ಬೆಂಗಳೂರು: ನನ್ನ ಸೈದ್ಧಾಂತಿಕ ಬದ್ಧತೆ ಮತ್ತು ರಾಜಕೀಯ ಹೋರಾಟಕ್ಕೆ ಮನ್ನಣೆ ನೀಡಿದ ಕಾಂಗ್ರೆಸ್ ಪಕ್ಷವು ನನ್ನ ಮೇಲೆ ವಿಶ್ವಾಸ ಇರಿಸಿ ನನ್ನನ್ನು ಬರಮಾಡಿಕೊಂಡು ರಾಜಕೀಯ ಕ್ಷೇತ್ರದಲ್ಲಿ ಅವಕಾಶನೀಡಿದೆ. ಎರಡು ಬಾರಿ ಮುಖ್ಯಮಂತ್ರಿ ಮಾಡಿದೆ, ವಿರೋಧಪಕ್ಷದ ನಾಯಕನಾಗಿ ಕೆಲಸ ಮಾಡಲು ಅವಕಾಶ ನೀಡಿದೆ.
ಆ ಮೂಲಕ ಈ ನಾಡಿನ ಜನತೆಗೆ ನಾನು ನಂಬಿರುವ ತತ್ವಾದರ್ಶಗಳ ಅನುಸಾರ ಸೇವೆ ಸಲ್ಲಿಸಲು ಅವಕಾಶ ನೀಡಿದೆ. ಈ ಕಾರಣಕ್ಕಾಗಿ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯವರಿಗೆ ಸದಾ ಆಭಾರಿಯಾಗಿರುತ್ತೇನೆ ಎಂದು ನಿರ್ಗಮಿತ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ರಾಜೀನಾಮೆ ಸಲ್ಲಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನೆಂದೂ ರಾಜಕಾರಣವನ್ನು ಅಧಿಕಾರದ ದಂಡ ಎಂದಾಗಲಿ, ವ್ಯಾಪಾರದ ಗಲ್ಲಾ ಪೆಟ್ಟಿಗೆ ಎಂದಾಗಲಿ ತಿಳಿದುಕೊಂಡವನಲ್ಲ, ಅದು ಬಡವರಿಗೆ, ಶೋಷಿತರಿಗೆ, ನೊಂದವರಿಗೆ ನೆರವಾಗುವ ಒಂದು ಅವಕಾಶ ಎಂದು ತಿಳಿದುಕೊಂಡವನು. ಈ ಸಮುದಾಯಗಳಿಗೆ ನೆರವಾಗುವ ಉದ್ದೇಶದಿಂದಲೇ ವಕೀಲನಾಗಿ ಸೇವೆ ಮಾಡುತ್ತಿದ್ದ
ನಾನು ರಾಜಕಾರಣವನ್ನು ಪ್ರವೇಶ ಮಾಡಿದವನು ಎಂದು ತಿಳಿಸಿದರು.
ನನ್ನ 77 ವರ್ಷಗಳ ಜೀವನ ಪಯಣದಲ್ಲಿ ಹಲವಾರು ವ್ಯಕ್ತಿಗಳು ಪ್ರೀತಿ-ವಿಶ್ವಾಸದಿಂದ ಕೈಹಿಡಿದು ಮುನ್ನಡೆಸಿದ್ದಾರೆ. ನನ್ನ ಬದುಕು ಒಂದು ತೆರೆದ ಪುಸ್ತಕ. ಈ ಪುಸ್ತಕದಲ್ಲಿ ಮೊದಲ ಬರವಣಿಗೆ ಮಾಡಿದ್ದು ಮರಳಿನ ಮೇಲಿನ ಅಕ್ಷರಾಭ್ಯಾಸದ ಮೂಲಕ ವೀರ ಕುಣಿತವನ್ನು ಕಲಿಯುತ್ತಾ ಸಮಯ ಸಿಕ್ಕಾಗ ಮರಳಿನ ಮೇಲೆ ಅಕ್ಷರಾಭ್ಯಾಸ ಮಾಡುತ್ತಿದ್ದ ನನ್ನನ್ನು ಶಾಲೆಗೆ ಕರೆದೊಯ್ದು ವಿದ್ಯೆ ಕಲಿಯುವ ಅವಕಾಶ ನೀಡಿದವರು ರಾಜಪ್ಪ ಮಾಸ್ತರ್… ವಕೀಲನಾಗಿದ್ದ ನನ್ನಲ್ಲಿನ ಸೇವಾಕಾಂಕ್ಷೆಯನ್ನು ಗುರುತಿಸಿಸಿ ಸಮಾಜವಾದದ ಪಾಠ ಮಾಡಿ, ರಾಜಕಾರಣಿಗಳಿಗೆ ಇರಬೇಕಾದ ಸೈದ್ದಾಂತಿಕ ಬದ್ದತೆ, ಜನಪರ ಕಾಳಜಿ ಮತ್ತು ಹೋರಾಟದ ಗುಣವನ್ನು ಕಲಿಸಿದವರು ರೈತನಾಯಕ ಎಂ.ಡಿ.ನಂಜುಂಡಸ್ವಾಮಿ ಎಂದು ತಿಳಿಸಿದರು.
ಮೊದಲ ಬಾರಿ 1983ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ನನ್ನನ್ನು ಗುರುತಿಸಿ ಕನ್ನಡ ಕಾವಲು ಸಮಿತಿ ಅಧ್ಯಕ್ಷನನ್ನಾಗಿ ಮಾಡಿದ್ದಲ್ಲದೆ ಎರಡನೇ ಬಾರಿ ಶಾಸಕನಾದ ನನ್ನನ್ನು ಸಚಿವನನ್ನಾಗಿ ಮಾಡಿದವರು ದಿವಂಗತ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು. ಇವರೆಲ್ಲರ ನೆರವು, ಕಾಳಜಿ ಮತ್ತು ಮಾರ್ಗದರ್ಶನಗಳು ಇಲ್ಲದೆ ಹೋಗಿದ್ದರೆ ನಾನು ಇಷ್ಟು ದೂರ ಸಾಗಿ ಬರುತ್ತಿರಲಿಲ್ಲ ಮತ್ತು ಇಷ್ಟು ಎತ್ತರಕ್ಕೆ ಏರಲು ಕೂಡಾ ಆಗುತ್ತಿರಲಿಲ್ಲ ಎನ್ನುವುದನ್ನು ವಿನಮ್ರವಾಗಿ ನಿವೇದಿಸಬಯಸುತ್ತೇನೆ ಎಂದು ಹೇಳಿದರು.

