ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸಿಲುಕಿದ್ದ ಬಾಲಕನೊಬ್ಬನನ್ನು ಸಾಹಸಮಯವಾಗಿ ರಕ್ಷಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿಡಾಡುತ್ತಿದೆ.
ಪ್ರವಾಹದ ನೀರಿನಿಂದ ಸುತ್ತವರಿದಿದ್ದ ಮನೆಯ ಛಾವಣಿಯ ಮೇಲೆ ನಿಂತಿದ್ದ ಬಾಲಕ, ರಕ್ಷಣಾ ಹೆಲಿಕಾಪ್ಟರ್‌ನ ಗಮನ ಸೆಳೆಯಲು ತಾನು ಧರಿಸಿದ್ದ ಟಿ-ಶರ್ಟ್ ಅನ್ನು ಬಿಚ್ಚಿ ಬೀಸಿದ್ದಾನೆ (ಪ್ರದರ್ಶಿಸಿದ್ದಾನೆ).
ಬಾಲಕ ನೀಡಿದ ಸಂಕೇತವನ್ನು ಗಮನಿಸಿದ ನೇಪಾಳ ಸೇನೆಯ ಹೆಲಿಕಾಪ್ಟರ್, ತಕ್ಷಣವೇ ಮನೆಯ ಮೇಲ್ಛಾವಣಿಯ ತೀರಾ ಸಮೀಪಕ್ಕೆ ಬಂದಿದೆ. ಹೆಲಿಕಾಪ್ಟರ್ ಹತ್ತಿರಕ್ಕೆ ಬರುತ್ತಿದ್ದಂತೆ, ಬಾಲಕ ಅದರ ಲ್ಯಾಂಡಿಂಗ್ ಸ್ಕಿಡ್ ಅನ್ನು ಹಿಡಿದುಕೊಂಡಿದ್ದಾನೆ. ಆ ವೇಳೆ ಹೆಲಿಕಾಪ್ಟರ್‌ನ ಬಾಗಿಲಿನಲ್ಲಿ ಕುಳಿತಿದ್ದ ಸೇನಾ ಸಿಬ್ಬಂದಿಯೊಬ್ಬರು ತಕ್ಷಣವೇ ಕೈಚಾಚಿ ಬಾಲಕನ ಕೈಹಿಡಿದು ಮೇಲಕ್ಕೆ ಎಳೆದುಕೊಂಡಿದ್ದಾರೆ.
ಈ ತೀವ್ರ ಕುತೂಹಲ ಹಾಗೂ ಆತಂಕದ ರಕ್ಷಣಾ ಕಾರ್ಯಾಚರಣೆಯನ್ನು ವೀಕ್ಷಿಸುತ್ತಿದ್ದ ಜನಸ್ತೋಮ, ಬಾಲಕ ಕ್ಷೇಮವಾಗಿ ಹೆಲಿಕಾಪ್ಟರ್ ಏರುತ್ತಿದ್ದಂತೆ ಚಪ್ಪಾಳೆ ತಟ್ಟಿ ಆನಂದಿಸಿದ್ದಾರೆ.
ರಕ್ಷಣಾ ಕಾರ್ಯಚರಣೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ನೇಪಾಳ ಸೇನೆಯ ಪೈಲಟ್‌ಗಳ ಧೈರ್ಯ ಮತ್ತು ಸಾಹಸವನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ.
ಆಧಾರ: ಎನ್‌ಡಿಟಿವಿ
ನೇಪಾಳ ಪ್ರವಾಹ | ಅವಶೇಶಗಳಡಿ 3 ದಿನ ಜೀವನ್ಮರಣ ಹೋರಾಟ: 6 ವರ್ಷದ ಬಾಲಕಿಯ ರಕ್ಷಣೆ!
