ವಸಂತ್ ಗಿಳಿಯಾರ್
ಚೌಟ ಹೋರಾಟಕ್ಕೆ ಕೇಂದ್ರದ ಸಮ್ಮತಿ, ಕೇರಳದ ಪಾಲಕ್ಕಾಡ್ ನಿಯಂತ್ರಣದಿಂದ ಅ.1ರಿಂದ ಬಿಡುಗಡೆ
ಕರಾವಳಿ ಕರ್ನಾಟಕದ ಜನರ ಹಲವು ದಶಕಗಳ ಬೇಡಿಕೆಗೆ ಇದೀಗ ಮಹತ್ವದ ಸ್ಪಂದನೆ ದೊರೆತಿದೆ. 2026ರ ಅಕ್ಟೋಬರ್ 1ರಿಂದ ಮಂಗಳೂರು ರೈಲ್ವೇ ಪ್ರದೇಶವು ದಕ್ಷಿಣ ರೈಲ್ವೇಯ ಪಾಲಕ್ಕಾಡ್ ವಿಭಾಗ ದಿಂದ ಹೊರಬಂದು ನೈಋತ್ಯ ರೈಲ್ವೇಯ ಮೈಸೂರು ವಿಭಾಗದ ಆಡಳಿತಕ್ಕೆ ಸೇರುವ ಮಹತ್ವದ ಬದಲಾವಣೆ ನಡೆಯಲಿದೆ.
ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್, ಪಡೀಲ್, ಪಣಂಬೂರು, ಜೋಕಟ್ಟೆ, ನೇತ್ರಾವತಿ ಮತ್ತು ಉಳ್ಳಾಲ ಸೇರಿದಂತೆ ಪ್ರಮುಖ ರೈಲ್ವೇ ಪ್ರದೇಶಗಳು ಈ ಪುನರ್ ವ್ಯವಸ್ಥೆಯ ವ್ಯಾಪ್ತಿಗೆ ಬರಲಿವೆ. ಇದು ಕೇವಲ ರೈಲ್ವೇ ಆಡಳಿತದ ಗಡಿ ಬದಲಾ ವಣೆಯಲ್ಲ. ಮಂಗಳೂರಿನ ರೈಲ್ವೇ ಅಭಿವೃದ್ಧಿ ಯನ್ನು ಹಲವು ವರ್ಷಗಳಿಂದ ಕಾಡುತ್ತಿದ್ದ ಆಡಳಿತಾತ್ಮಕ ವಿಭಜನೆಗೆ ಪರಿಹಾರ ಕಂಡುಕೊಳ್ಳುವ ಮಹತ್ವದ ಹೆಜ್ಜೆಯಾಗಿದೆ.
ಒಂದೆಡೆ ಮಂಗಳೂರಿನ ಪ್ರಮುಖ ನಿಲ್ದಾಣಗಳು ದಕ್ಷಿಣ ರೈಲ್ವೇಯ ಪಾಲಕ್ಕಾಡ್ ವಿಭಾಗದ ಅಡಿಯಲ್ಲಿ, ಮತ್ತೊಂದೆಡೆ ಮಂಗಳೂರು -ಹಾಸನ - ಬೆಂಗಳೂರು ಮಾರ್ಗದ ಪ್ರಮುಖ ಭಾಗಗಳು ದಕ್ಷಿಣ ಪಶ್ಚಿಮ ರೈಲ್ವೇಯ ವ್ಯಾಪ್ತಿಯಲ್ಲಿ, ಜತೆಗೆ ಕೊಂಕಣ ರೈಲ್ವೇಯ ಪ್ರತ್ಯೇಕ ಆಡಳಿತ - ಇಂತಹ ವಿಭಜಿತ ವ್ಯವಸ್ಥೆಯಿಂದ ಯೋಜನೆ ರೂಪಿಸು ವುದು, ನಿರ್ಧಾರ ಕೈಗೊಳ್ಳುವುದು ಮತ್ತು ವಿವಿಧ ರೈಲ್ವೇ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸುವುದು ಹಲವು ಸಂದರ್ಭಗಳಲ್ಲಿ ಸಂಕೀರ್ಣ ವಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರು ರೈಲ್ವೇ ಪ್ರದೇಶವನ್ನು ಒಂದೇ ಆಡಳಿತಾತ್ಮಕ ವ್ಯವಸ್ಥೆಯಡಿ ತರಬೇಕು ಎಂಬ ಬೇಡಿಕೆ ಬಹುಕಾಲದಿಂದ ಕೇಳಿ ಬರುತ್ತಿತ್ತು. ಈ ಬೇಡಿಕೆಯನ್ನು ಇತ್ತೀಚಿನ ದಿನಗಳಲ್ಲಿ ಸಂಸತ್ತಿನ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಮುಂದಿಟ್ಟವರಲ್ಲಿ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಪಾತ್ರ ಗಮನಾರ್ಹವಾಗಿದೆ. ಸಂಸದರಾಗಿ ಆಯ್ಕೆ ಯಾದ ನಂತರ ಮಂಗಳೂರಿನ ರೈಲ್ವೇ ಸಮಸ್ಯೆ ಯನ್ನು ಅವರು ಪ್ರಮುಖ ವಿಷಯವಾಗಿ ಕೈಗೆತ್ತಿಕೊಂಡರು.
Vishweshwar Bhat Column: ಹಾಂಗ್ ಕಾಂಗ್‌ನ ಜಲ ಸಂರಕ್ಷಣೆ
2024ರ ಡಿಸೆಂಬರ್‌ನಲ್ಲಿಯೇ ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್‌ಗಳನ್ನು ದಕ್ಷಿಣ ಪಶ್ಚಿಮ ರೈಲ್ವೇಯ ವ್ಯಾಪ್ತಿಗೆ ಸೇರಿಸುವ ಅಗತ್ಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದರು. 2025ರ ಮಾರ್ಚ್‌ನಲ್ಲಿ ರೈಲ್ವೇ ಅನುದಾನದ ಚರ್ಚೆಯ ಸಂದರ್ಭದಲ್ಲಿಯೂ ಈ ವಿಚಾರವನ್ನು ಪುನಃ ಪ್ರಸ್ತಾಪಿಸಿ, ಮಂಗಳೂರು ಪ್ರದೇಶವನ್ನು ಮೈಸೂರು ವಿಭಾಗದೊಂದಿಗೆ ಸೇರಿಸುವ ಅಗತ್ಯವನ್ನು ಒತ್ತಿ ಹೇಳಿದರು.
ಇದರ ಮುಂದುವರಿದ ಭಾಗವಾಗಿ 2025ರ ಮಾರ್ಚ್ 26ರಂದು ಲೋಕಸಭೆಯಲ್ಲಿ ' Reorganisation of Mangalore Railway Administration PÜáÄñÜá Unstarred Question No'. 4248 ಮೂಲಕ ಮಂಗಳೂರು ರೈಲ್ವೇ ಆಡಳಿತದ ಪುನಾರಚನೆ, ಅದರ ಕಾರ್ಯಾಚರಣಾ ಪ್ರಯೋಜನಗಳು ಮತ್ತು ಆಡಳಿತಾತ್ಮಕ ಸಮನ್ವಯದ ಕುರಿತು ಕೇಂದ್ರ ರೈಲ್ವೇ ಸಚಿವಾಲಯದ ಗಮನ ಸೆಳೆದರು. ಅಂದರೆ, ಮಂಗಳೂರಿನ ರೈಲ್ವೇ ಕುರಿತ ಬಹುಕಾಲದ ಜನಬೇಡಿಕೆ ಕೇವಲ ಸಾರ್ವಜನಿಕ ಚರ್ಚೆಯ ಉಳಿಯದೆ, ಸಂಸತ್ತಿನ ಅಧಿಕೃತ ದಾಖಲೆಯ ಭಾಗವಾಯಿತು. ನಿರಂತರವಾಗಿ ವಿಷಯವನ್ನು ಪ್ರಸ್ತಾಪಿಸುವ ಮೂಲಕ ಆಡಳಿತಾತ್ಮಕ ನಿರ್ಧಾರದತ್ತ ಒತ್ತಡ ಮತ್ತು ಗಮನವನ್ನು ಕೊಂಡೊ ಯ್ಯುವ ಪ್ರಯತ್ನ ನಡೆಯಿತು.
ಮಂಗಳೂರು ದೇಶದ ಪ್ರಮುಖ ಕರಾವಳಿ ನಗರಗಳಲ್ಲಿ ಒಂದಾಗಿದ್ದು, ನ್ಯೂ ಮಂಗಳೂರು ಬಂದರು, ಕೈಗಾರಿಕೆ, ವ್ಯಾಪಾರ ಮತ್ತು ಸರಕು ಸಾಗಣೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಪ್ರದೇಶವಾಗಿದೆ. ಹೀಗಾಗಿ ಮಂಗಳೂರಿನ ರೈಲ್ವೇ ವ್ಯವಸ್ಥೆಯ ಬಲವರ್ಧನೆ ಕೇವಲ ಪ್ರಯಾಣಿಕರ ಅನುಕೂಲಕ್ಕೆ ಸಂಬಂಧಿಸಿದ ವಿಷಯವಲ್ಲ; ಅದು ಇಡೀ ಕರಾವಳಿ ಕರ್ನಾಟಕದ ಆರ್ಥಿಕ ಅಭಿವೃದ್ಧಿಯೊಂದಿಗೆ ನೇರವಾಗಿ ಸಂಪರ್ಕ ಹೊಂದಿದೆ.
ಮೈಸೂರು ವಿಭಾಗದೊಂದಿಗೆ ಆಡಳಿತಾತ್ಮಕ ಸಮನ್ವಯ ಹೆಚ್ಚುವುದರಿಂದ ಮಂಗಳೂರು-ಹಾಸನ-ಬೆಂಗಳೂರು ರೈಲು ಸಂಪರ್ಕವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸುವ ಅವಕಾಶ ದೊರೆಯಬಹುದು. ಹೊಸ ರೈಲುಗಳ ಬೇಡಿಕೆ, ನಿಲ್ದಾಣಗಳ ಆಧುನೀಕರಣ, ಟರ್ಮಿನಲ್ ಸೌಲಭ್ಯಗಳ ಅಭಿವೃದ್ಧಿ, ಪ್ರಯಾಣಿಕರ ಸೇವೆಗಳ ಸುಧಾರಣೆ ಹಾಗೂ ನ್ಯೂ ಮಂಗಳೂರು ಬಂದರು ಆಧಾರಿತ ಸರಕು ಸಾಗಣೆಯನ್ನು ಮತ್ತಷ್ಟು ಬಲಪಡಿಸುವಂತಹ ಕ್ಷೇತ್ರಗಳಲ್ಲಿ ಉತ್ತಮ ಸಮನ್ವಯಕ್ಕೆ ಇದು ಸಹಕಾರಿಯಾಗುವ ನಿರೀಕ್ಷೆಯಿದೆ. ಆದರೆ ಈ ಆಡಳಿತಾತ್ಮಕ ಬದಲಾವಣೆ ಅಂತಿಮ ಗುರಿಯಲ್ಲ.
ನಿಜವಾದ ಯಶಸ್ಸು ಮುಂದಿನ ದಿನಗಳಲ್ಲಿ ಮಂಗಳೂರಿಗೆ ಎಷ್ಟು ಹೊಸ ರೈಲು ಸೇವೆಗಳು ದೊರೆಯುತ್ತವೆ, ನಿಲ್ದಾಣಗಳ ಅಭಿವೃದ್ಧಿ ಎಷ್ಟು ವೇಗ ಪಡೆಯುತ್ತದೆ, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳೊಂದಿಗೆ ಸಂಪರ್ಕ ಎಷ್ಟು ಸುಧಾರಿಸುತ್ತದೆ ಮತ್ತು ಬಂದರು-ರೈಲ್ವೇ ಸರಕು ಸಾಗಣೆ ವ್ಯವಸ್ಥೆ ಎಷ್ಟು ಬಲಗೊಳ್ಳುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ.ಮಂಗಳೂರಿನ ರೈಲ್ವೇ ಅಭಿವೃದ್ಧಿಯ ಬೇಡಿಕೆ ಇಂದಿನದಲ್ಲ.
ಹಲವು ವರ್ಷಗಳಿಂದ ಹಿಂದಿನ ಜನಪ್ರತಿನಿಧಿಗಳು, ರೈಲು ಬಳಕೆದಾರರ ಸಂಘಟನೆಗಳು, ನಾಗರಿಕ ರು ಮತ್ತು ವಿವಿಧ ಸಂಘ ಸಂಸ್ಥೆಗಳು ಈ ವಿಚಾರವನ್ನು ನಿರಂತರವಾಗಿ ಮುಂದಿಟ್ಟಿವೆ. ಅವರ ಪ್ರಯತ್ನಗಳೂ ಈ ಬೆಳವಣಿಗೆಯ ಹಿಂದೆ ಇರುವ ಪ್ರಮುಖ ಕಾರಣಗಳಾಗಿವೆ. ಆದರೆ ಇತ್ತೀಚಿನ ನಿರ್ಣಾಯಕ ಹಂತದಲ್ಲಿ ಈ ವಿಚಾರವನ್ನು ಸಂಸತ್ತಿನ ಕೇಂದ್ರ ವೇದಿಕೆಗೆ ಕೊಂಡೊಯ್ದು, ಅಧಿಕೃತವಾಗಿ ದಾಖಲಿಸಿ, ನಿರಂತರವಾಗಿ ಬೆನ್ನಟ್ಟಿದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಸಂಸದೀಯ ಪ್ರಯತ್ನವನ್ನು ಅಭಿನಂದಿಸುವುದು ಸೂಕ್ತ.
2026ರ ಅಕ್ಟೋಬರ್ 1ರಂದು ಆರಂಭವಾಗಲಿರುವ ಈ ಹೊಸ ಆಡಳಿತಾತ್ಮಕ ವ್ಯವಸ್ಥೆ ಮಂಗಳೂ ರಿನ ರೈಲ್ವೇ ಇತಿಹಾಸದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿ. ದಶಕಗಳ ಬೇಡಿಕೆಗೆ ಪರಿಹಾರದ ದಾರಿ ತೆರೆದಿರುವ ಈ ಸಂದರ್ಭದಲ್ಲಿ, ಕರಾವಳಿಯ ಜನರ ನಿರೀಕ್ಷೆಯೂ ಸಹಜವಾಗಿಯೇ ಹೆಚ್ಚಾಗಿದೆ. ಮಂಗಳೂರಿಗೆ ರೈಲ್ವೇ ಆಡಳಿತ ಬದಲಾಗುತ್ತಿದೆ; ಈಗ ಅದರೊಂದಿಗೆ ರೈಲ್ವೇ ಅಭಿವೃದ್ಧಿಯ ವೇಗವೂ ಬದಲಾಗಬೇಕು. ಈ ಐತಿಹಾಸಿಕ ಬದಲಾವಣೆಯ ಮೂಲಕ ಮಂಗಳೂರು-ಹಾಸನ-ಬೆಂಗಳೂರು ಸಂಪರ್ಕ ಮತ್ತಷ್ಟು ಬಲಗೊಳ್ಳಲಿ, ಮಂಗಳೂರಿಗೆ ಹೊಸ ರೈಲುಗಳು ಬರಲಿ, ನಿಲ್ದಾಣಗಳು ಆಧುನೀಕರಣಗೊಳ್ಳಲಿ, ಬಂದರು ಆಧಾರಿತ ಸರಕು ಸಾಗಣೆ ವಿಸ್ತರಿಸಲಿ ಮತ್ತು ಇಡೀ ಕರಾವಳಿ ಕರ್ನಾಟಕದ ರೈಲ್ವೇ ಸಂಪರ್ಕಕ್ಕೆ ಹೊಸ ಶಕ್ತಿ ದೊರೆಯಲಿ. ಈ ಮಹತ್ವದ ಬದಲಾವಣೆ ಯತ್ತ ವಿಷಯವನ್ನು ನಿರಂತರವಾಗಿ ಮುನ್ನಡೆಸಿದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

