ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಮನ ಮಥನ | ಮೌನ ಒಪ್ಪದ ಜೆನ್-ಝೀಗಳು: ನೀಟ್ ವಿವಾದದ ಮನೋವಿಜ್ಞಾನ
ಒಂದು ಸಾಲಿನಲ್ಲಿನೀಟ್ ಪರೀಕ್ಷೆಯ ಅಕ್ರಮಗಳು ಕೇವಲ ಸಾಂಸ್ಥಿಕ ವೈಫಲ್ಯವಲ್ಲದೆ, ಯುವಜನತೆಯ ಅಸ್ತಿತ್ವ ಮತ್ತು ನಂಬಿಕೆಯ ಮೇಲೆ ಉಂಟಾಗಿರುವ ಗಂಭೀರವಾದ ಮನೋವೈಜ್ಞಾನಿಕ ಆಘಾತವಾಗಿದೆ.
ಪ್ರಮುಖ ಪ್ರಶ್ನೋತ್ತರ
ನೀಟ್ ಪರೀಕ್ಷೆಯ ಅಕ್ರಮಗಳು ವಿದ್ಯಾರ್ಥಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ?
ಪರೀಕ್ಷೆಯ ಅಕ್ರಮವು ವಿದ್ಯಾರ್ಥಿಗಳ ವರ್ಷಗಳ ಪರಿಶ್ರಮ, ನಿದ್ರಾಹೀನ ರಾತ್ರಿಗಳು ಮತ್ತು ಭವಿಷ್ಯದ ಮೇಲಿನ ವಿಶ್ವಾಸಕ್ಕೆ ಧಕ್ಕೆ ತರುತ್ತದೆ, ಇದನ್ನು ಮನೋವಿಜ್ಞಾನದಲ್ಲಿ 'ಸಾಂಸ್ಥಿಕ ದ್ರೋಹ' (institutional betrayal) ಎಂದು ಕರೆಯಲಾಗುತ್ತದೆ.
ಉಷ್ಟ್ರಪಕ್ಷಿ ಪರಿಣಾಮ (Ostrich Effect) ಎಂದರೇನು?
ಅಪಾಯ ಅಥವಾ ಟೀಕೆಯನ್ನು ಎದುರಿಸುವ ಬದಲು, ತಲೆಯನ್ನು ಮರಳಿನಲ್ಲಿ ಅಡಗಿಸಿಕೊಳ್ಳುವ ಮೂಲಕ ಸಮಸ್ಯೆಯನ್ನು ನಿರ್ಲಕ್ಷಿಸುವ ಅಥವಾ ನೋಡದಿರುವಂತೆ ವರ್ತಿಸುವ ಮನೋವೃತ್ತಿಯನ್ನು ಉಷ್ಟ್ರಪಕ್ಷಿ ಪರಿಣಾಮ ಎನ್ನಲಾಗುತ್ತದೆ.
ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವ ವಿದ್ಯಾರ್ಥಿಗಳನ್ನು ಏಕೆ ಗೌರವಿಸಬೇಕು?
ಪ್ರಶ್ನಿಸುವ ನಾಗರಿಕರು ಪ್ರಜಾಪ್ರಭುತ್ವದ ಆಧಾರಸ್ತಂಭಗಳಿದ್ದಂತೆ; ವಿದ್ಯಾರ್ಥಿಗಳು ನ್ಯಾಯ ಮತ್ತು ಪಾರದರ್ಶಕತೆಗಾಗಿ ಪ್ರಶ್ನಿಸಿದಾಗ ಅವರನ್ನು ಶತ್ರುಗಳಂತೆ ಕಾಣುವುದು ಪ್ರಜಾಪ್ರಭುತ್ವದ ಆತ್ಮಕ್ಕೆ ವಿರುದ್ಧವಾಗಿದೆ.
ಜನರೇಶನ್ ಜೀ (Gen-Z) ತಲೆಮಾರಿನ ವಿಶೇಷತೆ ಏನು?
ಈ ತಲೆಮಾರಿನ ಯುವಕರು ಕುರುಡಾಗಿ ಆದೇಶಗಳನ್ನು ಪಾಲಿಸುವುದಿಲ್ಲ; ಬದಲಾಗಿ, ಅಧಿಕಾರದ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನ್ಯಾಯದ ಬಗ್ಗೆ ಅತ್ಯಂತ ಸಂವೇದನಾಶೀಲರಾಗಿ ಪ್ರಶ್ನಿಸುತ್ತಾರೆ.
ಮನೋವೈಜ್ಞಾನಿಕ ಸುರಕ್ಷತೆ (Psychological Safety) ಏಕೆ ಮುಖ್ಯ?
ವಿದ್ಯಾರ್ಥಿಗಳು ಭಯವಿಲ್ಲದೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದಾದ ವಾತಾವರಣವೇ ಮನೋವೈಜ್ಞಾನಿಕ ಸುರಕ್ಷತೆ. ಇದು ಇಲ್ಲದ ಸಮಾಜದಲ್ಲಿ ಪ್ರಜಾಪ್ರಭುತ್ವದ ಆರೋಗ್ಯ ಕುಸಿಯುತ್ತಾ ಹೋಗುತ್ತದೆ.
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ನೀಟ್ನಂತಹ ಪ್ರತಿಯೊಂದು ಪರೀಕ್ಷೆಗಳ ಹಿಂದೆ ಕೇವಲ ಪ್ರಶ್ನೆಗಳು ಮತ್ತು ಉತ್ತರಗಳಿರವುದಿಲ್ಲ; ಲಕ್ಷಾಂತರ ಕನಸುಗಳು, ಕುಟುಂಬಗಳ ಆಸೆ-ಆಕಾಂಕ್ಷೆಗಳು, ವರ್ಷಗಳ ಪರಿಶ್ರಮ, ನಿದ್ರಾಹೀನ ರಾತ್ರಿಗಳು ಮತ್ತು ಭವಿಷ್ಯದ ಮೇಲಿನ ವಿಶ್ವಾಸ ಅಡಗಿರುತ್ತದೆ. ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯ ಆರೋಪಗಳು ಹೊರಬಂದಾಗ ಇಲ್ಲಿ ಕೇವಲ ಒಂದು ಪರೀಕ್ಷೆಯ ವಿಶ್ವಾಸಾರ್ಹತೆ ಪ್ರಶ್ನೆಗೆ ಒಳಗಾಗಿಲ್ಲ; ದೇಶದ ಯುವಜನತೆ ನ್ಯಾಯದ ಮೇಲೆ ಇಟ್ಟಿದ್ದ ನಂಬಿಕೆ ಗಾಯಗೊಂಡಿದೆ.
ವಿಶ್ಲೇಷಣೆ: ನೀಟ್ ಅಸಮಾನತೆಗೆ ವೈದ್ಯಕೀಯ ಶಿಕ್ಷಣ ವಿಕೇಂದ್ರೀಕರಣವೇ ಪರಿಹಾರಈ ಘಟನೆಯನ್ನು ಮನೋವೈಜ್ಞಾನಿಕ ದೃಷ್ಟಿಕೋನದಿಂದ ನೋಡಿದಾಗ ನನಗೆ ನೆನಪಾಗುವುದು "ಉಷ್ಟ್ರಪಕ್ಷಿ ಪರಿಣಾಮ" (Ostrich Effect). ಜನಪ್ರಿಯ ಕಲ್ಪನೆಯ ಪ್ರಕಾರ, ಉಷ್ಟ್ರಪಕ್ಷಿ ಅಪಾಯ ಎದುರಾದಾಗ ತನ್ನ ತಲೆಯನ್ನು ಮರಳಿನಲ್ಲಿ ಮರೆಮಾಡಿಕೊಳ್ಳುತ್ತದೆ. ಮನೋವಿಜ್ಞಾನದಲ್ಲಿ ಈ ರೂಪಕದ ಅರ್ಥ ಬಹಳ ಆಳವಾಗಿದೆ: ಅಸಹಜ ಸತ್ಯ, ಟೀಕೆ ಅಥವಾ ಸಂಕಷ್ಟವನ್ನು ಎದುರಿಸುವ ಬದಲು ಅದನ್ನು ನೋಡದಿರುವಂತೆ ವರ್ತಿಸುವ ಮನೋವೃತ್ತಿ ಇದಾಗಿದೆ.
ಮೌನದ ಮನೋವಿಜ್ಞಾನ
ಯಾವುದೇ ಸಂಸ್ಥೆ ಅಥವಾ ಆಡಳಿತ ವ್ಯವಸ್ಥೆ ತನ್ನ ಮುಂದೆ ಉದ್ಭವಿಸಿದ ಗಂಭೀರ ಪ್ರಶ್ನೆಗಳಿಗೆ ಸ್ಪಷ್ಟವಾಗಿ ಉತ್ತರಿಸದಿದ್ದಾಗ, ಅದನ್ನು ಕೇವಲ ಆಡಳಿತಾತ್ಮಕ ವಿಳಂಬವಾಗಿ ನೋಡಲು ಸಾಧ್ಯವಾಗುವುದಿಲ್ಲ ಬದಲಾಗಿ ಅದು 'ನಿಮ್ಮ ಪ್ರಶ್ನೆಗಳು ನಮ್ಮ ತುರ್ತು ಆದ್ಯತೆಯಲ್ಲ' ಎಂಬ ಮನೋವೈಜ್ಞಾನಿಕ ಸಂದೇಶವನ್ನು ರವಾನಿಸುತ್ತದೆ.
ವಿದ್ಯಾರ್ಥಿಗಳು ಕೇಳುತ್ತಿರುವ ಪ್ರಶ್ನೆಗಳು ಅತ್ಯಂತ ಮೂಲಭೂತವಾದವು: ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎನ್ನುವ ಆರೋಪಗಳ ಸತ್ಯಾಸತ್ಯತೆ ಏನು? ಇದರ ಹೊಣೆಗಾರರು ಯಾರು? ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಯಾವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ? ಈ ಪ್ರಶ್ನೆಗಳು ರಾಜಕೀಯವಲ್ಲ; ಇವು ನ್ಯಾಯ, ಪಾರದರ್ಶಕತೆ ಮತ್ತು ಪ್ರಜಾಪ್ರಭುತ್ವದ ಮೂಲ ಪ್ರಶ್ನೆಗಳು.
ಆದರೆ ರಾಜಕೀಯ ವಲಯಗಳಲ್ಲಿ ನಾವು ಅನೇಕ ಬಾರಿ ನೋಡುವುದೇ ಬೇರೆಯ ಚಿತ್ರಣ. ಸಮಸ್ಯೆ ಎದುರಾದಾಗ ತಕ್ಷಣದ ಸ್ಪಷ್ಟ ಉತ್ತರಗಳ ಬದಲು, ವಿಷಯವನ್ನು ತಳ್ಳಿಹಾಕುವ ಪ್ರಯತ್ನ, ಗಮನವನ್ನು ಬೇರೆಡೆಗೆ ಹರಿಸುವ ಯತ್ನ, ಅಥವಾ ಪ್ರಶ್ನೆ ಕೇಳುವವರನ್ನೇ ಅನುಮಾನಿಸುವ ಪ್ರವೃತ್ತಿ ಕಾಣಿಸುತ್ತದೆ. ಇದೇ ರಾಜಕೀಯ ದ್ವಂದ್ವ. ಅಧಿಕಾರದಲ್ಲಿರುವಾಗ ಹೊಣೆಗಾರಿಕೆಯ ಭಾಷೆ ಮಾತನಾಡುವುದು, ಆದರೆ ಹೊಣೆಗಾರಿಕೆ ಕೇಳಿದಾಗ ಮೌನದ ಗೋಡೆಯನ್ನು ಕಟ್ಟುವುದು.
ಪ್ರಶ್ನಿಸುವವರನ್ನು ಶತ್ರುವಾಗಿ ನೋಡುವ ಅಪಾಯ
ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವ ನಾಗರಿಕರು ಶತ್ರುಗಳಲ್ಲ. ವಿಶೇಷವಾಗಿ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಪ್ರಶ್ನಿಸಿದಾಗ, ಅವರನ್ನು ಅನುಮಾನದಿಂದ ನೋಡುವುದು ಅಥವಾ ಅವರ ಧ್ವನಿಯನ್ನು ಕುಗ್ಗಿಸಲು ಪ್ರಯತ್ನಿಸುವುದು ಪ್ರಜಾಪ್ರಭುತ್ವದ ಆತ್ಮಕ್ಕೆ ವಿರುದ್ಧವಾಗಿದೆ.
ವಿದ್ಯಾರ್ಥಿಗಳ ಪ್ರತಿಭಟನೆ ಕೇವಲ ಕೋಪದ ಅಭಿವ್ಯಕ್ತಿಯಲ್ಲ. ಅದು 'ನಮ್ಮ ಪರಿಶ್ರಮಕ್ಕೆ ಮೌಲ್ಯವಿದೆಯೇ?' ಎಂಬ ಅಸ್ತಿತ್ವದ ಪ್ರಶ್ನೆ. ವರ್ಷಗಳ ಕಾಲ ಓದಿ, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗಿ, ತಮ್ಮ ಜೀವನದ ಅತ್ಯಂತ ಮಹತ್ವದ ಹಂತದಲ್ಲಿ ಅನ್ಯಾಯವಾಗಿದೆ ಎಂಬ ಭಾವನೆ ಹೊಂದಿದ ಯುವಕರು ಬೀದಿಗಿಳಿದಾಗ, ಅವರು ಕೇವಲ ಪರೀಕ್ಷೆಯ ಬಗ್ಗೆ ಮಾತನಾಡುತ್ತಿಲ್ಲ; ಅವರು ತಮ್ಮ ಅಸ್ತಿತ್ವದ ಬಗ್ಗೆ ಮಾತನಾಡುತ್ತಿದ್ದಾರೆ.
ಮನೋವಿಜ್ಞಾನದಲ್ಲಿ ಇದನ್ನು 'institutional betrayal' ಎನ್ನಲಾಗುತ್ತದೆ - ವ್ಯಕ್ತಿ ವಿಶ್ವಾಸ ಇಟ್ಟಿರುವ ಸಂಸ್ಥೆಯೇ ತನ್ನ ಜವಾಬ್ದಾರಿಯನ್ನು ನಿರ್ಲಕ್ಷಿಸಿದಾಗ ಉಂಟಾಗುವ ಮಾನಸಿಕ ನೋವದು. ವಿದ್ಯಾರ್ಥಿಗಳು ಪರೀಕ್ಷಾ ವ್ಯವಸ್ಥೆಯ ಮೇಲೆ ವಿಶ್ವಾಸವಿಟ್ಟು ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಹವಣಿಸುತ್ತಾರೆ. ಆ ವಿಶ್ವಾಸವೇ ಕುಸಿದಾಗ, ಅದು ಕೇವಲ ಫಲಿತಾಂಶದ ಸಮಸ್ಯೆಯಲ್ಲ; ಅದು ಆತ್ಮವಿಶ್ವಾಸ, ಭದ್ರತೆ ಮತ್ತು ಭವಿಷ್ಯದ ಮೇಲಿನ ನಂಬಿಕೆಯ ಸಮಸ್ಯೆಯಾಗಿಬಿಡುತ್ತದೆ.
'ನೀಟ್' ಹೋರಾಟಕ್ಕೆ ಧಾರ್ಮಿಕ ಬಣ್ಣ: ಆರೋಪಿ ಬಂಧನಬಲಪ್ರಯೋಗದ ಮೌನ ಸಂದೇಶ
ಪ್ರತಿಭಟನೆಯನ್ನು ನಿಯಂತ್ರಿಸುವ ಹೆಸರಿನಲ್ಲಿ ಬಲಪ್ರಯೋಗ ನಡೆದಾಗ, ಅದು 'ಪ್ರಶ್ನೆ ಕೇಳುವುದಕ್ಕಿಂತ ಮೌನವಾಗಿರುವುದು ಸುರಕ್ಷಿತವೆಂಬ' ಅಪಾಯಕಾರಿ ಸಂದೇಶವನ್ನು ಸಮಾಜಕ್ಕೆ ನೀಡುತ್ತದೆ. ಆದರೆ ಭಯದಿಂದ ಉಂಟಾಗುವ ಮೌನ ನ್ಯಾಯವನ್ನು ಹುಟ್ಟಿಸುವುದಿಲ್ಲ ಬದಲಾಗಿ ಅದು ಕೇವಲ ಅಸಮಾಧಾನವನ್ನು ಒಳಗೆ ಒತ್ತಿಹಾಕುತ್ತದೆ.
ಯುವ ಮನಸ್ಸು ಅತ್ಯಂತ ಸಂವೇದನಾಶೀಲ. ತನ್ನ ಪರಿಶ್ರಮಕ್ಕೆ ಅನ್ಯಾಯವಾಗಿದೆ ಎಂದು ಭಾವಿಸುವ ವಿದ್ಯಾರ್ಥಿ, ತನ್ನ ಧ್ವನಿಯನ್ನು ಪ್ರತಿಪಾದಿಸಲು ಹೊರಟಾಗ ಅವಮಾನ ಅಥವಾ ಹಿಂಸೆ ಎದುರಾದರೆ, ಅದು ಆತನ/ಆಕೆಯ ಆತ್ಮಗೌರವದ ಮೇಲೆ ಆಳವಾದ ಗಾಯವನ್ನು ಉಂಟು ಮಾಡಿಬಿಡಬಹುದು. ಇಂತಹ ಅನುಭವಗಳು ಯುವಜನತೆಯಲ್ಲಿ ವ್ಯವಸ್ಥೆಯ ಮೇಲಿನ ನಂಬಿಕೆಯನ್ನೇ ಕುಂದಿಸುತ್ತವೆ.
ಮನೋವೈಜ್ಞಾನಿಕ ಸುರಕ್ಷತೆಯ ಮಹತ್ವ
ಮನೋವಿಜ್ಞಾನದಲ್ಲಿ 'Psychological Safety' ಎಂಬ ಪರಿಕಲ್ಪನೆ ಅತ್ಯಂತ ಮಹತ್ವದ್ದಾಗಿದೆ. ಅಂದರೆ, ವ್ಯಕ್ತಿಯು ತನ್ನ ಅಭಿಪ್ರಾಯವನ್ನು ಭಯವಿಲ್ಲದೆ ವ್ಯಕ್ತಪಡಿಸಬಹುದಾದ ಸುರಕ್ಷಿತ ವಾತಾವರಣ. ವಿದ್ಯಾರ್ಥಿಗಳು ಪ್ರಶ್ನೆ ಕೇಳಿದಾಗ, ಅನುಮಾನ ವ್ಯಕ್ತಪಡಿಸಿದಾಗ, ಅಥವಾ ನ್ಯಾಯಕ್ಕಾಗಿ ಧ್ವನಿ ಎತ್ತಿದಾಗ ಅವರು ದಂಡನೆಯ ಭಯದಲ್ಲಿರಬಾರದು.
ಒಂದು ಸಮಾಜದಲ್ಲಿ ಯುವಜನತೆ ಭಯವಿಲ್ಲದೆ ಮಾತನಾಡಲು ಸಾಧ್ಯವಾಗದಿದ್ದರೆ, ಆ ಸಮಾಜದಲ್ಲಿ ಪ್ರಜಾಪ್ರಭುತ್ವದ ಆರೋಗ್ಯ ಕುಸಿಯಲು ಆರಂಭಿಸುತ್ತದೆ. ಏಕೆಂದರೆ ಪ್ರಜಾಪ್ರಭುತ್ವವು ಕೇವಲ ಚುನಾವಣೆಗಳ ಮೂಲಕ ಬದುಕುವುದಿಲ್ಲ; ಅದು ಪ್ರಶ್ನಿಸುವ ನಾಗರಿಕರ ಧೈರ್ಯದಿಂದ ಬದುಕುತ್ತದೆ.
ಪಿಯುಸಿ-ಮುಂದೇನು? ಅನ್ವಯಿಕ ಮನೋವಿಜ್ಞಾನ; ಮನೋಬಲವೇ ಮಹಾಬಲ!ಜನರೇಶನ್ ಝೀ: ಮೌನವನ್ನು ಒಪ್ಪದ ತಲೆಮಾರು
ಇಂದಿನ ಯುವಜನತೆ, ವಿಶೇಷವಾಗಿ ಜನರೇಶನ್ ಝೀ, ಹಿಂದಿನ ತಲೆಮಾರುಗಳಿಗಿಂತ ವಿಭಿನ್ನವಾಗಿದೆ. ಅವರು ಕೇವಲ ಆದೇಶಗಳನ್ನು ಪಾಲಿಸುವುದಿಲ್ಲ; 'ಏಕೆ?' ಪಾಲಿಸಬೇಕು ಎಂದು ಮರುಪ್ರಶ್ನಿಸುತ್ತಾರೆ. ಅವರು ಮಾಹಿತಿ ಹೊಂದಿದ್ದಾರೆ, ಜಾಗೃತರಾಗಿದ್ದಾರೆ, ಮತ್ತು ನ್ಯಾಯದ ಬಗ್ಗೆ ಹೆಚ್ಚು ಸಂವೇದನಾಶೀಲರಾಗಿದ್ದಾರೆ.
ಈ ತಲೆಮಾರು ಇತಿಹಾಸ ನಿರ್ಮಿಸುತ್ತಿದೆ ಎಂಬುದಕ್ಕೆ ಕಾರಣ, ಅವರು ಅಧಿಕಾರವನ್ನು ದ್ವೇಷಿಸುತ್ತಾರೆ ಎಂಬುದಲ್ಲ. ಬದಲಾಗಿ, ಅವರು ಅಧಿಕಾರವು ಪಾರದರ್ಶಕ, ನ್ಯಾಯಸಮ್ಮತ, ಮತ್ತು ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕೆಂದು ನಿರೀಕ್ಷಿಸುತ್ತಾರೆ.
ಅವರು ಕೇಳುತ್ತಿರುವುದು ಕೇವಲ ಒಂದು ಪರೀಕ್ಷೆಯ ಮರುಪರಿಶೀಲನೆಯಲ್ಲ. ಅವರು ಕೇಳುತ್ತಿರುವುದು; 'ನಮ್ಮ ಪರಿಶ್ರಮವನ್ನು ನೀವು ಗೌರವಿಸುತ್ತೀರಾ? ತಪ್ಪು ನಡೆದಿದ್ದರೆ ಅದನ್ನು ಒಪ್ಪಿಕೊಂಡು ಸರಿಪಡಿಸಲು ನೀವು ಸಿದ್ಧರಿದ್ದೀರಾ? ನಮ್ಮ ಭವಿಷ್ಯವನ್ನು ನೀವು ಸುರಕ್ಷಿತವಾಗಿಡುತ್ತೀರಾ?' ಎಂಬುದನ್ನು.
ರಾಜಕೀಯ ದ್ವಂದ್ವದ ನಿಜವಾದ ಮುಖ
ರಾಜಕೀಯ ದ್ವಂದ್ವವೆಂದರೆ ಕೇವಲ ಮಾತು ಮತ್ತು ಕೃತಿಗಳ ನಡುವಿನ ವ್ಯತ್ಯಾಸವಲ್ಲ. ಅದು ಸಾರ್ವಜನಿಕವಾಗಿ ನ್ಯಾಯದ ಭಾಷೆ ಮಾತನಾಡಿ, ಸಂಕಷ್ಟದ ಕ್ಷಣದಲ್ಲಿ ನ್ಯಾಯದ ಪ್ರಶ್ನೆಯಿಂದ ದೂರ ಓಡುವ ಮನೋವೃತ್ತಿ.
ಒಂದು ಸಮಸ್ಯೆ ಎದುರಾದಾಗ ಅದನ್ನು ತಕ್ಷಣದ ರಾಜಕೀಯ ಲಾಭ-ನಷ್ಟದ ಕಣ್ಣಿನಿಂದ ನೋಡುವುದು, ಅಥವಾ ಸಾರ್ವಜನಿಕ ಆಕ್ರೋಶ ತಣ್ಣಗಾಗುವವರೆಗೆ ಕಾಯುವುದು, ಉಷ್ಟ್ರಪಕ್ಷಿ ಪರಿಣಾಮದ ರಾಜಕೀಯ ರೂಪವಾಗಿದೆ. ಮರಳಿನಲ್ಲಿ ತಲೆ ಮರೆಸಿಕೊಂಡರೆ ಅಪಾಯ ದೂರವಾಗುವುದಿಲ್ಲ; ಅದನ್ನು ಎದುರಿಸಿದಾಗ ಮಾತ್ರ ಪರಿಹಾರ ಸಾಧ್ಯ.
ಪ್ರೀತಿಯಲ್ಲಿ ಯುವಕರಿಗೇ ಹೆಚ್ಚು ನೋವಾಗಲು ಕಾರಣ: ಮನೋವಿಜ್ಞಾನ ಹೇಳೋದೇನು?ತಲೆ ಎತ್ತುವ ಸಮಯ
ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ಪ್ರಕರಣದಲ್ಲಿ ವಿದ್ಯಾರ್ಥಿಗಳು ಕೇಳುತ್ತಿರುವುದು ಪ್ರತೀಕಾರವಲ್ಲ. ಅವರು ಕೇಳುತ್ತಿರುವುದು ನ್ಯಾಯ, ಗೌರವ, ಪಾರದರ್ಶಕತೆ, ಮತ್ತು ವಿಶ್ವಾಸದ ಪುನರ್ನಿರ್ಮಾಣ. ಯಾವುದೇ ಆಡಳಿತದ ನಿಜವಾದ ಬಲ ಅದು ತಪ್ಪು ಮಾಡದೇ ಇರುವುದರಲ್ಲಿ ಇಲ್ಲ; ತಪ್ಪು ನಡೆದಾಗ ಅದನ್ನು ಒಪ್ಪಿಕೊಳ್ಳುವ ಪ್ರಾಮಾಣಿಕತೆಯಲ್ಲಿ ಇದೆ. ಸ್ಪಷ್ಟ ಉತ್ತರಗಳನ್ನು ನೀಡುವುದು, ಹೊಣೆಗಾರರನ್ನು ಗುರುತಿಸುವುದು, ಮತ್ತು ವ್ಯವಸ್ಥೆಯನ್ನು ಸುಧಾರಿಸುವುದು - ಇದೇ ಪ್ರಜಾಪ್ರಭುತ್ವದ ಬಲ.
ಇಂದು ಮರಳಿನಲ್ಲಿ ತಲೆ ಮರೆಸಿಕೊಳ್ಳುವ ಸಮಯವಲ್ಲ. ಸತ್ಯವನ್ನು ಎದುರಿಸದೆ, ಪ್ರಶ್ನೆಗಳಿಗೆ ಉತ್ತರಿಸದೆ, ಹೊಣೆಗಾರಿಕೆಯನ್ನು ಸ್ವೀಕರಿಸದೆ ಉಳಿಯುವ ಪ್ರತಿಯೊಂದು ಮೌನವೂ ಯುವಜನತೆಯ ವಿಶ್ವಾಸದ ಮೇಲೆ ಮತ್ತೊಂದು ಗಾಯವನ್ನುಂಟುಮಾಡುತ್ತದೆ. ವಿದ್ಯಾರ್ಥಿಗಳು ಬೀದಿಗಿಳಿದಿರುವುದು ದೇಶದ ವಿರುದ್ಧವಲ್ಲ; ಅವರು ದೇಶದ ಆತ್ಮವಾದ ನ್ಯಾಯದ ಪರ ನಿಂತಿದ್ದಾರೆ. ಅವರ ಧ್ವನಿಯನ್ನು ಕೇಳದೆ ಇರುವ ಯಾವುದೇ ವ್ಯವಸ್ಥೆ ತನ್ನ ಅಧಿಕಾರವನ್ನು ಉಳಿಸಿಕೊಳ್ಳಬಹುದು, ಆದರೆ ತನ್ನ ನೈತಿಕ ಮಾನ್ಯತೆಯನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ಇಂದು ಅಗತ್ಯವಿರುವುದು ಕೇವಲ ತನಿಖೆಯಲ್ಲ; ತಪ್ಪನ್ನು ಒಪ್ಪಿಕೊಳ್ಳುವ ಧೈರ್ಯ, ಹೊಣೆಗಾರರನ್ನು ಬಹಿರಂಗಪಡಿಸುವ ಪ್ರಾಮಾಣಿಕತೆ, ಮತ್ತು ಯುವಜನತೆಗೆ ಅವರ ಪರಿಶ್ರಮದ ಗೌರವ ಇನ್ನೂ ಈ ದೇಶದಲ್ಲಿ ಜೀವಂತವಾಗಿದೆ ಎಂಬ ವಿಶ್ವಾಸವನ್ನು ಮರಳಿ ನೀಡುವ ನೈತಿಕ ಸಂಕಲ್ಪ.
ಮನೋವಿಜ್ಞಾನ: ಸುಳ್ಳು ಹೇಳುವುದರಿಂದ ಮುಕ್ತಿ ಪಡೆಯಲು ಇಲ್ಲಿದೆ ಪರಿಹಾರ
