Dailyhunt Logo
  • Light mode
    Follow system
    Dark mode
    • Play Story
    • App Story
ನೇಪಾಳ ಪ್ರವಾಹ | ಮೃತದೇಹ ಹೂಳಲು ನಿರ್ಧಾರ: ಗುರುತು ಪತ್ತೆ ಹಚ್ಚುವುದು ಹೇಗೆ?

ನೇಪಾಳ ಪ್ರವಾಹ | ಮೃತದೇಹ ಹೂಳಲು ನಿರ್ಧಾರ: ಗುರುತು ಪತ್ತೆ ಹಚ್ಚುವುದು ಹೇಗೆ?

ಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತದಿಂದ ವ್ಯಾಪಕ ಪ್ರಾಣಹಾನಿ ಸಂಭವಿಸಿದೆ. ಈ ನಡುವೆ ಗುರುತು ಸಿಗದ ಹಾಗೂ ವಾರಸುದಾರರಿಲ್ಲದ ಮೃತದೇಹಗಳು ಕೊಳೆಯುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮೃತದೇಹಗಳನ್ನು ಹೂಳಲು ಅಧಿಕಾರಿಗಳು ನಿರ್ಧರಿಸಿದ್ದು, ಭವಿಷ್ಯದಲ್ಲಿ ಸಂಬಂಧಿಕರು ಬಂದಾಗ ಅವುಗಳನ್ನು (ಮೃತದೇಹ) ಗುರುತಿಸಲು ವಿಶೇಷ ವ್ಯವಸ್ಥೆಯನ್ನು ರೂಪಿಸಲಾಗಿದೆ.

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ


ನೇಪಾಳ ಪ್ರವಾಹ | ಮೃತದೇಹ ಹೂಳಲು ನಿರ್ಧಾರ: ಗುರುತು ಪತ್ತೆ ಹಚ್ಚುವುದು ಹೇಗೆ?

ಒಂದು ಸಾಲಿನಲ್ಲಿನೇಪಾಳದ ಭೀಕರ ಪ್ರವಾಹದಲ್ಲಿ ಮೃತಪಟ್ಟವರ ಗುರುತು ಪತ್ತೆ ಹಚ್ಚಲು ಮತ್ತು ಸಾಂಕ್ರಾಮಿಕ ರೋಗ ತಡೆಯಲು ಅಧಿಕಾರಿಗಳು ಡಿಎನ್‌ಎ ಮಾದರಿ ಸಂಗ್ರಹಿಸಿ ಮೃತದೇಹಗಳನ್ನು ಗೌರವಯುತವಾಗಿ ಹೂಳಲು ನಿರ್ಧರಿಸಿದ್ದಾರೆ.

ಏನು? ಏಕೆ? ಹೇಗೆ?


ನೇಪಾಳ ಪ್ರವಾಹದಲ್ಲಿ ಮೃತಪಟ್ಟವರನ್ನು ಏಕೆ ಹೂಳಲಾಗುತ್ತಿದೆ?

ಮೃತದೇಹಗಳು ಕೊಳೆಯುತ್ತಿರುವುದರಿಂದ ದುರ್ವಾಸನೆ ಬೀರುತ್ತಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಈ ಆರೋಗ್ಯ ಸಮಸ್ಯೆಯನ್ನು ತಡೆಗಟ್ಟಲು ಅಧಿಕಾರಿಗಳು ಮೃತದೇಹಗಳನ್ನು ಹೂಳಲು ನಿರ್ಧರಿಸಿದ್ದಾರೆ.


ಭವಿಷ್ಯದಲ್ಲಿ ಸಂಬಂಧಿಕರು ಮೃತದೇಹವನ್ನು ಗುರುತಿಸುವುದು ಹೇಗೆ?

ಪ್ರತಿ ಮೃತದೇಹದ ಡಿಎನ್‌ಎ ಮಾದರಿಯನ್ನು ಸಂಗ್ರಹಿಸಿ, ಅದಕ್ಕೆ ಪ್ರತ್ಯೇಕ ಗುರುತಿನ ಸಂಖ್ಯೆ (ID) ಮತ್ತು ಲೊಕೇಶನ್ ಟ್ಯಾಗ್ ನೀಡಲಾಗಿದೆ. ನಂತರದಲ್ಲಿ ಸಂಬಂಧಿಕರು ಡಿಎನ್‌ಎ ನೀಡಿದಾಗ, ಅದರ ಆಧಾರದ ಮೇಲೆ ಮೃತದೇಹವನ್ನು ಗುರುತಿಸಿ ಹಸ್ತಾಂತರಿಸಲಾಗುತ್ತದೆ.


ಮೃತದೇಹಗಳನ್ನು ಯಾವ ವೈಜ್ಞಾನಿಕ ಕ್ರಮದಲ್ಲಿ ಹೂಳಲಾಗುತ್ತಿದೆ?

ಮೃತದೇಹಗಳನ್ನು 1.5 ಮೀಟರ್ ಆಳದ ಗುಂಡಿಗಳಲ್ಲಿ, ಒಂದಕ್ಕೊಂದು 40 ಸೆಂ.ಮೀ ಅಂತರದಲ್ಲಿ ಹೂಳಲಾಗುತ್ತಿದೆ. ಸಮಾಧಿಯ ಮೇಲೆ ಐಡಿ ಫಲಕಗಳನ್ನು ಅಳವಡಿಸಿ, ಪೂರ್ತಿ ಪ್ರಕ್ರಿಯೆಯನ್ನು ವಿಡಿಯೋ ಮತ್ತು ಫೋಟೋಗಳ ಮೂಲಕ ಜಿಯೋ-ಟ್ಯಾಗಿಂಗ್ ಮಾಡಲಾಗುತ್ತಿದೆ.


ಕುಟುಂಬಸ್ಥರು ಮೃತದೇಹವನ್ನು ಪಡೆಯಲು ಅನುಸರಿಸಬೇಕಾದ ಪ್ರಕ್ರಿಯೆ ಏನು?

ಕಾಣೆಯಾದವರ ಸಂಬಂಧಿಕರು ಆಸ್ಪತ್ರೆಗಳಲ್ಲಿ ತಮ್ಮ ಡಿಎನ್‌ಎ ಮಾದರಿಯನ್ನು ನೀಡಬೇಕು. ಆರೋಗ್ಯ ಇಲಾಖೆಯು ಈ ಡಿಎನ್‌ಎ ಅನ್ನು ಸಂಗ್ರಹಿಸಿರುವ ಮಾದರಿಗಳೊಂದಿಗೆ ತಾಳೆ ಮಾಡಿ, ಹೊಂದಾಣಿಕೆಯಾದಲ್ಲಿ ಮೃತದೇಹವನ್ನು ಹಸ್ತಾಂತರಿಸುತ್ತದೆ.


ಪ್ರವಾಹದಲ್ಲಿ ಮೃತಪಟ್ಟವರ ಮತ್ತು ನಾಪತ್ತೆಯಾದವರ ಸಂಖ್ಯೆ ಎಷ್ಟು?

ಈ ದುರಂತದಲ್ಲಿ ಸುಮಾರು 750ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಮತ್ತು 3,000ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಈ ಪೈಕಿ 320 ಭಾರತೀಯರು ಸಹ ನಾಪತ್ತೆಯಾಗಿರುವುದು ಕಳವಳಕಾರಿ ವಿಷಯವಾಗಿದೆ.

ಪ್ರಮುಖ ಅಂಕಿಅಂಶಗಳು

750ಒಟ್ಟು ಸಾವುಗಳು233ಚಿತ್ವಾನ್‌ನಲ್ಲಿ ಪತ್ತೆಯಾದ ಮೃತದೇಹಗಳು3,000ನಾಪತ್ತೆಯಾದವರ ಸಂಖ್ಯೆ320ನಾಪತ್ತೆಯಾದ ಭಾರತೀಯರು1.5 ಮೀಟರ್ಹೂಳುವ ಗುಂಡಿಯ ಆಳ

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಮೃತದೇಹಗಳ ರಾಶಿ:

ಬುಧವಾರ ಬೆಳಿಗ್ಗೆ ಸಂಭವಿಸಿದ ಭೀಕರ ದುರಂತದಲ್ಲಿ ಈ ವರೆಗೆ ಸುಮಾರು 750ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಆ ಪೈಕಿ ಈವರೆಗೆ ಕನಿಷ್ಠ 734ಕ್ಕೂ ಅಧಿಕ ಮೃತದೇಹಗಳನ್ನು ಅವಶೇಷಗಳಡಿಯಿಂದ ಹೊರತೆಗೆಯಲಾಗಿದೆ.

ಚಿತ್ವಾನ್‌ನಲ್ಲಿ ಅತಿ ಹೆಚ್ಚು ಮೃತದೇಹಗಳು ಪತ್ತೆ:

ಭಾರತದ ಗಡಿಗೆ ಹೊಂದಿಕೊಂಡಿರುವ ದಕ್ಷಿಣ ನೇಪಾಳದ ಚಿತ್ವಾನ್ ಒಂದರಲ್ಲೇ ಅತಿ ಹೆಚ್ಚು ಅಂದರೆ 233 ಮೃತದೇಹಗಳು ಪತ್ತೆಯಾಗಿವೆ. ಆಸ್ಪತ್ರೆಗಳಲ್ಲಿ ಮೃತದೇಹಗಳನ್ನು ಇಡಲು ಜಾಗವಿಲ್ಲದೆ, ತಾತ್ಕಾಲಿಕವಾಗಿ ಶೀತಲೀಕರಣ ವ್ಯವಸ್ಥೆ ಮಾಡಲಾಗಿದೆ.

ಸಾಂಕ್ರಾಮಿಕ ರೋಗದ ಭೀತಿ:

ಮೃತದೇಹಗಳು ಕೊಳೆಯಲು ಆರಂಭಿಸಿದ್ದು, ದುರ್ವಾಸನೆ ಬೀರುತ್ತಿವೆ. ಇದರಿಂದ ಸೋಂಕು ಹರಡುವ ಸಾಧ್ಯತೆಯಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಬೇರೆ ದಾರಿಯಿಲ್ಲದೆ ಮೃತದೇಹಗಳನ್ನು ಹೂಳಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಡಿಎನ್‌ಎ ಮಾದರಿ ಸಂಗ್ರಹ, ಪ್ರತ್ಯೇಕ ಗುರುತಿನ ಸಂಖ್ಯೆ

ಡಿಎನ್‌ಎ ಪರೀಕ್ಷೆ: ಪ್ರತಿಯೊಂದು ಮೃತದೇಹವನ್ನು ಹೂಳುವ ಮುನ್ನವೇ ಅಧಿಕಾರಿಗಳು ಕಡ್ಡಾಯವಾಗಿ ಅವುಗಳ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸುತ್ತಿದ್ದಾರೆ.

ವಿಶಿಷ್ಟ ಐಡಿ ಮತ್ತು ಲೊಕೇಶನ್ ಟ್ಯಾಗ್: ಪ್ರತಿ ಮೃತದೇಹಕ್ಕೂ ಒಂದು ಪ್ರತ್ಯೇಕ ಗುರುತಿನ ಸಂಖ್ಯೆ ಹಾಗೂ ಆ ಶವ ಪತ್ತೆಯಾದ ಮತ್ತು ಹೂಳಲಾಗುವ ಸ್ಥಳದ 'ಲೊಕೇಶನ್ ಟ್ಯಾಗ್' ಅನ್ನು ನೀಡಲಾಗುತ್ತದೆ.

ವೈಜ್ಞಾನಿಕವಾಗಿ ದಫನ್

1.5 ಮೀಟರ್ ಆಳದ ಗುಂಡಿ: ಭವಿಷ್ಯದಲ್ಲಿ ಸಂಬಂಧಿಕರು ಬಂದಾಗ ಮೃತದೇಹವನ್ನು ಸುಲಭವಾಗಿ ಮತ್ತು ಹಾನಿಯಾಗದಂತೆ ಹೊರತೆಗೆಯಲು ಅನುಕೂಲವಾಗುವಂತೆ 1.5 ಮೀಟರ್ ಆಳದ ಗುಂಡಿಗಳನ್ನು ತೋಡಲಾಗುತ್ತಿದೆ.

40 ಸೆಂ.ಮೀ ಅಂತರ: ಹೂಳುವ ಒಂದು ಮೃತದೇಹಕ್ಕೂ ಮತ್ತೊಂದಕ್ಕೂ ಕಡ್ಡಾಯವಾಗಿ 40 ಸೆಂ.ಮೀ ಅಂತರವನ್ನು ಕಾಯ್ದುಕೊಳ್ಳಲಾಗುತ್ತಿದೆ. ಇದರಿಂದ ಡಿಎನ್‌ಎ ಹೊಂದಿಕೆಯಾದಾಗ ನಿರ್ದಿಷ್ಟ ಮೃತದೇಹವನ್ನು ಮಾತ್ರ ಹೊರತೆಗೆಯಲು ಸಾಧ್ಯವಾಗುತ್ತದೆ.

ಸಿಮೆಂಟ್ ಫಲಕ ಹಾಗೂ ಜಿಯೋ-ಟ್ಯಾಗಿಂಗ್: ಮೃತದೇಹಗಳನ್ನು ಪ್ರತ್ಯೇಕ ಚೀಲಗಳಲ್ಲಿ ಹಾಕಿ ಹೂಳಿದ ನಂತರ, ಪ್ರತಿಯೊಂದು ಸಮಾಧಿಯ ಮೇಲೆ ಐಡಿ ಸಂಖ್ಯೆ ನಮೂದಿಸಿರುವ ಸಿಮೆಂಟ್ ಫಲಕ ಮತ್ತು ಸೈನ್ ಬೋರ್ಡ್ ನಿರ್ಮಿಸಲಾಗುತ್ತಿದೆ. ಜತೆಗೆ ದಫನ್ ಮಾಡುವ ಇಡೀ ಪ್ರಕ್ರಿಯೆಯನ್ನು ವಿಡಿಯೊ ಮತ್ತು ಫೋಟೋಗಳ ಮೂಲಕ ದಾಖಲಿಸಿ, ಜಿಯೋ-ಟ್ಯಾಗಿಂಗ್ ಮಾಡಲಾಗುತ್ತಿದೆ.

ನೇಪಾಳ ಪ್ರವಾಹದ ವೇಳೆ ಪವಾಡ ಸದೃಶದಂತೆ ಪಾರಾಗಿ ತಾಯ್ನಾಡಿಗೆ ಮರಳಿದ ಕೇರಳಿಗರು

ಭವಿಷ್ಯದಲ್ಲಿ ಕುಟುಂಬಸ್ಥರು ಮೃತದೇಹವನ್ನು ಪಡೆಯುವುದು ಹೇಗೆ?

ಡಿಎನ್‌ಎ ಮಾದರಿ ಸಲ್ಲಿಕೆ: ತಮ್ಮ ಕುಟುಂಬದವರು ಕಾಣೆಯಾಗಿದ್ದಾರೆ ಎಂದು ಹುಡುಕಿಕೊಂಡು ಬರುವ ಸಂಬಂಧಿಕರು ದೇಶದ ವಿವಿಧ ಆಸ್ಪತ್ರೆಗಳಲ್ಲಿ ತಮ್ಮ ಡಿಎನ್‌ಎ ಮಾದರಿಯನ್ನು ನೀಡಬೇಕಾಗುತ್ತದೆ.

ಆರೋಗ್ಯ ಇಲಾಖೆಯಿಂದ ತಾಳೆ: ನೇಪಾಳದ ಆರೋಗ್ಯ ಇಲಾಖೆಯು ಸಂಬಂಧಿಕರ ಡಿಎನ್‌ಎ ಅನ್ನು ಈಗಾಗಲೇ ಸಂಗ್ರಹಿಸಿಡಲಾದ ಮೃತದೇಹಗಳ ಡಿಎನ್‌ಎ ಮಾದರಿಗಳ ಜೊತೆ ತಾಳೆ ಮಾಡುತ್ತದೆ.

ಸಮಾಧಿಯಿಂದ ಹೊರತೆಗೆದು ಹಸ್ತಾಂತರ: ಡಿಎನ್‌ಎ ತಾಳೆಯಾದ ತಕ್ಷಣ, ಆ ಮೃತದೇಹದ ಐಡಿ ಸಂಖ್ಯೆ ಮತ್ತು ಜಿಯೋ-ಟ್ಯಾಗ್ ಆಧಾರದ ಮೇಲೆ ಪೊಲೀಸರು ನಿರ್ದಿಷ್ಟ ಸಮಾಧಿಯನ್ನು ಗುರುತಿಸುತ್ತಾರೆ. ನಂತರ ಮೃತದೇಹವನ್ನು ನಿಯಮಾನುಸಾರ ಹೊರತೆಗೆದು ಗೌರವಪೂರ್ವಕವಾಗಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ.

ಪೊಲೀಸರು, ಸಾರ್ವಜನಿಕರ ಅನುಕೂಲಕ್ಕಾಗಿ ಗುರುತು ಸಿಗದ ಹಾಗೂ ವಾರಸುದಾರರಿಲ್ಲದ ಮೃತದೇಹಗಳ ಸಂಪೂರ್ಣ ವಿವರಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

750ಕ್ಕೂ ಅಧಿಕ ಸಾವು:

ನೇಪಾಳ ಮತ್ತು ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 750ಕ್ಕೆ ಏರಿಕೆಯಾಗಿದೆ. 320 ಭಾರತೀಯರು ಸೇರಿದಂತೆ 3,000ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಆಧಾರ: ಎನ್‌ಡಿಟಿವಿ

ನೇಪಾಳ ಪ್ರವಾಹದ ವೇಳೆ ಪವಾಡ ಸದೃಶದಂತೆ ಪಾರಾಗಿ ತಾಯ್ನಾಡಿಗೆ ಮರಳಿದ ಕೇರಳಿಗರು
Dailyhunt
Disclaimer: This content has not been generated, created or edited by Dailyhunt. Publisher: Prajavani