'ಉಚಿತ ಕೊಡುಗೆಗಳು ಅಥವಾ ಸರ್ಕಾರದ ಸಮಾಜ ಕಲ್ಯಾಣ ಯೋಜನೆಗಳು ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತವೆಯೇ?' - ಇದು ಭಾರತದ ರಾಜಕೀಯ ಮತ್ತು ಆರ್ಥಿಕ ಚರ್ಚೆಗಳಲ್ಲಿ ಸದಾ ಕೇಳಿಬರುವ ಪ್ರಶ್ನೆ. ಈ ಪ್ರಶ್ನೆಗೆ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಪ್ರೊ.
ಅಭಿಜಿತ್ ಬ್ಯಾನರ್ಜಿ ಅವರು ಇತ್ತೀಚೆಗೆ ನಡೆಸಿದ ಸಂದರ್ಶನದಲ್ಲಿ ಸ್ಪಷ್ಟವಾದ, ಸಾಕ್ಷ್ಯ ಆಧಾರಿತ ಉತ್ತರ ನೀಡಿದ್ದಾರೆ. ಅವರ ಸಂಶೋಧನೆಯು ದಶಕಗಳಿಂದ ನಮ್ಮ ಮನಸ್ಸಿನಲ್ಲಿ ಬೇರೂರಿರುವ ಒಂದು ದೊಡ್ಡ ತಪ್ಪು ಕಲ್ಪನೆಯನ್ನು ಒಡೆಯುತ್ತದೆ. ಈ ಲೇಖನದಲ್ಲಿ ಬ್ಯಾನರ್ಜಿ ಅವರ ಅಧ್ಯಯನಗಳ ಜೊತೆಗೆ ಸರ್ಕಾರಿ ದತ್ತಾಂಶಗಳು ಮತ್ತು ಅಂತಾರಾಷ್ಟ್ರೀಯ ಸಂಶೋಧನೆಗಳನ್ನು ಸಂಯೋಜಿಸಿ ಸಮಗ್ರ ವಿಶ್ಲೇಷಣೆ ನಡೆಸಲಾಗಿದೆ.
140 ಅಧ್ಯಯನಗಳ ಮೆಟಾ-ವಿಶ್ಲೇಷಣೆ: ಬ್ಯಾನರ್ಜಿ ಅವರ ಪ್ರಮುಖ ವಾದ
ಬ್ಯಾನರ್ಜಿ ಅವರು 140 ಸ್ವತಂತ್ರ ಅಧ್ಯಯನಗಳನ್ನು ಒಳಗೊಂಡ ಮೆಟಾ-ವಿಶ್ಲೇಷಣೆಯನ್ನು ಉಲ್ಲೇಖಿಸುತ್ತಾ, 'ಉಚಿತ ಕೊಡುಗೆಗಳು ಸೋಮಾರಿತನವನ್ನು ಉತ್ತೇಜಿಸುತ್ತವೆ ಎಂಬುದಕ್ಕೆ ಯಾವುದೇ ಪ್ರಾಯೋಗಿಕ ಸಾಕ್ಷ್ಯ ಇಲ್ಲ' ಎಂದು ಸ್ಪಷ್ಟಪಡಿಸುತ್ತಾರೆ. ಈ ಅಧ್ಯಯನಗಳು ನೇರ ನಗದು ವರ್ಗಾವಣೆ ಮತ್ತು ಇತರ ಕಲ್ಯಾಣ ಕೊಡುಗೆಗಳು ಜನರ ಕೆಲಸ ಮಾಡುವ ಸಾಮರ್ಥ್ಯವನ್ನು ಕುಗ್ಗಿಸುವ ಬದಲು, ಅದನ್ನು ಹೆಚ್ಚಿಸುತ್ತವೆ ಎಂದು ಸಾಬೀತುಪಡಿಸಿವೆ.
ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ವಿವೇಕ್ ತೋಂಟದಾರ್ಯ ಲೇಖನ: ವೆಚ್ಚವೋ, ಹೂಡಿಕೆಯೋ? ಕಲ್ಯಾಣ ಯೋಜನೆಗಳ ಅರ್ಥಶಾಸ್ತ್ರ
ಒಂದು ಸಾಲಿನಲ್ಲಿಸರ್ಕಾರದ ಕಲ್ಯಾಣ ಯೋಜನೆಗಳು ಜನರನ್ನು ಸೋಮಾರಿಗಳನ್ನಾಗಿಸದೆ, ಆರ್ಥಿಕ ಬೆಳವಣಿಗೆಗೆ ಪೂರಕವಾದ ಉತ್ಪಾದಕ ಹೂಡಿಕೆಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಸಾಕ್ಷ್ಯಾಧಾರಿತ ಅಧ್ಯಯನಗಳು ದೃಢಪಡಿಸಿವೆ.
ಪ್ರಮುಖ ಪ್ರಶ್ನೋತ್ತರ
ಕಲ್ಯಾಣ ಯೋಜನೆಗಳು ಸೋಮಾರಿತನವನ್ನು ಉತ್ತೇಜಿಸುತ್ತವೆಯೇ?
ಇಲ್ಲ, 140 ಸ್ವತಂತ್ರ ಅಧ್ಯಯನಗಳ ಮೆಟಾ-ವಿಶ್ಲೇಷಣೆಯ ಪ್ರಕಾರ, ನೇರ ನಗದು ವರ್ಗಾವಣೆ ಮತ್ತು ಕಲ್ಯಾಣ ಕೊಡುಗೆಗಳು ಜನರ ಕೆಲಸ ಮಾಡುವ ಸಾಮರ್ಥ್ಯವನ್ನು ಕುಗ್ಗಿಸದೆ, ಬದಲಾಗಿ ಉತ್ತೇಜಿಸುತ್ತವೆ ಎಂದು ಸಾಬೀತಾಗಿದೆ.
ಬಡವರಿಗೆ ನೀಡುವ ಹಣ ವ್ಯರ್ಥವಾಗುತ್ತದೆಯೇ?
ಬಡವರು ತಮಗೆ ಅಗತ್ಯವಿರುವ ಪೌಷ್ಠಿಕ ಆಹಾರ, ಆರೋಗ್ಯ, ಶಿಕ್ಷಣ ಮತ್ತು ಸಣ್ಣ ವ್ಯವಹಾರಗಳಲ್ಲಿ ಹಣವನ್ನು ವಿವೇಚನೆಯಿಂದ ಹೂಡಿಕೆ ಮಾಡುತ್ತಾರೆ. ಅವರ ಆರ್ಥಿಕ ನಿರ್ಧಾರಗಳು ಅತ್ಯಂತ ತರ್ಕಬದ್ಧವಾಗಿರುತ್ತವೆ.
ಸರ್ಕಾರದ ಕಲ್ಯಾಣ ಯೋಜನೆಗಳನ್ನು ಏಕೆ ವಿಮರ್ಶಿಸಲಾಗುತ್ತದೆ?
ಬಡತನವು ಗುಣದೋಷ ಎಂಬ ನೈತಿಕ ತಪ್ಪು ತಿಳುವಳಿಕೆ ಮತ್ತು ರಾಜಕೀಯ ಕಾರಣಗಳಿಂದಾಗಿ ಕಲ್ಯಾಣ ಯೋಜನೆಗಳನ್ನು 'ಫ್ರೀಬಿಸ್' ಎಂದು ತಪ್ಪಾಗಿ ಬಿಂಬಿಸಲಾಗುತ್ತದೆ.
ಯೋಜನೆಗಳು ಹೇಗೆ ಹೂಡಿಕೆಯಾಗಿ ಪರಿವರ್ತನೆಗೊಳ್ಳುತ್ತವೆ?
ಮಹಿಳೆಯರಿಗೆ ಉಚಿತ ಹಸು ನೀಡುವುದು ಅಥವಾ ನರೇಗಾದಂತಹ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಜನರ ಆದಾಯ ಸೃಷ್ಟಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ಇದು ಅಂತಿಮವಾಗಿ ಆರ್ಥಿಕ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ.
ಕರ್ನಾಟಕದ ಗ್ಯಾರಂಟಿ ಯೋಜನೆಗಳ ಪ್ರಭಾವವೇನು?
ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆಯಂತಹ ಯೋಜನೆಗಳು ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ, ಪೌಷ್ಟಿಕತೆ, ಉದ್ಯೋಗ ನಿರ್ಧಾರ ಮತ್ತು ಸಂಚಾರ ಸೌಲಭ್ಯವನ್ನು ಸುಧಾರಿಸುವ ಮೂಲಕ ಸಬಲೀಕರಣಕ್ಕೆ ಕಾರಣವಾಗಿವೆ.
ಪ್ರಮುಖ ಅಂಕಿಅಂಶಗಳು
ಶೇ 11.282022-23ರಲ್ಲಿ ಬಹು ಆಯಾಮದ ಬಡತನ ಸೂಚ್ಯಂಕ (MPI)₹ 1.16ನರೇಗಾ ಹೂಡಿಕೆಯ ಮೇಲೆ ದೊರೆತ ಗೃಹಬಳಕೆ ಆದಾಯ₹3.48 ಲಕ್ಷ ಕೋಟಿಡಿಬಿಟಿ ಅನುಷ್ಠಾನದಿಂದ ಉಳಿತಾಯವಾದ ಮೊತ್ತಶೇ 40ಪಿಎಂಇಜಿಪಿ ಯೋಜನೆಯಲ್ಲಿ ಮಹಿಳಾ ಉದ್ಯಮಿಗಳ ಪಾಲು
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಕೀನ್ಯಾದ ಪ್ರಯೋಗ: ಬಡವರು ಹಣವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಾರೆ
ಬ್ಯಾನರ್ಜಿ ಅವರು ಕೀನ್ಯಾದಲ್ಲಿ ನಡೆಸಿದ ತಮ್ಮ ಸಂಶೋಧನಾ ತಂಡದ ಪ್ರಯೋಗವನ್ನು ವಿವರಿಸುತ್ತಾ, 'ಒಂದೇ ಸಲ ದೊಡ್ಡ ಮೊತ್ತದ ಪಾವತಿಯು ಮಾಸಿಕ ಕಂತುಗಳಿಗಿಂತ ಹೆಚ್ಚು ಪ್ರಭಾವಶಾಲಿಯಾಗಿತ್ತು' ಎನ್ನುತ್ತಾರೆ.
ಇದರ ಅರ್ಥ, ಬಡವರಿಗೆ ಸಾಕಷ್ಟು ಬಂಡವಾಳ ಒಮ್ಮೆಯೇ ಸಾಲದ ರೂಪದಲ್ಲಿ ಒದಗಿಸಿದರೆ, ಅವರು ಅದನ್ನು ಸಮರ್ಥವಾಗಿ ಬಳಸಿಕೊಂಡು ತಮ್ಮ ಸ್ಥಿತಿಯನ್ನು ಸುಧಾರಿಸಿಕೊಳ್ಳಬಲ್ಲರು.
ಪಶ್ಚಿಮ ಬಂಗಾಳದ 17 ವರ್ಷಗಳ ಅಧ್ಯಯನ: ಒಂದು ಹಸು, ಶೇ 40% ಸಂಪತ್ತು
ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದಲ್ಲಿ ನಡೆಸಿದ 17 ವರ್ಷಗಳ ಸುದೀರ್ಘ ಅಧ್ಯಯನದ ಫಲಿತಾಂಶವನ್ನು ಹಂಚಿಕೊಳ್ಳುತ್ತಾ, 'ಮಹಿಳೆಯರಿಗೆ ಒಂದು ಉಚಿತ ಹಸುವನ್ನು ನೀಡಿದಾಗ, ಕಾಲಕ್ರಮೇಣ ಅವರ ಸಂಪತ್ತು ಶೇ 40 ರಷ್ಟು ಏರಿಕೆಯಾಗಿತ್ತು' ಎಂದು ಹೇಳುತ್ತಾರೆ. ಇದು ಕಲ್ಯಾಣ ಕೊಡುಗೆಗಳು ಕೇವಲ 'ಸಬ್ಸಿಡಿ' ಮಾತ್ರವಲ್ಲ, ಅವು ಆದಾಯವನ್ನು ಸೃಷ್ಟಿಸುವ ಆಸ್ತಿಗಳಾಗಿ ಪರಿಣಮಿಸಬಹುದು ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದೆ.
ಬಡವರು ಹಣ ವ್ಯರ್ಥ ಮಾಡುತ್ತಾರೆ ಎಂಬ ಮಿಥ್ಯೆ
ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿರುವ ಒಂದು ತಪ್ಪು ಕಲ್ಪನೆಯನ್ನು ಬ್ಯಾನರ್ಜಿ ಅವರು ತಮ್ಮ ಇತ್ತೀಚಿನ ಸಂದರ್ಶನದಲ್ಲಿ ನೇರವಾಗಿ ಪ್ರಶ್ನಿಸುತ್ತಾರೆ. 'ಬಡತನದಲ್ಲಿರುವ ಜನರಿಗೆ ತಮಗೆ ನಿಜವಾಗಿ ಏನು ಬೇಕು ಎಂಬುದು ಚೆನ್ನಾಗಿ ತಿಳಿದಿದೆ. ಹಣ ದೊರಕಿದಾಗ, ಅವರು ಅದನ್ನು ಪೌಷ್ಠಿಕ ಆಹಾರ, ಆರೋಗ್ಯ, ಶಿಕ್ಷಣ, ಮತ್ತು ಸಣ್ಣ ವ್ಯವಹಾರಗಳಲ್ಲಿ ಹೂಡಿಕೆ ಮಾಡುತ್ತಾರೆ. ಅವರ ಕ್ರಿಯೆಗಳು ಅತ್ಯಂತ ತರ್ಕಬದ್ಧ ಮತ್ತು ಆರ್ಥಿಕವಾಗಿ ಸಮಂಜಸವಾಗಿರುತ್ತವೆ.
ಹಾಗಾದರೆ ಈ ಸುಳ್ಳು ಇನ್ನೂ ಏಕೆ ಉಳಿದುಕೊಂಡಿದೆ?
ಇದಕ್ಕೆ ಎರಡು ಮೂಲ ಕಾರಣಗಳನ್ನು ಬ್ಯಾನರ್ಜಿ ಅವರು ಗುರುತಿಸುತ್ತಾರೆ.
1. ನೈತಿಕ ಕಾರಣ: ಸಮಾಜದಲ್ಲಿ ಬಡತನವು ಒಂದು ಗುಣದೋಷ ಅಥವಾ ಕರ್ಮಫಲ ಎಂಬ ತಪ್ಪು ಭಾವನೆ ಆಳವಾಗಿ ಬೇರೂರಿದೆ. ಕೆಲವು ಜನರು ತಮ್ಮ ಸಂಕಷ್ಟಕ್ಕೆ ತಾವೇ ಹೊಣೆ ಎಂಬ ಮನೋಭಾವ ಇದೆ. ಸಂಕಟದಲ್ಲಿರುವವರು ತಮ್ಮ ಶ್ರಮಕ್ಕೆ ತಕ್ಕ ಫಲವನ್ನು ಅನುಭವಿಸಲೇಬೇಕು ಎಂಬ ಮಾನಸಿಕತೆ ಇದರ ಹಿಂದಿದೆ.
2. ರಾಜಕೀಯ ಕಾರಣ: ವ್ಯವಸ್ಥೆಯನ್ನು ಸರಿಪಡಿಸುವ ಬದಲು, ಬಡವರ ಮೇಲೆ ಆರೋಪ ಹೊರಿಸುವುದು ಸುಲಭ. ಅಂತಾರಾಷ್ಟ್ರೀಯ ತೆರಿಗೆ ವಂಚನಾ ಕೇಂದ್ರಗಳು ಸರ್ಕಾರಗಳಿಗೆ ಎಷ್ಟು ಸಾವಿರಾರು ಕೋಟಿಗಳಷ್ಟು ನಷ್ಟ ಮಾಡುತ್ತವೆ ಎಂಬುದರ ಬಗ್ಗೆ ನಮ್ಮಲ್ಲಿ ತೀವ್ರ ಆಕ್ರೋಶ ಕಾಣುವುದಿಲ್ಲ. ಆದರೆ ಸ್ವಲ್ಪ ಅನ್ನದಾನ ಮಾಡಿದರೆ ಸಾಕು, 'ಫ್ರೀಬಿಸ್' ಎಂಬ ಕೂಗು ಕೇಳಿಬರುತ್ತದೆ.
ಫ್ರೀಬಿಸ್ ಮತ್ತು ಉತ್ಪಾದಕ ಬಂಡವಾಳ: ಬ್ಯಾನರ್ಜಿ ಅವರ ಮತ್ತೊಂದು ಪ್ರಮುಖ ಅಂಶ
ಬ್ಯಾನರ್ಜಿ ಅವರ ಪ್ರಕಾರ: 'ಉಚಿತ ಟಿ.ವಿ ಮತ್ತು ಉಚಿತ ಹಸು ಒಂದೇ ಪರಿಣಾಮವನ್ನು ಉಂಟುಮಾಡುವುದಿಲ್ಲ. ಒಂದು ಬಳಕೆ ಇನ್ನೊಂದು ಆದಾಯ ಸೃಷ್ಟಿಕಾರಿ ಆಸ್ತಿ. ಆದ್ದರಿಂದ ನಾವು 'ಫ್ರೀಬಿಸ್' ಎಲ್ಲವನ್ನೂ ಒಂದೇ ಗುಂಪಿಗೆ ಸೇರಿಸಬಾರದು. 'ಯಾವುದು ಒಬ್ಬ ವ್ಯಕ್ತಿಯ ಭವಿಷ್ಯದ ಗಳಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಅನ್ನುವುದು ನಿಜವಾದ ಚರ್ಚೆ. ಇದರಲ್ಲಿ ದೀರ್ಘಾವಧಿಯ ಪ್ರಭಾವ ಅಡಗಿದೆ.
ಬ್ಯಾನರ್ಜಿ ಅವರ ವಾದಕ್ಕೆ ಐತಿಹಾಸಿಕ ಮತ್ತು ಅಂತರರಾಷ್ಟ್ರೀಯ ಸಾಕ್ಷ್ಯಾಧಾರಗಳಿವೆ. ಭಾರತವು 2024-26ರಲ್ಲಿ ಅತ್ಯಂತ ಕಡಿಮೆ ತೀವ್ರ ಬಡತನ ಮತ್ತು ಬಹು ಆಯಾಮದ ಬಡತನ ಸೂಚ್ಯಂಕ (ಎಂಪಿಐ) ಶೇ 11.28 ಅನ್ನು ತಲುಪಿದೆ. 2013-14ರಲ್ಲಿ ಶೇ 29.17ರಷ್ಟಿದ್ದ ಎಂಪಿಐ 2022-23ರ ವೇಳೆಗೆ ಶೇ 11.28 ಕ್ಕೆ ಇಳಿದಿದೆ. ಎಂಪಿಐ ಆದಾಯವನ್ನು ಮಾತ್ರವಲ್ಲದೆ, ಶಿಕ್ಷಣ, ಆರೋಗ್ಯ, ಮತ್ತು ಜೀವನಮಟ್ಟಗಳಲ್ಲಿನ ಅಭಾವವನ್ನು ಅಳೆಯುತ್ತದೆ. ಆದ್ದರಿಂದ ಕಲ್ಯಾಣ ನೀತಿಗಳು ಎಷ್ಟು ಅಗತ್ಯ ಎಂಬುದನ್ನು ಈ ಸಂಖ್ಯೆಗಳು ಸ್ಪಷ್ಟಪಡಿಸುತ್ತವೆ.
ಬ್ಯಾನರ್ಜಿ ಅವರ ಸೈದ್ಧಾಂತಿಕ ಚೌಕಟ್ಟಿಗೆ ಸರ್ಕಾರದ ಯೋಜನೆಗಳೇ ನಿದರ್ಶನಗಳಾಗಿವೆ. ಪ್ರಧಾನಮಂತ್ರಿ ರೋಜ್‌ಗಾರ್ ಸೃಜನ್ ಕಾರ್ಯಕ್ರಮ (ಪಿಎಂಇಜಿಪಿ) ನಂತಹ ಸ್ವ-ಉದ್ಯೋಗ ಯೋಜನೆಗಳು ಖಾತರಿ ನೀಡುತ್ತವೆ. ಆಸ್ತಿ, ಭೂಮಿ ಇಲ್ಲದೆಯೂ ಸಣ್ಣ ಉದ್ಯಮ ಪ್ರಾರಂಭಿಸಲು ಸರ್ಕಾರಿ ಸಹಾಯಧನ ಮತ್ತು ಬ್ಯಾಂಕ್ ಗ್ಯಾರಂಟಿ ಪಡೆಯಬಹುದು.
15ನೇ ಹಣಕಾಸು ಆಯೋಗದ ₹ 13,554 ಕೋಟಿ ಮೊತ್ತದಲ್ಲಿ, ಪಿಎಂಇಜಿಪಿಯಡಿ 4,03,706 ಸಣ್ಣ ಉದ್ಯಮಗಳನ್ನು ಸ್ಥಾಪಿಸಲಾಗಿದೆ. 36.33 ಲಕ್ಷ ನೇರ/ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ. ಕಳೆದ 10 ವರ್ಷಗಳಲ್ಲಿ ಒಟ್ಟು 10.18 ಲಕ್ಷ ಸಣ್ಣ ಉದ್ಯಮಗಳು ಸ್ಥಾಪಿತವಾಗಿವೆ. ಇವುಗಳಲ್ಲಿ ಶೇ 80 ಉದ್ಯಮಗಳು ಗ್ರಾಮೀಣ ಪ್ರದೇಶಗಳಲ್ಲಿವೆ. ಉದ್ಯಮಿಗಳಲ್ಲಿ ಶೇ 40ರಷ್ಟು ಪಾಲು ಮಹಿಳೆಯರದ್ದು. ಇದು ಕಲ್ಯಾಣ ವೆಚ್ಚವನ್ನು ಉತ್ಪಾದಕ ಬಂಡವಾಳವಾಗಿ ಪರಿವರ್ತಿಸುವ ಉತ್ತಮ ನಿದರ್ಶನವಾಗಿದೆ.
ಅನಿವಾಸಿ ಭಾರತೀಯರಿಗೆ ಪ್ರತ್ಯೇಕ ಸಚಿವಾಲಯ: ಡಿ.ಕೆ. ಶಿವಕುಮಾರ್ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ನರೇಗಾ): ₹ 1 ರೂಪಾಯಿ ಹೂಡಿಕೆ, ₹ 1.16 ಗಿಂತಲೂ ಹೆಚ್ಚು ಆದಾಯ
ನರೇಗಾವನ್ನು ಸಾಮಾನ್ಯವಾಗಿ ವ್ಯರ್ಥ ವೆಚ್ಚ ಎಂದು ಟೀಕಿಸಲಾಗುತ್ತದೆ. ಆದರೆ 2025ರ ಅಧ್ಯಯನಗಳು ವಿಭಿನ್ನ ಚಿತ್ರಣ ನೀಡುತ್ತವೆ. ನೇರ ಮತ್ತು ಪರೋಕ್ಷ ಪರಿಣಾಮಗಳನ್ನು ಗಮನಿಸಿದಾಗ, ನರೇಗಾದಲ್ಲಿ ಹೂಡಿಕೆ ಮಾಡಿದ 1 ರೂಪಾಯಿ 1.07 ರೂಪಾಯಿ ರಾಷ್ಟ್ರೀಯ ಆದಾಯವನ್ನು ಮತ್ತು ₹ 1.16 ಗೃಹಬಳಕೆಯ ವೆಚ್ಚವನ್ನು ಸೃಷ್ಟಿಸುತ್ತದೆ. ಅಂದರೆ, ಈ ಯೋಜನೆಯು ಹಣವನ್ನು ಹೆಚ್ಚುಮಾಡುತ್ತದೆ. ಹೀಗಾಗಿ ಇದನ್ನು ಫ್ರೀಬೀಸ್ ಎನ್ನುವುದು ತಪ್ಪಾಗುತ್ತದೆ.
ನೇರ ನಗದು ವರ್ಗಾವಣೆ: ₹3.48 ಲಕ್ಷ ಕೋಟಿ ಉಳಿತಾಯ
ಕಲ್ಯಾಣ ವೆಚ್ಚವನ್ನು 'ಉಚಿತ ಕೊಡುಗೆ' ಎಂದು ಟೀಕಿಸುವವರು ಡಿಬಿಟಿ ಹಾಗೂ JAM ತ್ರಿವಳಿ (Jan Dhan, Aadhaar, Mobile) ದಕ್ಷತೆಯನ್ನು ಒಪ್ಪಿಕೊಳ್ಳಬೇಕು. ಡಿಬಿಟಿ ಅನುಷ್ಠಾನದ ಬಳಿಕ ಸಬ್ಸಿಡಿಗಳು ಸರ್ಕಾರದ ಒಟ್ಟು ವೆಚ್ಚದ ಶೇ 16 ರಿಂದ ಶೇ 9ಕ್ಕೆ ಕಡಿಮೆಯಾಗಿದೆ, ಅದೇ ಸಮಯದಲ್ಲಿ ಫಲಾನುಭವಿಗಳ ಸಂಖ್ಯೆ 16 ಪಟ್ಟು (11 ಕೋಟಿಯಿಂದ 176 ಕೋಟಿಗೆ) ಹೆಚ್ಚಾಗಿದೆ. ಒಟ್ಟಾರೆ ಕಲ್ಯಾಣ ಯೋಜನೆಗಳ ವಿತರಣೆಯಲ್ಲಿನ ಸೋರಿಕೆಗಳು ನಿಯಂತ್ರಣಕ್ಕೆ ಬಂದಿದ್ದು, ₹3.48 ಲಕ್ಷ ಕೋಟಿ ಉಳಿತಾಯವಾಗಿದೆ.
ಕರ್ನಾಟಕದ 5 ಗ್ಯಾರಂಟಿಗಳು: ಮಹಿಳಾ ಸಬಲೀಕರಣ ಮತ್ತು ಆರ್ಥಿಕ ಉತ್ತೇಜನ
ಕರ್ನಾಟಕದ ಪಂಚ ಗ್ಯಾರಂಟಿಗಳು ಕಲ್ಯಾಣ ಅರ್ಥಶಾಸ್ತ್ರದ ಮತ್ತೊಂದು ಪ್ರಮುಖ ಉದಾಹರಣೆಯಾಗಿದೆ. ಕಿಂಗ್ಸ್ ಕಾಲೇಜು ಲಂಡನ್ ಎಂಬ ಪ್ರತಿಷ್ಠಿತ ವಿಶ್ವವಿದ್ಯಾನಿಲಯದ ಅಧ್ಯಯನದ ಪ್ರಕಾರ, ಗೃಹಲಕ್ಷ್ಮಿ ಯೋಜನೆಯಡಿ ತಿಂಗಳಿಗೆ ₹2,000 ಪಡೆಯುವ ಮಹಿಳೆಯರು, ತಮ್ಮ ಕುಟುಂಬದ ಆದಾಯದ ಮೇಲೆ ಹೆಚ್ಚಿನ ನಿಯಂತ್ರಣ , ಸುಧಾರಿತ ಪೌಷ್ಟಿಕತೆ, ಹೆಚ್ಚಿನ ಉಳಿತಾಯ ಮತ್ತು ಹೆಚ್ಚಿನ ಆತ್ಮವಿಶ್ವಾಸ ಗಳಿಸಿದ್ದಾರೆ. ಶೇ 99.8 ಜನರು ಸಂಪೂರ್ಣ ಮೊತ್ತ ಪಡೆದಿದ್ದಾರೆ.
ಶಕ್ತಿ ಯೋಜನೆಯಡಿ ಬಸ್ ಉಚಿತ ಪ್ರಯಾಣವು ತಮ್ಮ ಉದ್ಯೋಗ ನಿರ್ಧಾರಗಳ ಮೇಲೆ ಪ್ರಭಾವ ಬೀರಿದೆ ಎಂದು ಶೇ 46 ಮಹಿಳೆಯರು ಹೇಳಿದ್ದಾರೆ. ಶೇ 49 ಜನರು ಕೌಶಲ ತರಬೇತಿ ಮತ್ತು ಕೆಲಸಕ್ಕಾಗಿ ಪ್ರಯಾಣ ಮಾಡಲು ಬಳಸಿಕೊಂಡಿದ್ದಾರೆ. ರಾಜ್ಯದ ಮಹಿಳೆಯರ ಕಾರ್ಮಿಕ ಸೇರ್ಪಡೆ ದರ 2025ರಲ್ಲಿ ಅತ್ಯುನ್ನತ (ಶೇ 34.1) ಮಟ್ಟದಲ್ಲಿದೆ. ಈ ಕಲ್ಯಾಣ ಯೋಜನೆಗಳು ಬಳಕೆಯ ಅನುದಾನ ಮಾತ್ರವಲ್ಲ, ಅವು ಕೆಲಸಗಾರರನ್ನು ಹೆಚ್ಚಿಸುವ, ಬೇಡಿಕೆಯನ್ನು ಸೃಷ್ಟಿಸುವ, ಮತ್ತು ಸ್ಥಳೀಯ ವ್ಯವಹಾರಗಳನ್ನು ಉತ್ತೇಜಿಸುವ ಪ್ರಬಲ ಆರ್ಥಿಕ ಚಾಲಕ ಶಕ್ತಿಗಳಾಗಿವೆ.
ಆಕ್ಷೇಪಣೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದು
ಯಾವುದೇ ಕಲ್ಯಾಣ ಯೋಜನೆ ಸವಾಲುಗಳನ್ನು ಹೊರತಾಗಿಲ್ಲ. ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡುವುದು ಕರ್ನಾಟಕದ ಯುವ ನಿಧಿ ಯೋಜನೆಯಿಂದ ಕೆಲಸಗಾರರ ಸಂಖ್ಯೆ ಕಡಿಮೆಯಾಗಬಹುದು ಎನ್ನುವ ಟೀಕೆ ಇದೆ. ವಿಳಂಬಿತ ಪಾವತಿಗಳು, ಹಣದುಬ್ಬರ, ಆಡಳಿತಾತ್ಮಕ ಅಡೆತಡೆಗಳು - ಇವೆಲ್ಲಾ ನಿಜವಾದ ಸಮಸ್ಯೆಗಳು. ಆದರೆ ಸಮಸ್ಯೆಗಳನ್ನು ಸರಿಪಡಿಸದೆ ಯೋಜನೆಯನ್ನು 'ಫ್ರೀಬಿಸ್' ಎಂದು ತಳ್ಳಿಹಾಕುವುದು ಸರಿಯಲ್ಲ. ಉತ್ತಮ ವಿನ್ಯಾಸ, ಬಲಿಷ್ಠ ವಿತರಣಾ ಕಾರ್ಯವಿಧಾನ, ಮತ್ತು ನಿರಂತರ ಮೇಲ್ವಿಚಾರಣೆ ಮೂಲಕ ಕಲ್ಯಾಣ ಯೋಜನೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲವು.
'ಕಲ್ಯಾಣವೇ ಬೆಳವಣಿಗೆ' ಮಾದರಿ
ಭಾರತದ ಕಲ್ಯಾಣ ವ್ಯವಸ್ಥೆ 2047ರ ವಿಕಸಿತ ಭಾರತ ದೃಷ್ಟಿಕೋನದ ಅವಿಭಾಜ್ಯ ಅಂಗವಾಗಿದೆ. 1946ರ ಭೋರೆ ಸಮಿತಿ, 1991ರ ಆರ್ಥಿಕ ಸುಧಾರಣೆಗಳು, ಮತ್ತು 2014ರ ನಂತರದ ಡಿಬಿಟಿ ಮತ್ತು ಕಲ್ಯಾಣ ವಿಸ್ತರಣೆ ಈ ಪ್ರಯಾಣದ ಮಹತ್ವದ ಮೈಲಿಗಲ್ಲುಗಳಾಗಿವೆ. ಬ್ಯಾನರ್ಜಿ ಅವರ ಸಂಶೋಧನೆ ಮತ್ತು ಸರ್ಕಾರಿ ದತ್ತಾಂಶಗಳು ಸ್ಪಷ್ಟಪಡಿಸುವಂತೆ, 'ಉಚಿತ ಕೊಡುಗೆಗಳು' ಎಂಬ ಹಣೆಪಟ್ಟಿ ಕಟ್ಟುವ ಬದಲು, ಸಾಕ್ಷಿ ಆಧಾರಿತ ಮೌಲ್ಯಮಾಪನದ ಮೇಲೆ ಕಲ್ಯಾಣ ಯೋಜನೆಗಳನ್ನು ಅಳೆಯಬೇಕು. ಸರಿಯಾಗಿ ವಿನ್ಯಾಸಗೊಳಿಸಿದ್ದರೆ, ಸರಿಯಾಗಿ ಕಾರ್ಯಗತಗೊಳಿಸಿದ್ದರೆ ಮತ್ತು ಸರಿಯಾಗಿ ಮೇಲ್ವಿಚಾರಣೆ ಮಾಡಿದ್ದರೆ ನರೇಗಾ, ಡಿಬಿಟಿ, ಕರ್ನಾಟಕದ ಗ್ಯಾರಂಟಿಗಳು, ಪಿಎಂಇಜಿಪಿ ಯೋಜನೆಗಳು ಕಲ್ಯಾಣ ವೆಚ್ಚವನ್ನು ಹೂಡಿಕೆಯಾಗಿ ಪರಿವರ್ತಿಸಬಹುದು ಎಂಬುದನ್ನು ಸಾಬೀತುಪಡಿಸಿವೆ.
ಸರಳವಾಗಿ ಹೇಳುವುದಾದರೆ, ಕಲ್ಯಾಣ ವೆಚ್ಚ = ಆರ್ಥಿಕ ಅಭಿವೃದ್ಧಿ. ಬಡವರು ಹಣವನ್ನು ಖರ್ಚು ಮಾಡುತ್ತಾರೆ, ಉಳಿಸುವುದಿಲ್ಲ. ಬಡ ಕುಟುಂಬದ ಕೈಯಲ್ಲಿರುವ ಒಂದು ರೂಪಾಯಿಯು ಆರ್ಥಿಕತೆಯಲ್ಲಿ ಹಲವು ಬಾರಿ ಪರಿಚಲನೆಗೊಳ್ಳುತ್ತದೆ. ಕಲ್ಯಾಣ ಯೋಜನೆಗಳಲ್ಲಿನ ರಚನಾತ್ಮಕ ಅದಕ್ಷತೆಗಳನ್ನು ಸರಿಪಡಿಸಿ, ಸರಿಯಾಗಿ ಕಾರ್ಯಗತಗೊಳಿಸಿದರೆ, ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ನ್ಯಾಯ ಎರಡನ್ನೂ ಒಟ್ಟಿಗೆ ಸಾಧಿಸಬಹುದು.
ಲೇಖಕರು: ಲಂಡನ್ ನಗರದಲ್ಲಿ ನೆಲಸಿರುವ ಸಾರ್ವಜನಿಕ ನೀತಿ ವಿಶ್ಲೇಷಕರು, ಇಂಜಿನಿಯರ್ ಮತ್ತು ವ್ಯವಸ್ಥಾಪನಾ ಸಲಹೆಗಾರರು
ಬ್ರಿಟನ್‌ನಲ್ಲೂ ರಾಮ ಮಂದಿರ ವಿವಾದ: 40 ವರ್ಷ ಹಳೆಯ ದೇವಾಲಯದ ಭವಿಷ್ಯ ಅತಂತ್ರ
