ಟೆಹರಾನ್: ಜಾಗತಿಕ ಸಂಘರ್ಷಗಳನ್ನು ನಿರ್ವಹಿಸುವಲ್ಲಿ ಮತ್ತು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಶ್ವಸಂಸ್ಥೆ ವಿಫಲವಾಗಿದೆ ಎಂಬುದನ್ನು ತೋರಿಸಲು ಇರಾನ್ ಜಾಗತಿಕ ಸಿನಿಮಾರಂಗದ ಮೊರೆ ಹೋಗಿದೆ.
ಹಾಲಿವುಡ್‌ನ ಸೂಪರ್‌ಹಿಟ್ ಸಿನಿಮಾ 'ಡಾಕ್ಟರ್ ಸ್ಟ್ರೇಂಜ್' ಹಾಗೂ ಬಾಲಿವುಡ್‌ನ ಸಾರ್ವಕಾಲಿಕ ಶ್ರೇಷ್ಠ ಚಿತ್ರ 'ಶೋಲೆ'ಯ ಠಾಕೂರ್ ಬಲದೇವ್ ಸಿಂಗ್ ಪಾತ್ರವನ್ನು ಉಲ್ಲೇಖಿಸಿ ವಿಶ್ವಸಂಸ್ಥೆಯ ನಡೆಯ ವಿರುದ್ಧ ಇರಾನ್ ವ್ಯಂಗ್ಯವಾಡಿದೆ.
ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿಯು ತನ್ನ 'ಎಕ್ಸ್' ಖಾತೆಯಲ್ಲಿ ಮೀಮ್ ಒಂದನ್ನು ಹಂಚಿಕೊಂಡಿದೆ. ಪ್ರಮುಖ ಅಂತರರಾಷ್ಟ್ರೀಯ ಬಿಕ್ಕಟ್ಟುಗಳನ್ನು ನಿರ್ವಹಣೆ ಮಾಡವಲ್ಲಿ ವಿಶ್ವಸಂಸ್ಥೆಗಿರುವ ಅಪಾರ ಅಧಿಕಾರ ಹಾಗೂ ಅದಕ್ಕಿರುವ ಮಿತಿಗಳನ್ನು ತೋರಿಸಲು ಈ ಮೀಮ್ ಅನ್ನು ಪೋಸ್ಟ್ ಮಾಡಿದೆ.
ಮೀಮ್ ಚಿತ್ರದ ಮೊದಲ ಭಾಗದಲ್ಲಿ 'ಡಾಕ್ಟರ್ ಸ್ಟ್ರೇಂಜ್' ಸಿನಿಮಾದ ಹಲವು ಕೈಗಳಿರುವ, ಮಂತ್ರ ಶಕ್ತಿಯುಳ್ಳ ಮಾರ್ವೆಲ್ ಚಿತ್ರವಿದ್ದು, ಅದಕ್ಕೆ ಪಠ್ಯಪುಸ್ತಕಗಳಲ್ಲಿ ವಿಶ್ವಸಂಸ್ಥೆ ಎಂದು ಶೀರ್ಷಿಕೆ ನೀಡಲಾಗಿದೆ. ಎರಡನೇ ಭಾಗದಲ್ಲಿ 1975ರ 'ಶೋಲೆ' ಚಿತ್ರದ ಠಾಕೂರ್ ಬಲದೇವ್ ಸಿಂಗ್ (ಖಳನಾಯಕ ಗಬ್ಬರ್ ಸಿಂಗ್ ಕೈಗಳನ್ನು ಕತ್ತರಿಸಿದ ನಂತರದ ಚಿತ್ರ) ಭಾವಚಿತ್ರವಿದ್ದು, ಅದಕ್ಕೆ 'ವಾಸ್ತವದಲ್ಲಿ ವಿಶ್ವಸಂಸ್ಥೆ' ಎಂದು ಬರೆಯಲಾಗಿದೆ.
ವಿಶ್ವಸಂಸ್ಥೆಗೆ ಅಪಾರ ಅಧಿಕಾರವಿದ್ದರೂ ಜಗತ್ತಿನ ಸಂಘರ್ಷಗಳನ್ನು ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ ಎಂಬುದನ್ನು ತೋರಿಸಲು ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿ ಈ ಮೀಮ್ ಚಿತ್ರಿಸಿದೆ.
ಇರಾನ್ ಆಕ್ರೋಶ...
ಅಮೆರಿಕ ಮತ್ತು ಇಸ್ರೇಲ್ ವಿಶ್ವಸಂಸ್ಥೆಯ ನೀತಿ, ನಿಯಮಗಳನ್ನು ಉಲ್ಲಂಘಿಸುತ್ತಿದ್ದರೂ ಉದಾಸೀನತೆ ತಳೆದಿದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇರಾನ್ ವಿರುದ್ಧ ಅಮೆರಿಕ ಒಡ್ಡುತ್ತಿರುವ ಬೆದರಿಕೆಗಳನ್ನು ವಿಶ್ವಸಂಸ್ಥೆ ಬಹಿರಂಗವಾಗಿ ಖಂಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇತ್ತೀಚೆಗೆ ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಕೊನೆಯ ದಿನದಂದು ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಅವರೊಂದಿಗೆ ನಡೆಸಿದ ಸಭೆಯಲ್ಲಿ ಅರಾಘ್ಚಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎಂದು ಇರಾನ್‌ನ ತಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಭದ್ರತಾ ಮಂಡಳಿಯ ಶಾಶ್ವತ ಸದಸ್ಯ ರಾಷ್ಟ್ರವೊಂದು ಅಂತರರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಿದಾಗ ವಿಶ್ವಸಂಸ್ಥೆ ಹಾಗೂ ಸದಸ್ಯ ರಾಷ್ಟ್ರಗಳು ಮೌನವಾಗಿರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅಬ್ಬಾಸ್ ಅರಾಘ್ಚಿ ಪ್ರತಿಪಾದಿಸಿದ್ದಾರೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ: ಭಾರತಕ್ಕೆ ರಷ್ಯಾ ಬೆಂಬಲಯುದ್ಧ ವಿರಾಮಕ್ಕೆ ಇರಾನ್ 'ಬೆಲೆ' ಹೆಚ್ಚಳ: ಅಮೆರಿಕಕ್ಕೆ ಖಡಕ್ ಎಚ್ಚರಿಕೆ
