದು.
ಏಕೆಂದರೆ ಕೆಲವೊಮ್ಮೆ ಹತ್ತು ಬಾರಿ ಬೈದರೂ ಆಗದ ಬದಲಾವಣೆಯನ್ನು ಒಂದು ಹೃದಯಪೂರ್ವಕ ಮೆಚ್ಚುಗೆಯ ಮಾತು ಮಾಡಿಬಿಡುತ್ತದೆ.

