ವಾಷಿಂಗ್ಟನ್: ವಾಷಿಂಗ್ಟನ್ ಹಿಲ್ಟನ್‌ನಲ್ಲಿ ನಡೆದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸಿದ್ದ ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಡಿನ್ನರ್ ಕಾರ್ಯಕ್ರಮದ ವೇಳೆ ಗುಂಡಿನ ದಾಳಿ ನಡೆದಿದೆ. ಆದರೆ ಟ್ರಂಪ್ ಅವರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ವಿವರ
ಏಪ್ರಿಲ್ 25, ಶನಿವಾರ ರಾತ್ರಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪತ್ನಿ ಮೆಲಾನಿಯಾ ಮತ್ತು ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್, ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಡಿನ್ನರ್ ಕಾರ್ಯಕ್ರಮದಲ್ಲಿ ಭಾಗವಹಿಸಲು ವಾಷಿಂಗ್ಟನ್ ಹಿಲ್ಟನ್ ಹೋಟೆಲ್‌ಗೆ ಆಗಮಿಸಿದರು.
ರಾತ್ರಿ ಸುಮಾರು 9ರ ಹೊತ್ತಿಗೆ ಇಂಟರ್‌ನ್ಯಾಷನಲ್ ಬಾಲ್‌ರೂಮ್‌ನಲ್ಲಿ ಅತಿಥಿಗಳು ಕುಳಿತಿದ್ದಾಗ, ಹೋಟೆಲ್‌ನ ಹೊರಭಾಗದಲ್ಲಿ ಸುಮಾರು ನಾಲ್ಕರಿಂದ ಎಂಟು ಬಾರಿ ಗುಂಡಿನ ಶಬ್ದ ಕೇಳಿಸಿತು ಎಂದು ವರದಿಯಾಗಿದೆ.
ವೈಟ್ ಹೌಸ್ ಡಿನ್ನರ್ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ ವರದಿ: ಟ್ರಂಪ್ ಸುರಕ್ಷಿತಇಸ್ರೇಲ್-ಲೆಬನಾನ್ ಕದನ ವಿರಾಮ ವಿಸ್ತರಿಸಿ, ಇರಾನ್‌ಗೆ ಎಚ್ಚರಿಕೆ ನೀಡಿದ ಟ್ರಂಪ್ಟ್ರಂಪ್ ಸುರಕ್ಷಿತ…
ತಕ್ಷಣವೇ ಕಾರ್ಯಪ್ರವೃತರಾದ ಸೀಕ್ರೆಟ್ ಸರ್ವಿಸ್ ಏಜೆಂಟ್‌ಗಳು, ಅಧ್ಯಕ್ಷ ಟ್ರಂಪ್ ಮತ್ತು ಅವರ ಕುಟುಂಬವನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದರು. ಇದೇ ವೇಳೆ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರನ್ನೂ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು.

ಎಕ್ಸ್ ಚಿತ್ರ
ಭಯಭೀತರಾದ ಪತ್ರಕರ್ತರು…
ಗುಂಡಿನ ಶಬ್ದ ಕೇಳುತ್ತಿದ್ದಂತೆ ಅಲ್ಲಿದ್ದ ಪತ್ರಕರ್ತರು ಮತ್ತು ಗಣ್ಯರು ಭಯಭೀತರಾಗಿ ಟೇಬಲ್‌ಗಳ ಕೆಳಗೆ ಅವಿತುಕೊಂಡರು. ಕೂಡಲೇ ಭದ್ರತಾ ಪಡೆಗಳು ಮತ್ತು ನ್ಯಾಷನಲ್ ಗಾರ್ಡ್, ಹೋಟೆಲ್ ಅನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡವು.
ಶಂಕಿತ ವ್ಯಕ್ತಿಯ ಬಂಧನ…
ಶಂಕಿತ ಶೂಟರ್ ಕ್ಯಾಲಿಫೋರ್ನಿಯಾದ 30 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಎಕ್ಸ್ ಚಿತ್ರ
ನಾನು ಸೇಫ್: ಟ್ರಂಪ್
ಬಳಿಕ ಟ್ರುಥ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿರುವ ಟ್ರಂಪ್ ನಾನು ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿದ್ದಾರೆ. ಅಲ್ಲದೆ ಭದ್ರತಾ ಪಡೆಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ.
ತನಿಖೆ…
ಘಟನೆಯಲ್ಲಿ ಯಾವುದೇ ಅತಿಥಿಗಳಿಗೆ ಗಾಯವಾಗಿಲ್ಲ ಎಂದು ತಿಳಿದು ಬಂದಿದೆ. ಎಫ್‌ಬಿಐ ಹಾಗೂ ಸಿಕ್ರೇಟ್ ಸರ್ವಿಸ್ ದಾಳಿಯ ಹಿಂದಿನ ಉದ್ದೇಶದ ಕುರಿತು ಜಂಟಿ ತನಿಖೆ ನಡೆಸುತ್ತಿದೆ.
2024ರಲ್ಲೂ ಟ್ರಂಪ್ ಮೇಲೆ ದಾಳಿ…
2024ರಲ್ಲಿ ಪೆನ್ಸಿಲ್ವೇನಿಯಾದಲ್ಲಿ ನಡೆದ ಚುನಾವಣಾ ಪ್ರಚಾರದ ಸಮಾವೇಶದಲ್ಲಿ ಟ್ರಂಪ್ ಅವರನ್ನು ಗುಂಡಿಕ್ಕಿ ಹತ್ಯೆಗೈಯಲು ಯತ್ನ ನಡೆದಿತ್ತು. ಅಲ್ಲದೆ ಟ್ರಂಪ್ ಅವರ ಕಿವಿಗೆ ಗಾಯವಾಗಿತ್ತು. ಇದಾದ ಬಳಿಕ ವೆಸ್ಟ್ ಪಾಮ್ ಬೀಚ್ ಕೋರ್ಸ್‌ನಲ್ಲಿ ಮತ್ತೊಮ್ಮೆ ಹತ್ಯೆಗೈಯುವ ಯತ್ನ ನಡೆದಿತ್ತು. ಈ ಎರಡೂ ದಾಳಿಯಿಂದಲೂ ಟ್ರಂಪ್ ಪಾರಾಗಿದ್ದರು.
ಇರಾನ್ ಮೇಲೆ ದಾಳಿ ಬೆನ್ನಲ್ಲೇ ಘಟನೆ...
ಫೆಬ್ರುವರಿ 28ರಂದು ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿತ್ತು. ಇದರಿಂದಾಗಿ ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ತಲೆದೋರಿದೆ. ಬಳಿಕ ನಡೆದ ಸಂಧಾನ ಮಾತುಕತೆಯು ವಿಫಲಗೊಂಡಿತ್ತು. ಯಾವುದೇ ಕಾರಣಕ್ಕೂ ಇರಾನ್‌ಗೆ ಪರಮಾಣು ಶಸ್ತ್ರಾಸ್ತ್ರ ಹೊಂದಲು ಬಿಡುವುದಿಲ್ಲ ಎಂದು ಟ್ರಂಪ್ ಹೇಳಿದ್ದರು. ಈ ಎಲ್ಲದರ ನಡುವೆ ದಾಳಿ ವರದಿಯಾಗಿದೆ.

