Dailyhunt Logo
  • Light mode
    Follow system
    Dark mode
    • Play Story
    • App Story
ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ: ಭಾರತಕ್ಕೆ ರಷ್ಯಾ ಬೆಂಬಲ

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ: ಭಾರತಕ್ಕೆ ರಷ್ಯಾ ಬೆಂಬಲ

ನ್ಯೂಯಾರ್ಕ್‌: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್‌ಎಸ್‌ಸಿ) ಭಾರತಕ್ಕೆ ಕಾಯಂ ಸದಸ್ಯತ್ವ ನೀಡಬೇಕೆಂಬ ಬೇಡಿಕೆಗೆ ರಷ್ಯಾ ಮತ್ತೊಮ್ಮೆ ಬಲವಾದ ಬೆಂಬಲ ಸೂಚಿಸಿದೆ.

ಅದೇ ವೇಳೆ ಭದ್ರತಾ ಮಂಡಳಿಯಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳ ಪ್ರಾಬಲ್ಯ ಹೆಚ್ಚಿಸುವುದನ್ನು ಅದು ತೀವ್ರವಾಗಿ ಖಂಡಿಸಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಯುಎನ್‌ಜಿಎ) ಈ ಕುರಿತು ಮಾತನಾಡಿರುವ ರಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವ ಸೆರ್ಗೆ ಲಾವ್ರೋವ್‌, 'ಭದ್ರತಾ ಮಂಡಳಿಯಲ್ಲಿ ಸುಧಾರಣೆ ಪ್ರಕ್ರಿಯೆಗಳು ಈಗಿನ ಕಾಯಂ ರಾಷ್ಟ್ರಗಳ ವಿಶೇಷ ಹಕ್ಕುಗಳಿಗೆ ಧಕ್ಕೆಯಾಗಬಾರದು' ಎಂದು ಪ್ರತಿಪಾದಿಸಿದರು.

ಜಾಗತಿಕ ರಾಜಕೀಯ ವ್ಯವಸ್ಥೆಯಲ್ಲಿ ಸಮತೋಲನ ಸಾಧಿಸುವ ಅಗತ್ಯವನ್ನು ಒತ್ತಿ ಹೇಳಿದ ಅವರು, 'ಗ್ಲೋಬಲ್ ಸೌತ್' ಪ್ರಾತಿನಿಧ್ಯವನ್ನು ಹೆಚ್ಚಿಸಲು ರಷ್ಯಾ ಬದ್ಧವಾಗಿದೆ ಎಂದರು.

'ಏಷ್ಯಾ, ಆಫ್ರಿಕಾ ಹಾಗೂ ಲ್ಯಾಟಿನ್ ಅಮೆರಿಕ ದೇಶಗಳ ಪ್ರಾತಿನಿಧ್ಯ ಹೆಚ್ಚಿಸುವುದನ್ನು ನಾವು ಬೆಂಬಲಿಸುತ್ತೇವೆ. ಮಂಡಳಿಯ ಕಾಯಂ ಸದಸ್ಯತ್ವಕ್ಕೆ ಭಾರತ ಮತ್ತು ಬ್ರೆಜಿಲ್ ಸಲ್ಲಿಸಿರುವ ಉಮೇದುವಾರಿಕೆಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಜತೆಗೆ ಆಫ್ರಿಕಾ ಖಂಡದ ಹಿತಾಸಕ್ತಿಗಳಿಗೂ ಸೂಕ್ತ ಮನ್ನಣೆ ಸಿಗಬೇಕು' ಎಂದು ಅವರು ಸ್ಪಷ್ಟಪಡಿಸಿದರು.

ಏತನ್ಮಧ್ಯೆ ಜರ್ಮನಿ ಹಾಗೂ ಜಪಾನ್‌ಗೆ ಪ್ರಾತಿನಿಧ್ಯ ನೀಡುವುದನ್ನು ಲಾವ್ರೋವ್‌ ವಿರೋಧಿಸಿದ್ದು, 'ಈ ದೇಶಗಳು ಪ್ರಸ್ತುತ ಸೇನಾ ಬಲವರ್ಧನೆ ಹಾಗೂ ಸೇಡಿನ ಹಾದಿಯಲ್ಲಿ ಮುನ್ನಡೆಯುತ್ತಿವೆ' ಎಂದು ಟೀಕಿಸಿದರು.

ಇರಾನ್‌, ರಷ್ಯಾ ವಿದೇಶಾಂಗ ಸಚಿವರ ಜೊತೆ ಜೈಶಂಕರ್‌ ಮಾತುಕತೆ ಭಯೋತ್ಪಾದನೆ ವಿರುದ್ಧ ಆತ್ಮರಕ್ಷಣೆಗೆ ಭಾರತ ಹಿಂದೇಟು ಹಾಕದು: ಜೈಶಂಕರ್‌
Dailyhunt
Disclaimer: This content has not been generated, created or edited by Dailyhunt. Publisher: Prajavani