Dailyhunt Logo
  • Light mode
    Follow system
    Dark mode
    • Play Story
    • App Story
Children's safety: ಮಕ್ಕಳನ್ನು ಸುರಕ್ಷಿತವಾಗಿ ಮನೆ ತಲುಪಿಸುವುದು ಶಾಲೆಯ ಜವಾಬ್ದಾರಿ: ಹೈಕೋರ್ಟ್‌

Children's safety: ಮಕ್ಕಳನ್ನು ಸುರಕ್ಷಿತವಾಗಿ ಮನೆ ತಲುಪಿಸುವುದು ಶಾಲೆಯ ಜವಾಬ್ದಾರಿ: ಹೈಕೋರ್ಟ್‌

Vishwavani 1 week ago

ಬೆಂಗಳೂರು: ಶಾಲಾ ಆವರಣದಲ್ಲಿ ಮಾತ್ರವಲ್ಲ, ಮಕ್ಕಳು ಮನೆ ತಲುಪವವರೆಗೆ ಅವರ ರಕ್ಷಣೆಯ (Children's safety) ಜವಾಬ್ದಾರಿ ಶಾಲಾ ಆಡಳಿತ ಮಂಡಳಿಯದ್ದೇ ಆಗಿರಲಿದೆ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಶಾಲಾ ಬಸ್‌ನಲ್ಲಿ ಹೋಗುವಾಗ ವಿದ್ಯಾರ್ಥಿಯೊಬ್ಬ ಕಣ್ಣು ಕಳೆದುಕೊಂಡ ಘಟನೆಗೆ ಸಂಬಂಧಿಸಿ ಖಾಸಗಿ ಶಾಲೆಯೊಂದರ ಆಡಳಿತ ಮಂಡಳಿ ವಿರುದ್ಧದ ಪ್ರಕರಣ ರದ್ದುಪಡಿಸಲು ಹೈಕೋರ್ಟ್‌ ನಿರಾಕರಿಸಿದೆ.

ಮಕ್ಕಳಿಗೆ ಶಾಲಾ ಬಸ್ ಸೌಕರ್ಯ ಕಲ್ಪಿಸಿ ನಾವೇನೋ ಉಪಕಾರ ಮಾಡುತ್ತಿದ್ದೇವೆ ಎಂಬ ಶಾಲೆಯವರ ಧೋರಣೆ ಯಾವುದೇ ಕಾರಣಕ್ಕೂ ಒಪ್ಪತಕ್ಕದ್ದಲ್ಲ. ಇದು ಮಕ್ಕಳ ರಕ್ಷಣೆಯ ಬಗ್ಗೆ ಶಾಸನದ ಅಡಿಯಲ್ಲಿ ಕಡ್ಡಾಯಗೊಳಿಸಲಾದ ಗಂಭೀರ ಬಾಧ್ಯತಾ ವಿಷಯ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ವಿದ್ಯಾರ್ಥಿ ಕಣ್ಣು ಕಳೆದುಕೊಂಡ ಸಂಬಂಧ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಮಂಡ್ಯ ಜಿಲ್ಲೆಯ ಮದ್ದೂರಿನ ದಿವ್ಯಜ್ಯೋತಿ ಖಾಸಗಿ ಶಾಲಾ ಆಡಳಿತ ಮಂಡಳಿ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ವಜಾಗೊಳಿಸಿದೆ.

ಮಗು ಶಾಲಾ ಬಸ್‌ ಹತ್ತಿದ ಮೇಲೆ, ಕೊನೆಯ ಸ್ಟಾಪ್‌ ಬರುವವರೆಗೂ ಶಾಲಾ ಮಂಡಳಿ ತಾನು ಹೊಣೆಗಾರರಲ್ಲ ಎಂದು ಹೇಳಲು ಸಾಧ್ಯವಿಲ್ಲ. ಘಟನೆ ನಡೆದ ಸಂದರ್ಭದಲ್ಲಿ ಬಸ್‌ನಲ್ಲಿಅಟೆಂಡರ್‌ ಇದ್ದರೆ? ಸಿಸಿಟಿವಿ ಕೇವಲ 'ಅಲಂಕಾರಿಕ ವಸ್ತು' ಆಗಿತ್ತೇ ಅಥವಾ ಚಾಲನೆಯಲ್ಲಿತ್ತೆ? ನಿಷೇಧಿತ ಅಥವಾ ಅಪಾಯಕಾರಿ ವಸ್ತುಗಳನ್ನು ಮಕ್ಕಳು ಬಸ್‌ನೊಳಗೆ ತರಲು ಹೇಗೆ ಸಾಧ್ಯವಾಯಿತು? ಈ ಬಗ್ಗೆ ತನಿಖೆಯಿಂದಲೇ ಉತ್ತರ ಸಿಗಬೇಕಾಗಿದೆ, ಎಂದು ಪೀಠ ಪ್ರತಿಪಾದಿಸಿದೆ.

ಏನಿದು ಪ್ರಕರಣ

ಮಂಡ್ಯ ಜಿಲ್ಲೆಯ ಮದ್ದೂರಿನ ದಿವ್ಯಜ್ಯೋತಿ ಶಾಲೆಯಲ್ಲಿ 4ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ 2025ರ ಆಗಸ್ಟ್ 1ರಂದು ಶಾಲೆಯ ಬಸ್‌ನಲ್ಲಿ ಇತರೆ ಮಕ್ಕಳೊಂದಿಗೆ ಮನೆಗೆ ಹಿಂದಿರುಗುತ್ತಿದ್ದ ವೇಳೆ ಅವಘಡ ನಡೆದಿತ್ತು. ಬಸ್ಸಿನೊಳಗೆ ಮಕ್ಕಳು ಬಣ್ಣದ ಬೆಳಕು ಚೆಲ್ಲುವ ಪಟಾಕಿಯನ್ನು ಸಿಂಪಡಿಸಿದ್ದರು. ಈ ವೇಳೆ ಮಗುವಿನ ಕಣ್ಣಿಗೆ ಕಿಡಿಗಳು ಸಿಡಿದು ಒಂದು ಕಣ್ಣು ದೃಷ್ಟಿ ಕಳೆದುಕೊಂಡಿತ್ತು. ಅಷ್ಟೇ ಅಲ್ಲ, ದೇಹದ ಶೇ 40ರಷ್ಟು ಭಾಗ ಅಂಗವಿಕಲತೆಗೆ ಒಳಗಾಗಿದೆ ಎಂಬುದು ಆರೋಪ ಕೇಳಿಬಂದಿದೆ.

ಕೊಡಗಿನಲ್ಲಿ ಹೊರಗಿನ ಉದ್ಯಮಿಗಳ ಕಾರುಬಾರು

ಈ ಘಟನೆಯ ಹಿನ್ನೆಲೆಯಲ್ಲಿ ದಿವ್ಯಜ್ಯೋತಿ ಶಾಲೆಯ ಆಡಳಿತ ಮಂಡಳಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ-2023ರ (ಬಿಎನ್‌ಎಸ್) ಕಲಂ 125(ಎ) ಅಡಿಯಲ್ಲಿ ಕೊಪ್ಪ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಪ್ರಕರಣವನ್ನು ಪ್ರಶ್ನಿಸಿ ಶಾಲಾ ಆಡಳಿತ ಮಂಡಳಿ ಹೈಕೋರ್ಟ್‌ ಮೆಟ್ಟಿಲೇರಿತ್ತು. ಅಲ್ಲದೆ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಕೇಳಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ನ್ಯಾಯಪೀಠ ಅರ್ಜಿಯನ್ನು ಸಾರಾಸಗಟಾಗಿ ತಿರಸ್ಕರಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani