ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಖುಷಿಗೆ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ನಾಯಕರು ಸಂತೋಷ ಕೂಟದಲ್ಲಿ ಸಂಭ್ರಮಿಸುತ್ತಿದ್ದಾರೆ ಎಂದು ಆರೋಪಿಸಲಾದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು 'ಇಬ್ಬಗೆತನ' ಎಂದು ಬಿಜೆಪಿ ಟೀಕಿಸಿದೆ.
ಇದಕ್ಕೆ ಸಿಜೆಪಿ ತಿರುಗೇಟು ನೀಡಿದ್ದು, 'ಈ ತಲೆಮಾರಿನವರು ಇರುವುದೇ ಹೀಗೆ. ಆತ್ಮವಿಶ್ವಾಸ, ಸೃಜನಶೀಲತೆ, ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿರುವವರು. ಅವರನ್ನು ಒಂದು ಚೌಕಟ್ಟಿನೊಳಗೆ ಕಟ್ಟಿಹಾಕಲು ಸಾಧ್ಯವಿಲ್ಲ. ಅಂಕಲ್‌ಗಳು ಆಂಟಿಗಳು ಟೀಕೆ ಮಾಡುತ್ತಲೇ ಇರುತ್ತಾರೆ. ಆದರೆ ನಮ್ಮನ್ನು ಅವರು ಒಪ್ಪಿಕೊಳ್ಳಲೇಬೇಕು!' ಎಂದು ಹೇಳಿದೆ.
ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ, 'ಪ್ರಧಾನ್ ರಾಜೀನಾಮೆ ಬಳಿಕ ಪಂಚತಾರಾ ಹೋಟೆಲ್‌ನಲ್ಲಿ ದೊಡ್ಡ ಸಂತೋಷ ಕೂಟ ನಡೆದಿದೆ' ಎಂದು ಬರೆದುಕೊಂಡಿದ್ದರು.
'ಸಿಜಿಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ, ಸೌರಭ್ ದಾಸ್.. ಎಲ್ಲರೂ ಇದ್ದಾರೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುವವರೊಂದಿಗೆ ತೋರಿಸುವ ಐಕ್ಯದಾರ್ಢ್ಯತೆ ತೋರಿಸುವ ಪರಿಯೇ ಇದು? ಬರ್ಗರ್ ತಿಂದ ಕಾರಣಕ್ಕೆ ವಕ್ತಾರನನ್ನು ವಜಾಗೊಳಿಸಿದವರು ಪ್ರದರ್ಶಿಸುವ ಸೂಕ್ಷ್ಮತೆಯೇ ಇದು' ಎಂದು ಪ್ರಶ್ನಿಸಿದ್ದಾರೆ.
'ಎಕ್ಸ್'ನಿಂದ ಇನ್‌ಸ್ಟಾಗೆ ಬದಲಾದ ರಾಜಕೀಯ: ಮೋದಿಗೆ ಕಾದಿದೆ ಜೆನ್-ಝೀ ಸವಾಲು!'ಕಪಟತನ ಮತ್ತು ನಾಚಿಕೆಗೇಡಿತನ ಪರಮಾವಧಿಗೆ ತಲುಪಿದೆ' ಎಂದು ಅವರು ಹೇಳಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಸಿಜೆಪಿ ವಕ್ತಾರ ಸೌರಭ್ ದಾಸ್, 'ಸರ್ಕಾರ ಹಾಗೂ ಮಡಿಲ ಮಾಧ್ಯಮಗಳು ಜೆನ್-ಝೀ ಹಾಗೂ ಯುವಜನರ ಭಾಷೆಯನ್ನೇ ಅರ್ಥ ಮಾಡಿಕೊಳ್ಳುತ್ತಿಲ್ಲ. ಎಷ್ಟು ಹೊತ್ತು ಬೇಕಾದರೂ ರಸ್ತೆಯಲ್ಲಿ ಕುಳಿತು ನಾವು ಪ್ರತಿಭಟನೆ ಮಾಡುತ್ತೇವೆ. ನಾವು ಕುಣಿಯುತ್ತಾ ಪ್ರತಿಭಟಿಸಬಲ್ಲೆವು. ಕಾಫಿ ಹೀರುತ್ತಾ ಸಂಘಟಿಸಬಲ್ಲೆವು. ಚಳವಳಿ ಹೇಗಿರಬೇಕು ಎಂದು ಹಿಂದಿನ ಪೀಳಿಗೆಗಳು ಭಾವಿಸುತ್ತವೆಯೋ ಅದಕ್ಕಿಂತ ಭಿನ್ನವಾಗಿ ನಾವು ಹೋರಾಡಬಹುದು (ಇದು ಯಾರ ಮೇಲಿನ ಟೀಕೆಯೂ ಅಲ್ಲ)' ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಜೆನ್-ಝೀಗಳನ್ನು ಬೆದರಿಸಲು ಭದ್ರತಾ ಸಿಬ್ಬಂದಿ ಬಳಸಿದ ಅಸ್ತ್ರಗಳಿವು..ಸಂತೋಷ ಕೂಟದ ವಿಡಿಯೊವನ್ನು 'ಎಕ್ಸ್'ನಲ್ಲಿ ಹಂಚಿಕೊಂಡಿರುವ ಬಿಜೆಪಿಯ ಮಾಜಿ ಸಂಸದ ಮಹೇಶ್ ಜೇಠ್ಮಲಾನಿ, 'ನಿಜವಾಗಿಯೂ? ಸಿಜೆಪಿ ನಾಯಕರು ಹೋಟೆಲ್ ಒಂದರಲ್ಲಿ ವಿಜಯದ ಸಂಭ್ರಮ ಆಚರಿಸುತ್ತಿದ್ದಾರೆ. ದೆಹಲಿಯಲ್ಲಿ ಹಿಂಸೆಯಾದ ಕೂಡಲೇ, ಸ್ವಯಂ ಘೋಷಿತ ಯುವ ನಾಯಕರು ಸಂಗೀತ ಹಾಕಿ ಕುಣಿಯುತ್ತಿದ್ದಾರೆ' ಎಂದು ಹೇಳಿದ್ದಾರೆ.
'ಇನ್ನೂ ಗಂಭೀರವಾದ ಪ್ರಶ್ನೆಗಳಿವೆ. ಈ ಪ್ರತಿಭಟನೆಯ ಅವಧಿಯಲ್ಲಿ ಪ್ರಯಾಣ, ಆಹಾರ, ವಸತಿ, ಉಪಕರಣಗಳು ಹಾಗೂ ಇತರೆ ವ್ಯವಸ್ಥೆಗಳ ವೆಚ್ಚವನ್ನು ಯಾರು ಭರಿಸಿದರು? ದೆಹಲಿಯಲ್ಲಿ ಇಷ್ಟು ದಿನ ಪ್ರತಿಭಟನೆ ಮುಂದುವರಿಯಲು ಹಣಕಾಸಿನ ನೆರವು ನೀಡಿದವರು ಯಾರು?' ಎಂದು ಸುಪ್ರೀಂ ಕೋರ್ಟ್ ಹಿರಿಯ ವಕೀಲರೂ ಆಗಿರುವ ಅವರು ಪ್ರಶ್ನಿಸಿದ್ದಾರೆ.
ಸಿಜೆಪಿ ಬೆನ್ನಲ್ಲೇ ಇ20 ಪೆಟ್ರೋಲ್ ವಿರೋಧಿ ಅಭಿಯಾನ: ಗಡ್ಕರಿ ರಾಜೀನಾಮೆಗೆ ಆಗ್ರಹ
