ಹೈದರಾಬಾದ್: ದೇವಸ್ಥಾನವೊಂದರಲ್ಲಿ ತಡರಾತ್ರಿವರೆಗೂ ಹೆಚ್ಚಿನ ಸೌಂಡ್ ಸಿಸ್ಟಮ್‌ಗಳನ್ನು ಅಳವಡಿಸಿಕೊಂಡು ಡಿಜೆ ಹಾಡು ಹಾಕುತ್ತಿರುವುದನ್ನು ವಿರೋಧಿಸಿ ತೆಲುಗು ನಟ ಅಲ್ಲು ಸಿರೀಶ್ ಹೈದರಾಬಾದ್ ಪೊಲೀಸರಿಗೆ ದೂರು ನೀಡಿದ್ದಾರೆ.
ತೆಲುಗು ಪ್ರಮುಖ ನಟ ಅಲ್ಲು ಅರ್ಜುನ್ ಅವರ ಸಹೋದರ ಅಲ್ಲು ಸಿರೀಶ್, ಎಕ್ಸ್ (ಟ್ವಿಟರ್) ಖಾತೆಯಲ್ಲಿ ವಿಡಿಯೊ ಹಂಚಿಕೊಳ್ಳುವ ಮೂಲಕ ಪೊಲೀಸರ ಗಮನಕ್ಕೆ ತಂದಿದ್ದಾರೆ.
'ನಾನು ಶೇಖ್‌ಪೇಟೆಯ ಅಪರ್ಣಾ ಒನ್ ಅಪಾರ್ಟ್‌ಮೆಂಟ್‌ನ ನಿವಾಸಿ. ಕಳೆದ ಕೆಲವು ದಿನಗಳಿಂದ ವಿನೋಬಾ ನಗರದ ಹನುಮಾನ್ ದೇವಸ್ಥಾನದಲ್ಲಿ ನಿಗದಿತ ಶಬ್ದದ ಮಿತಿಗಿಂತ ಹೆಚ್ಚಾಗಿ, ರಾತ್ರಿ 2 ರಿಂದ 3 ಗಂಟೆಯವರೆಗೂ ಕರ್ಕಶ ಧ್ವನಿಯಲ್ಲಿ ಮ್ಯೂಸಿಕ್ ಹಾಕಲಾಗುತ್ತಿದೆ. ಈ ಕುರಿತು ಫಿಲ್ಮ್ ನಗರ್ ಪೊಲೀಸ್ ಠಾಣೆಗೆ ದೂರು ನೀಡಿದಾಗ, ಗಣೇಶ ವಿಸರ್ಜನೆ ಇರುವ ಕಾರಣ ಸೆಪ್ಟೆಂಬರ್ 25ರವರೆಗೆ ಸಹಿಸಿಕೊಳ್ಳುವಂತೆ ತಿಳಿಸಿದ್ದರು. ಆದರೆ ಹಬ್ಬ ಮುಗಿದರೂ ಈ ಕರ್ಕಶ ಶಬ್ದ ನಿಂತಿಲ್ಲ' ಎಂದು ಅವರು ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಅಲ್ಲದೆ, 'ನಮ್ಮ ಅಪಾರ್ಟ್‌ಮೆಂಟ್‌ನಲ್ಲಿರುವ ವೃದ್ಧರು, ಮಕ್ಕಳು ಮತ್ತು ಉದ್ಯೋಗಿಗಳಿಗೆ ಇದರಿಂದ ತೀವ್ರ ತೊಂದರೆಯಾಗುತ್ತಿದೆ. ಈ ಹಿಂದೆ ಅನೇಕ ದೂರುಗಳನ್ನು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ದಯವಿಟ್ಟು ಈ ಬಗ್ಗೆ ಗಮನಹರಿಸಿ' ಎಂದು ಹೈದರಾಬಾದ್ ಪೊಲೀಸರನ್ನು ವಿನಂತಿಸಿದ್ದರು.
ಅಲ್ಲು ಸಿರೀಶ್ ಅವರ ಪೋಸ್ಟ್‌ಗೆ ತಕ್ಷಣವೇ ಸ್ಪಂದಿಸಿದ ಹೈದರಾಬಾದ್ ಪೊಲೀಸರು, ಅಗತ್ಯ ಕ್ರಮಕ್ಕಾಗಿ ಫಿಲ್ಮ್ ನಗರ್ ಎಸ್‌ಎಚ್‌ಒ ಅವರಿಗೆ ಮಾಹಿತಿ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.
'ಪ್ರಜಾವಾಣಿ' ವರದಿಗೆ ಸಿಎಂ ಕಚೇರಿಯ ಸ್ಪಂದನೆಮೋದಿಯ ವಾರಾಣಸಿ ಚುನಾವಣಾ ಫಲಿತಾಂಶ ರದ್ದು ಮಾಡುವಂತೆ ಕಾಂಗ್ರೆಸ್ ಕೂಗು: ಕಾರಣವೇನು?ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್, ಸಿರೀಶ್ ಸ್ಪಷ್ಟನೆ
ಕೆಲವು ನೆಟ್ಟಿಗರು ಅಲ್ಲು ಸಿರೀಶ್ ಅವರ ನಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು 'ಇತರ ಧರ್ಮದಿಂದ ಆಗುವ ಶಬ್ದ ಮಾಲಿನ್ಯದ ಬಗ್ಗೆಯೂ ನೀವು ಧ್ವನಿ ಎತ್ತುತ್ತೀರಾ? ಹಾಗೂ ಡಿಸೆಂಬರ್ 31ರ ತಡರಾತ್ರಿ ಪಾರ್ಟಿಗಳ ಬಗ್ಗೆ ಏಕೆ ಪ್ರಶ್ನಿಸುವುದಿಲ್ಲ?' ಎಂದು ಕಿಡಿಕಾರಿದ್ದಾರೆ.
ಟ್ರೋಲ್‌ಗಳಿಗೆ ಮರುಪೋಸ್ಟ್ ಮೂಲಕ ತಿರುಗೇಟು ನೀಡಿದ ಸಿರೀಶ್, 'ಸ್ನೇಹಿತರೇ, ನಾನು ಕೂಡ ಧಾರ್ಮಿಕ ನಂಬಿಕೆ ಉಳ್ಳವನು ಮತ್ತು ಹನುಮಂತನ ಭಕ್ತ. ಆದರೆ, ರಾತ್ರಿ 2 ಗಂಟೆಗೆ ಡಿಜೆ ಸೆಟ್ ಹಾಕಿ ಕರ್ಕಶ ಶಬ್ದ ಮಾಡುವುದು ಭಕ್ತಿಯಲ್ಲ. ನಾನು ದೂರು ನೀಡಿದ್ದು ನಾಗರಿಕ ಪ್ರಜ್ಞೆ (Civic Sense) ಬಗ್ಗೆಯೇ ಹೊರತು ಭಕ್ತಿಯ ವಿರುದ್ಧವಲ್ಲ. ಅರ್ಥಮಾಡಿಕೊಂಡಿದ್ದಕ್ಕೆ ಧನ್ಯವಾದಗಳು' ಎಂದು ಸ್ಪಷ್ಟಪಡಿಸಿದ್ದಾರೆ.

