ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ವೇಳೆ ವಿದ್ಯಾರ್ಥಿಗಳ ವಿರುದ್ಧ ಪೊಲೀಸರ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ತುರ್ತು ವಿಚಾರಣೆಗೆ ಪಟ್ಟಿ ಮಾಡಲು ಬುಧವಾರ ನಿರಾಕರಿಸಿದ ಸುಪ್ರೀಂ ಕೋರ್ಟ್, 'ನಮ್ಮ ಸಮಯ ವ್ಯರ್ಥ ಮಾಡಬೇಡಿ' ಎಂದು ಅರ್ಜಿದಾರರಿಗೆ ಸೂಚಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯಾ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನು ಒಳಗೊಂಡ ಪೀಠದ ಮುಂದೆ ಈ ವಿಷಯ ಪ್ರಸ್ತಾಪಿಸಲಾಯಿತು.
'ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯಕ್ಕೆ ಸಂಬಂಧಿಸಿದ ವಿಡಿಯೊಗಳು ನನ್ನ ಬಳಿ ಇವೆ. ಹೀಗಾಗಿ ಅರ್ಜಿಯ ವಿಚಾರಣೆಯನ್ನು ಗುರುವಾರಕ್ಕೆ ಪಟ್ಟಿ ಮಾಡುವಂತೆ ಪೀಠವನ್ನು ಕೋರುವುದಾಗಿ' ಅರ್ಜಿದಾರರ ಪರ ವಕೀಲರು ಕೇಳಿದರು.
'ಪ್ರತಿಭಟನೆ ವೇಳೆ ಹಲವು ವಿದ್ಯಾರ್ಥಿಗಳು ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿದ್ದಾರೆ' ಎಂದು ಆರೋಪಿಸಿದ ವಕೀಲರು, ಅರ್ಜಿಯಲ್ಲಿ ಮೂರು ಪ್ರಮುಖ ಬೇಡಿಕೆಗಳಿವೆ ಎಂದೂ ತಿಳಿಸಿದರು.
ವಕೀಲರ ಕೋರಿಕೆಯನ್ನು ತಿರಸ್ಕರಿಸಿದ ಸಿಜೆಐ, 'ವಿಷಯ ಪ್ರಸ್ತಾಪಿಸುವ ಈ ಹಂತದಲ್ಲಿಯೇ ವಿಡಿಯೊ ದೃಶ್ಯಾವಳಿಗಳನ್ನು ಪರಿಶೀಲಿಸಲು ಪೀಠ ಆಸಕ್ತಿ ಹೊಂದಿಲ್ಲ' ಎಂದು ಸ್ಪಷ್ಟಪಡಿಸಿದರು.
'ನಮಗೆ ವಿಡಿಯೊಗಳಲ್ಲಿ ಆಸಕ್ತಿಯಿಲ್ಲ. ಅವುಗಳನ್ನು ನೋಡಲು ಸಮಯವೂ ಇಲ್ಲ. ನಾವು ವಿಡಿಯೊಗಳನ್ನು ನೋಡಲು ಬಯಸುವುದಿಲ್ಲ' ಎಂದು ಸಿಜೆಐ ಹೇಳಿದರು.
ವಿದ್ಯಾರ್ಥಿಗಳನ್ನು ಥಳಿಸಲಾಗಿದೆ ಎಂದು ವಕೀಲರು ಪುನರುಚ್ಚರಿಸಿ, ವಿಡಿಯೊ ಸಾಕ್ಷ್ಯದ ಬಗ್ಗೆ ಮತ್ತೆ ಪ್ರಸ್ತಾಪಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, 'ನಮ್ಮ ಸಮಯ ವ್ಯರ್ಥ ಮಾಡಬೇಡಿ. ನಾವು ಯಾವುದೇ ವಿಡಿಯೊಗಳನ್ನು ನೋಡಲು ಬಯಸುವುದಿಲ್ಲ' ಎಂದರು.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳನ್ನು ವಿರೋಧಿಸಿ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ನೇತೃತ್ವದಲ್ಲಿ ಸೋಮವಾರ 'ಸಂಸತ್ ಚಲೊ' ನಡೆದ ವೇಳೆ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿತ್ತು. ಸಂಸತ್ತಿನತ್ತ ಸಾಗಲು ಯತ್ನಿಸುತ್ತಿದ್ದ ಪ್ರತಿಭಟನಕಾರರ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಮತ್ತು ಅಶ್ರುವಾಯು ಬಳಸಿದ್ದರು.
ಕೇಂದ್ರ ಪೊಲೀಸರಿಗೆ ಹೈಕೋರ್ಟ್ ನೋಟಿಸ್
ನವದೆಹಲಿ: ಸಂಸತ್ ಚಲೊ ಮೆರವಣಿಗೆ ವೇಳೆ ಪ್ರತಿಭಟನಕಾರರ ವಿರುದ್ಧ ಪೊಲೀಸರು ಅತಿಯಾದ ಬಲಪ್ರಯೋಗ ಮಾಡಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾದ ಎರಡು ಅರ್ಜಿಗಳಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಬುಧವಾರ ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ಕೆ.ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರ ಪೀಠವು ಪೊಲೀಸ್ ಕ್ರಮಕ್ಕೆ ಸಂಬಂಧಿಸಿದ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳು ವಿಡಿಯೋಗ್ರಫಿ ಸೇರಿದಂತೆ ಎಲ್ಲ ಬಗೆಯ ದಾಖಲೆಗಳನ್ನು ಸಂರಕ್ಷಿಸಿಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿತು.
ಈ ಕುರಿತು ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆಯನ್ನು ನಾಲ್ಕು ವಾರಗಳಲ್ಲಿ ಅಫಿಡವಿಟ್ ಮೂಲಕ ಸಲ್ಲಿಸುವಂತೆ ಆದೇಶಿಸಿದ ಪೀಠವು ವಿಚಾರಣೆಯನ್ನು ಸೆಪ್ಟೆಂಬರ್ 11ಕ್ಕೆ ನಿಗದಿಪಡಿಸಿತು. ಅರ್ಜಿದಾರರ ಪರ ಹಿರಿಯ ವಕೀಲರಾದ ಎನ್.ಹರಿಹರನ್ ವಿಕಾಸ್ ಸಿಂಗ್ ಗೋಪಾಲ್ ಶಂಕರನಾರಾಯಣನ್ ವಾದ ಮಂಡಿಸಿದರು.
ಮಹಿಳೆಯುರು ಮಕ್ಕಳು ಸೇರಿದಂತೆ ಪ್ರತಿಭಟನಕಾರರ ವಿರುದ್ಧ ಪೊಲೀಸರು ಬಲಪ್ರಯೋಗ ಮಾಡಿದ್ದಾರೆ ಎಂದು ಅವರು ಆರೋಪಿಸಿದರು. ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ವಾಸು 'ಈ ಅರ್ಜಿಗಳು ಸಾಮಾಜಿಕ ಮಾಧ್ಯಮಗಳ ಪೋಸ್ಟ್ಗಳನ್ನು ಆಧರಿಸಿವೆ' ಎಂದು ವಾದಿಸಿದರು.
ಹಿಂಸಾಚಾರ: ಆರು ಎಫ್ಐಆರ್
ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಮತ್ತು ರೈತ ಸಂಘಟನೆಗಳು ಜುಲೈ 20ರಂದು ಆಯೋಜಿಸಿದ್ದ ಸಂಸತ್ ಚಲೊ ಮೆರವಣಿಗೆ ವೇಳೆ ನಡೆದ ಹಿಂಸಾಚಾರ ವಿಧ್ವಂಸಕ ಕೃತ್ಯಗಳು ಮತ್ತು ಇತರ ಘಟನೆಗಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಆರು ಎಫ್ಐಆರ್ಗಳನ್ನು ದಾಖಲಿಸಿದ್ದಾರೆ. ಈ ಘಟನೆಗಳ ಹಿಂದೆ ದೊಡ್ಡ ಪ್ರಮಾಣದ ಕ್ರಿಮಿನಲ್ ಪಿತೂರಿ ಇರಬಹುದು ಎಂಬ ಕೋನದಲ್ಲೂ ಪೊಲೀಸರು ತನಿಖೆ ನಡೆಸುವ ಸಾಧ್ಯತೆಯಿದೆ.
ಸಂಸತ್ ಭವನದ ರಸ್ತೆ ಕನ್ನಾಟ್ ಪ್ಲೇಸ್ ಮತ್ತು ಇತರ ಪೊಲೀಸ್ ಠಾಣೆಗಳಲ್ಲಿ ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಶಸ್ತ್ರಾಸ್ತ್ರ ಕಾಯ್ದೆ ಮತ್ತು ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆಯ ವಿವಿಧ ಸೆಕ್ಷನ್ಗಳಡಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಕನ್ನಾಟ್ ಪ್ಲೇಸ್ನ ರೀಗಲ್ ಸಿನಿಮಾ ಬಳಿ ನಡೆದ ಹಿಂಸಾಚಾರ ಮತ್ತು ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಒಂದು ಎಫ್ಐಆರ್ ದಾಖಲಿಸಲಾಗಿದೆ. ಅಲ್ಲದೆ ಕಾನೂನುಬಾಹಿರ ಗುಂಪುಗೂಡುವಿಕೆ ಸಂಸತ್ ಅಧಿವೇಶನದ ವೇಳೆ ಅನುಮತಿಯಿಲ್ಲದೆ ಡ್ರೋನ್ ಹಾರಾಟ ಹಿಂಸಾಚಾರದ ಹಿಂದಿನ ಪಿತೂರಿ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಯಾವ ಸೆಕ್ಷನ್ಗಳು: ಸಂಸತ್ ಭವನ ರಸ್ತೆಯ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 223(ಬಿ) (ಕಾನೂನುಬದ್ಧ ಆದೇಶಗಳ ಉಲ್ಲಂಘನೆ) ಸೆಕ್ಷನ್ 221 (ಸರ್ಕಾರಿ ಸಿಬ್ಬಂದಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸುವುದು) ಸೆಕ್ಷನ್ 132 (ಸರ್ಕಾರಿ ಸಿಬ್ಬಂದಿ ಮೇಲೆ ಹಲ್ಲೆ ಅಥವಾ ಅಪರಾಧದ ಬಲಪ್ರಯೋಗ) ಸೆಕ್ಷನ್ 121(1) (ಕಾನೂನುಬಾಹಿರ ಗುಂಪುಗೂಡುವಿಕೆ) ಅಲ್ಲದೆ ಗಲಭೆ ಹಿಂಸಾಚಾರಕ್ಕೆ ಸಂಬಂಧಿಸಿದ ಸೆಕ್ಷನ್ 189 (3) 190 191 (2) 191 (3) ಮತ್ತು 192 ಸಮಾನ ಉದ್ದೇಶಕ್ಕೆ ಸಂಬಂಧಿಸಿದಂತೆ ಸೆಕ್ಷನ್ಗಳಾದ 324 (5) 109 (1) 125 3(5) ಹಾಗೂ ಅಪರಾಧ ಸಂಚಿಗೆ ಸೆಕ್ಷನ್ 61 (2) ಅಡಿ ಪ್ರಕರಣ ದಾಖಲಿಸಲಾಗಿದೆ. ಜತೆಗೆ ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆಯ ನಿಬಂಧನೆಯನ್ನೂ ಎಫ್ಐಆರ್ನಲ್ಲಿ ಉಲ್ಲೇಖ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ನೀಟ್ ರದ್ದು ಒಂದೇ ಪರಿಹಾರ: ವಿಜಯ್
ಚೆನ್ನೈ: 'ನೀಟ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ಈ ಸಮಸ್ಯೆಗೆ ಇದೊಂದೇ ಪರಿಹಾರ' ಎಂದು ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಬುಧವಾರ ಪ್ರತಿಪಾದಿಸಿದರು.
ನೀಟ್ ವಿಷಯದಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಭಾವನೆಗಳನ್ನು ಕೇಂದ್ರ ಸರ್ಕಾರ ಗೌರವಿಸಬೇಕು ಎಂದು ಅವರು ಆಗ್ರಹಿಸಿದರು.
ನೀಟ್ ವಿರುದ್ಧದ ಪ್ರತಿಭಟನೆ ವೇಳೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಇತರ ನಾಯಕರನ್ನು ಬಂಧಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮ ಮತ್ತು ಖಂಡನೀಯ ಎಂದು ಅವರು ಹೇಳಿದರು.
Fact Check: 'ಕಾಕ್ರೋಚ್' ಪ್ರತಿಭಟನೆಯಲ್ಲಿ ಭಾಗವಹಿಸಿದ್ದರೇ ಸುನಿತಾ ವಿಲಿಯಮ್ಸ್?ರಾಜೀನಾಮೆಗೆ 'ಕಾಕ್ರೋಚ್' ಪಟ್ಟು: ಅಮಿತ್ ಶಾ ಜತೆ ಮಾತುಕತೆ ನಡೆಸಿದ ಪ್ರಧಾನ್
