Dailyhunt
ನಾನೇಕೆ ನಿಮ್ಮ ಧ್ವನಿಯಾಗಲಿ: ಸಚಿವನ ಬೆವರಿಳಿಸಿದ್ದ ಮಹಿಳೆ ಹೀಗೆ ಹೇಳಿದ್ದೇಕೆ?

ನಾನೇಕೆ ನಿಮ್ಮ ಧ್ವನಿಯಾಗಲಿ: ಸಚಿವನ ಬೆವರಿಳಿಸಿದ್ದ ಮಹಿಳೆ ಹೀಗೆ ಹೇಳಿದ್ದೇಕೆ?

ಮುಂಬೈ: ನಗರದ ವರ್ಲಿ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಚಿವ, ಬಿಜೆಪಿ ನಾಯಕರು, ಕಾರ್ಯಕರ್ತರನ್ನು ತರಾಟೆ ತೆಗೆದುಕೊಂಡು ಸುದ್ದಿಯಾಗಿದ್ದ ಮಹಿಳೆ ಟೀನಾ ಚೌಧರಿ ಅವರು, 'ಜನಸಾಮಾನ್ಯರನ್ನು ಕಡೆಗಣಿಸುವ ಪ್ರತಿಯೊಂದು ಪಕ್ಷದವವರೂ ತಪ್ಪಿತಸ್ಥರೇ' ಎಂದು ಹೇಳಿದ್ದಾರೆ.

ವಿಪಕ್ಷಗಳ ವಿರೋಧದಿಂದಾಗಿ ಮಹಿಳಾ ಮೀಸಲಾತಿ ಮಸೂದೆಗೆ ಸಂಸತ್ತಿನಲ್ಲಿ ಕಳೆದ ತಿಂಗಳು ಸೋಲಾಗಿತ್ತು. ಹೀಗಾಗಿ, ವಿರೋಧ ಪಕ್ಷಗಳ ನಡೆಯನ್ನು ಖಂಡಿಸಿ ಮಹಾರಾಷ್ಟ್ರ ಸಚಿವ ಹಾಗೂ ಬಿಜೆಪಿ ನಾಯಕ ಗಿರೀಶ್‌ ಮಹಾಜನ್‌ ನೇತೃತ್ವದಲ್ಲಿ ಏಪ್ರಿಲ್‌ 21ರಂದು ವರ್ಲಿಯಲ್ಲಿ ಪ್ರತಿಭಟನೆ ನಡೆದಿತ್ತು. ಅದರಿಂದ ವಿಪರೀತ ಸಂಚಾರ ದಟ್ಟಣೆ ಉಂಟಾಗಿತ್ತು. ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಸಿಟ್ಟಾಗಿದ್ದ ಚೌಧರಿ ಅವರು, ಸಚಿವರ ವಿರುದ್ಧ ಸಾರ್ವಜನಿಕವಾಗಿ ಆಕ್ರೋಶ ಹೊರಹಾಕಿದ್ದರು. 'ನಿನ್ನಿಂದಲೇ ಸಂಚಾರ ದಟ್ಟಣೆಯಾಗಿದೆ. ಗೆಟ್ ಔಟ್‌ ಫ್ರಂ ಹಿಯರ್‌' ಎಂದು ಗುಡುಗಿದ್ದರು.

ಆ ಸಂದರ್ಭದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಅದು ಬಿಜೆಪಿಗೆ ಮುಜುಗರ ತಂದರೆ, ಚೌಧರಿ ಅವರ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು.

ಸದ್ಯ ಆ ಘಟನೆ ಕುರಿತು ಸ್ವತಃ ಚೌಧರಿ ಅವರೇ ಮಾತನಾಡಿದ್ದಾರೆ. ಅವರು ಮಾತನಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿದೆ.

'ಅಂತಹ ಸಂದರ್ಭದಲ್ಲಿ ನೀವು ನಮ್ಮ ಧ್ವನಿಯಾಗಬೇಕು ಎನ್ನುವಂತಹ ಹಲವು ಸಂದೇಶಗಳು ಬಂದಿವೆ. ಯಾಕೆ? ನಾನೇಕೆ ನಿಮ್ಮ ಧ್ವನಿಯಾಗಬೇಕು? ನಿಮಗೂ ನಿಮ್ಮದೇ ಧ್ವನಿ ಇದೆ' ಎಂದಿದ್ದಾರೆ.

ಅಂದು ಆ ಘಟನೆ ನಡೆದ ದಿನ, ಸಂಚಾರ ದಟ್ಟಣೆಯಲ್ಲಿ ಸಿಲುಕಿ ಸುಮಾರು 25 ನಿಮಿಷ ಕಾರಿನಲ್ಲೇ ಕುಳಿತಿದ್ದೆ. ಏನಾಗಿದೆ ಎಂಬುದನ್ನು ತಿಳಿಯುವುದಕ್ಕಾಗಿ ಹೊರಗೆ ಬಂದಿದ್ದೆ ಎಂದು ವಿವರಿಸಿದ್ದಾರೆ.

'ನಿನ್ನಿಂದ ಟ್ರಾಫಿಕ್ ಜ್ಯಾಮ್, ಗೆಟ್ ಔಟ್': ಸಚಿವರ ವಿರುದ್ಧ ಕಿಡಿಕಾರಿದ ಮಹಿಳೆ

'ಅಲ್ಲಿ ಸಿಲುಕಿದ್ದ ಒಂದೆರಡು ಬಸ್‌ಗಳು ಹೋಗಲು ಅವಕಾಶ ಮಾಡಿಕೊಟ್ಟರೆ, ಉಳಿದ ವಾಹನಗಳು ಕನಿಷ್ಠ ಯೂ-ಟರ್ನ್‌ ತೆಗೆದುಕೊಂಡು ಮುಖ್ಯರಸ್ತೆಗೆ ಸೇರಬಹುದು ಎಂದು ಅಲ್ಲಿದ್ದ ಪ್ರತಿಯೊಬ್ಬ ಪೊಲೀಸ್‌ ಸಿಬ್ಬಂದಿಯನ್ನು ಸುಮಾರು ಒಂದೂವರೆ ಗಂಟೆ ಕೇಳಿಕೊಂಡಿದ್ದೆ. ಆದರೆ, ಯಾವುದೇ ಪ್ರಯೋಜವಾಗಿರಲಿಲ್ಲ' ಎಂದು ಹೇಳಿದ್ದಾರೆ.

ಮುಂದುವರಿದು, ಸಚಿವ ಮಹಾಜನ್‌ ಅವರು ನಾನು ಹೇಳಿದ್ದನ್ನು ಕೇಳಿಸಿಕೊಳ್ಳಲು ಪ್ರಯತ್ನಿಸಿದ್ದರು. ಅವರ ಸೂಚನೆಯಂತೆ ಒಂದೆರಡು ಬಸ್‌ಗಳನ್ನು ತೆರವುಗೊಳಿಸಿದ ನಂತರ ಸಂಚಾರ ದಟ್ಟಣೆ ಕಡಿಮೆಯಾಯಿತು ಎಂದಿದ್ದಾರೆ.

'ನನ್ನ ಹೆಗಲು ಬಳಸಬೇಡಿ'

'ಒಂದು ಮುಖ್ಯವಾದ ವಿಚಾರ ಪ್ರಸ್ತಾಪಿಸಲು ಬಯಸುತ್ತೇನೆ. ಯಾರನ್ನೋ ಟೀಕಿಸುವುದಕ್ಕಾಗಿ, ದಯವಿಟ್ಟು ನನ್ನ ಹೆಗಲು ಬಳಸಿಕೊಳ್ಳಬೇಡಿ. ಏಕೆಂದರೆ, ಜನರ ವಿಚಾರಗಳ ಬಗ್ಗೆ ನಿರಾಸಕ್ತಿ ಹೊಂದಿರುವ, ಸಾಮಾನ್ಯರನ್ನು ಸಂಪೂರ್ಣ ಕಡೆಗಣಿಸುವ ಎಲ್ಲ ರಾಜಕೀಯ ಪಕ್ಷಗಳೂ ಒಂದೇ ರೀತಿಯ ಅಪರಾಧ ಮಾಡುತ್ತಿವೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತಮ್ಮ ಕುಟುಂಬದ ಎಂಟು ಮಂದಿ ಸಶಸ್ತ್ರ ಪಡೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದೂ ಹೇಳಿರುವ ಅವರು, 'ನಾನು ಸೇವೆ ಎಂಬ ಪದವನ್ನು ಒತ್ತಿ ಹೇಳಲು ಬಯಸುತ್ತೇನೆ. ಸಮವಸ್ತ್ರ ಧರಿಸಿದ್ದೀರಿ ಎಂದ ಮಾತ್ರಕ್ಕೆ, ಯಾರನ್ನಾದರೂ ಬೆದರಿಸಲು, ಅಗೌರವದಿಂದ ಕಾಣಲು ಸಾಧ್ಯವಿಲ್ಲ' ಎಂದು ಪ್ರತಿಪಾದಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani