ಮಂಡ್ಯ: ಮನ್‌ಮುಲ್‌ನಲ್ಲಿ ನಡೆದಿರುವ ಹಾಲಿನ ಪುಡಿ ಕಲಬೆರಕೆ ಪ್ರಕರಣ ಕುರಿತು ಸಿಬಿಐ ಅಥವಾ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಹಾಗೂ ಮನ್‌ಮುಲ್ ಆಡಳಿತ ಮಂಡಳಿಯನ್ನು 'ಸೂಪರ್‌ಸೀಡ್' ಮಾಡಬೇಕು ಎಂದು ಜಿಲ್ಲೆಯ ಜೆಡಿಎಸ್‌ನ ಹಾಲಿ ಮತ್ತು ಮಾಜಿ ಶಾಸಕರು ಆಗ್ರಹಿಸಿದ್ದಾರೆ.
ಕಳೆದ ಮಾರ್ಚ್ ತಿಂಗಳಲ್ಲೇ ಹಾಲಿನಪುಡಿ ನಾಪತ್ತೆ ಮತ್ತು ಕಲಬೆರಕೆ ಪ್ರಕರಣ ಬೆಳಕಿಗೆ ಬಂದರೂ ಮನ್‌ಮುಲ್ ಆಡಳಿತ ಮಂಡಳಿ ಮತ್ತು ಜನಪ್ರತಿನಿಧಿಗಳು ತಾತ್ಸಾರ ತೋರಿದ್ದಾರೆ. ಇದನ್ನು ಗಮನಿಸಿದರೆ ಪ್ರಭಾವಿಗಳು ಇದರಲ್ಲಿ ಶಾಮೀಲಾಗಿರುವ ಸಾಧ್ಯತೆಯಿದೆ ಎಂದು ಮಾಜಿ ಶಾಸಕ ಕೆ. ಸುರೇಶ್‌ಗೌಡ, ಮಾಜಿ ಸಚಿವ ಡಿ.ಸಿ. ತಮ್ಮಣ್ಣ, ಶಾಸಕ ಎಚ್.ಟಿ. ಮಂಜು ಅವರು ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಅನುಮಾನ ವ್ಯಕ್ತಪಡಿಸಿದರು.
ಪೊಲೀಸರು ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸುವ ವಿಶ್ವಾಸವಿಲ್ಲ. ತಪ್ಪಿತಸ್ಥರು ಎಷ್ಟೇ ಪ್ರಭಾವಶಾಲಿಯಾಗಿರಲಿ ಅಥವಾ ಯಾವುದೇ ಪಕ್ಷದವರಾಗಿರಲಿ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ಪಾಪದ ಕೆಲಸವನ್ನು ಯಾರೂ ಸಮರ್ಥಿಸುವುದಿಲ್ಲ ಎಂದರು.
ಪ್ರಕರಣದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ ಆರು ಹಿಂದೆಯೇ ಮಾಹಿತಿ ಸಿಕ್ಕಿದ್ದರೂ ಈವರೆಗೆ ಮೌನವಾಗಿರುವುದೇಕೆ? ಯಾರನ್ನು ರಕ್ಷಿಸಲು ಪ್ರಯತ್ನಿಸಲಾಗುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ಈ ಮಧ್ಯೆ ಹಾಲಿನಪುಡಿಗೆ ಮಿಶ್ರಣ ಮಾಡಲು ಬಳಕೆಯಾಗಿದ್ದ ಗೆಣಸಿನಪುಡಿ ಪೂರೈಕೆಯಾಗಿದ್ದ ರಾಜನಕುಂಟೆಯ ಕಾರ್ಖಾನೆಯ ಮಾಲೀಕ ನಿಗೂಢವಾಗಿ ಸಾವನ್ನಪ್ಪಿದ್ದಾನೆ. ಈ ಬಗ್ಗೆಯೂ ತನಿಖೆ ಮಾಡಬೇಕೆಂದು ಒತ್ತಾಯಿಸಿದರು.
ಮನ್‌ಮುಲ್‌ನಲ್ಲಿ ಹಾಲಿನಪುಡಿ ಕಲಬೆರಕೆ ಪ್ರಕರಣ: ಸಿಬಿಐ ತನಿಖೆಗೆ ಬಿಜೆಪಿ ಆಗ್ರಹಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಅನ್ನದಾನಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ಎಪಿಎಂಸಿ ಅಧ್ಯಕ್ಷ ರಮೇಶ್ ಹಾಜರಿದ್ದರು.
ಮಹಿಳಾ ಅಧಿಕಾರಿಗೆ ಬೆದರಿಕೆ: ಆರೋಪ
ಮನ್‌ಮುಲ್ ಹಗರಣಗಳ ಬಗ್ಗೆ ಧ್ವನಿ ಎತ್ತಿದ ಮಂಡ್ಯ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರಾದ (ಡಿ.ಆರ್.ಸಿ.ಎಸ್) ಮಹಿಳಾ ಅಧಿಕಾರಿಗೆ ನಿರ್ದೇಶಕರೊಬ್ಬರು, ಕಟ್ಟಾಕಿ ಹೊಡೆಯುತ್ತೇನೆ ಅಂತ ಧಮಕಿ ಹಾಕಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮೌಖಿಕ ದೂರು ಸಲ್ಲಿಕೆಯಾಗಿದೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶಾಸಕ ಎಚ್.ಟಿ. ಮಂಜು ಆರೋಪಿಸಿದರು.
ಜೆಡಿಎಸ್ ಆಡಳಿತ ಮಂಡಳಿ ಇರುವ ಸಹಕಾರ ಸಂಘಗಳನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡುವುದು, ಪದಾಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸುವುದನ್ನು ಕೆಲವು ನಿರ್ದೇಶಕರು ಮಾಡುತ್ತಿದ್ದಾರೆ ಎಂದು ದೂರಿದರು.

