Dailyhunt Logo
  • Light mode
    Follow system
    Dark mode
    • Play Story
    • App Story
Roopa Gururaj Column: ಕಾಶಿಯ ಅವಿಮುಕ್ತ ಕ್ಷೇತ್ರ ಮತ್ತು ಡುಂಢಿ ಗಣೇಶನ ರಹಸ್ಯ

Roopa Gururaj Column: ಕಾಶಿಯ ಅವಿಮುಕ್ತ ಕ್ಷೇತ್ರ ಮತ್ತು ಡುಂಢಿ ಗಣೇಶನ ರಹಸ್ಯ

Vishwavani 3 days ago

ಒಂದೊಳ್ಳೆ ಮಾತು

ಕಾಶಿ ಎಂದರೆ ಕೇವಲ ಒಂದು ಧಾರ್ಮಿಕ ತಾಣವಲ್ಲ; ಅದು ದಿವ್ಯ ಲೀಲೆಗಳ ಮತ್ತು ಮುಕ್ತಿಯ ಮಹಾ ಕ್ಷೇತ್ರ. ಕಾಶಿ ಯಾತ್ರೆ ಕೈಗೊಳ್ಳುವ ಪ್ರತಿಯೊಬ್ಬ ಭಕ್ತನೂ ವಿಶ್ವನಾಥನ ಸನ್ನಿಧಿಗೆ ಮುನ್ನ ಡುಂಢಿ ಗಣೇಶನ ದರ್ಶನ ಮಾಡಬೇಕು ಎಂಬ ನಿಯಮವಿದೆ. ಇದಕ್ಕೆ ಶಿವಪುರಾಣ ಮತ್ತು ಕಾಶಿ ಖಂಡದಲ್ಲಿ ಒಂದು ಪೌರಾಣಿಕ ಕಥೆಯಿದೆ.

ತಾರಕಾಸುರನ ಸಂಹಾರದ ನಂತರ ಹಿಮಾಲಯ ದಲ್ಲಿ ಶಿವ-ಪಾರ್ವತಿಯರ ಕಲ್ಯಾಣವಾಯಿತು. ಆದರೆ ಸತಿಯ ನೆನಪಿನಲ್ಲಿದ್ದ ಶಿವನಿಗೆ ಹಿಮಾಲಯ ದಲ್ಲಿರಲು ಮನಸ್ಸಿಲ್ಲದೆ, ಸಂಸಾರ ಹೂಡಲು ಶ್ರೇಷ್ಠ ಸ್ಥಳ ಹುಡುಕಲು ತನ್ನ ಗಣಗಳಿಗೆ ತಿಳಿಸಿದನು. ಗಣಗಳು ಇಡೀ ಭೂಮಿಯನ್ನು ಜಾಲಾಡಿ, ಪ್ರಕೃತಿ ಸೌಂದರ್ಯದಿಂದ ತುಂಬಿದ, ಋಷಿಮುನಿಗಳು ನೆಲೆಸಿದ್ದ ಅದ್ಭುತ ಜಾಗವನ್ನು ಹುಡುಕಿ ದರು. ಆ ಕ್ಷೇತ್ರಕ್ಕೆ ಕಾಲಿಡುತ್ತಿದ್ದಂತೆ ಆನಂದಭರಿತನಾದ ಶಿವನು ಅದಕ್ಕೆ 'ಆನಂದ ಕಾನನ' (ಇಂದಿನ ಕಾಶಿ) ಎಂದು ಹೆಸರಿಟ್ಟನು. ಕಾಲಕ್ರಮೇಣ ಭೂಮಿಯಲ್ಲಿ ಭೀಕರ ಬರಗಾಲ ಬಂದಾಗ, ಬ್ರಹ್ಮದೇವ ನು ಜಗತ್ತಿನ ಒಳಿತಿಗಾಗಿ ದಕ್ಷ ಪ್ರಜಾಪತಿಯ ವಂಶಸ್ಥನಾದ 'ರಿಪುಂಜಯ'ಭೂಪಾಲನೆ ಮಾಡಲು ಕೋರಿದನು. ಆದರೆ ತಪಸ್ಸಿನಲ್ಲಿದ್ದ ರಿಪುಂಜಯನು ಒಂದು ಕಠಿಣ ಷರತ್ತನ್ನಿಟ್ಟನು- ನನ್ನ ಆಳ್ವಿಕೆ ಯಲ್ಲಿ ದೇವಲೋಕದವರು ಯಾರೂ ಭೂಮಿಯಲ್ಲಿ ಇರಬಾರದು.

Roopa Gururaj Column: ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ದೇವರಿಲ್ಲ

ಅನಿವಾರ್ಯತೆಯಿಂದ ಬ್ರಹ್ಮನು ಇದಕ್ಕೆ ಒಪ್ಪಿದಾಗ, ಶಿವನೂ ಕೂಡ ಕಾಶಿಯನ್ನು ಬಿಟ್ಟು ಮಂದರ ಪರ್ವತಕ್ಕೆ ಹೋಗಬೇಕಾಯಿತು. ಆದರೆ ಕಾಶಿಯನ್ನು ಅಗಲಲು ಮನಸ್ಸಿಲ್ಲದ ಮಹಾದೇವನು ಗುಟ್ಟಾಗಿ ತನ್ನ ಆತ್ಮಲಿಂಗವನ್ನು ಅಲ್ಲಿಯೇ ಸ್ಥಾಪಿಸಿದನು. ಹೀಗಾಗಿ ಕಾಶಿಗೆ ಅವಿಮುಕ್ತ ಕ್ಷೇತ್ರ(ಶಿವನು ಎಂದಿಗೂ ಸಂಪೂರ್ಣವಾಗಿ ಬಿಟ್ಟುಹೋಗದ ಕ್ಷೇತ್ರ) ಎಂಬ ಹೆಸರು ಬಂತು. ರಿಪುಂಜಯನು 'ದಿವೋದಾಸ' ಎಂಬ ಹೆಸರಿನಿಂದ ಕಾಶಿಗೆ ಬಂದು ಅತ್ಯಂತ ಸುಭೀಕ್ಷವಾಗಿ ರಾಜ್ಯಭಾರ ಮಾಡ ತೊಡಗಿದನು.

ದಿವೋದಾಸನ ಆಳ್ವಿಕೆ ಎಷ್ಟು ಶ್ರೇಷ್ಠವಾಗಿತ್ತೆಂದರೆ, ದೇವತೆಗಳ ಸಹಾಯವಿಲ್ಲದೆಯೇ ಪ್ರಜೆಗಳು ಸುಖ‌ ವಾಗಿದ್ದರು. ದೇವತಾರಾಧನೆ ಮರೆತ ಜನರಿಂದಾಗಿ ಹವಿಸ್ಸು ಸಿಗದೆ ದೇವತೆಗಳು ಕಂಗೆಟ್ಟರು. ಶಿವನು ತನ್ನ ಕಾಶಿಯನ್ನು ಮರಳಿ ಪಡೆಯಲು ಕಳುಹಿಸಿದ ಗಣಗಳೆಲ್ಲ ಕಾಶಿಯ ಸೌಂದರ್ಯಕ್ಕೆ ಮರುಳಾಗಿ ಅ ಉಳಿದು ಕೊಂಡರು. ಕೊನೆಗೆ ಬ್ರಾಹ್ಮಣ ವೇಷದಲ್ಲಿ ಬಂದ ಬ್ರಹ್ಮದೇವನು ರಾಜನ ಧರ್ಮನಿಷ್ಠೆಯಲ್ಲಿ ಲೋಪ ಹುಡುಕಲು ಹತ್ತು ಅಶ್ವಮೇಧ ಯಾಗಗಳನ್ನು ಮಾಡಲು ಕೇಳಿದನು.

ರಾಜನು ಯಾವುದೇ ಲೋಪವಿಲ್ಲದೆ ಯಶಸ್ವಿಯಾಗಿ ಯಾಗಗಳನ್ನು ನೆರವೇರಿಸಿದ ಸ್ಥಳವೇ ಇಂದಿನ ಜಗತ್ಪ್ರಸಿದ್ಧ ದಶಾಶ್ವಮೇಧ ಘಾಟ್. ಯಾರಿಂದಲೂ ಸಾಧ್ಯವಾಗದ ಈ ಕಾರ್ಯ ಕೊನೆಗೆ ಗಣಪತಿಯ ಹೆಗಲಿಗೇರಿತು. ದಿವೋದಾಸನ ಸಾತ್ವಿಕ ಅಹಂಕಾರವನ್ನು ಮುರಿಯಲು ಗಣೇಶನು 'ಡುಂಢಿ' ಎಂಬ ಹೆಸರಿನ ಜ್ಯೋತಿಷಿಯ ವೇಷ ಧರಿಸಿ ಕಾಶಿಯನ್ನು ಪ್ರವೇಶಿಸಿದನು. ಸಂಸ್ಕೃತದಲ್ಲಿ 'ಡುಂಢ್' ಎಂದರೆ ಹುಡುಕುವುದು ಎಂದರ್ಥ.

ರಾಜನ ಆಡಳಿತದಲ್ಲಿದ್ದ ಸಣ್ಣ ತಪ್ಪುಗಳನ್ನು ಹುಡುಕುತ್ತಾ ಬಂದ ಈತನು ರಾಜನ ಅರಮನೆ ಯನ್ನು ತಲುಪಿದನು. ಅದೇ ಸಮಯದಲ್ಲಿ ರಾಜನ ಮಗನೇ ನವರತ್ನದ ಹಾರವನ್ನು ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದರಿಂದ ರಾಜನು ಚಿಂತಿತನಾಗಿದ್ದನು. ಜ್ಯೋತಿಷಿ ಡುಂಢಿಯು ರಾಜನ ಹಸ್ತ ನೋಡಿ, ಇನ್ನು ಹದಿನೆಂಟು ದಿನಗಳಲ್ಲಿ ಒಬ್ಬ ಮಹಾನ್ ಪಂಡಿ ತನು ಬಂದು ನಿನ್ನ ಗೊಂದಲಗಳಿಗೆ ದಾರಿ ತೋರುತ್ತಾನೆ ಎಂದು ಧೈರ್ಯ ತುಂಬಿ ಹೊರಟನು. ತನ್ನ ಕಾರ್ಯ ಮುಗಿಸಿದ ಗಣೇಶನು ಕಾಶಿ ವಿಶ್ವನಾಥನ ಸನ್ನಿಧಿಯ ಮುಂದೆ ಇಂದಿಗೂ ಡುಂಢಿ ಗಣೇಶ ನಾಗಿ ನೆಲೆಸಿದ್ದಾನೆ.

ನಿಗದಿತ ದಿನದಂದು ಮಹಾವಿಷ್ಣುವು ಪಂಡಿತನ ವೇಷದಲ್ಲಿ ಬಂದು, ಗಂಗೆಯಲ್ಲಿ ಕಾಲು ತೊಳೆ ದನು (ಈ ಸ್ಥಳವೇ ಪಾದೋದಕ ತೀರ್ಥ ಅಥವಾ ಆದಿಕೇಶವ ಘಾಟ್). ಆತನು ರಾಜನಿಗೆ ದಾನ- ಧರ್ಮದ ಮಹತ್ವ ಹಾಗೂ ನನ್ನ ತಪಸ್ಸಿನಿಂದಲೇ ಎಲ್ಲವೂ ಸಾಧ್ಯ ಎಂಬ ಅಹಂಕಾರದ ಪತನ ವನ್ನು ಮನದಟ್ಟು ಮಾಡಿಸಿ ದನು. ತಪ್ಪಿನ ಅರಿವಾದ ದಿವೋದಾಸನು ವಿಷ್ಣುವಿನ ಸೂಚನೆಯಂತೆ ಶಿವಲಿಂಗವನ್ನು ಸ್ಥಾಪಿಸಿ, ಶಿವಲೋಕವನ್ನು ಸೇರಿದನು.

ಅಧಿಕಾರ ಅಥವಾ ತಪಸ್ಸಿನ ಶಕ್ತಿ ಎಷ್ಟೇ ಇದ್ದರೂ, ಭಗವಂತನಿಗೆ ಶರಣಾಗದಿದ್ದರೆ ಮುಕ್ತಿ ಸಾಧ್ಯ ವಿಲ್ಲ. ಕಾಶಿಗೆ ಹೋದಾಗ ಡುಂಢಿ ಗಣೇಶನನ್ನು ಪ್ರಾರ್ಥಿಸಿ ದರೆ, ನಮ್ಮೊಳಗಿನ ಅಹಂಕಾರದ ಲೋಪಗಳನ್ನು ಆತನೇ ಹುಡುಕಿ ನಿವಾರಿಸಿ, ವಿಶ್ವನಾಥನ ಕೃಪೆಗೆ ನಮ್ಮನ್ನು ಪಾತ್ರರನ್ನಾಗಿಸುತ್ತಾನೆ ಎಂಬುದು ಈ ಕಥೆಯ ದಿವ್ಯ ಸಂದೇಶ.

Dailyhunt
Disclaimer: This content has not been generated, created or edited by Dailyhunt. Publisher: Vishwavani