ಮಳೆ ಬಂದಾಗ ಹಳ್ಳದ ಕಡೆಗೆ ನೀರು ಹರಿಯುವುದು ಪ್ರಕೃತಿದತ್ತ ನಿಯಮ. ಮಳೆ ಬಂದರೆ ಜಲಮೂಲಗಳಿಗೆ ಹಬ್ಬ, ಎಲ್ಲೆಲ್ಲೋ ಇರುವ ಹಳ್ಳ-ಕೊಳ್ಳಗಳಿಂದ ನೀರು ತಂತಾನೇ ಹರಿಯುತ್ತದೆ. ಆದರೆ, ಇಲ್ಲೊಂದು ಕೆರೆ ವಿಭಿನ್ನವಾದ ಸ್ಥಿತಿಯಲ್ಲಿದೆ. ಅಭಿವೃದ್ಧಿಗಾಗ ಕೋಟ್ಯಂತರ ರೂಪಾಯಿಗಳನ್ನು ವೆಚ್ಚ ಮಾಡಲಾಗಿದ್ದರೂ, 'ಶ್ರೀಗಂಧ' ಬೀರುವ ಈ ಕೆರೆಗೆ ನೀರು ಹರಿಯಲು 'ಪವರ್' ಬೇಕೇಬೇಕು.
ಜೊತೆಗೆ 'ಬೋರ್‌ವೆಲ್'ನಲ್ಲೂ ನೀರಿರಬೇಕು...
ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಪ್ರಕೃತಿ ಮಡಿಲು: ಶ್ರೀಗಂಧ ಪಸರಿಸಲು 'ಪವರ್' ಬೇಕೇಬೇಕು...!
ಒಂದು ಸಾಲಿನಲ್ಲಿಅಭಿವೃದ್ಧಿಯ ಹೆಸರಿನಲ್ಲಿ ಕಾಂಕ್ರೀಟ್ ಕಾಡಾಗಿ ಬದಲಾಗಿರುವ ಶ್ರೀಗಂಧ ಕಾವಲು ಕೆರೆಯು, ನೈಸರ್ಗಿಕ ನೆಲೆ ಕಳೆದುಕೊಂಡು ಕೃತಕ ನೀರಿನ ಪೂರೈಕೆಯನ್ನು ಅವಲಂಬಿಸುವ ದುಸ್ಥಿತಿಗೆ ತಲುಪಿದೆ.
ಪ್ರಮುಖ ಪ್ರಶ್ನೋತ್ತರ
ಶ್ರೀಗಂಧ ಕಾವಲು ಕೆರೆಯ ಪ್ರಸ್ತುತ ಸ್ಥಿತಿ ಹೇಗಿದೆ?
ಕೋಟಿಗಟ್ಟಲೆ ಹಣ ಖರ್ಚು ಮಾಡಿ ಅಭಿವೃದ್ಧಿಪಡಿಸಿದ್ದರೂ ಸಹ, ಕೆರೆಯ ಮೂಲ ಒಳಹರಿವು ಮುಚ್ಚಿಹೋಗಿರುವುದರಿಂದ ನೀರು ನಿಲ್ಲದಂತಾಗಿದೆ.
ಕೆರೆಗೆ ನೀರು ತುಂಬಿಸಲು ಅಧಿಕಾರಿಗಳು ಕೈಗೊಂಡಿರುವ ಕ್ರಮವೇನು?
ನೈಸರ್ಗಿಕ ಮೂಲದ ಬದಲು ಕೆರೆಯ ಅಂಗಳದಲ್ಲಿ ಬೋರ್‌ವೆಲ್‌ಗಳನ್ನು ಕೊರೆದು, ವಿದ್ಯುತ್ ಶಕ್ತಿಯ ಮೂಲಕ ನೀರನ್ನು ಪಂಪ್ ಮಾಡಿ ತುಂಬಿಸಲಾಗುತ್ತಿದೆ.
ಕೆರೆಯ ಅಭಿವೃದ್ಧಿಯಲ್ಲಿ ಆಗಿರುವ ಲೋಪಗಳೇನು?
ಅಭಿವೃದ್ಧಿಯ ಹೆಸರಿನಲ್ಲಿ ಕಾಂಕ್ರೀಟ್ ವಾಕಿಂಗ್ ಟ್ರ್ಯಾಕ್, ಜಿಮ್ ಮತ್ತು ಕಟ್ಟಡಗಳನ್ನು ನಿರ್ಮಿಸಿರುವುದರಿಂದ ಕೆರೆ ತನ್ನ ಮೂಲ ಜಲಮೂಲ ಸ್ವರೂಪವನ್ನೇ ಕಳೆದುಕೊಂಡಿದೆ.
ಸ್ಥಳೀಯರು ಮತ್ತು ಅಧಿಕಾರಿಗಳ ನಡುವಿನ ಭಿನ್ನಾಭಿಪ್ರಾಯವೇನು?
ಜಲಮೂಲವನ್ನು ಉಳಿಸಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದರೆ, ಆಡಳಿತ ವರ್ಗವು ಇದನ್ನು ಹೈಟೆಕ್ ಪಾರ್ಕ್‌ನಂತೆ ರೂಪಿಸಲು ಮುಂದಾಗಿದೆ.
ಕೆರೆಯ ಒತ್ತುವರಿ ಮತ್ತು ನಿರ್ಮಾಣ ಕಾಮಗಾರಿಗಳ ಪಾತ್ರವೇನು?
ಟ್ರಸ್ಟ್‌ಗಳ ಒತ್ತುವರಿ ಮತ್ತು ಕೆರೆಯ ಅಂಗಳದಲ್ಲಿ ಶಾಲೆ, ನೀರಿನ ಘಟಕಗಳ ನಿರ್ಮಾಣದಿಂದ ಕೆರೆಯ ವಿಸ್ತೀರ್ಣ ಗಣನೀಯವಾಗಿ ಕಡಿಮೆಯಾಗಿದೆ.
ಪ್ರಮುಖ ಅಂಕಿಅಂಶಗಳು
₹25 ಕೋಟಿಕೆರೆ ಅಭಿವೃದ್ಧಿಗೆ ವ್ಯಯಿಸಿದ ಮೊತ್ತ6 ಎಕರೆ 33 ಗುಂಟೆಕೆರೆಯ ಒಟ್ಟು ವಿಸ್ತೀರ್ಣ2021ಅಭಿವೃದ್ಧಿ ಯೋಜನೆ ಪ್ರಾರಂಭವಾದ ವರ್ಷ
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
₹25 ಕೋಟಿಗೂ ಹೆಚ್ಚು ವೆಚ್ಚ ಮಾಡಿ ಈ ಕೆರೆಯ ಅಭಿವೃದ್ಧಿ ಮಾಡಲಾಗಿದೆ. ನಾಲ್ಕಾರು ವರ್ಷದಿಂದ ಅಭಿವೃದ್ಧಿ ಹೊಂದುತ್ತಿದ್ದರೂ, ಕೆರೆಗೆ ಮೂಲವಾಗಿ ಬೇಕಿರುವ ನೀರಿನ ಹರಿವಿನ ಕಾಲುವೆಯನ್ನೇ ಮತ್ತೊಂದಡೆ ತಿರುಗಿಸಲಾಗಿದೆ. ಉಳಿದಿರುವ ಕಾವಲ್‌ನಿಂದ ನೀರು ಬರಲು ಅಡ್ಡಲಾಗಿ ಗೋಡೆ ಕಟ್ಟಲಾಗಿದೆ. ಹೀಗಾಗಿ, ಇರುವ ಒಂದು ಒಳಹರಿವು ಕೆರೆಯ ಆಳಕ್ಕಿಂತ ಇನ್ನೂ ಕೆಳಭಾಗದಲ್ಲಿರುವುದರಿಂದ ಎಷ್ಟೇ ಮಳೆ ಮಳೆಬಂದರೂ ನೀರು ಕೆರೆಗೆ ಹರಿವುದೇ ಇಲ್ಲ. ಇದಕ್ಕಾಗಿ ಅಧಿಕಾರಿಗಳು ಕಂಡುಕೊಂಡಿರುವ ಮಾರ್ಗವೆಂದರೆ, ಬೋರ್‌ವೆಲ್. ಕೆರೆಯ ಅಂಗಳದಲ್ಲಿ ನಾಲ್ಕಾರು ಕೊಳವೆಬಾವಿಗಳನ್ನು ಕೊರೆದು ಅದರಲ್ಲಿ ಲಭ್ಯವಾಗುವ ನೀರನ್ನು 'ಪವರ್' ಬಳಸಿಕೊಂಡು (ಅದು ಕಂಬದಲ್ಲಿ ಇದ್ದಾಗ) ನೀರನ್ನು ಹರಿಸುತ್ತಿದ್ದಾರೆ. ಕೆರೆಯ ಒಡಲು ತುಂಬಿ, ನೂರಾರು ಕೊಳವೆಬಾವಿಗಳಿಗೆ ಆಸರೆಯಾಗಬೇಕಿದ್ದ ಕೆರೆ, ತನ್ನ ಸ್ವರೂಪವನ್ನೇ ಕಳೆದುಕೊಂಡಿದೆ. 'ಸೂರ್ಯನಿಗೇ ಟಾರ್ಚಾ....' ಮಾತನ್ನು ಇಲ್ಲಿ ಬದಲಿಸಿ, 'ಕೆರೆಗೇ ಬೋರ್ ನೀರಾ...' ಎನ್ನಬಹುದೇನೋ...
ಪ್ರಕೃತಿ ಮಡಿಲು: ಕೆರೆಗಳ ಅಂಗಳದಲ್ಲಿ 'ಹಸಿರು ಸುರಂಗ'PV Web Exclusive-ಪ್ರಕೃತಿ ಮಡಿಲು| ಜಲಪಾತಗಳ ನೀರು ಕುಡಿಯದಿರಿ... ಅದು ಅಶುದ್ಧ!PV Web Exclusive | ಪ್ರಕೃತಿ ಮಡಿಲು: ಬಯಲು ಸೀಮೆಯಲ್ಲಿ ಮಲೆನಾಡ ವೈಭವPV Web Exclusive-ಪ್ರಕೃತಿ ಮಡಿಲು| ಹಳ್ಳದಲ್ಲಲ್ಲ, ಹೃದಯದಲ್ಲಿ ನದಿ ಹರಿಯಲಿ!ಈ ಕೆರೆಯ ಹೆಸರು 'ಶ್ರೀಗಂಧ ಕಾವಲು ಕೆರೆ'. ಒಂದು ಕಾಲದಲ್ಲಿ ಶ್ರೀಗಂಧದ ಮರಗಳೇ ಅತಿಹೆಚ್ಚಿದ ಪ್ರದೇಶವಾಗಿ, ಗಂಧದ ಪರಿಮಳವನ್ನು ಬೀರುತ್ತಿದ್ದ ಈ ಪ್ರದೇಶದಲ್ಲಿದ್ದ ದೊಡ್ಡ ಹಳ್ಳವನ್ನು 'ಶ್ರೀಗಂಧದ ಕೆರೆ' ಎಂದೇ ಕರೆಯಲಾಯಿತು. ಅಂತಹ ಕೆರೆ, ಕಳೆದ ದಶಕದಲ್ಲಿ ಅಳಿವಿನ ಅಂಚಿಗೆ ಸರಿದಿತ್ತು. ಸ್ಥಳೀಯರ ಹೋರಾಟದ ಫಲವಾಗಿ 'ಅಭಿವೃದ್ಧಿ'ಯ ಟ್ಯಾಗ್‌ಲೈನ್ ಕಂಡುಕೊಂಡ ಕೆರೆ, ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿ, ಸಣ್ಣ ಕೊಳ್ಳವಾಗಿದೆ. ಕೆರೆಯ ಅಭಿವೃದ್ಧಿಯ ಉದ್ದೇಶ ಕೆರೆಯನ್ನು ಕೆರೆಯನ್ನಾಗಿ ಉಳಿಸಿಕೊಳ್ಳಬೇಕೆಂಬ ಯಾವ ಆಶಯವನ್ನೂ ಹೊಂದಿಲ್ಲ. ಹೀಗಾಗಿ, ಅಭಿವೃದ್ಧಿಯ ಹೆಸರಿನಲ್ಲಿ ಹೈಟೆಕ್ ಪಾರ್ಕ್ ಅನ್ನಾಗಿ ಬಿಬಿಎಂಪಿಯವರು ಸೃಷ್ಟಿಸಿದ್ದಾರೆ.
ಬೆಂಗಳೂರು ದಕ್ಷಿಣ ತಾಲ್ಲೂಕು ಯಶವಂತಪುರ ಹೋಬಳಿ ಶ್ರೀಗಂಧ ಕಾವಲು ಗ್ರಾಮದ ಸರ್ವೆ ನಂ. 15ರಲ್ಲಿ 6 ಎಕರೆ 33 ಗುಂಟೆ ಪ್ರದೇಶದಲ್ಲಿ ಶ್ರೀಗಂಧ ಕಾವಲು ಕೆರೆ ಇದೆ. ಹೆಸರಿಗಷ್ಟೇ ಇಷ್ಟೊಂದು ದೊಡ್ಡ ಪ್ರದೇಶ. ಈಗ ನೀರು ನಿಲ್ಲಲು ಉಳಿದಿರುವುದು ಒಂದೆರಡು ಎಕರೆ ಅಷ್ಟೇ. ಬಿಬಿಎಂಪಿ ಅಧಿಕಾರಿಗಳು ಮನಸ್ಸು ಮಾಡಿದಾಗ, ಕೆರೆ ಕಾಯುತ್ತಿರುವ 'ಹೋಂಗಾರ್ಡ್'ಗೆ ಕಾಳಜಿ ಒಮ್ಮಲೆ ಉಕ್ಕಿ ಬಂದಾಗ ಮಾತ್ರ ಬೋರ್‌ವೆಲ್‌ನ ಪವರ್ ಬಟನ್ ಆನ್ ಆಗುತ್ತದೆ. ಆಗ ಒಂದಷ್ಟು ದಿನ ನೀರು ಕೆರೆಯ ಒಡಲಲ್ಲಿರುತ್ತದೆ. ಅದು ಬಿಟ್ಟರೆ ಉಳಿದ ಸಮಯದಲ್ಲಿ ಒಡಲು ಬರಿದು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಿದ್ದಾಗ ರಾಜರಾಜೇಶ್ವರಿನಗರ ವಲಯದ ವತಿಯಿಂದ ಆರಂಭವಾಗಿದ್ದ ಅಭಿವೃದ್ಧಿಯ ಪಥ ಇನ್ನೂ ಸಾಗುತ್ತಲೇ ಇದ್ದು, ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಾದ ಮೇಲೂ ಕೆರೆ 'ಅಭಿವೃದ್ಧಿ ಕಾಮಗಾರಿ'ಗಳ ಹೆಜ್ಜೆಗಳು ಇನ್ನೂ ದಾಪುಗಾಲಿನಲ್ಲೇ ಇವೆ. ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಭಾಗದಿಂದ 2021ರಲ್ಲಿ ಆರಂಭವಾದ ಶ್ರೀಗಂಧ ಕಾವಲು ಕೆರೆಯನ್ನು ಅಭಿವೃದ್ಧಿ ಕಾಮಗಾರಿಗಳು ಇಂದಿಗೂ ನಡೆಯುತ್ತಲೇ ಇವೆ. ಘನತ್ಯಾಜ್ಯ ನಿರ್ವಹಣೆ ವಿಭಾಗಕ್ಕೂ (ಎಸ್‌ಡಬ್ಲುಎಂ) ಕೆರೆ ಅಭಿವೃದ್ಧಿಗೂ ಏನು ಸಂಬಂಧ ಎಂಬ ಅನುಮಾನಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲವಾದರೂ, 'ಶುಭ್ರ ಬೆಂಗಳೂರು' ಯೋಜನೆಯಡಿ ಹಣವನ್ನು ವೆಚ್ಚ ಮಾಡಲು ಈ ಕೆರೆಯನ್ನು ಬಿಬಿಎಂಪಿ ಅಧಿಕಾರಿಗಳು ಆರಿಸಿಕೊಂಡಿದ್ದಾರೆ ಎಂಬುದಂತೂ ಅತ್ಯಂತ ಸ್ಪಷ್ಟ.
ಅಮ್ಮ ಭಗವಾನ್ ಸೇವಾ ಸಮಿತಿ ಟ್ರಸ್ಟ್ 7 ಗುಂಟೆ ಒತ್ತುವರಿ ಮಾಡಿಕೊಂಡಿದ್ದು, ರಸ್ತೆಗಾಗಿ ಸುಮಾರು 3 ಗುಂಟೆ ಒತ್ತುವರಿಯಾಗಿದೆ. ಕೆರೆ ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ಒತ್ತುವರಿ ತೆರವು ಮಾಡಿಲ್ಲ. ಬದಲಿಗೆ, ಶಾಲೆ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಕೆರೆ ಅಂಗಳದಲ್ಲೇ ಆಗಿದೆ. ಕೆರೆಗೆ ಒಳಹರಿವಾದ ವೃಷಭಾವತಿ ಕಣಿವೆಯ ಕಾಲುವೆ ಸಮಿತಿ ಟ್ರಸ್ಟ್ ಕಟ್ಟಡ ಹಾಗೂ ನಿರ್ಮಾಣವಾಗುತ್ತಿರುವ ಶಾಲೆಯ ಹೊರಭಾಗದಲ್ಲಿ ಹಾದುಹೋಗುವಂತೆ ಮಾಡಲಾಗಿದೆ. ಅಭಿವೃದ್ದಿಗೊಂಡಿರುವ ಶ್ರೀಗಂಧ ಕಾವಲು ಕೆರೆಗೆ ಪಕ್ಕದಲ್ಲಿರುವ ಜಮನ್ ಲಾಲ್ ಬಜಾಜ್ ಸೇವಾ ಟ್ರಸ್ಟ್‌ಗೆ ಸೇರಿದ ಜಮೀನಿನಿಂದ ನೀರು ಹರಿದುಬರಬೇಕು. ಆದರೆ, ಅಲ್ಲಿ ಕಾಲುವೆ ಇಲ್ಲ. ಇರುವ ಹಳ್ಳ ಕೆರೆಯ ತಳಭಾಗಕ್ಕಿಂತ ಇನ್ನೂ ಆಳದಲ್ಲಿದೆ. ಅದನ್ನೇ ಒಳಹರಿವು ಎಂದು 'ಶುಭ್ರ ಬೆಂಗಳೂರು' ಯೋಜನೆಯಡಿ ಎಸ್‌ಡಬ್ಲುಎಂ ಕೆರೆಯನ್ನು ಅಭಿವೃದ್ಧಿಪಡಿಸಿದೆ. 'ನಾಲ್ಕು ಬೋರ್‌ವೆಲ್‌ಗಳಿವೆ, ಅವುಗಳಿಂದಲೇ ಕೆರೆ ತುಂಬಿಸುತ್ತೇವೆ' ಎನ್ನುತ್ತಾರೆ ಗುತ್ತಿಗೆದಾರರು.
PV Web Exclusive | ಪ್ರಕೃತಿ ಮಡಿಲು | ಟೀಚರ್ ಹೇಳಿದರಷ್ಟೇ ಕೇಳೋದು... !ಶ್ರೀಗಂಧದ ಕಾವಲು ಕೆರೆಯೇ ಅಲ್ಲ, ಮೈದಾನ ಎಂದು ದಾಖಲಿಸಲು ಪ್ರಯತ್ನಿಸಿದ್ದರು. ಸ್ಥಳೀಯರು ಹೋರಾಟ ಮಾಡಿ ಕೆರೆ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಆದ್ದರಿಂದ ಕೆರೆಯ ಸ್ವಲ್ಪ ಪ್ರದೇಶ ಇನ್ನೂ ಉಳಿದುಕೊಂಡಿದೆ. ನೀರು ಹಿಡಿದಿಡುವ ಸಾಮರ್ಥ್ಯ ಕಡಿಮೆಯಾಗಿದೆ. ಸೌಂದರ್ಯೀಕರಣಕ್ಕೆ ಹೆಚ್ಚಿನ ಒತ್ತು ನೀಡಿ, 'ಹೈಟೆಕ್ ಪಾರ್ಕ್'ನಂತೆ ಮಾಡಲಾಗಿದ್ದು, ಕೆರೆಯ ಮೂಲ ಅಸ್ತಿತ್ವ ಕಳೆದುಕೊಂಡಿದೆ. ಒಳಹರಿವನ್ನೇ ಹೊಂದಿರದೆ ಕೆರೆ ಉಳಿಯಲು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಈಗಿನ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಅಧಿಕಾರಿಗಳ ಬಳಿಯೂ ಉತ್ತರವಿಲ್ಲ. ಆದರೆ, ವಾಕಿಂಗ್ ಟ್ರ್ಯಾಕ್ ವಿಸ್ತರಣೆ, ಸೆಕ್ಯುರಿಟಿ ಗಾರ್ಡ್ ಕೊಠಡಿ ಎಂದೆಲ್ಲ ಕೆರೆ ಅಂಗಳವನ್ನು ಮುಚ್ಚುವ ಕಾಂಕ್ರೀಟ್ ಕಟ್ಟಡಗಳ ಕಾಮಗಾರಿಯನ್ನು ನಗರ ಪಾಲಿಕೆಯ ಅಧಿಕಾರಿಗಳೂ ಮುಂದುವರಿಸಿದ್ದಾರೆ.
ಕೆರೆ ನುಂಗಿ ನೀರು ಕುಡಿದ ಕಾಂಕ್ರೀಟ್...
ಶ್ರೀಗಂಧದ ಕಾವಲು ಕೆರೆ ಅಭಿವೃದ್ಧಿ ಪ್ರವಾಹಕ್ಕೆ ಕಾಂಕ್ರೀಟ್+ ಗ್ರಿಲ್ ಕಾಂಪೌಂಡ್ ಗೋಡೆಯಾಗಿದೆ. ಕೆರೆಯ ನೀರಿನ ಒಡಲಿಗೇ ಕತ್ತರಿಯಾಗಿ, ಜನರು ನಡೆದಾಡಲು 60 ಅಡಿ ಅಗಲದ ವಾಕಿಂಗ್ ಟ್ರ್ಯಾಕ್ ನಿರ್ಮಿಸಿದ್ದಾರೆ. ಇದನ್ನು ಇನ್ನೂ ವಿಸ್ತರಿಸುವ ಗುರಿ ಗುತ್ತಿಗೆದಾರರಿಗಿದೆ. ಎರಡು ಗಜೆಬೊಗಳು ಮೂಲ ಅಭಿವೃದ್ಧಿಯ ಭಾಗವಾಗಿದ್ದವು. ಇದೀಗ ಇನ್ನೂ ಮೂರು ಗಜೆಬೊಗಳನ್ನು ನಿರ್ಮಿಸಲು ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಆಯುಕ್ತರು, ಅಧಿಕಾರಿಗಳು ಮುಂದಾಗಿದ್ದಾರೆ. ಯೋಗ ಮಾಡಲು ಕಾಂಕ್ರೀಟ್ ಕಟ್ಟೆಯನ್ನು ಬೃಹದಾಕಾರದಲ್ಲಿ ನಿರ್ಮಿಸಲಾಗುತ್ತಿದೆ. ಮಕ್ಕಳಿಗೆ, ಹೆಣ್ಣು/ಗಂಡು ಎಂದು ಪ್ರತ್ಯೇಕ, ಪ್ರತ್ಯೇಕ, ಪ್ರತ್ಯೇಕವಾಗಿ ಜಿಮ್ ಸವಲತ್ತುಗಳನ್ನು ನಿರ್ಮಿಸಲಾಗುತ್ತಿದೆ. ಭದ್ರತಾ ಸಿಬ್ಬಂದಿಗೆಂದು ಕೊಠಡಿ ಇದ್ದರೂ, ಸಮುದಾಯಕ್ಕಾಗಿ ಎಂದು ಬೃಹತ್ ಕಟ್ಟಡವನ್ನೂ ಹೊಸದಾಗಿ ನಿರ್ಮಿಸಲಾಗುತ್ತಿದೆ. ಕೆರೆ ಅಭಿವೃದ್ಧಿ ಹೆಸರಿನಲ್ಲಿ, ಮೂಲ ಉದ್ದೇಶವನ್ನು ಮರೆತು ಜಲಮೂಲವನ್ನು ಮನರಂಜನಾ ತಾಣವನ್ನಾಗಿ ಪರಿವರ್ತಿಸಲಾಗುತ್ತಿದೆ. ಕೆರೆ ನೀರು ಹಾಗೂ ಪ್ರದೇಶವನ್ನೆಲ್ಲಾ ಕಾಂಕ್ರೀಟ್ ಕಾಡು ಕುಡಿದು, ಆಪೋಶನ ತೆಗೆದುಕೊಳ್ಳುತ್ತಿದೆ. ಕೆರೆ ಕೆರೆಯಾಗಿ ಉಳಿಯಬೇಕು. ಮಳೆ ನೀರು ಸದಾ ತುಂಬಿರಬೇಕು. ಸುತ್ತಲು ಹಸಿರು ನಳನಳಿಸುತ್ತಿರಬೇಕು. ಪಕ್ಷಿಗಳ ದಾಹ ತಣಿಸಬೇಕು, ಜೀವವೈವಿಧ್ಯ ತುಂಬಿದ ತಾಣವೇ ಕೆರೆ. ಅದನ್ನು ನಮಗೆ ಉಳಿಸಿಕೊಡಿ, ಅದನ್ನು ಅಭಿವೃದ್ಧಿ ಹೆಸರಿನಲ್ಲಿ ನಾಶ ಮಾಡಬೇಡಿ ಎಂದು ಸ್ಥಳೀಯ ನಿವಾಸಿ ಶೋಭಾ ಭಟ್ ಮನವಿ ಮಾಡುತ್ತಿದ್ದಾರೆ.

