Dailyhunt Logo
  • Light mode
    Follow system
    Dark mode
    • Play Story
    • App Story
ಬಿಳಿ ಸೆರಗಿನ ಸಮಸ್ಯೆ (ಲ್ಯುಕೋರಿಯಾ) ಮತ್ತು ಆಯುರ್ವೇದ

ಬಿಳಿ ಸೆರಗಿನ ಸಮಸ್ಯೆ (ಲ್ಯುಕೋರಿಯಾ) ಮತ್ತು ಆಯುರ್ವೇದ

ಹಿಳೆಯರಲ್ಲಿ ಬಿಳಿ ಸೆರಗಿನ ಸಮಸ್ಯೆ ಕಂಡುಬರುವುದು ಸಾಮಾನ್ಯವಾಗಿದೆ; ಅದು ತೊಂದರೆದಾಯಕ ಸಮಸ್ಯೆಯಾಗಿದೆ. ಯೋನಿಮಾರ್ಗದಿಂದ ಬಿಳಿ ಬಣ್ಣದ, ಅಂಟಾದ ಅಥವಾ ಕೆಲವೊಮ್ಮೆ ದುರ್ವಾಸನೆಯಿಂದ ಕೂಡಿದ ಸ್ರಾವವಾಗುವುದು, ಯೋನಿ ಹಸಿಯಾಗಿ ಇರುವುದು, ದೇಹದಲ್ಲಿ ನಿಶ್ಯಕ್ತಿ, ಸೊಂಟನೋವು ಅಥವಾ ಕಿರಿಕಿರಿ ಮುಂತಾದ ಲಕ್ಷಣಗಳು ಈ ಸಮಸ್ಯೆಯಲ್ಲಿ ಕಂಡುಬರುತ್ತವೆ.

ಅನೇಕ ಮಹಿಳೆಯರು ನಾಚಿಕೆ, ಸಂಕೋಚ ಮತ್ತು ಮಾಹಿತಿಯ ಅಭಾವದಿಂದಾಗಿ ಈ ಸಮಸ್ಯೆಯನ್ನು ಹೇಳುವುದಿಲ್ಲ, ಕೇವಲ ಮನೆಮದ್ದುಗಳನ್ನೇ ಅವಲಂಬಿಸಿರುತ್ತಾರೆ. ಆಯುರ್ವೇದವು ಈ ಸ್ಥಿತಿಯ ಕಡೆಗೆ ಸ್ಥಳೀಯ ಸಮಸ್ಯೆಯೆಂದು ಪರಿಗಣಿಸದೇ ದೇಹದಲ್ಲಿನ ದೋಷಗಳು ಮತ್ತು ಧಾತುಗಳ ಅಸಮತೋಲನಕ್ಕೆ ಜೋಡಿಸಿ ನೋಡುತ್ತದೆ.

ಲೇಖನ ೬

ಈ ಹಿಂದಿನ ಲೇಖನ -೫ ಓದಲು ಈ ಲಿಂಕ್ ಮೇಲೆ ಕ್ಲಿಕ್‌ ಮಾಡಿ : https://sanatanprabhat.org/kannada/178312.html

೧. ಏನಿದೆ ಬಿಳಿ ಸೆರಗಿನ ಸಮಸ್ಯೆ ? ಮತ್ತು ಅದರ ಲಕ್ಷಣಗಳು

ಆಯುರ್ವೇದದಲ್ಲಿ ಬಿಳಿ ಸೆರಗಿನ ಸಮಸ್ಯೆಗೆ 'ಶ್ವೇತಪದರ' ಎನ್ನಲಾಗುತ್ತದೆ. ಈ ಸ್ಥಿತಿಯು ಪ್ರಮುಖವಾಗಿ ಕಫದೋಷವು ಹೆಚ್ಚಾಗುವುದರಿಂದ ಉಂಟಾಗುತ್ತದೆ. ಕಫದೋಷದ ಸ್ವಭಾವವು ಜಡ, ಸ್ನಿಗ್ಧ ಮತ್ತು ಶೀತವಾಗಿರುವುದರಿಂದ ಅದರ ಪರಿಣಾಮವು ಯೋನಿಮಾರ್ಗದ ಸ್ರಾವದ ಮೇಲಾಗುತ್ತದೆ. ಅತಿಯಾದ ಸಿಹಿ, ಅತಿಯಾದ ಎಣ್ಣೆ ಪದಾರ್ಥ ಮತ್ತು ಜಡ ಆಹಾರ, ಸತತವಾಗಿ ಕುಳಿತುಕೊಂಡಿರುವುದು, ವ್ಯಾಯಾಮದ ಕೊರತೆ, ಅಪೂರ್ಣ ಸ್ವಚ್ಛತೆ, ಪದೇ ಪದೇ ಆಗುವ ಜಂತುಸಂಸರ್ಗ (ಇನಫೆಕ್ಷನ್), ಹಾಗೆಯೇ ಮಾನಸಿಕ ಒತ್ತಡ ಇವುಗಳಿಂದಾಗಿ ಕಫದೋಷವು ಹೆಚ್ಚಾಗಿ ಬಿಳಿ ಸೆರಗಿನ ಸಮಸ್ಯೆ ಹೆಚ್ಚಾಗಬಹುದು. ಕೆಲವು ಬಾರಿ ವಾತ ಮತ್ತು ಪಿತ್ತ ಈ ದೋಷಗಳ ಸಹಭಾಗಿತ್ವವೂ ಕಂಡುಬರುತ್ತದೆ.

ಬಿಳಿ ಸೆರಗಿನ ಸಮಸ್ಯೆ ದೀರ್ಘಕಾಲದ ವರೆಗೆ ಉಳಿದರೆ ಶರೀರದ ಮೇಲೆ ಅದರ ದುಷ್ಪರಿಣಾಮಗಳು ಕಂಡುಬರುತ್ತವೆ. ಸತತ ಸ್ರಾವದಿಂದಾಗಿ ಶರೀರದಲ್ಲಿನ ಪೋಷಕಾಂಶಗಳು ಕಡಿಮೆಯಾಗಿ ನಿಶ್ಯಕ್ತಿ, ಆಯಾಸ, ತಲೆಸುತ್ತು ಬರುವುದು ಅಥವಾ ನಿರುತ್ಸಾಹ, ಇಂತಹ ಲಕ್ಷಣಗಳು ಕಾಣಿಸಬಹುದು. ಕೆಲವು ಸ್ತ್ರೀಯರಲ್ಲಿ ಪದೇ ಪದೇ ಯೋನಿ ಉರಿಯುವುದು, ಯೋನಿಯಲ್ಲಿ ತುರಿಕೆ ಅಥವಾ ಸಂಸರ್ಗ ಉಂಟಾಗುವ ಸಾಧ್ಯತೆ ಹೆಚ್ಚುತ್ತದೆ. ಆದ್ದರಿಂದ ಈ ಸಮಸ್ಯೆಯನ್ನು ನಿರ್ಲಕ್ಷಿಸದೆ ಯೋಗ್ಯ ಸಮಯದಲ್ಲಿ ಚಿಕಿತ್ಸೆ ಮಾಡುವುದು ಅವಶ್ಯಕವಾಗಿರುತ್ತದೆ.

೨. 'ಶ್ವೇತಪದರ' ಸಮಸ್ಯೆಗೆ ಮಾಡಬೇಕಾದ ಆಯುರ್ವೇದ ಮತ್ತು ಮನೆಮದ್ದುಗಳು

 ವೈದ್ಯ (ಸೌ.) ಸಾರಿಕಾ ನೀಲೇಶ ಲೊಂಡ

ಆಯುರ್ವೇದ ಉಪಾಯದ ಮುಖ್ಯ ಉದ್ದೇಶ ಕಫದೋಷವನ್ನು ಶಮನಗೊಳಿಸುವುದು, ಯೋನಿ ಮಾರ್ಗವನ್ನು ಸ್ವಚ್ಛ ಹಾಗೂ ಆರೋಗ್ಯವಾಗಿ ಇಡುವುದು ಮತ್ತು ಶರೀರದ ಒಟ್ಟಾರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಾಗಿರುತ್ತದೆ. ಶ್ವೇತಪದರದಲ್ಲಿ (ಬಿಳಿ ಮುಟ್ಟು) 'ಲೋಧ್ರ', 'ಅಶೋಕ', 'ನಾಗಕೇಸರ', 'ಆಮಲಕಿ' (ನೆಲ್ಲಿಕಾಯಿ)ಯಂತಹ ಔಷಧೀಯ ದ್ರವ್ಯಗಳನ್ನು ಉಪಯುಕ್ತವೆಂದು ಪರಿಗಣಿಸಲಾಗುತ್ತದೆ. 'ಲೋಧ್ರಾಸವ' ಅಥವಾ 'ಅಶೋಕಾರಿಷ್ಟ'ದಂತಹ ಔಷಧಿಗಳನ್ನು ವೈದ್ಯರ ಸಲಹೆಯಂತೆ ಸೇವಿಸಿದರೆ ಸ್ರಾವದ ಪ್ರಮಾಣವು ಕ್ರಮೇಣ ಕಡಿಮೆಯಾಗಲು ಸಹಾಯವಾಗುತ್ತದೆ. ಇಲ್ಲಿ ಗಮನಿಸಬೇಕಾದ ಪ್ರಮುಖ ವಿಷಯವೆಂದರೆ, ಸೋಂಕಿನ (ಇನಫೆಕ್ಷನ್) ಕಾರಣವಿದ್ದರೆ ಯೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ಪಡೆಯುವುದು ಅಗತ್ಯವಾಗಿರುತ್ತದೆ.

ಕೆಲವು ಅಭ್ಯಾಸಗಳನ್ನು ಬದಲಾಯಿಸಿಕೊಂಡರೆ ಬಿಳಿ ಸೆರಗಿನ ಸಮಸ್ಯೆಯಲ್ಲಿ ಖಂಡಿತವಾಗಿಯೂ ಸುಧಾರಣೆ ಕಂಡುಬರುತ್ತದೆ. ಸ್ವಚ್ಛತೆಯನ್ನು ಕಾಪಾಡಿ ಕೊಳ್ಳುವುದು ಅತ್ಯಂತ ಮಹತ್ವದ್ದು; ಆದರೆ ಅತಿ ಯಾದ ಸೋಪು ಅಥವಾ ರಾಸಾಯನಿಕಯುಕ್ತ ದ್ರವ್ಯಗಳನ್ನು ಬಳಸಬಾರದು. ಹಗುರ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಬೇಕು ಹಾಗೂ ಅತಿ ಸಿಹಿ, ಜಡ ಮತ್ತು ಹುಳಿ ಪದಾರ್ಥಗಳನ್ನು ಕಡಿಮೆ ಮಾಡಬೇಕು. ಮಜ್ಜಿಗೆ, ಬೇಳೆಕಾಳುಗಳು, ತರಕಾರಿಗಳನ್ನು ಆಹಾರದಲ್ಲಿ ಸೇರಿಸುವುದು ಉಪಯುಕ್ತವಾಗಿದೆ. ಬಿಗಿಯಾದ ಬಟ್ಟೆಗಳನ್ನು ತಪ್ಪಿಸಿ ಸಡಿಲವಾದ ಮತ್ತು ಹತ್ತಿ ಬಟ್ಟೆಗಳನ್ನು ಧರಿಸುವುದು ಲಾಭದಾಯಕ. ಮಾನಸಿಕ ಒತ್ತಡ, ಚಿಂತೆ ಮತ್ತು ಸತತವಾದ ಆಯಾಸವು ಶ್ವೇತಪದರದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಆದ್ದರಿಂದ ಪೂರಕವಾದ ನಿದ್ರೆ, ನಿಯಮಿತ ದಿನಚರಿ, ಸೌಮ್ಯವಾದ ಯೋಗಾಸನಗಳು ಮತ್ತು ಪ್ರಾಣಾಯಾಮದ ಅಭ್ಯಾಸ ಅವಶ್ಯಕವಾಗಿದೆ. ಶರೀರ ಮತ್ತು ಮನಸ್ಸು ಎರಡೂ ಶಾಂತವಾಗಿದ್ದರೆ ಚಿಕಿತ್ಸೆಯ ಪರಿಣಾಮವು ಉತ್ತಮವಾಗಿ ಕಂಡುಬರುತ್ತದೆ.

೩. ಶ್ವೇತಪದರದ ಸಮಸ್ಯೆ ನಿಯಂತ್ರಣದಲ್ಲಿಡಲು…

ಒಟ್ಟಾರೆ, ಬಿಳಿ ಸೆರಗಿನ ಸಮಸ್ಯೆಯು ನಾಚಿಕೆ ಪಡುವಂತಹ ವಿಷಯವಲ್ಲ, ಬದಲಿಗೆ ಅದು ಚಿಕಿತ್ಸೆ ನೀಡಬಹುದಾದ ಒಂದು ಸ್ಥಿತಿಯಾಗಿದೆ. ಆಯುರ್ವೇದವು ಈ ಸಮಸ್ಯೆಯನ್ನು ಎಲ್ಲಾ ದೃಷ್ಟಿಕೋನದಿಂದ ನೋಡುತ್ತದೆ ಮತ್ತು ಮೂಲ ಕಾರಣಗಳಿಗೆ ಚಿಕಿತ್ಸೆ ನೀಡುವುದರ ಮೇಲೆ ಒತ್ತು ನೀಡುತ್ತದೆ. ಸರಿಯಾದ ಆಹಾರ-ವಿಹಾರ, ಸ್ವಚ್ಛತೆಯ ಬಗ್ಗೆ ಕಾಳಜಿ, ಆಯುರ್ವೇದದ ಔಷಧಿಗಳು ಮತ್ತು ವೈದ್ಯರ ಮಾರ್ಗದರ್ಶನದಂತೆ ಚಿಕಿತ್ಸೆ ಪಡೆದರೆ ಶ್ವೇತಪದರದ ಸಮಸ್ಯೆಯು ನಿಯಂತ್ರಣಕ್ಕೆ ಬಂದು ಸ್ತ್ರೀಯರ ಆರೋಗ್ಯ ಮತ್ತು ಆತ್ಮವಿಶ್ವಾಸ ಎರಡೂ ಸುಧಾರಿಸಲು ಸಾಧ್ಯವಿದೆ.

- ವೈದ್ಯ (ಸೌ.) ಸಾರಿಕಾ ನಿಲೇಶ ಲೊಂಡೆ, ನಿರ್ವಿಕಾರ ಆಯುರ್ವೇದ ಹಾಸ್ಪಿಟಲ್, ಭೋಸರಿ, ಪುಣೆ.

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada