Dailyhunt Logo
  • Light mode
    Follow system
    Dark mode
    • Play Story
    • App Story
Hari Paraak Column: MOMO ಮತ್ತು MEME

Hari Paraak Column: MOMO ಮತ್ತು MEME

Vishwavani 3 months ago

ತುಂಟರಗಾಳಿ

ಸಿನಿಗನ್ನಡ

ಮ್ ಸಿನಿಮಾ ನಟರು ಏನ್ ಮಾಡ್ತಾ ಇದ್ದಾರೆ? ರಾಜ್ಯದಲ್ಲಿ ಏನಾದರೂ ತೊಂದರೆ ಆದ ಕೂಡಲೇ ಇಂಥದೊಂದು ಪ್ರಶ್ನೆ ನಮ್ಮ ಜನಗಳ ಬಾಯಲ್ಲಿ ಬರೋದು ತೀರಾ ಕಾಮನ್. 'ಸಿನಿಮಾ ನಟರು ನಮಗಾಗಿ ಏನು ಮಾಡಿದ್ದಾರೆ?' ಅಂತ ಕೇಳೋ ಈ ಕಾಯಿಲೆ, ಆಗಾಗ ಬರುತ್ತಿರುತ್ತೆ.

ಇದೇನೂ ಹೊಸದಲ್ಲ ಬಿಡಿ, ಮೇರುನಟ ಡಾ.ರಾಜ್‌ಕುಮಾರ್ ಅವರಿಂದ ಹಿಡಿದು ಇಂದಿನ ಯುವಪೀಳಿಗೆಯ ನಟರನ್ನೂ ಈ ಗೀಳು ಬಿಟ್ಟಿಲ್ಲ. ಈಗ ಮತ್ತೆ ನಮ್ಮ ಕನ್ನಡದ ನಟರು ಜನರಿಗೆ ಸಹಾಯ ಮಾಡಬೇಕು, ತಮ್ಮ ದುಡ್ಡನ್ನ ಜನರಿಗೆ ಕೊಡಬೇಕು, ತಮ್ಮ ಸಿನಿಮಾ ಗಳಲ್ಲಿ ವಿಲನ್‌ಗಳನ್ನು ಹೊಡೆದೋಡಿಸಿದಂತೆ ಒಂದೇ ಸಲ ಸಂಕಷ್ಟಗಳನ್ನು ಓಡಿಸಬೇಕು ಎಂಬೆಲ್ಲ ಪ್ರಲಾಪಗಳು ಶುರುವಾಗಿವೆ.

ಅಂದ ಹಾಗೆ ನಮ್ಮ ಜನಗಳಿಗೆ ಪಾಪ, ಈ ಸಿನಿಮಾ ನಟರು ತುಂಬಾ ಸುಲಭಕ್ಕೆ ಸಿಗುವ ಮಿಕಗಳಾಗಿ ಬಿಡುತ್ತಾರೆ. ಈ ಸಿನಿಮಾ ನಟರು ನಮಗೇನೂ ಮಾಡಿಲ್ಲ ಎಂದು ಮುಲುಗುವ ಈ ಜನ, ತಾವು ಅವರನ್ನು ಉದ್ಧಾರ ಮಾಡಿದ್ದೇವೆ, ಅವರ ಸಿನಿಮಾಗಳನ್ನು ಹಣ ಕೊಟ್ಟು ನೋಡಿದ್ದೇವೆ, ಹಾಗಾಗಿ ಅವರು ನಮಗೆ ಸಹಾಯ ಮಾಡಬೇಕು ಎಂಬ ಮನೋಭಾವ ದಿಂದ ಮಾತನಾಡುತ್ತಾರೆ.

ಆದರೆ ಒಂದು ವರ್ಷದಲ್ಲಿ ಒಬ್ಬ ಸ್ಟಾರ್ ನಟನ ಒಂದು ಚಿತ್ರವನ್ನು ಹೆಚ್ಚೆಂದರೆ 200 ರುಪಾಯಿ ಕೊಟ್ಟು ನೋಡುವ ಇವರು ತಮ್ಮ ಮಕ್ಕಳನ್ನು ಮಿನಿಮಮ್ ಎಂದರೂ ವರ್ಷ ಕ್ಕೆ 50 ಸಾವಿರ ಕೊಟ್ಟು ಓದಿಸುವ ಸ್ಕೂಲ್ ಮ್ಯಾನೇಜ್‌ಮೆಂಟ್‌ನವರನ್ನು ಈ ರೀತಿ ಕೇಳುವು ದಿಲ್ಲ, ಇವರಿಂದಲೇ ಲಕ್ಷಾಂತರ ಹಣ ಪೀಕುವ ಆಸ್ಪತ್ರೆ ಕಟ್ಟಿಸಿದವನನ್ನಾಗಲೀ ಅಥವಾ ನಮ್ಮ ಸಮಾಜದ ಇನ್ಯಾವುದೇ ಉದ್ಯಮಿಗಳನ್ನಾಗಲೀ ಇವರು ಕೇಳುವುದಿಲ್ಲ.

H‌ari Paraak Column: ಟಾಕ್ಸಿಕ್‌, ಧುರಂದರ್-2‌ ಮಧ್ಯೆ ಯುದ್ದ ನಿಲ್ಸಿದ್ದು ನಾನೇ: ಟ್ರಂಪ್

ತಮ್ಮ ಮನೆಯ ಬಳಿಯ ಇರುವ ಕಿರಾಣಿ ಅಂಗಡಿಗೂ ಇವರು ಸಾವಿರಾರು ರುಪಾಯಿ ಬ್ಯುಸಿನೆಸ್ ಕೊಟ್ಟರೂ ಅವನನ್ನೂ ಕೇಳುವುದಿಲ್ಲ. ಅವರೆಲ್ಲರೂ ಜನಗಳಿಂದಲೇ ಅಷ್ಟು ಶ್ರೀಮಂತರಾಗಿದ್ದರೂ ಅವರ ಗಳಿಕೆಯಲ್ಲಿ ನಮ್ಮ ಪಾಲಿದೆ ಎಂದು ಜನಗಳಿಗೆ ಅನ್ನಿಸೋ ದಿಲ್ಲ.

ಅವರನ್ನು ಬಿಡಿ, ಸಿನಿಮಾ ಮಾಡಿ ನೂರಾರು ಕೋಟಿಗಟ್ಟಲೆ ಹಣ ಮಾಡುವ ನಿರ್ಮಾಪಕ ರನ್ನೂ ಇವರು ಕೇಳೋದಿಲ್ಲ. ಬದಲಾಗಿ ಅದರಲ್ಲಿ ಒಂದು ಪಾಲು ತೆಗೆದುಕೊಳ್ಳುವ ನಟರು ಇವರಿಗೆ 'ಬಲಿ-ಕಾ-ಬಕ್ರಾ' ಆಗುತ್ತಾರೆ. ವಿಚಿತ್ರ ಅಂದ್ರೆ, ಈ ಜನಗಳು ನಮಗೆ ಯಾಕೆ ಏನೂ ಮಾಡಿಲ್ಲ ಅಂತ ಕೇಳಬೇಕಾದ ಸರಕಾರಗಳನ್ನೇ ಕೇಳೋದಿಲ್ಲ. ಇವರಿಗೆ ಕೇಳಬೇಕಾದ ಒಂದೇ ಪ್ರಶ್ನೆ ಅಂದ್ರೆ, ಸಿನಿಮಾ ನಟರೇನು ಬಿಟ್ಟಿ ಬಿದ್ದಿದ್ದಾರಾ?

ಲೂಸ್‌ ಟಾಕ್-‌ ಸಿದ್ದರಾಮಯ್ಯ

ಏನ್ ಮುಖ್ಯಮಂತ್ರಿಗಳೇ, ಈ ಸಲ ಬಜೆಟ್‌ನಲ್ಲಿ ಯಾವುದರ ರೇಟ್ ಅನ್ನೂ ಜಾಸ್ತಿ ಮಾಡ್ಲಿಲ್ಲವಲ್ಲ, ಏನ್ ಸಮಾಚಾರ?

- ಏನ್ ಮಾಡೋದಪ್ಪ, ಎಲ್ಲದರ ರೇಟ್ ಜಾಸ್ತಿ ಮಾಡಿನೂ ಅಧಿಕಾರ ಉಳಿಸ್ಕೊಳ್ಳೋಕೆ ನಾನು ಮೋದಿ ಅಲ್ಲವಲ್ಲ

ಸರಿ. ಅದೇನು, ಇರೋ ಬರೋ ಜಾತಿ, ಧರ್ಮಗಳಿಗೆಲ್ಲ ಫಂಡ್ ರಿಲೀಸ್ ಮಾಡಿ ಬಿಟ್ಟಿದ್ದೀರ, ಏನ್ ಸಮಾಚಾರ?

- ಇಂದ್ರೆ ರಾಜಕಾರಣ ನಡೀಬೇಕಲ್ಲ, ಅದಕ್ಕೆ ದಾನಗಳಲ್ಲಿ ಶ್ರೇಷ್ಠದಾನ ಅನುದಾನ ಅಂತ ಡಿಸೈಡ್ ಮಾಡಿಬಿಟ್ಟಿದ್ದೀನಿ.

ಅಂದಂಗೆ ನಿಮ್ಮ ಸರಕಾರ ಬೀಳ್ಸೋಕೆ ತುಂಬಾ ಜನ ಪಿತೂರಿ ಮಾಡ್ತಾ ಇದ್ದಾರಂತೆ?

- ಏನ್ ಮಾಡೋದು ಕರ್ನಾಟಕದ ಮುಖ್ಯಮಂತ್ರಿಗಳ ಹಣೆಬರಹನೇ ಇಷ್ಟು, ಅವರಿಗೆ ಆಡಳಿತ ನಡೆಸೋಕಿಂತ ಅಧಿಕಾರ ಉಳಿಸಿಕೊಳ್ಳೋದೇ ದೊಡ್ಡ ಕೆಲಸ.

ನಿಮ್ಮವರೇ ನಿಮ್ಮನ್ನ ಕೆಳಗಿಳಿಸಬೇಕು ಅಂತ ನೋಡ್ತಾ ಇದ್ದಾರಂತೆ?

- ಹೌದು, ಏನ್ ಮಾಡೋಕಾಗುತ್ತೆ. ಶತ್ರುಗಳು ವಿರೋಧ್ ಪಕ್ಷಕ್ಕಿಂತ ನಮ್ಮ ಇರೋದ್ ಜಾಸ್ತಿ. ಪಾರ್ಟಿ ಒಳಗೇ ಪಾರ್ಟಿಷನ್ ಜಾಸ್ತಿ.

ಈ ರಾಜಕೀಯ ಹೋಗ್ಲಿ ಬಿಡಿ, ಐಪಿಎಲ್ ಬರ್ತಾ ಇದೆ. ಈ ಸಲ ಆರ್‌ಸಿಬಿ ಮತ್ತೆ ಕಪ್ ಗೆಲ್ಲುತ್ತಾ?

- ಖಂಡಿತಾ ಗೆಲ್ಲಲೇಬೇಕು. ಇಲ್ಲಾ ಅಂದ್ರೆ ಟೂರ್ನಮೆಂಟ್ ಅರ್ಧ ಮುಗಿದ ಮೇಲೆ ಬೇರೆ ಟೀಮಲ್ಲಿ ಯಾರ‍್ಯಾರು ಚೆನ್ನಾಗಿ ಆಡ್ತಾ ಇದ್ದಾರೋ ಅವರನ್ನೆ ಆಪರೇಷನ್ ಹಸ್ತ ಮಾಡಿಸಿ ಆರ್‌ಸಿಬಿಗೆ ಸೇರಿಸಿ ಕೊಳ್ತೀವಿ

(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್

ಊರಿಗೆ ಹೊಸದಾಗಿ ಒಂದು ನಾಟಕದ ಕಂಪನಿ ಬಂದಿತ್ತು. ಆ ಕಂಪನಿ ಮಾಡುತ್ತಿದ್ದ ನಾಟಕ, ಆ ಊರಲ್ಲಿ ಹೌಸ್‌ ಫುಲ್ ಆಗಿ ಓಡುತ್ತಿತ್ತು. ಆ ನಾಟಕದಲ್ಲಿ ಅಂಥಾದ್ದೇನಿದೆ ಅಂತ ಊರ ಹೆಂಗಸರು ತುಂಬಾನೇ ಯೋಚನೆ ಮಾಡ್ತಾ ಇದ್ರು. ಯಾಕಂದ್ರೆ ಅವರ ಗಂಡಂದಿರು ಸಂಜೆ ಆಯ್ತು ಅಂದ್ರೆ ಸಾಕು, ನಾಟಕದ ಕಂಪನಿ ಕಡೆಗೆ ಹೊರಟುಬಿಡುತ್ತಿದ್ದರು. ಇದೇನು ವಿಷ್ಯ, ಕಂಡುಹಿಡಿಯಲೇಬೇಕು ಅಂತ ಒಂದು ದಿನ ಎಲ್ಲ ಹೆಂಗಸರೂ ಮಾತಾಡಿಕೊಂಡು ಕಂಪನಿಗೆ ಹೋದರು. ಅಲ್ಲಿ ಅವರು ತಮ್ಮ ಮನೆಯ ಗಂಡಸರು ಮಾತಾಡಿಕೊಳ್ಳುತ್ತಾ ಇದ್ದುದನ್ನ ನೋಡಿದ್ರು. ಅದರಿಂದ ಅವರಿಗೆ ಗೊತ್ತಾದ ವಿಷಯ ಅಂದ್ರೆ ಆ ನಾಟಕದಲ್ಲಿ ಮುಖ್ಯಪಾತ್ರ ಮಾಡುತ್ತಿದ್ದ ಹುಡುಗಿಯೊಬ್ಬಳ ತುಟಿ ತುಂಬಾ ದಪ್ಪ ಇದ್ದು, ಅದು ಎಲ್ಲ ಗಂಡಸರಿಗೂ ಇಷ್ಟ ಆಗಿ, ಅದನ್ನು ನೋಡೋಕಂತನೇ ಎಲ್ಲಾ ಗಂಡಸರೂ ಬರ್ತಾ ಇದ್ರು ಅನ್ನೋದು. ಸರಿ, ಹೆಂಗಸರೆ ಪ್ಲ್ಯಾನ್ ಮಾಡಿ ಒಂದು ದಿನ ಆ ಹುಡುಗಿಯನ್ನು ಭೇಟಿ ಮಾಡಿ, "ನೋಡಮ್ಮಾ, ನಿನ್ನಿಂದ ನಮ್ಮ ಸಂಸಾರ ಹಾಳಾಗ್ತಿದೆ" ಅಂತ ಹೇಳಿದ್ರು. ಅದಕ್ಕೆ ಆ ಹುಡುಗಿ "ನಾನೇನ್ಮಾಡೋಕಾಗುತ್ತೆ?" ಅಂದ್ಳು. ಅದಕ್ಕೆ ಹೆಂಗಸರು ಒಂದು ಗಿಡಮೂಲಿಕೆ ಔಷಧ ಕೊಟ್ಟು, "ಒಂದ್ ಕೆಲ್ಸ ಮಾಡು, ಇದನ್ನ ನಿನ್ನ ತುಟಿಗೆ ಹಚ್ಕೋ, ನಿನ್ನ ತುಟಿಗಳು ಸಣ್ಣ ಆಗ್ತವೆ. ಆದ್ರೆ ಅಪ್ಪಿ ತಪ್ಪಿ ಇದನ್ನ ನುಂಗಬೇಡ, ಮಾತೇ ಬಿದ್ದು ಹೋಗುವ ಸಾಧ್ಯತೆ ಇರುತ್ತೆ, ಹುಷಾರು" ಅಂತ ಹೇಳಿಹೋದರು. ಮರುದಿನ ನಾಟಕ ಶುರು ಆಗೋ ಟೈಮಿಗೆ ಎಲ್ಲಾ ಗಂಡಸರೂ ಬಂದು ಕೂತರು. ಆಗ ನಾಟಕ ಕಂಪನಿಯವನೊಬ್ಬ ಬಂದು ಹೇಳಿದ- "ನಮ್ಮ ಕಂಪನಿ ಯಜಮಾನರಿಗೆ ಮಾತು ಬಿದ್ದು ಹೋಗಿರುವುದರಿಂದ ನಾಟಕ ಕ್ಯಾನ್ಸಲ್ ಮಾಡಲಾಗಿದೆ".

ಲೈನ್‌ ಮ್ಯಾನ್

ಇಂದಿನ ಯುವಪೀಳಿಗೆಯ ಆಟಿಟ್ಯೂಡ್

- ಜೀವನದಲ್ಲಿ ಖುಷಿಮೂಲ ಹುಡುಕ್ರೋ ಅಂದ್ರೆ ಋಷಿಮೂಲ ಹುಡುಕ್ತಾರೆ.

ಒಂದು ಇ-ಮೇಲ್‌ಗೆ ತಕ್ಕ ಉತ್ತರ ಕೊಡೋದು ಅಂದ್ರೆ ಏನು ?

- YOU MAILED IT, I NAILED IT

ತುಂಬಾ ಸುಲಭದ ಕೆಲಸ ಅಂದ್ರೆ ಯಾವ್ದು?

- MOMO ಬಗ್ಗೆ MEME ಮಾಡೋದು

ಪಬ್ಲಿಕ್ ಟಿವಿ ರಂಗನಾಥ್ ಅವರಿಗೂ ನರೇಂದ್ರ ಮೋದಿಗೂ ಇರೋ ವ್ಯತ್ಯಾಸ

- ಏನಾದ್ರೂ ಒಳ್ಳೇದಾದ್ರೆ ರಂಗನಾಥ್ ಅವರು 'ಆಲ್‌ರೈಟ್ ಮುಂದಕ್ಕೋಗಣ' ಅಂತಾರೆ

- ಕೆಟ್ಟದ್ದಕ್ಕೆಲ್ಲ ಹಿಂದಿನ ಸರಕಾರವೇ ಹೊಣೆ ಅನ್ನೋ ಮೋದಿ, 'ಹಿಂದಕ್ಕೋಗಣ' ಅಂತಾರೆ.

ಎಲ್ಲರ ಬಗ್ಗೆನೂ ಸಂದೇಹ ಪಡುವವನು

- 'ಅನುಮಾನ್' ಭಕ್ತ

ಚಳಿಗಾಲದಲ್ಲಿ ತಿನ್ನೋಕಾಗದ ಚಿಕನ್ ಡಿಷ್

- 'ಚಿಲ್ಲಿ' ಚಿಕನ್‌

ಮಾತ್ರೆ ತಿನ್ನುವ ಚಟದ ಪರಮಾವಧಿ

- ಮೆಡಿಕಲ್ ಸ್ಟೋರಿಗೆ ಹೋಗಿ, ಯಾವುದಾದ್ರೂ ಹೊಸ ಟ್ಯಾಬ್ಲೆಟ್ ಬಂದಿದೆಯಾ ಅಂತ

ಕೇಳೋದು.

ಸದಾ ಉಗುರು ಕಡಿಯುವವನು

- 'ಉಗುರು'ಗಾಮಿ

ಎಂಥಾ ಅನಕ್ಷರಸ್ಥ ಹುಡುಗನ ಎದೆ ಸೀಳಿದರೂ ಎರಡಕ್ಷರ ಇದ್ದೇ ಇರುತ್ತೆ

- ಯಾವುದಾದರೂ ಹುಡುಗಿಯ ಹೆಸರಿನದ್ದು

ದುಬಾರಿ ಕಾರುಗಳನ್ನು ಇನ್ ಸ್ಟಾಲ್ಮೆಂಟ್‌ನ ತಗೋಬೇಕು

- ಮೊದಲು ಎಂಜಿನ್, ಆಮೇಲೆ ಬಾಡಿ, ಟೈರು, ಸೀಟು ಹೀಗೆ

Dailyhunt
Disclaimer: This content has not been generated, created or edited by Dailyhunt. Publisher: Vishwavani