Dailyhunt Logo
  • Light mode
    Follow system
    Dark mode
    • Play Story
    • App Story
ನಾಳೆ ಸಿಜೆಪಿ ಪ್ರತಿಭಟನೆ: ನಿರ್ಬಂಧಗಳ ಬಲೆಯೊಳಗೆ ರಾಷ್ಟ್ರ ರಾಜಧಾನಿ ದೆಹಲಿ

ನಾಳೆ ಸಿಜೆಪಿ ಪ್ರತಿಭಟನೆ: ನಿರ್ಬಂಧಗಳ ಬಲೆಯೊಳಗೆ ರಾಷ್ಟ್ರ ರಾಜಧಾನಿ ದೆಹಲಿ

ನವದೆಹಲಿ: ಎಸ್‌ಐಆರ್‌ನಲ್ಲಿ ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ ಆಯೋಜಿಸಿರುವ ಪ್ರತಿಭಟನೆಯನ್ನು ನಿಯಂತ್ರಿಸಲು ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ದೆಹಲಿಯಲ್ಲಿ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ.

ಪ್ರಮುಖ ನಿರ್ಬಂಧಗಳ ವಿವರಗಳು ಇಲ್ಲಿವೆ.

57 ಮೆಟ್ರೊ ನಿಲ್ದಾಣಗಳನ್ನು ಮುಚ್ಚಲು ಪ್ರಸ್ತಾಪ

ಅಕ್ಟೋಬರ್ 9ರ ರಾತ್ರಿ 9 ಗಂಟೆಯಿಂದ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವವರೆಗೆ 57 ಮೆಟ್ರೊ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚುವಂತೆ ದೆಹಲಿ ಪೊಲೀಸರು ದೆಹಲಿ ಮೆಟ್ರೊ ರೈಲು ನಿಗಮಕ್ಕೆ ಸೂಚಿಸಿದ್ದಾರೆ. ರಾಜೀವ್ ಚೌಕ್, ಸೆಂಟ್ರಲ್ ಸೆಕ್ರೆಟರಿಯಟ್, ನವದೆಹಲಿ, ಕಾಶ್ಮೀರ್ ಗೇಟ್, ಮಂಡಿ ಹೌಸ್, ಐಟಿಒ, ಪಟೇಲ್ ಚೌಕ್, ಸುಪ್ರೀಂ ಕೋರ್ಟ್, ಹೌಜ್ ಖಾಸ್, ಲಜಪತ್ ನಗರ, ಜಾಮಿಯಾ ಮಿಲಿಯಾ ಇಸ್ಲಾಮಿಯಾ ಮತ್ತು ಸರಾಯ್ ಕಾಲೇ ಖಾನ್-ನಿಜಾಮುದ್ದೀನ್ ನಿಲ್ದಾಣಗಳು ಈ ಪಟ್ಟಿಯಲ್ಲಿದ್ದವು.

ಸುಪ್ರೀಂ ಕೋರ್ಟ್ ಮಧ್ಯಪ್ರವೇಶ: ಮೆಟ್ರೊ ನಿಲ್ದಾಣಗಳನ್ನು ಸಂಪೂರ್ಣವಾಗಿ ಮುಚ್ಚುವ ಪ್ರಸ್ತಾಪದ ಬಗ್ಗೆ ಪ್ರಶ್ನಿಸಿದ ನ್ಯಾಯಾಲಯ, ನಿರ್ಬಂಧಗಳನ್ನು ಮರುಪರಿಶೀಲಿಸುವಂತೆ ಮತ್ತು ಮೆಟ್ರೊ ಹಾಗೂ ಇತರ ರೈಲು ಸೇವೆಗಳನ್ನು ಸೂಕ್ತ ನಿಯಂತ್ರಣಗಳೊಂದಿಗೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.ಸ

ಸಿಜೆಪಿ ಪ್ರತಿಭಟನೆ | ದೆಹಲಿ ಮೆಟ್ರೊ ನಿಲ್ದಾಣಗಳು ಬಂದ್: ಸುಪ್ರೀಂ ಕೋರ್ಟ್ ಕಳವಳ

ದೆಹಲಿಗೆ ತೆರಳುವ ರೈಲುಗಳ ಸಂಚಾರ ರದ್ದು

ಅಕ್ಟೋಬರ್ 10ರಂದು ಬೆಳಿಗ್ಗೆ 4ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನವದೆಹಲಿ ಮತ್ತು ಹಜರತ್ ನಿಜಾಮುದ್ದೀನ್ ನಿಲ್ದಾಣಗಳಿಗೆ ಆಗಮಿಸಬೇಕಿದ್ದ ಕೆಲವು ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ಭಾರತೀಯ ರೈಲ್ವೆ ರದ್ದುಗೊಳಿಸಿದೆ. ನಿಲ್ದಾಣಗಳ ಸುತ್ತ ನಿರೀಕ್ಷಿತ ರಸ್ತೆ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಈ ಕ್ರಮ ತೆಗೆದುಕೊಂಡಿರುವುದಾಗಿ ಹೇಳಿದೆ.

ಆಯಪ್ ಆಧಾರಿತ ಟ್ಯಾಕ್ಸಿ ನಿರ್ಬಂಧ

ಲ್ಯೂಟಿಯನ್ಸ್ ದೆಹಲಿ ಸೇರಿದಂತೆ ಸೂಕ್ಷ್ಮ ಪ್ರದೇಶಗಳತ್ತ ವಾಹನಗಳ ಸಂಚಾರವನ್ನು ನಿಯಂತ್ರಿಸಲು ದೆಹಲಿ ಪೊಲೀಸರು ಓಲಾ ಮತ್ತು ಉಬರ್‌ನಂತಹ ಆಯಪ್ ಆಧಾರಿತ ಸಾರಿಗೆ ಸೇವೆಗಳ ನಿರ್ವಾಹಕರೊಂದಿಗೆ ಸಮನ್ವಯ ನಡೆಸಿದ್ದಾರೆ ಎಂದು ವರದಿಯಾಗಿದೆ. ದೆಹಲಿಯ ಪ್ರಮುಖ ಪ್ರವೇಶ ಮಾರ್ಗಗಳಲ್ಲಿ ಹೆಚ್ಚುವರಿ ತಪಾಸಣೆ ನಡೆಸಲು ಯೋಜಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಿಗೆ ವಾಹನಗಳ ಪ್ರವೇಶವನ್ನು ನಿಯಂತ್ರಿಸುವ ಕ್ರಮಗಳನ್ನು ರೂಪಿಸಲಾಗಿದೆ.

ಸಿಜೆಪಿ ಪ್ರತಿಭಟನೆ: ದೆಹಲಿಗೆ ಬರುವ ರೈಲುಗಳು ರದ್ದು, ಮೆಟ್ರೊ ನಿಲ್ದಾಣ ಬಂದ್

ಹೋಟೆಲ್‌ಗಳು ಮತ್ತು ಅತಿಥಿಗೃಹಗಳ ಬುಕ್ಕಿಂಗ್‌ಗೆ ನಿರ್ಬಂಧ

ಮಧ್ಯ ದೆಹಲಿಯ ಕೆಲವು ಪ್ರದೇಶಗಳಲ್ಲಿನ ಹೋಟೆಲ್‌ಗಳು, ಅತಿಥಿಗೃಹಗಳು ಮತ್ತು ಇತರ ವಸತಿ ಕೇಂದ್ರಗಳಿಗೆ ಹೊಸ ಬುಕ್ಕಿಂಗ್‌ಗಳನ್ನು ನಿರ್ಬಂಧಿಸುವಂತೆ ಅಥವಾ ನಿಲ್ಲಿಸುವಂತೆ ಸೂಚಿಸಲಾಗಿದೆ. ಪಹಾಡ್‌ಗಂಜ್‌ನಂತಹ ಪ್ರದೇಶಗಳ ಹೋಟೆಲ್ ನಿರ್ವಾಹಕರಿಗೆ ಭದ್ರತಾ ವ್ಯವಸ್ಥೆಗಳ ಕುರಿತು ಮಾಹಿತಿ ನೀಡಲಾಗಿದೆ.

ಬಿಎನ್‌ಎಸ್‌ಎಸ್‌ ಸೆಕ್ಷನ್ 163ರ ಅಡಿಯಲ್ಲಿ ನಿರ್ಬಂಧ

ನವದೆಹಲಿ ಪ್ರದೇಶದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 163 ಜಾರಿಯಲ್ಲಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕ ಶಾಂತಿ ಮತ್ತು ಸುರಕ್ಷತೆಯ ಕಾರಣ ನೀಡಿ ಪೊಲೀಸರು ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದಾರೆ. ಪ್ರತಿಭಟನೆಗೆ ಸಂಬಂಧಿಸಿದ ಅರ್ಜಿಯನ್ನು ತಡವಾಗಿ ಸಲ್ಲಿಸಲಾಗಿದೆ ಎಂದು ನವದೆಹಲಿ ವಲಯದ ಜಂಟಿ ಪೊಲೀಸ್ ಆಯುಕ್ತೆ ನೂಪುರ್ ಪ್ರಸಾದ್ ತಿಳಿಸಿದ್ದಾರೆ.

ನಾಳೆಯ ಸಿಜೆಪಿ ಧರಣಿಗೆ ದೆಹಲಿ ಪೊಲೀಸರ ತಡೆ: ಜಂತರ್ ಮಂತರ್‌ನಲ್ಲಿ ನಿಷೇಧಾಜ್ಞೆ

37 ತಪಾಸಣೆ ಕೇಂದ್ರ ಮತ್ತು 15 ಬಂಧನ ಕೇಂದ್ರಗಳು

ಪ್ರತಿಭಟನೆ ಹಿನ್ನೆಲೆಯಲ್ಲಿ ನವದೆಹಲಿ ಜಿಲ್ಲೆಯಲ್ಲಿ 37 ತಪಾಸಣೆ ಕೇಂದ್ರ, ಜಿಲ್ಲೆಗಳಾದ್ಯಂತ 15 ಬಂಧನ ಕೇಂದ್ರಗಳನ್ನು ಸಿದ್ಧಪಡಿಸಲಾಗಿದೆ ಎಂದು ವರದಿಯಾಗಿದೆ. ದೆಹಲಿಯ ಪ್ರವೇಶ ಮಾರ್ಗಗಳಲ್ಲಿ ತಪಾಸಣೆ ಮತ್ತು ನಿಗಾವನ್ನು ಹೆಚ್ಚಿಸಲಾಗಿದೆ. ಗುಂಪುಗಳನ್ನು ನಿಯಂತ್ರಿಸಲು ಮತ್ತು ನಿರ್ಬಂಧಗಳನ್ನು ಜಾರಿಗೊಳಿಸಲು ನಿರ್ದಿಷ್ಟ ಸ್ಥಳಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

25 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜನೆ

ದೆಹಲಿಯಾದ್ಯಂತ ಅರೆಸೇನಾ ಪಡೆಗಳೂ ಸೇರಿದಂತೆ 25 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಂತರ್ ಮಂತರ್ ಇರುವ ನವದೆಹಲಿ ಜಿಲ್ಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ರಾಜಧಾನಿಯ ಪ್ರವೇಶ ಮಾರ್ಗಗಳಲ್ಲಿ ತಪಾಸಣೆ ಮತ್ತು ನಿಗಾವನ್ನು ಹೆಚ್ಚಿಸಲಾಗಿದೆ.

ಜನಸಂದಣಿಯನ್ನು ನಿಯಂತ್ರಿಸಲು ಮತ್ತು ನಿರ್ಬಂಧಗಳನ್ನು ಜಾರಿಗೊಳಿಸಲು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಎರಡು ದಿನ ಮದ್ಯದಂಗಡಿಗಳು ಬಂದ್

ಅಕ್ಟೋಬರ್ 9 ಮತ್ತು 10ರಂದು ದೆಹಲಿಯಾದ್ಯಂತ ಚಿಲ್ಲರೆ ಮದ್ಯದಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ. ದೆಹಲಿ ಪೊಲೀಸರ ನಿರ್ದೇಶನದಂತೆ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಒಗ್ಗಟ್ಟು ಪ್ರದರ್ಶಿಸಿ, ಸುದೀರ್ಘ ಆಂದೋಲನಕ್ಕೆ ಸಜ್ಜಾಗಿ: ಸಿಜೆಪಿ ಕರೆ

ಪತ್ರಕರ್ತರಿಗೆ ನಿಯಮಗಳು ‌

ಮಾಧ್ಯಮ ಪ್ರತಿನಿಧಿಗಳು ತಮ್ಮ ಸಂಸ್ಥೆ ನೀಡಿದ ಮಾನ್ಯತೆ ಪಡೆದ ಗುರುತಿನ ಚೀಟಿ ಅಥವಾ ಪಿಐಬಿ/ಡಿಐಪಿ ಮಾನ್ಯತಾ ಪತ್ರಗಳನ್ನು ಕಡ್ಡಾಯವಾಗಿ ಸ್ಪಷ್ಟವಾಗಿ ಕಾಣುವಂತೆ ಧರಿಸಿರಬೇಕು. ವರದಿ ಮಾಡುವ ವೇಳೆ ಪೊಲೀಸರ ಕಾರ್ಯಾಚರಣೆ ಹಾಗೂ ಅವರ ಸಂಚಾರಕ್ಕೆ ಯಾವುದೇ ರೀತಿಯಲ್ಲೂ ಅಡ್ಡಿಯಾಗದಂತೆ ಎಚ್ಚರ ವಹಿಸಬೇಕು. ಉದ್ವಿಗ್ನ ಪರಿಸ್ಥಿತಿ ಉಂಟಾದಾಗ ಸುರಕ್ಷಿತ ಅಂತರ ಕಾಯ್ದುಕೊಂಡು ಚಿತ್ರೀಕರಣ ಹಾಗೂ ವರದಿಗಾರಿಕೆ ನಡೆಸಬೇಕು ಎಂದು ಪತ್ರಕರ್ತರಿಗೆ ಮಾರ್ಗಸೂಚಿ ಬಿಡುಗಡೆಗೊಳಿಸಲಾಗಿದೆ.

(ಪಿಟಿಐ, ಎಎನ್‌ಐ ಹಾಗೂ ದೆಹಲಿ ಪೊಲೀಸ್ ಮೂಲಗಳ ಮಾಹಿತಿ)

ಪತ್ರಿಕೋದ್ಯಮವನ್ನು ದುರುಪಯೋಗಪಡಿಸಿಕೊಳ್ಳಬಾರದು: ದೆಹಲಿ ಪೊಲೀಸ್
Dailyhunt
Disclaimer: This content has not been generated, created or edited by Dailyhunt. Publisher: Prajavani