Dailyhunt Logo
  • Light mode
    Follow system
    Dark mode
    • Play Story
    • App Story
ಸ್ಟಾರ್ಟ್‌ ಅಪ್‌: ತಾಯಿಗಾಗಿ AI ಶಾಪಿಂಗ್ ಏಜೆಂಟ್ ಪರಿಚಯಿಸಿದ ಬೆಂಗಳೂರಿನ ಟೆಕಿ

ಸ್ಟಾರ್ಟ್‌ ಅಪ್‌: ತಾಯಿಗಾಗಿ AI ಶಾಪಿಂಗ್ ಏಜೆಂಟ್ ಪರಿಚಯಿಸಿದ ಬೆಂಗಳೂರಿನ ಟೆಕಿ

ಬೆಂಗಳೂರಿನ ತಂತ್ರಜ್ಞ ವೈಶಾಖ್ ಐಯ್ಯಂಗಾರ್ ಅವರು ತಮ್ಮ ತಾಯಿಗಾಗಿ ವಾಟ್ಸ್‌ಆಯಪ್ ಮೂಲಕ ಅಗತ್ಯ ವಸ್ತುಗಳನ್ನು ಆರ್ಡರ್ ಮಾಡಲು ನೆರವಾಗುವ ಕೃತಕ ಬುದ್ಧಿಮತ್ತೆ ಆಧಾರಿತ ಎಐ ಏಜೆಂಟ್ ಅಭಿವೃದ್ಧಿಪಡಿಸಿದ್ದಾರೆ. ಅದು ಹೇಗೆ ಕೆಲಸ ಮಾಡುತ್ತದೆ ಎಂಬುದರ ಪೂರ್ಣ ಮಾಹಿತಿ ಇಲ್ಲಿದೆ.

'ಅಮ್ಮ, ಬೇಕಾದ ವಸ್ತುಗಳನ್ನೆಲ್ಲಾ ಆಯಪ್‌ನಲ್ಲಿ ಆರ್ಡರ್ ಮಾಡಿಬಿಡಿ. ಎಲ್ಲವನ್ನೂ ನನಗೆ ಕೇಳಬೇಡಿ' ಎಂದು ತಾಯಿಗೆ ತಂತ್ರಜ್ಞಾನವೆಲ್ಲವೂ ಗೊತ್ತಿದೆ ಎಂದು ಭಾವಿಸಿ ಗದರಿ ನಮ್ಮ ಕೆಲಸದಲ್ಲಿ ತಲ್ಲೀನರಾಗುವುದು ಸುಲಭ. ಆದರೆ ವಿವಿಧ ಆಯಪ್‌ಗಳನ್ನು ತೆರೆಯುವುದು, ಬೇಕಾದ ಸರಿಯಾದ ವಸ್ತುಗಳನ್ನು ಹುಡುಕುವುದು, ಬ್ರ್ಯಾಂಡ್ ಆಯ್ಕೆ, ಕಾರ್ಟ್‌ಗೆ ಸೇರಿಸುವುದು, ಪಾವತಿ ಹೀಗೆ ಹಲವು ಹಂತಗಳು ಎಲ್ಲರಿಗೂ ಸುಲಭವಲ್ಲ. ಅದರಲ್ಲೂ ಇಳಿವಯಸ್ಸಿನ ತಂದೆ ತಾಯಿಯರಿಗೆ ಇದು ಕಬ್ಬಿಣದ ಕಡಲೆಯೇ ಸರಿ.

ಲಂಡನ್‌ನಲ್ಲಿ ನೆಲೆಸಿರುವ ಬೆಂಗಳೂರಿನ ತಂತ್ರಜ್ಞ ವೈಶಾಖ್ ಐಯ್ಯಂಗಾರ್ ಅವರಿಗೆ ಇದೇ ಸಮಸ್ಯೆ ಎದುರಾಗಿತ್ತು. ಬೆಂಗಳೂರಿನಲ್ಲಿರುವ ಅವರ ತಾಯಿ ಸುಧಾ ಕಣ್ಣನ್ ಅವರಿಗೆ ಮನೆಯ ಅಗತ್ಯ ವಸ್ತುಗಳನ್ನು ತಾವೇ ಖರೀದಿಸುವುದು ಇಷ್ಟ. ಆದರೆ ವಿವಿಧ ಆಯಪ್‌ಗಳ ಬಳಕೆ ಸುಲಭವಾಗಿರಲಿಲ್ಲ. ಮತ್ತೊಂದೆಡೆ, ವಾಟ್ಸ್‌ಆಯಪ್‌ನಲ್ಲಿ ವಾಯ್ಸ್‌ನೋಟ್ ಕಳುಹಿಸುವುದು ಅವರಿಗೆ ಚೆನ್ನಾಗಿ ರೂಢಿಯಾಗಿತ್ತು.

'ಆಯಪ್ ಬಳಸುವ ಬದಲು, ಅಮ್ಮ ವಾಟ್ಸ್‌ಆಯಪ್‌ನಲ್ಲಿ ಕೇಳಿದರೆ ಸಾಕಾಗುವಂತೆ ಮಾಡಬಹುದಲ್ಲವೇ?' ಎಂಬ ಆಲೋಚನೆ ವೈಶಾಖ್‌ ಅವರ ಮನದಲ್ಲಿ ಮೂಡಿತು. ಈ ಒಂದು ಪ್ರಶ್ನೆಯಿಂದಲೇ ಹುಟ್ಟಿದ್ದು ಕೃತಕ ಬುದ್ಧಿಮತ್ತೆ (ಎಐ) ಏಜೆಂಟ್‌.

ಮೆಟಾದಲ್ಲಿ ಕೆಲಸ ಮಾಡುತ್ತಿರುವ ವೈಶಾಖ್‌ ಅವರ ನಿತ್ಯದ ಕಸರತ್ತು ಎಐಗೆ ಆಗಿರುತ್ತದೆ. ಹೀಗಾಗಿ ತಾಯಿಯ ಕಷ್ಟವನ್ನು ಅರಿತ ಅವರು, ಅಭಿವೃದ್ಧಿಪಡಿಸಿದ ಎಐ ಏಜೆಂಟ್‌ಗೆ ಈಗ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಜತೆಗೆ ತಮಗೊಂದು ಇಂಥದ್ದೊಂದು ಏಜೆಂಟ್‌ ಕೊಡು ಎಂಬ ಬೇಡಿಕೆ ಎಲ್ಲೆಡೆಯಿಂದ ಬರುತ್ತಿದೆ ಎಂದು ನೆನೆದು ಸಂಭ್ರಮಿಸಿದರು ವೈಶಾಖ್.

ವಾಟ್ಸ್‌ಆಯಪ್‌ನಲ್ಲೇ ಹೇಳಿದರೆ ಸಾಕು

ವೈಶಾಖ್ ಅಭಿವೃದ್ಧಿಪಡಿಸಿರುವ ಏಜೆಂಟ್‌ ವಾಟ್ಸ್‌ಆಯಪ್‌ನಲ್ಲಿ ತಮಗೆ ಬೇಕಾದ ವಸ್ತುಗಳನ್ನು ಸಾಮಾನ್ಯವಾಗಿ ಮಾತನಾಡುವ ರೀತಿಯಲ್ಲೇ ಹೇಳಬಹುದು. ಕನ್ನಡ, ಇಂಗ್ಲಿಷ್ ಅಥವಾ ಎರಡನ್ನೂ ಬೆರೆಸಿದ 'ಕಂಗ್ಲಿಷ್' ಕೂಡಾ ಆಗಿರಬಹುದು.

ಉದಾಹರಣೆಗೆ, 'ಅಕ್ಕಿ ಬೇಕು, ಒಂದು ಒಳ್ಳೆಯ ಬ್ರ್ಯಾಂಡ್ ಹುಡುಕಿಕೊಡು', 'ಹಾಲು ಮತ್ತು ಬ್ರೆಡ್ ಆರ್ಡರ್ ಮಾಡು' ಎಂಬ ರೀತಿಯಲ್ಲಿ ಹೇಳಿದರೆ ಸಾಕು.

ಮೊದಲು ವಾಟ್ಸ್‌ಆಯಪ್ ಮೂಲಕ ಬಂದ ಧ್ವನಿ ಸಂದೇಶವನ್ನು ಪಠ್ಯವಾಗಿ ಪರಿವರ್ತಿಸಲಾಗುತ್ತದೆ. ಬೆಂಗಳೂರಿನ ಜಯನಗರದಲ್ಲಿರುವ ಎಐ ತಂತ್ರಜ್ಞಾನ ಸಂಸ್ಥೆ ಜ್ಞಾನಿ ಅಭಿವೃದ್ಧಿಪಡಿಸಿರುವ ವಾಯ್ಸ್ ಮಾಡ್ಯೂಲ್‌ಗಳ ನೆರವಿನಿಂದ ಧ್ವನಿಯನ್ನು ಅಕ್ಷರೂಪದಲ್ಲಿ ಹಾಗೂ ಅಗತ್ಯವಿದ್ದಲ್ಲಿ ಪದಗಳನ್ನು ಮತ್ತೆ ಧ್ವನಿಯಾಗಿ ಪರಿವರ್ತಿಸುವ ವ್ಯವಸ್ಥೆಯನ್ನು ಅವರು ಬಳಸಿದ್ದಾರೆ.

ನಂತರ ಗೂಗಲ್ ಜೆಮಿನಿ ಆ ಸಂದೇಶದ ಅರ್ಥವನ್ನು ಗ್ರಹಿಸಿ, ಬಳಕೆದಾರರ ಉದ್ದೇಶವನ್ನು ಅರ್ಥೈಸಿಕೊಳ್ಳುತ್ತದೆ. ಯಾವ ವಸ್ತು ಬೇಕು, ಎಷ್ಟು ಬೇಕು ಎಂಬುದನ್ನು ಅರ್ಥಮಾಡಿಕೊಂಡು ಮುಂದಿನ ಹಂತಕ್ಕೆ ಕಳುಹಿಸುತ್ತದೆ.

ಇಲ್ಲಿ ಚಿತ್ರಣಕ್ಕೆ ಬರುವುದೇ ಮಾಡೆಲ್ ಕಂಟೆಕ್ಸ್ಟ್‌ ಪ್ರೊಟೊಕಾಲ್‌ (ಎಂಸಿಪಿ)

ತಂದೆ ಕಣ್ಣನ್ ದೊರೆಸ್ವಾಮಿ ಹಾಗೂ ತಾಯಿ ಸುಧಾ ಕಣ್ಣನ್ ಅವರೊಂದಿಗೆ ವೈಶಾಖ್ ಐಯ್ಯಂಗಾರ್

ಆಯಪ್‌ನೊಂದಿಗೆ ಮಾತನಾಡುವ ಎಐ ಸೇತುವೆ

ಸರಳವಾಗಿ ಹೇಳುವುದಾದರೆ, ಎಂಸಿಪಿ ಎನ್ನುವುದು ಕೃತಕ ಬುದ್ಧಿಮತ್ತೆಯ ಏಜೆಂಟ್‌ಗಳು ಹೊರಗಿನ ಡಿಜಿಟಲ್ ಸೇವೆಗಳೊಂದಿಗೆ ಸಂಪರ್ಕ ಸಾಧಿಸಿ ಅವುಗಳಲ್ಲಿರುವ ಕಾರ್ಯಗಳನ್ನು ನಿರ್ವಹಿಸಲು ನೆರವಾಗುವ ಮುಕ್ತ ಮಾನದಂಡ.

ವೈಶಾಖ್ ಅವರ ಪ್ರಯೋಗದಲ್ಲಿ ಜೆಮಿನಿ ಎಐ ಏಜೆಂಟ್‌ಗೆ ಸ್ವಿಗ್ಗಿಯ ಎಂಸಿಪಿ ಸಂಪರ್ಕಿಸಲಾಗಿದೆ. ಇದರಿಂದ ಗ್ರಾಹಕರು ಅಕ್ಕಿ ಕೇಳಿದರೆ, 'ಸ್ವಿಗ್ಗಿಯಲ್ಲಿ ಅಕ್ಕಿ ಇದೆ' ಎಂದಷ್ಟೇ ಹೇಳುವುದಕ್ಕೆ ಸೀಮಿತವಾಗಿರದೆ, ಉತ್ಪನ್ನ ಹುಡುಕುವುದು, ಆಯ್ಕೆ ಮಾಡುವುದು, ಕಾರ್ಟ್‌ಗೆ ಸೇರಿಸುವುದು ಮತ್ತು ಆರ್ಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಕಾರ್ಯವನ್ನು ಎಂಸಿಪಿ ನಿರ್ವಹಿಸಬಲ್ಲದು.

ಸ್ವಿಗ್ಗಿಯಲ್ಲಿ ಈಗ ಫುಡ್‌ ಇನ್‌ಸ್ಟಾಮಾರ್ಟ್‌ ಮತ್ತು ಡೈನ್‌ಔಟ್‌ ಸೌಲಭ್ಯಗಳಿಗೆ ಪ್ರತ್ಯೇಕ ಎಂಸಿಪಿ ಸರ್ವರ್‌ಗಳನ್ನು ಒದಗಿಸುತ್ತಿದೆ. ಒಟ್ಟು 35 ಟೂಲ್‌ಗಳ ಮೂಲಕ ರೆಸ್ಟೂರೆಂಟ್‌ ಹುಡುಕುವುದು, ಆಹಾರ ಮತ್ತು ದಿನಸಿ ಖರೀದಿಸುವುದು, ಡೆಲಿವರಿ ಟ್ರ್ಯಾಕ್ ಮಾಡಲು ಹಾಗೂ ಟೇಬಲ್‌ ಕಾಯ್ದಿರಿಸುವಂತಹ ಕೆಲಸಗಳನ್ನು ಎಐ ಏಜೆಂಟ್‌ಗಳು ನಿರ್ವಹಿಸುವಂತೆ ಅವಕಾಶ ನೀಡಿದೆ.

ಹೀಗಾಗಿ ಈ ಹಿಂದಿದ್ದ ವ್ಯವಸ್ಥೆಯಂತೆ ಆಯಪ್ ತೆರೆಯುವುದು → ಹುಡುಕುವುದು → ಆಯ್ಕೆ ಮಾಡುವುದು → ಆರ್ಡರ್ ಮಾಡುವ ಪ್ರಕ್ರಿಯೆಯಿಂದ, ನಾವು ಹೇಳುವುದನ್ನು → AI ಅರ್ಥಮಾಡಿಕೊಳ್ಳುತ್ತದೆ → ಸಂಬಂಧಿತ ಸೇವೆಯೊಂದಿಗೆ ಸಂಪರ್ಕ ಸಾಧಿಸುತ್ತದೆ → ಕೆಲಸ ಮುಗಿಸುತ್ತದೆ.

ಸ್ಟಾರ್ಟ್‌-ಅಪ್‌: ಮೂವರು ಯುವಕರು ಆರಂಭಿಸಿದ ಕಂಪನಿ ಹಾರಿಸಿತು ಕಾಮಿಕೇಜ್ ಡ್ರೋನ್‌ಸ್ಟಾರ್ಟ್‌ ಅಪ್‌: ಅನ್ವೇಷಣೆಯ 'ಹುಚ್ಚು', ಸಾಧನೆಗೆ ಕಿಚ್ಚು

'ಆಯಪ್' ಎನ್ನುವುದು ಇನ್ನೂ ಬೇಕೇ?

ತಾಯಿಗಾಗಿ ಈ ವ್ಯವಸ್ಥೆಯನ್ನು ನಿರ್ಮಿಸಿದ ನಂತರ ವೈಶಾಖ್ ಅವರ ಆಲೋಚನೆ ಮನೆಯ ಅಗತ್ಯಗಳಾಚೆಗೂ ವಿಸ್ತರಿಸಿತು.

ಗ್ರಾಹಕ ತಂತ್ರಜ್ಞಾನದಲ್ಲಿ ಭವಿಷ್ಯದ ಮುಖ್ಯ ಇಂಟರ್‌ಫೇಸ್ ಆಯಪ್ ಆಗಿರಬೇಕೇ? ಲಿಂಕ್ಡ್‌ಇನ್‌ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿರುವ ವೈಶಾಖ್‌ ಈ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

ಇದು ಕೇವಲ ಒಂದು ತಾಂತ್ರಿಕ ಪ್ರಶ್ನೆಯಲ್ಲ. ಇದು ಡಿಜಿಟಲ್ ಒಳಗೊಳ್ಳುವಿಕೆಯ ಪ್ರಶ್ನೆಯೂ ಹೌದು.

ಇಂದು ಭಾರತದಲ್ಲಿ ಕೋಟ್ಯಂತರ ಜನರು ಇಂಟರ್‌ನೆಟ್ ಬಳಸುತ್ತಿದ್ದಾರೆ. ಆದರೆ ಡಿಜಿಟಲ್ ಸೇವೆಗಳನ್ನು ಬಳಸುವಾಗ ಎಲ್ಲರಿಗೂ ಒಂದೇ ರೀತಿಯ ಅನುಭವ ಇರುವುದಿಲ್ಲ. ಭಾಷೆ, ವಯಸ್ಸು, ಡಿಜಿಟಲ್ ಕೌಶಲ, ದೃಷ್ಟಿ ಅಥವಾ ದೈಹಿಕ ಸಾಮರ್ಥ್ಯವನ್ನೂ ಒಳಗೊಂಡು ಹಲವು ಅಂಶಗಳು ಬಳಕೆಯ ಅನುಭವವನ್ನು ನಿರ್ಧರಿಸುತ್ತವೆ.

ವೈಶಾಖ್ ಅವರ ಪ್ರಕಾರ, ವಯಸ್ಸಾದವರು, ದೃಷ್ಟಿದೋಷ ಹೊಂದಿರುವವರು ಅಥವಾ ಆಯಪ್‌ಗಳ ಬದಲು ವಾಟ್ಸ್‌ಆಯಪ್‌ನಂತಹ ದಿನಬಳಕೆಯ ವೇದಿಕೆಯನ್ನೇ ಬಳಸಲು ಇಷ್ಟಪಡುವವರಿಗೆ ಎಐ ಏಜೆಂಟ್‌ಗಳು ಹೊಸ ಬಾಗಿಲು ತೆರೆಯಬಹುದು.

'ಹಲವು ಆಯಪ್‌ಗಳನ್ನು ಬಳಸುವುದನ್ನು ಲಕ್ಷಾಂತರ ಜನರಿಗೆ ಕಲಿಸುವ ಬದಲು, ಅವರದೇ ಭಾಷೆಯಲ್ಲಿ ಎಐ ಏಜೆಂಟ್‌ಗೆ ಕೇಳಿದರೆ ಸಾಕಾಗುವಂತಹ ಡಿಜಿಟಲ್ ವ್ಯವಸ್ಥೆ ರೂಪಿಸುವುದೇ ಮುಂದಿನ ಡಿಜಿಟಲ್ ಒಳಗೊಳ್ಳುವಿಕೆಯ ಮಾರ್ಗವಾಗಬಹುದು' ಎಂಬುದು ಅವರ ಆಶಯ.

ಆದರೆ ಎಂಸಿಪಿ ಎಲ್ಲೆಡೆ ಇಲ್ಲ ಎಂಬುದೇ ದೊಡ್ಡ ಸವಾಲು. ಭಾರತದ ಪ್ರಮುಖ ಗ್ರಾಹಕ ಇಂಟರ್‌ನೆಟ್ ಕಂಪನಿಗಳ ಪೈಕಿ 100 ಸಂಸ್ಥೆಗಳನ್ನು ಪರಿಶೀಲಿಸಿದಾಗ, ಕೇವಲ ಎಂಟು ಸಂಸ್ಥೆಗಳು ಅಧಿಕೃತ ಮೊದಲ ಹಂತದ ಎಂಸಿಪಿ ಸರ್ವರ್ ಹೊಂದಿರುವುದನ್ನು ಗುರುತಿಸಿರುವುದಾಗಿ ತಮ್ಮ ಲಿಂಕ್ಡ್‌ಇನ್‌ ಪೋಸ್ಟ್‌ನಲ್ಲಿ ವೈಶಾಖ್‌ ಹೇಳಿದ್ದಾರೆ.

ಯಾವುದೇ ಅರ್ಬನ್‌ ಸರ್ವೀಸ್‌ನಂತಹ ಆಯಪ್‌ಗಳೊಂದಿಗೆ ಸಂವಹನ ನಡೆಸಬೇಕಾದರೆ ಕೃತಕ ಬುದ್ಧಿಮತ್ತೆ ಏಜೆಂಟ್‌ಗೆ ಪೂರಕ ಸಂಪರ್ಕ ಕಲ್ಪಿಸುವ ವಾತಾವರಣವೂ ಬೇಕು. ಅದಕ್ಕಾಗಿ ಎಂಸಿಪಿ ಸರ್ವರ್ ಅಥವಾ ಸೂಕ್ತ ಸಂಪರ್ಕ ವ್ಯವಸ್ಥೆ ಅಗತ್ಯ. ಆದರೆ ಅಂಥ ಸೌಲಭ್ಯ ಹೊಂದಿರುವ ಸೇವಾದಾರರ ಆಯಪ್‌ಗಳು ವಿರಳ. ಇದಕ್ಕೆ ಕಾರಣವೂ ಕುತೂಹಲಕರ. ಎಂಸಿಪಿ ಮೂಲಕ ಬಳಕೆದಾರರು ನೇರವಾಗಿ ಕಂಪನಿಯ ಆಯಪ್‌ಗೆ ಹೋಗದೆ ಎಐ ಏಜೆಂಟ್ ಮೂಲಕವೇ ಸೇವೆ ಬಳಸಲು ಸಾಧ್ಯವಾದರೆ, ಸಾಂಪ್ರದಾಯಿಕ ಆಯಪ್‌ನ ಬಳಕೆ ಕಡಿಮೆಯಾಗಬಹುದು. ಹೀಗಾಗಿ ಕಂಪನಿಗಳಿಗೆ ಇದು ಕೇವಲ ತಾಂತ್ರಿಕ ಬದಲಾವಣೆ ಅಲ್ಲ, ವ್ಯವಹಾರ ಮಾದರಿಯ ಬದಲಾವಣೆಯೂ ಹೌದು ಎನ್ನುವುದು ವೈಶಾಖ್ ಮಾತು.

ಎಐ ಅಳವಡಿಸಿದ ಮೊಬೈಲ್‌ ಫೋನ್‌ನಿಂದ ಬಾಯಿ ಕ್ಯಾನ್ಸರ್‌ ಪತ್ತೆ; ಐಐಎಸ್‌ಸಿ ಸಂಶೋಧನೆಒಳನೋಟ | ಎಐ ಕಲಿತರಷ್ಟೇ ಕೆಲಸ: ಸೃಜನಶೀಲತೆ ಮತ್ತು ಸಹಜೀವನ ಅಗತ್ಯ

ತಾಯಿಯಿಂದ ಅಜ್ಜಿಯವರೆಗೆ

ವೈಶಾಖ್ ಅವರ ಈ ಪ್ರಯೋಗದ ವಿಶೇಷವೆಂದರೆ ಇದು ದೊಡ್ಡ ಕಂಪನಿಯ ಪ್ರಯೋಗಾಲಯದಲ್ಲಿ ಹುಟ್ಟಿದ ಉತ್ಪನ್ನವಲ್ಲ. ತನ್ನ ತಾಯಿಯ ದಿನನಿತ್ಯದ ಒಂದು ಸಣ್ಣ ಸಮಸ್ಯೆಗೆ ಪರಿಹಾರ ಹುಡುಕುವ ಪ್ರಯತ್ನದಿಂದ ಆರಂಭವಾಗಿದ್ದು. ಇದು ಈಗ ಇನ್ನಷ್ಟು ಬೇಡಿಕೆ ಗಿಟ್ಟಿಸಿಕೊಂಡಿದೆಯಂತೆ. ಮೈಸೂರಿನಲ್ಲಿ ಇರುವ ಅವರ 97 ವರ್ಷದ ಅಜ್ಜಿಯೂ ವಾಟ್ಸ್‌ಆಯಪ್‌ನಲ್ಲಿ ವಾಯ್ಸ್‌ನೋಟ್ ಮೂಲಕ ಸಂದೇಶ ಕಳುಹಿಸುತ್ತಾರೆ. ಅವರಿಗೂ ಇಂಥದ್ದೊಂದು ಬೇಕು ಎಂಬ ಬೇಡಿಕೆಯು ಅವರ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದೆ. ಜತೆಗೆ ಸಾರ್ಥಕತೆ ಕೂಡಾ.

ಅವರೇ ಹೇಳುವಂತೆ ಇದೇನು ದೊಡ್ಡ ತಾಂತ್ರಿಕ ಸಾಧನೆಯ ಪ್ರದರ್ಶನವಲ್ಲ. ಬದಲಿಗೆ ಮನೆಯ ಹಿರಿಯರಿಗೆ ದಿನನಿತ್ಯದ ಬದುಕಿನಲ್ಲಿ ನೆರವಾದ ಸಾರ್ಥಕತೆ ಎಂದೆನ್ನುತ್ತಾರೆ.

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ


ಸ್ಟಾರ್ಟ್‌ ಅಪ್‌: ತಾಯಿಗಾಗಿ ಬೆಂಗಳೂರಿನ ಟೆಕಿ ಪರಿಚಯಿಸಿದ AI ಶಾಪಿಂಗ್ ಏಜೆಂಟ್

ಒಂದು ಸಾಲಿನಲ್ಲಿಬೆಂಗಳೂರಿನ ಟೆಕಿ ವೈಶಾಖ್ ಐಯ್ಯಂಗಾರ್ ಅವರು ಹಿರಿಯ ನಾಗರಿಕರಿಗೆ ಸುಲಭವಾಗಿ ಶಾಪಿಂಗ್ ಮಾಡಲು ನೆರವಾಗುವ ವಿನೂತನ ಎಐ ಆಧಾರಿತ ವಾಟ್ಸ್‌ಆಯಪ್ ಶಾಪಿಂಗ್ ಏಜೆಂಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.

ಏನು? ಏಕೆ? ಹೇಗೆ?


ಈ ಎಐ ಶಾಪಿಂಗ್ ಏಜೆಂಟ್ ಕೆಲಸ ಮಾಡುವುದು ಹೇಗೆ?

ಬಳಕೆದಾರರು ವಾಟ್ಸ್‌ಆಯಪ್‌ನಲ್ಲಿ ಧ್ವನಿ ಸಂದೇಶದ ಮೂಲಕ ತಮ್ಮ ಅಗತ್ಯಗಳನ್ನು ಹೇಳಿದರೆ, ಎಐ ಅದನ್ನು ಪಠ್ಯವನ್ನಾಗಿ ಪರಿವರ್ತಿಸಿ ಅರ್ಥೈಸಿಕೊಳ್ಳುತ್ತದೆ. ನಂತರ ಗೂಗಲ್ ಜೆಮಿನಿ ಮೂಲಕ ಸಂಬಂಧಿತ ಸೇವಾ ವೇದಿಕೆಗಳಿಗೆ ಸಂಪರ್ಕ ಕಲ್ಪಿಸಿ ಆರ್ಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ.


ವೈಶಾಖ್ ಅವರು ಈ ಆವಿಷ್ಕಾರಕ್ಕೆ ಪ್ರೇರಣೆ ಪಡೆದದ್ದು ಹೇಗೆ?

ತಮ್ಮ ತಾಯಿಗೆ ಆಯಪ್‌ಗಳನ್ನು ಬಳಸಿ ದಿನಸಿ ವಸ್ತುಗಳನ್ನು ಆರ್ಡರ್ ಮಾಡಲು ಕಷ್ಟವಾಗುತ್ತಿರುವುದನ್ನು ಗಮನಿಸಿದ ವೈಶಾಖ್, ತಾಯಿಯ ನಿತ್ಯದ ಸಮಸ್ಯೆಗೆ ಸುಲಭ ಪರಿಹಾರವಾಗಿ ವಾಟ್ಸ್‌ಆಯಪ್ ಆಧಾರಿತ ಈ ಎಐ ಏಜೆಂಟ್ ಅನ್ನು ರೂಪಿಸಿದರು.


ಎಂಸಿಪಿ (MCP) ತಂತ್ರಜ್ಞಾನದ ಪಾತ್ರವೇನು?

ಮಾಡಲ್ ಕಂಟೆಕ್ಸ್ಟ್ ಪ್ರೊಟೊಕಾಲ್ (MCP) ಎನ್ನುವುದು ಎಐ ಏಜೆಂಟ್‌ಗಳು ಹೊರಗಿನ ಡಿಜಿಟಲ್ ಸೇವೆಗಳೊಂದಿಗೆ (ಉದಾಹರಣೆಗೆ ಸ್ವಿಗ್ಗಿ) ನೇರ ಸಂಪರ್ಕ ಸಾಧಿಸಲು ಸಹಾಯ ಮಾಡುವ ಒಂದು ಮುಕ್ತ ಮಾನದಂಡವಾಗಿದೆ.


ಡಿಜಿಟಲ್ ಸೇವೆಗಳ ಲಭ್ಯತೆಯ ಸವಾಲುಗಳೇನು?

ಅನೇಕ ಕಂಪನಿಗಳು ಇನ್ನೂ ಎಂಸಿಪಿ ಸರ್ವರ್‌ಗಳನ್ನು ಅಳವಡಿಸಿಕೊಳ್ಳದ ಕಾರಣ ಈ ತಂತ್ರಜ್ಞಾನದ ವ್ಯಾಪ್ತಿ ಸದ್ಯಕ್ಕೆ ಸೀಮಿತವಾಗಿದೆ. ವ್ಯಾಪಾರ ಮಾದರಿಯ ಬದಲಾವಣೆಗೆ ಕಂಪನಿಗಳು ಹಿಂಜರಿಯುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.


ಈ ತಂತ್ರಜ್ಞಾನದ ಭವಿಷ್ಯದ ಉದ್ದೇಶವೇನು?

ಆಯಪ್‌ಗಳ ಮೇಲೆ ಅತಿಯಾಗಿ ಅವಲಂಬಿತವಾಗುವ ಬದಲು, ಬಳಕೆದಾರರು ತಮ್ಮದೇ ಭಾಷೆಯಲ್ಲಿ ಎಐ ಏಜೆಂಟ್ ಮೂಲಕ ಸೇವೆ ಪಡೆಯುವ 'ಏಜೆಂಟ್ ಕೇಂದ್ರಿತ ಇಂಟರ್‌ನೆಟ್' ವ್ಯವಸ್ಥೆಯನ್ನು ರೂಪಿಸುವುದು ವೈಶಾಖ್ ಅವರ ದೂರದೃಷ್ಟಿಯಾಗಿದೆ.

ಪ್ರಮುಖ ಅಂಕಿಅಂಶಗಳು

35ಎಐ ಏಜೆಂಟ್ ನಿರ್ವಹಿಸಬಲ್ಲ ಒಟ್ಟು ಟೂಲ್‌ಗಳ ಸಂಖ್ಯೆ8ಎಂಸಿಪಿ ಸರ್ವರ್ ಹೊಂದಿರುವ ಕಂಪನಿಗಳ ಸಂಖ್ಯೆ97ವೈಶಾಖ್ ಅವರ ಅಜ್ಜಿಯ ವಯಸ್ಸು

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಮುಂದಿನ ಡಿಜಿಟಲ್ ಕ್ರಾಂತಿ 'ಕ್ಲಿಕ್' ಅಲ್ಲ, 'ಮಾತು'?

ವೈಶಾಖ್ ಅವರ ಪ್ರಯೋಗವು ಮುಂದೆ ಆಗಬಹುದಾದ ಒಂದು ದೊಡ್ಡ ಬದಲಾವಣೆಯ ಸಣ್ಣ ಸೂಚನೆಯಾಗಿರಲೂಬಹುದು.

ಸ್ಮಾರ್ಟ್‌ಫೋನ್ ಬಂದಾಗ ಕಂಪ್ಯೂಟರ್‌ನ ಹಲವು ಕೆಲಸಗಳು ಮೊಬೈಲ್ ಆಯಪ್‌ಗಳಿಗೆ ವರ್ಗಾವಣೆಗೊಂಡವು. ಈಗ ಎಐ ಏಜೆಂಟ್‌ಗಳ ಬೆಳವಣಿಗೆಯೊಂದಿಗೆ ಆಯಪ್‌ಗಳ ಮೇಲಿರುವ ನಮ್ಮ ಅವಲಂಬನೆಯೇ ಕಡಿಮೆಯಾಗುವ ಸಾಧ್ಯತೆ ಕಾಣಿಸುತ್ತಿದೆ.

ಇನ್ನು ಮುಂದೆ 'ಯಾವ ಆಯಪ್‌ನಲ್ಲಿ ಇದೆ?' ಎಂಬ ಹುಡುಕಾಟಕ್ಕಿಂತ 'ನಮಗೆ ಬೇಕಾಗಿರುವುದು ಏನು?' ಎಂಬುದೇ ಮುಖ್ಯವಾಗಬಹುದು.

ಆ ಅಗತ್ಯವನ್ನು ಬಳಕೆದಾರ ತನ್ನದೇ ಭಾಷೆಯಲ್ಲಿ ಹೇಳಿದರೆ, ಕೃತಕ ಬುದ್ಧಿಮತ್ತೆ ಅದನ್ನು ಅರ್ಥಮಾಡಿಕೊಂಡು ಸಂಬಂಧಿತ ಸೇವೆಗಳನ್ನು ಸಂಪರ್ಕಿಸಿ ಕೆಲಸವನ್ನು ಪೂರ್ಣಗೊಳಿಸಿ ಕೊಡುವ ದಿನಗಳು ದೂರವಿಲ್ಲ.

ವೈಶಾಖ್ ಅವರ ತಾಯಿಗೆ ಇದು ದಿನಸಿ ಖರೀದಿಯ ಸರಳ ಪರಿಹಾರ. ಆದರೆ ತಂತ್ರಜ್ಞಾನದ ದೃಷ್ಟಿಯಲ್ಲಿ, ಇದು ಆಯಪ್ ಕೇಂದ್ರಿತ ಇಂಟರ್‌ನೆಟ್‌ನಿಂದ ಏಜೆಂಟ್ ಕೇಂದ್ರಿತ ಇಂಟರ್‌ನೆಟ್‌ನತ್ತ ಸಾಗುವ ಸಾಧ್ಯತೆಯ ಒಂದು ಸಣ್ಣ ಪ್ರಯೋಗ.

ಅಂದಹಾಗೆ ವೈಶಾಖ್ ಅವರು ಲಂಡನ್ ಸ್ಕೂಲ್ ಆಫ್‌ ಮ್ಯಾನೇಜ್ಮೆಂಟ್‌ನಲ್ಲಿ ಎಂಬಿಎ ಮಾಡುತ್ತಿದ್ದಾರೆ. ಜತೆಗೆ ಸೌಲಭ್ಯ ವಂಚಿತ ಅಂಗವಿಕಲ ಕ್ರೀಡಾಪಟುಗಳಿಗೆ ಪ್ಯಾರಾ ಕೋಚಿಂಗ್ ತರಬೇತಿ ಕೇಂದ್ರ ತೆರೆದ ತಂಡದಲ್ಲೂ ಇದ್ದಾರೆ. ಇಲ್ಲಿ ಈಜು ಕಲಿತ ಕೆಲ ಪ್ರತಿಭಾವಂತರು ಏಷ್ಯನ್ ಗೇಮ್ಸ್‌ನಲ್ಲೂ ಪಾಲ್ಗೊಂಡಿದ್ದಾರೆ ಎಂಬುದು ವಿಶೇಷ.

Dailyhunt
Disclaimer: This content has not been generated, created or edited by Dailyhunt. Publisher: Prajavani