ಲಾಗ್ವೈರಾ: ವೆನೆಜುವೆಲಾದಲ್ಲಿ ಭೂಕಂಪ ಸಂಭವಿಸಿದ ಬಳಿಕ ಎಂಟು ದಿನಗಳ ಬಳಿಕ ಕಾಲನ ದವಡೆಯಿಂದ ಪವಾಡ ಸದೃಶವಾಗಿ ವ್ಯಕ್ತಿಯೊಬ್ಬರು ಪಾರಾಗಿದ್ದಾರೆ.
ಇಲ್ಲಿನ 'ಗ್ಯಾಲರಿಯಾಸ್ ಗ್ರಾಂಡೆ' ಶಾಪಿಂಗ್ ಮಾಲ್‌ನ ಬೇಸ್‌ಮೆಂಟ್‌ನಲ್ಲಿ 8 ದಿನಗಳಿಂದ ಕಾಂಕ್ರೀಟ್ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ 43 ವರ್ಷದ ಭದ್ರತಾ ಸಿಬ್ಬಂದಿ ಆಲ್ಬರ್ಟೊ ಗಿಲ್ ಫ್ಲೋರೆಸ್ ಸಾವು ಮತ್ತು ಬದುಕಿನ ಕಣ್ಣಾಮುಚ್ಚಾಲೆ ಆಟದಲ್ಲಿ ಬದುಕುಳಿದರು.
ಧೂಳಿನಿಂದ ಮುಚ್ಚಿಹೋಗಿದ್ದ ಅವರ ದೇಹವನ್ನು ಸ್ಟ್ರೆಚರ್ ಮೇಲೆ ಹೊತ್ತು ಹೆಲ್ಮೆಟ್ ಧರಿಸಿದ ರಕ್ಷಣಾ ಸಿಬ್ಬಂದಿ ಹೊರತರುತ್ತಿದ್ದಾಗ ಅಲ್ಲಿದ್ದವರ ಕಣ್ಣಾಲಿಗಳು ತುಂಬಿ ಬಂದವು.
ಫ್ಲೋರೆಸ್ ಬದುಕಿರುವ ಸುಳಿವು ಸಿಕ್ಕ ತಕ್ಷಣವೇ ರಕ್ಷಣಾ ತಂಡಗಳು ಕಾರ್ಯಾಚರಣೆಗೆ ಇಳಿದವು. ಆದರೆ ಹಾದಿ ಸುಲಭವಾಗಿರಲಿಲ್ಲ. ಯಾವುದೇ ಕ್ಷಣದಲ್ಲೂ ಕುಸಿದು ಬೀಳಬಹುದಾದ ಕಟ್ಟಡದ ಅವಶೇಷಗಳು, ಧೋ ಎಂದು ಸುರಿಯುತ್ತಿದ್ದ ಮಳೆ, ಮತ್ತು ಪದೇ ಪದೇ ಕಂಪಿಸುತ್ತಿದ್ದ ಸಣ್ಣ ಸಣ್ಣ ಕಂಪನಗಳ ನಡುವೆಯೂ ರಕ್ಷಣಾ ಸಿಬ್ಬಂದಿ ಸತತ 100 ಗಂಟೆಗಳಿಗೂ ಹೆಚ್ಚು ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ ಫ್ಲೋರೆಸ್‌ನನ್ನು ರಕ್ಷಿಸಿದರು.
ಆಮ್ಲಜನಕದ ಮಾಸ್ಕ್ ಧರಿಸಿ, ಕಿತ್ತಳೆ ಬಣ್ಣದ ಟಾರ್ಪಲಿನ್‌ನಿಂದ ಮುಚ್ಚಲ್ಪಟ್ಟಿದ್ದ ಫ್ಲೋರೆಸ್‌ನನ್ನು ಜನಸಂದಣಿಯ ನಡುವೆ ಆಂಬ್ಯುಲೆನ್ಸ್ ಕಡೆಗೆ ಕೊಂಡೊಯ್ಯುವಾಗ, ಜಗತ್ತಿನ ವಿವಿಧ ದೇಶಗಳ ಧ್ವಜಗಳನ್ನು ಹಿಡಿದಿದ್ದ ರಕ್ಷಣಾ ಸಿಬ್ಬಂದಿ ಹರ್ಷೋದ್ಗಾರ ಮಾಡಿದರು. ಆ ಕ್ಷಣ ಅಲ್ಲಿ ಮೂಡಿದ ಭಾವನೆಗಳು ವರ್ಣನಾತೀತ. ಸ್ಟ್ರೆಚರ್ ಹೊತ್ತಿದ್ದ ಚಿಲಿ ದೇಶದ ರಕ್ಷಣಾ ಸಿಬ್ಬಂದಿಯೊಬ್ಬರು ವಿಜಯದ ಸಂಕೇತವಾಗಿ ಗಾಳಿಯಲ್ಲಿ ಮುಷ್ಟಿ ಬಿಗಿದು ಸಂಭ್ರಮಿಸಿದರೆ, ಕೆಂಪು ಸಮವಸ್ತ್ರ ಧರಿಸಿದ್ದ ಕೋಸ್ಟರಿಕಾ ರೆಡ್ ಕ್ರಾಸ್‌ನ ಸಿಬ್ಬಂದಿ ಒಬ್ಬರನ್ನೊಬ್ಬರು ಅಪ್ಪಿಕೊಂಡರು. ಇಡೀ ವಾತಾವರಣ ಚಪ್ಪಾಳೆಗಳ ಸದ್ದಿನಿಂದ ಮೊಳಗಿತು.
ನನ್ನ ಹೆಂಡತಿಗೆ ಹೇಳಬೇಡಿ...ಕಣ್ಣೀರಾಗಿಸಿದ ಮಾತು
ನಾವು ಫ್ಲೋರೆಸ್‌ನನ್ನು ಪತ್ತೆಹಚ್ಚಿದಾಗ ಆತನ ಉಸಿರು ಕ್ಷೀಣಿಸುತ್ತಿತ್ತು. ಆತ ನಮಗೆ ಹೇಳಿದ್ದು ಒಂದೇ ಮಾತು- 'ಒಂದು ವೇಳೆ ನಾನು ಇಲ್ಲಿಂದ ಬದುಕಿ ಹೊರಬರಲಾರದಿದ್ದರೆ, ದಯವಿಟ್ಟು ನನ್ನ ಹೆಂಡತಿಗೆ ನಾನು ಜೀವಂತವಾಗಿದ್ದೆ ಎಂದು ಹೇಳಬೇಡಿ. ಯಾಕೆಂದರೆ ಅವಳಿಗೆ ಸುಳ್ಳು ಭರವಸೆ ನೀಡಿ ಆಮೇಲೆ ನೋವು ಕೊಡಬೇಡಿ ಎಂದಿದ್ದರು. ಈ ಮಾತುಗಳನ್ನು ಕೇಳಿದ ಮೇಲೆಯೂ ನಾವು ಫ್ಲೋರೆಸ್‌ನನ್ನು ಅಲ್ಲೇ ಬಿಟ್ಟುಬರಲು ಹೇಗೆ ತಾನೇ ಸಾಧ್ಯ? ನಮ್ಮ ಜೀವ ಪಣಕ್ಕಿಟ್ಟಾದರೂ ಅವನನ್ನು ತರಲೇಬೇಕಿತ್ತು ಎಂದು ಕೋಸ್ಟರಿಕಾ ರೆಡ್ ಕ್ರಾಸ್ ಸಿಬ್ಬಂದಿ ಮಿನ್ಯಾರ್ ಆ ಭಾವುಕ ಕ್ಷಣವನ್ನು ಮಾಧ್ಯಮಗಳ ಜೊತೆ ನೆನಪಿಸಿಕೊಂಡರು.
ಜೀವ ಉಳಿಸಿದ ಪುಟ್ಟ ಕ್ಯಾಬಿನ್
ಆ ಕಾಂಪ್ಲೆಕ್ಸ್‌ನಲ್ಲಿ ರಾತ್ರಿ ಪಾಳಿ ಭದ್ರತಾ ಸಿಬ್ಬಂದಿಯಾಗಿ ಫ್ಲೋರೆಸ್ ಕೆಲಸ ಮಾಡುತ್ತಿದ್ದರು. ಭೂಕಂಪ ಸಂಭವಿಸಿದಾಗ ಬೇಸ್‌ಮೆಂಟ್‌ನಲ್ಲಿದ್ದ ತನ್ನ ಪುಟ್ಟ ಸೆಕ್ಯುರಿಟಿ ಕ್ಯಾಬಿನ್ ಒಳಗಿದ್ದರು. ಸುತ್ತಲಿನ ಬೃಹತ್ ಕಾಂಕ್ರೀಟ್ ಗೋಡೆಗಳು ಕಣ್ಣೆದುರೇ ಕುಸಿದು ಬಿದ್ದವು, ಆ ಪುಟ್ಟ ಕ್ಯಾಬಿನ್ ಮಾತ್ರ ಗಟ್ಟಿಯಾಗಿ ನಿಂತು, ಭಾರೀ ಅವಶೇಷಗಳು ಆತನ ಮೇಲೆ ಬೀಳದಂತೆ ರಕ್ಷಿಸಿತು. ಕ್ಯಾಬಿನ್‌ನಲ್ಲಿದ್ದ ಸಣ್ಣ ಸಣ್ಣ ರಂಧ್ರಗಳು ಗಾಳಿ ಪೂರೈಕೆಗೆ ನೆರವಾದವು. ಅಂತಿಮವಾಗಿ ರಕ್ಷಣಾ ಸಿಬ್ಬಂದಿ ಫ್ಲೋರೆಸ್‌ನನ್ನು ಪತ್ತೆಹಚ್ಚಿ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾಯಿತು.
100 ಗಂಟೆಗಳ ಕಾರ್ಯಾಚರಣೆ
ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಸಿಲುಕಿದವರು ಬದುಕಲು 48 ರಿಂದ 72 ಗಂಟೆಗಳ ಕಾಲಾವಕಾಶ ಮಾತ್ರ ಇರುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದರೆ, ರಕ್ಷಣಾ ತಂಡಗಳು ಜಾಗರೂಕತೆಯಿಂದ ಕೆಲಸ ನಿರ್ವಹಿಸುವ ಮೂಲಕ ಸಣ್ಣ ಸಣ್ಣ ರಂಧ್ರಗಳ ಮೂಲಕ ಫ್ಲೋರೆಸ್‌ಗೆ ಆಹಾರ ಮತ್ತು ನೀರನ್ನು ತಲುಪಿಸುತ್ತಿದ್ದರು. ಇದು ಆತನ ಜೀವದ ಹಣತೆ ಆರದಂತೆ ಕಾಯ್ದುಕೊಂಡಿತು. 100 ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ಫ್ಲೋರೆಸ್ ಸಾವು ಗೆದ್ದು ಬಂದರು.
ವೆನೆಜುವೆಲಾ ಭೂಕಂಪ: ಮೃತರ ಸಂಖ್ಯೆ 1700ಕ್ಕೆ ಏರಿಕೆ, 5,000 ಜನರಿಗೆ ಗಾಯವೆನೆಜುವೆಲಾ ಭೂಕಂಪ: ಸಾವಿನ ಸಂಖ್ಯೆ 920ಕ್ಕೆ ಏರಿಕೆ, ಸಹಸ್ರಾರು ಮಂದಿ ನಾಪತ್ತೆ
