ಲಾಸ್ ಏಂಜಲೀಸ್: 2026ರ ಫಿಫಾ ವಿಶ್ವಕಪ್ ಟೂರ್ನಿಯ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಪೋರ್ಚುಗಲ್ ವಿರುದ್ಧ 1-0 ಗೋಲು ಅಂತರದ ಜಯ ಗಳಿಸಿರುವ ಸ್ಪೇನ್ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದೆ.
ಇದರೊಂದಿಗೆ ಪೋರ್ಚುಗಲ್‌ನ ತಾರೆ 41 ವರ್ಷದ ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವಕಪ್ ಕನಸು ಭಗ್ನಗೊಂಡಿತು.
ಪಂದ್ಯದ ದ್ವಿತೀಯಾರ್ಧದ ಇಂಜುರಿ ಟೈಮ್‌ನಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿದ ಮೈಕೆಲ್ ಮೆರಿನೊ (90+1 ನಿಮಿಷ) ಅದ್ಭುತ ಗೋಲು ಬಾರಿಸುವ ಮೂಲಕ ಸ್ಪೇನ್‌ಗೆ ಸ್ಮರಣೀಯ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು.
2010ರ ಚಾಂಪಿಯನ್ ಸ್ಪೇನ್, ಇದೀಗ ಮಗದೊಂದು ಸಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಅಲ್ಲದೆ ಫಿಫಾ ವಿಶ್ವಕಪ್‌ನಲ್ಲಿ ಸತತ ಆರು ಪಂದ್ಯಗಳಲ್ಲಿ ಗೋಲು ಬಿಟ್ಟುಕೊಡದ ಸಾಧನೆ ಮಾಡಿದ ಮೊದಲ ತಂಡವೆನಿಸಿದೆ.
ಈ ಪಂದ್ಯದಲ್ಲಿ 41 ವರ್ಷದ ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಸ್ಪೇನ್‌ನ 18 ವರ್ಷದ ಲಮೈನ್ ಯಮಾಲ್ ಪ್ರಮುಖ ಆಕರ್ಷಣೆಯಾಗಿದ್ದರು. ಆದರೆ ಪೋರ್ಚುಗಲ್ ಕನಸು ಭಗ್ನಗೊಂಡಿದ್ದು, ರೊನಾಲ್ಡೊ ಭಾವುಕರಾದರು.
ಇದು ತಮ್ಮ ವೃತ್ತಿಜೀವನದ ಕೊನೆಯ ವಿಶ್ವಕಪ್ ಎಂದು ರೊನಾಲ್ಡೊ ಈಗಾಗಲೇ ಘೋಷಿಸಿದ್ದಾರೆ. ಮತ್ತೊಂದೆಡೆ ಸ್ಪೇನ್ ತನ್ನ ಭದ್ರ ಕೋಟೆಯಲ್ಲಿ ರಕ್ಷಣಾತ್ಮಕ ಆಟದಿಂದ ಇತಿಹಾಸ ಬರೆದರೆ, ರೊನಾಲ್ಡೊ ಅವರ ವಿಶ್ವಕಪ್ ಪಯಣ ಕಣ್ಣೀರಿನೊಂದಿಗೆ ಅಂತ್ಯಗೊಂಡಿದೆ.

