Dailyhunt Logo
  • Light mode
    Follow system
    Dark mode
    • Play Story
    • App Story
ಸಿನಿ ಸಿಪ್: ನಟ ಅಂಬರೀಶ್ ಕರ್ಣ ಆದದ್ದು ಹೀಗೆ...

ಸಿನಿ ಸಿಪ್: ನಟ ಅಂಬರೀಶ್ ಕರ್ಣ ಆದದ್ದು ಹೀಗೆ...

ಶಿಸ್ತಿನ ಮೂಟೆಯಂತೆ, ಮಹಾ ಒರಟನಂತೆ, ಮುಂಗೋಪಿಯಂತೆ, 'ಸಂಸ್ಕೃತ' ಮಾತನ್ನು ಎಗ್ಗಿಲ್ಲದೆ ಆಡುವ ಚಾಳಿ ಇರುವವವರಂತೆ ಕಾಣುತ್ತಿದ್ದ ನಟ ಅಂಬರೀಶ್ ಹೃದಯ ಎಂಥದ್ದು ಎನ್ನುವುದು ಅವರ ಆಪ್ತ ವಲಯಕ್ಕಷ್ಟೇ ಗೊತ್ತು. ರಾಜಕೀಯ ಬದುಕಿನಲ್ಲಿ ಇದ್ದಾಗಲೂ ತಮ್ಮ ಕಾರನ್ನು ತಾವೇ ಚಲಾಯಿಸಿಕೊಂಡು ಓಡಾಡಿದ್ದ ಅವರು ನಿರ್ಮಾಪಕರ ಪಾಲಿನ ಡಾರ್ಲಿಂಗ್ ಕೂಡ ಆಗಿದ್ದರು.

ನಟ ಅಂಬರೀಶ್ ಕರ್ಣ ಆದದ್ದು ಹೀಗೆ...

ಕೆಲವರ ಇಮೇಜ್ ಕಟ್ಟಿಕೊಡುವ ಅಭಿಪ್ರಾಯವೇ ಬೇರೆ. ಹೊರಗೆ ಅಂಥವರು ಕಾಣುವುದು ಒಂದು ರೀತಿ ಆದರೆ, ಒಳಗಿನಿಂದ ಬೇರೆಯದೇ ವ್ಯಕ್ತಿಯಾಗಿ ಬದುಕಿರುತ್ತಾರೆ. ಹೀಗೆ ಜೀವನದ ಅರ್ಥಗಳನ್ನು ಹಲವು ಪದರಗಳಲ್ಲಿ ದಾಟಿಸಿದವರು ನಟ ಅಂಬರೀಶ್. ಅವರಿಗೆ 'ರೆಬೆಲ್ ಸ್ಟಾರ್' ಎಂಬ ಬಿರುದು ಇತ್ತು. ನಿಜ ಬದುಕಿನಲ್ಲೂ ಕೆಲವೊಂದು ವಿಷಯಗಳಿಗೆ ಹೊಂದುವಂತಹ ಗುಣವಿಶೇಷಣ ಅದು. ಆದರೆ, ಅವರು ಇದಮಿತ್ಥಂ ಎನ್ನುವ ಕ್ರಾಂತಿಕಾರರ ಆವರಣದೊಳಗೆ ಬರಲಿಲ್ಲ. ತಮ್ಮ ಮೂಗಿನ ನೇರಕ್ಕೆ ನಡೆಯುವುದರಲ್ಲಿ ನಿಸ್ಸೀಮರಾಗಿದ್ದರು. ಆ ನಡೆ ಬಹಳ ಆಸಕ್ತಿಕರ ಅಧ್ಯಾಯಗಳ ಮಾರ್ಗವೇ ಆಯಿತು.ಅಂಬರೀಶ್ ಅವರಿಗೆ ವೇಗ ಎಂದರೆ ಪ್ರೀತಿ. ಅವರು ಎಕ್ಸ್ಪ್ರೆಸ್ ವೇ ಇಲ್ಲದ ಕಾಲದಲ್ಲಿಯೇ ಬೆಂಗಳೂರಿನಿಂದ ಮೈಸೂರಿಗೆ ಒಂದೂವರೆ ಗಂಟೆಯೊಳಗೆ ಕಾರು ಓಡಿಸುತ್ತಿದ್ದರು. ಚಿತ್ರೀಕರಣದ ಹೊತ್ತಿಗೆ ಸರಿಯಾಗಿ ಸೆಟ್ ತಲುಪಿದ ಉದಾಹರಣೆಗಳು ವಿರಳ. ಒಮ್ಮೆ ಪುಟ್ಟಣ್ಣ ಕಣಗಾಲರು ಚಿತ್ರೀಕರಣಕ್ಕೆ ಅಣಿಯಾಗಿ ಕಾಯುತ್ತಿದ್ದರು. ಅಂಬರೀಶ್ ಪತ್ತೆ ಇಲ್ಲ. ಆಮೇಲೆ ವೇಗವಾಗಿ ಕಾರು ಬಂದು ಚಿತ್ರೀಕರಣದ ಸ್ಥಳದಲ್ಲಿ ನಿಂತಿತು. 'ಪ್ರಯಾಣದ ನಡುವೆ ಟೈರ್ ಪಂಕ್ಚರ್ ಆದದ್ದರಿಂದ ತಡವಾಯಿತು' ಎಂದು ಆಗ ಅಂಬರೀಶ್ ಸಬೂಬು ಹೇಳಿದ್ದರು. ಅವರೊಟ್ಟಿಗೆ ಕೆಲಸ ಮಾಡಿದ ಯಾವ ನಿರ್ದೇಶಕರೂ ಅಂಬರೀಶ್ ಹೊತ್ತಿಗೆ ಸರಿಯಾಗಿ ಸೆಟ್ ಗೆ ಬಂದದ್ದನ್ನು ಹೇಳಿಕೊಳ್ಳುವುದಿಲ್ಲ. ಹಾಗಂತ ಆ ವಿಷಯವೊಂದನ್ನೇ ಇಟ್ಟುಕೊಂಡು ಅವರನ್ನು ದೂರುವುದೂ ಇಲ್ಲ. ಅಂಬರೀಶ್ ತಮಗಾಗಿ ಬದುಕುತ್ತಿದ್ದರು. ಯಾರನ್ನೂ ಮೆಚ್ಚಿಸುವುದಾಗಲೀ, ಯಾರದೊ ಮುಲಾಜಾಗಲೀ ಅವರಿಗೆ ಇರಲಿಲ್ಲ. ಅವರು 2006ರಲ್ಲಿ ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ ಯಾರೋ ಒಬ್ಬರು ಕಾಂಗ್ರೆಸ್ ಮುಖಂಡರು ಸೋನಿಯಾ ಗಾಂಧಿ ಅವರಿಗೆ ದೂರಿತ್ತರು. 'ಅಂಬರೀಶ್ ಅವರಿಗೆ ಮದ್ಯ ಕುಡಿಯುವ ಚಾಳಿ. ಕುದುರೆ ರೇಸ್ ವ್ಯಸನವೂ ಇದೆ. ಅವರು ಕುಡಿದಿರುವಾಗ ಕಡತಗಳಿಗೆ ಸಹಿ ಮಾಡುತ್ತಾರೆ' ಎಂಬ ದೂರು ಅದಾಗಿತ್ತು. ಸೋನಿಯಾ ಅವರು ಕರೆದು, ಆ ದೂರಿನ ಕುರಿತು ಪ್ರಶ್ನೆಗೆ ಒಳಪಡಿಸಿದರು. ಆಗ ಅಂಬರೀಶ್ ಪ್ರಾಮಾಣಿಕವಾಗಿ ತಮಗೆ ಕುಡಿತದ, ಕುದುರೆ ರೇಸ್ ನ ಚಟ ಇರುವುದನ್ನು ಒಪ್ಪಿಕೊಂಡರು. ಆದರೆ, ಅಮಲಿನಲ್ಲಿ ಇರುವಾಗ ಕಡತಗಳಿಗೆ ಸಹಿ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿನಿ ಸಿಪ್: ಎಲ್ಲರಂತಲ್ಲದ ಚಿರಸ್ಥಾಯಿ ಶಂಕರ್ ನಾಗ್ ಸಿನಿ ಸಿಪ್: ಅಣ್ಣಾವ್ರನ್ನ ಕಳೆದುಕೊಂಡ ದಿನದ ವಿದ್ಯಮಾನ; ನಿಜಕ್ಕೂ ಆಗಿದ್ದೇನು?

ತಾವು ಸಿನಿಮಾಗಳಿಗೆ ಸಹಿ ಹಾಕುವಾಗ ಕೂಡ ಅಮಲಿನಲ್ಲಿ ಇರುವುದಿಲ್ಲ ಎಂದೂ ಮಾತು ಸೇರಿಸಿದರು. ಅಂಬರೀಶ್ ಅವರಿಗೆ ತಕ್ಕ ಶಾಸ್ತಿ ಆಗುತ್ತದೆ ಎಂದುಕೊಂಡಿದ್ದವರಿಗೆ ಆ ದಿನದ ಬೆಳವಣಿಗೆ ಅಚ್ಚರಿ ಮೂಡಿಸಿತು. ಖುದ್ದು ಸೋನಿಯಾ ನಟನ ಪ್ರಾಮಾಣಿಕ ಮಾತಿಗೆ ಮಂದಹಾಸ ಬೀರಿ ಸುಮ್ಮನಾಗಿದ್ದರು.ಸ್ನೇಹಿತರೊಬ್ಬರು ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಕೈ ಹಾಕಿದರು. ಆಗ ಅಂಬರೀಶ್ ಅವರ ಹೆಸರಿನ ಬಲ ಜೊತೆಗಿದ್ದಾರೆ ಸಾಕು ಎಂದು ಕೇಳಿಕೊಂಡರು. ಆದರೆ, ಅಂಬರೀಶ್ ಆ ವ್ಯವಹಾರಕ್ಕೆ ಸಾಥಿ ಆಗಲಿಲ್ಲ. ಅಲ್ಲಿ ಹೂಡಬಹುದಾಗಿದ್ದ ಬಂಡವಾಳದಷ್ಟೇ ಬೆಲೆಯ ಐಷಾರಾಮಿ ಕಾರು ಕೊಂಡರು. ಮುಂದೆ ವಿಧಾನಸೌಧದ ಆಸುಪಾಸಿನಲ್ಲಿ ಇದ್ದ ಆ ರಿಯಲ್ ಎಸ್ಟೇಟ್ ಭೂಮಿಗೆ ಬಂದ ಬೆಲೆ ನೂರಾರು ಕೋಟಿ ರೂಪಾಯಿ. ಸ್ನೇಹಿತರು ಬೆಳೆದದ್ದನ್ನು ಕಂಡು ಅಂಬರೀಶ್ ಖುಷಿ ಪಟ್ಟರೇ ವಿನಾ ತಾವು ಅಂತಹ ಅವಕಾಶ ಕಳೆದುಕೊಂಡದ್ದಕ್ಕೆ ಹಲುಬಲಿಲ್ಲ. ಕೊಡುವ ವಿಷಯದಲ್ಲಿ ಅಂಬರೀಶ್ ಕೈ ಮುಂದು. ಅವರ ಆಪ್ತ ವಲಯದವರ ಪ್ರಕಾರ ನಿರ್ಮಾಪಕರು ಕೊಟ್ಟಿದ್ದ ಚೆಕ್ ಗಳಲ್ಲಿ ಸುಮಾರು ₹7 ಕೋಟಿಯಷ್ಟು ನಗದಾಗದೆ, ಬೌನ್ಸ್ ಆಗಿದ್ದವು. ಇದು ನಿಜವೇ ಎಂದು ಅವರನ್ನು ಒಮ್ಮೆ ಕೇಳಿದಾಗ, 'ಮನೆಗೆ ಬನ್ನಿ. ತಿಂಡಿ ತಿನ್ನಿ. ಇರುವ ಚೆಕ್ ತೋರಿಸುವೆ. ಎಷ್ಟು ಎಂದು ಲೆಕ್ಕ ಹಾಕಿ ಯಾರಿಗೂ ಹೇಳದೆ ಸುಮ್ಮನೆ ಹೋಗಬೇಕು... ಅದು ಕಂಡೀಷನ್ನು' ಎಂದಿದ್ದರು.

ಯಾರದೋ ಕಷ್ಟಕ್ಕೆ ಮರುಗುತ್ತಿದ್ದ ಅವರು ನಿರ್ಮಾಪಕರನ್ನು ಅನ್ನದಾತರು ಎಂದೇ ನಂಬಿದ್ದರು. ತಾವು ಅಭಿನಯಿಸಿದ ಸಿನಿಮಾ ಫ್ಲಾಪ್ ಆದಾಗ, ತಲೆ ಮೇಲೆ ಕೈ ಹೊತ್ತ ನಿರ್ಮಾಪಕರನ್ನು ಕಂಡು ಅವರು ದಾಟಿಕೊಂಡು ಮುನ್ನಡೆಯುತ್ತಿರಲಿಲ್ಲ. ಬಿಡುವಿದ್ದಾಗ, 'ಇಂತಿಷ್ಟು ದಿನ ಶೂಟಿಂಗ್ ಇರಲ್ಲ. ಬೇಕಾದರೆ ಯಾವುದಾದರೂ ಕಥೆ ಇದ್ದರೆ ಹೇಳು... ನಾನು ಬಿಡುವಿನಲ್ಲಿ ಬಂದು ಆಕ್ಟ್ ಮಾಡಿ ಹೋಗ್ತೀನಿ' ಎಂದು ಅದೇ ನಿರ್ಮಾಪಕರಿಗೆ ಕಾಲ್ ಶೀಟ್ ಕೊಡುತ್ತಿದ್ದರು. ಸಿನಿಮಾ ಗೆದ್ದು, ನಿರ್ಮಾಪಕರಿಗೆ ಹಣ ಸಿಕ್ಕರೆ ಸಂಭಾವನೆಯ ಬಾಬತ್ತು ಬರುತ್ತಿತ್ತು. ಇಲ್ಲವಾದರೆ ಹಳೆಯ ನಷ್ಟಕ್ಕೆ ತುಸು ಪರಿಹಾರ ಕೊಟ್ಟಹಾಗೆ ಆಯಿತು ಎಂದು ಸುಮ್ಮನಾಗುತ್ತಿದ್ದರು.ಅಂಬರೀಶ್ ಅವರ ಸ್ನೇಹ ಬಳಗ ದೊಡ್ಡದು. ರೇಸ್ ಆಡುವ ಮೊದಲು ಯಾವ ಕುದುರೆಯ ಮೇಲೆ ಹಣ ಕಟ್ಟಬೇಕು ಎಂದು ಸಲಹೆ ನೀಡುವಂತಹ ಸ್ನೇಹಿತರೇ ಒಂದಿಷ್ಟು ಇದ್ದರು. ಸಿನಿಮಾ ಕ್ಷೇತ್ರದಲ್ಲಿ ಅವರಿಗೆ ವಿಷ್ಣುವರ್ಧನ್ ಪರಮಾಪ್ತ. ಸ್ವಭಾವದಲ್ಲಿ ಸಂಪೂರ್ಣ ಭಿನ್ನವಾಗಿದ್ದ ಇಬ್ಬರೂ ಅದು ಹೇಗೆ ತಾಳ-ಮೇಳ ಸಾಧಿಸುತ್ತಿದರು ಎನ್ನುವ ಜಿಜ್ಞಾಸೆ ಮಾತ್ರ ಹಾಗೆಯೇ ಉಳಿದಿದೆ. ಹಾಗೆ ಯಾರು ಇಬ್ಬರ ನಡುವಿನ ಕೆಮಿಸ್ಟ್ರಿ ಬಗ್ಗೆ ಕೇಳಿದರೂ ಅವರು ತಮ್ಮ ಸಿಗ್ನೇಚರ್ ನಗೆ ನಗುತ್ತಿದ್ದರು. ಅಂಬರೀಶ್, ವಿಷ್ಣುವರ್ಧನ್ ಜೊತೆಗೆ ಪ್ರಯಾಣ ಹೊರಟಾಗ ಇರುತ್ತಿದ್ದ ಮಜಾ ದಿನಗಳನ್ನು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಈಗಲೂ ಮೆಲುಕು ಹಾಕುತ್ತಿರುತ್ತಾರೆ.

ನಟ ಟೈಗರ್ ಪ್ರಭಾಕರ್ ಆಸ್ಪತ್ರೆಯಲ್ಲಿ ತೀರಿಹೋದಾಗ, ಬಿಲ್ ಕಟ್ಟಿ ಶವ ಪಡೆಯುವ ಪರಿಸ್ಥಿತಿ ಬಂತು. ಆಗ ಮಗುವಿನಂತೆ ಬಿಕ್ಕಿದ್ದ ಅಂಬರೀಶ್, ಆಸ್ಪತ್ರೆಯ ಹಣ ಕಟ್ಟಿದ ಸಂಗತಿಯನ್ನು ಅವರ ಸಹಾಯಕ ರಾಜು ನೆನಪಿಸಿಕೊಂಡಿದ್ದರು. ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಆಡಲು ಆರಂಭಿಸಿದ್ದ ದಿನಗಳಲ್ಲಿ ಅವರ ಪ್ರತಿಭೆಗೆ ತಲೆದೂಗಿ ₹2 ಲಕ್ಷದ ಚೆಕ್ ಬರೆದು ಕೊಟ್ಟಿದ್ದ ಈ ನಟನ ಔದಾರ್ಯವನ್ನೂ ಅವರು ಮೆಲುಕುಹಾಕಿದ್ದರು.'ಕುರುಕ್ಷೇತ್ರ' ಚಿತ್ರವನ್ನು ಮಾಡಿ ಮುಗಿಸಲು ನಿರ್ಮಾಪಕ ಮುನಿರತ್ನ ಸುದೀರ್ಘ ಅವಧಿ ತೆಗೆದುಕೊಂಡಿದ್ದರು. ಅದರಲ್ಲಿ ಭೀಷ್ಮನ ಪಾತ್ರವನ್ನು ಅಂಬರೀಶ್ ಮಾಡಬೇಕು ಎಂಬ ಆಸೆ ಅವರಿಗಿತ್ತು. ಅದಕ್ಕೆ ಒಪ್ಪಿದ ರೆಬೆಲ್ ಸ್ಟಾರ್, ಸಂಭಾವನೆಯನ್ನೇ ಪಡೆಯದೆ ಬಣ್ಣ ಹಚ್ಚಿದ್ದು ಇನ್ನೊಂದು ವಿದ್ಯಮಾನ.'ಅಂತ' ಸಿನಿಮಾದ ಕಲ್ಟ್ ಅಂಬಿ, 'ಹೃದಯ ಹಾಡಿತು' ಸಿನಿಮಾದ ಮೃದು ಸ್ವಭಾವದ ಅಂಬಿ, 'ರಂಗನಾಯಕಿ' ಸಿನಿಮಾದ ಭಾವುಕ ಅಂಬಿ, ಮಾಲಾಶ್ರೀ ತರಹದ ನಟಿ ದ್ವಿಪಾತ್ರದಲ್ಲಿ ಅಭಿನಯಿಸಿದ ಸಿನಿಮಾದಲ್ಲಿ ಒಂದು ಪಾತ್ರ ಮಾಡಲು ಒಪ್ಪಿದ ಅಂಬಿ, ಆರೋಗ್ಯ ಕೈಕೊಟ್ಟಾಗಲೂ 'ಏ ಅಂಬಿ ನಿಂಗೆ ವಯಸ್ಸಾಯ್ತು ಕಣೋ' ಚಿತ್ರಕ್ಕೆ ಬಣ್ಣ ಹಚ್ಚಿದ್ದ ಅಂಬಿ... ಹೀಗೆ ಅವರ ನೆನಪಿನ ಅಧ್ಯಾಯಗಳು ಒಂದೊಂದಾಗಿ ತೆರೆದುಕೊಳ್ಳುತ್ತಾ ಹೋಗುತ್ತವೆ.

ರೌಡಿ ಎಂಎಲ್ ಎ ಚಿತ್ರದ ಪಾತ್ರಕ್ಕೆ ನಟ ಜಗ್ಗೇಶ್ ₹50 ಸಾವಿರ ಸಂಭಾವನೆ ಕೇಳಿದ್ದರು. ಅದು ಹೆಚ್ಚಾಯಿತು ಎಂದು ನಿರ್ಮಾಪಕರು ಪಾತ್ರಕ್ಕೆ ಬೇರೆಯವರನ್ನು ಆರಿಸಲು ಮುಂದಾದರು. ಆಗ ಆ ಪಾತ್ರಕ್ಕೆ ಜಗ್ಗೇಶ್ ಅವರೇ ಸೂಕ್ತ ಎಂದು ಪಟ್ಟು ಹಿಡಿದವರು ಅಂಬಿ. ಆಮೇಲೆ ಅದೇ ನಿರ್ಮಾಪಕರಿಂದ ₹75 ಸಾವಿರ ಸಂಭಾವನೆ ಕೊಡಿಸಿದ್ದ ಹೃದಯವಂತ. ಮಗನ ಮೊದಲ ಸಿನಿಮಾವನ್ನು ನೋಡಲೆಂದೇ ಮನೆಯಲ್ಲಿ ಒಂದು ಸುಸಜ್ಜಿತ ಹೋಮ್ ಥಿಯೇಟರ್ ಮಾಡಿಸಿದ್ದ ಅಂಬರೀಶ್, ಆ ಚಿತ್ರ ತೆರೆಕಾಣುವ ಮೊದಲೇ ಕೊನೆಯುಸಿರೆಳೆದರು. ಆ ಹೋಮ್ ಥಿಯೇಟರ್ ನಲ್ಲಿ ಈಗ ಅಂಬರೀಶ್ ಚಿತ್ರಗಳೂ ಆಗಾಗ ಮೂಡುತ್ತಿವೆಯೋ ಏನೋ...

Dailyhunt
Disclaimer: This content has not been generated, created or edited by Dailyhunt. Publisher: Prajavani