Dailyhunt Logo
  • Light mode
    Follow system
    Dark mode
    • Play Story
    • App Story
ಸಿಜೆಪಿ ಪ್ರತಿಭಟನೆ: ಮಮತಾ, ಸಿಪಿಎಂ ನಾಯಕರು, ಕೇಜ್ರಿವಾಲ್ ಸೇರಿ ಹಲವರು ವಶಕ್ಕೆ

ಸಿಜೆಪಿ ಪ್ರತಿಭಟನೆ: ಮಮತಾ, ಸಿಪಿಎಂ ನಾಯಕರು, ಕೇಜ್ರಿವಾಲ್ ಸೇರಿ ಹಲವರು ವಶಕ್ಕೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಕರೆ ನೀಡಿದ್ದ ಪ್ರತಿಭಟನೆಗೂ ಮುನ್ನ ರಾಜಕೀಯ ನಾಯಕರು, ಕಾರ್ಯಕರ್ತರು, ವಕೀಲರು, ಪತ್ರಕರ್ತರು ಹಾಗೂ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದೇಶ ಅಸ್ಥಿರಗೊಳಿಸಲು ಸಂಚು; ರಾಹುಲ್, ಸಿಜೆಪಿ ವಿರುದ್ಧ ಬಿಜೆಪಿ ವಾಗ್ದಾಳಿ

ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಮತ್ತು ಮುಖಂಡರಾದ ಸೌರವ್ ದಾಸ್, ಅಶುತೋಷ್ ರಾಂಕಾ ಅವರನ್ನು ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ಮುಂಬೈನಿಂದ ಬಂದ ಅವರನ್ನು ವಿಮಾನದಲ್ಲಿಯೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ದೀಪ್ಕೆ ಅವರನ್ನು ಗುರುಗ್ರಾಮಕ್ಕೆ, ರಂಕಾ ಅವರನ್ನು ದ್ವಾರಕಾಗೆ ಹಾಗೂ ದಾಸ್ ಅವರನ್ನು ದೆಹಲಿಯ ಮತ್ತೊಂದು ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಿಜೆಪಿಯ ಕಾನೂನು ವಿಭಾಗದ ಮುಖ್ಯಸ್ಥೆ ರತ್ನಾ ಸಿಂಗ್ ರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು 'ಪಿಟಿಐ' ವರದಿ ಮಾಡಿದೆ.

ಯೂಟ್ಯೂಬರ್ ಧ್ರುವ ರಾಠಿ ಅವರನ್ನು ಗುರುಗ್ರಾಮದ ಸೆಕ್ಟರ್ 56ರ ನಿವಾಸದಿಂದ ಬೆಳಿಗ್ಗೆ ಸುಮಾರು 6 ಗಂಟೆಗೆ ವಶಕ್ಕೆ ಪಡೆಯಲಾಗಿದೆ. ಬಳಿಕ ಅವರನ್ನು ವಿಚಾರಣೆಗಾಗಿ ಅಪರಾಧ ವಿಭಾಗದ ಕಚೇರಿಗೆ ಕರೆದೊಯ್ಯಲಾಗಿದೆ. ಕಂಟೆಂಟ್ ಕ್ರಿಯೇಟರ್ ಕಾವ್ಯಾ ಕರ್ಣಾಟಕ್ ಅವರನ್ನು ದೆಹಲಿಯ ಧೌಲಾ ಕುವಾನ್ ಬಳಿ ವಶಕ್ಕೆ ಪಡೆಯಲಾಗಿದೆ.

ಸಿಜೆಪಿ ಹೋರಾಟ: ಪ್ರತಿಭಟನಾಕಾರರ ವಶಕ್ಕೆ ಪಡೆಯಲು 20 ಕಡೆ ಕೇಂದ್ರ ತೆರೆದ ಪೊಲೀಸ್

ಎಡಪಕ್ಷಗಳ ನಾಯಕರು, ಮಮತಾ ವಶಕ್ಕೆ

ಜಂತರ್ ಮಂತರ್ ಕಡೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾದ ಸಿಪಿಐ(ಎಂ) ನಾಯಕರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ, ಕೇರಳಂನ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಎಂ.ವಿ. ಗೋವಿಂದನ್, ಎ. ವಿಜಯರಾಘವನ್, ಕೆ.ಕೆ. ಶೈಲಜಾ, ಪಿ.ಕೆ. ಶ್ರೀಮತಿ, ಸಂಸದ ಜಾನ್ ಬ್ರಿಟ್ಟಾಸ್, ಕೆ.ಎನ್. ಬಾಲಗೋಪಾಲ್, ಬೃಂದಾ ಕಾರಟ್, ಪಿ. ರಾಜೀವ್ ಮತ್ತು ಇ.ಪಿ. ಜಯರಾಜನ್ ಅವರನ್ನು ಪೊಲೀಸರು ವಶಕ್ಕೆ ಪಡೆದು, ಛತ್ರಸಾಲ್ ಕ್ರೀಡಾಂಗಣಕ್ಕೆ ಕರೆದೊಯ್ಯಲಾಗಿದೆ.

ಎಐಎಸ್‌ಎ ಅಧ್ಯಕ್ಷೆ ನೇಹಾ ಬೋರಾ, ಸಿಪಿಐ(ಎಂಎಲ್) ಲಿಬರೇಷನ್ ನಾಯಕ ದೀಪಂಕರ್ ಭಟ್ಟಾಚಾರ್ಯ, ವಕೀಲ ಪ್ರಶಾಂತ್ ಭೂಷಣ್ ಮತ್ತು ಯೋಗೇಂದ್ರ ಯಾದವ್ ಅವರನ್ನು ದೆಹಲಿಯ ಐಎನ್‌ಎ ಮಾರುಕಟ್ಟೆ ಸಮೀಪ ವಶಕ್ಕೆ ಪಡೆಯಲಾಗಿದೆ.

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ದೆಹಲಿಯ ಸೌತ್ ಅವೆನ್ಯೂ ಪ್ರದೇಶದಲ್ಲಿ ವಶಕ್ಕೆ ಪಡೆಯಲಾಗಿದೆ. ಅವರೊಂದಿಗೆ ತೃಣಮೂಲ ಕಾಂಗ್ರೆಸ್ ನಾಯಕರಾದ ಡೆರೆಕ್ ಓಬ್ರಯಾನ್, ದೋಲಾ ಸೇನ್ ಸೇರಿ ಹಲವರನ್ನು ವಶಕ್ಕೆ ಪಡೆಯಲಾಗಿದೆ.

ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮುಂಬೈಯಲ್ಲೂ ವಶಕ್ಕೆ

ಮುಂಬೈನ ಬಾಂದ್ರಾದಲ್ಲಿ ಮಹಾತ್ಮ ಗಾಂಧೀಜಿ ಅವರ ಮೊಮ್ಮಗ ತುಷಾರ್ ಗಾಂಧಿಯನ್ನು ವಶಕ್ಕೆ ಪಡೆದು ಡಿಎನ್ ನಗರ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.

'ನ್ಯೂಸ್‌ಲಾಂಡ್ರಿ'ಯ ಪತ್ರಕರ್ತರಾದ ಅಶ್ವಿನೆ, ಆಸ್ಥಾ, ಅನ್ಮೋಲ್ ಮತ್ತು ಇಂಟರ್ನ್ ಅಂಶು ಅವರನ್ನು ವಶಕ್ಕೆ ಪಡೆಯಲಾಗಿದೆ. ಕ್ರಾಲ್‌ನ ತನಿಖಾ ವರದಿಗಾರ ಆಯುಷ್ ತಿವಾರಿ ಅವರನ್ನು ದೆಹಲಿಯ ಐಟಿಒ ಸಮೀಪ ವಶಕ್ಕೆ ಪಡೆಯಲಾಗಿದೆ.‌ ತಮ್ಮ ಹಲವು ವರದಿಗಾರರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಲಯಾಳದ 'ರಿಪೋರ್ಟರ್' ವಾಹಿನಿ ಹೇಳಿದೆ. ಸುಮಾರು ಐನೂರಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು 'ಪಿಟಿಐ' ವರದಿ ಮಾಡಿದೆ.

ವಕೀಲರು ವಶಕ್ಕೆ

ಸುಪ್ರೀಂ ಕೋರ್ಟ್‌ನಿಂದ ಜಂತರ್ ಮಂತರ್ ಕಡೆಗೆ ಮೆರವಣಿಗೆ ನಡೆಸಲು ಮುಂದಾದ ಎಸ್‌ಎಫ್‌ಐ ಸದಸ್ಯರು, ಇತರ ವಿದ್ಯಾರ್ಥಿ ಸಂಘಟನೆಗಳ ಕಾರ್ಯಕರ್ತರು ಮತ್ತು ವಕೀಲರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ ಅವರಿಗೆ ಪತ್ರ ಬರೆದಿದೆ.

ನಾಳೆ ಸಿಜೆಪಿ ಪ್ರತಿಭಟನೆ: ನಿರ್ಬಂಧಗಳ ಬಲೆಯೊಳಗೆ ರಾಷ್ಟ್ರ ರಾಜಧಾನಿ ದೆಹಲಿ
Dailyhunt
Disclaimer: This content has not been generated, created or edited by Dailyhunt. Publisher: Prajavani