Dailyhunt Logo
  • Light mode
    Follow system
    Dark mode
    • Play Story
    • App Story
ಟಿಎಂಸಿ ಮುಖಂಡ ಅಭಿಷೇಕ್ ಬ್ಯಾನರ್ಜಿ ವಿರುದ್ಧ ದೂರು; ಏನಿದು ಘಟನೆ?

ಟಿಎಂಸಿ ಮುಖಂಡ ಅಭಿಷೇಕ್ ಬ್ಯಾನರ್ಜಿ ವಿರುದ್ಧ ದೂರು; ಏನಿದು ಘಟನೆ?

Vishwavani 3 weeks ago

ಕೋಲ್ಕತ್ತಾ, ಮೇ 28: ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಂಬಂಧಿಸಿದಂತೆ ಅಭಿಷೇಕ್ ಬ್ಯಾನರ್ಜಿ (Abhishek Banerjee) ವಿರುದ್ಧ ಮತ್ತೊಂದು ದೂರು ದಾಖಲಾಗಿದ್ದು, ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಸಾಮಾಜಿಕ ಜಾಲತಾಣದ ಪೋಸ್ಟ್‌ವೊಂದು (social media post) ಸಮುದಾಯಗಳ ನಡುವೆ ಸೌಹಾರ್ದತೆಗೆ ಧಕ್ಕೆ ತರುವ ಸಾಧ್ಯತೆ ಇದೆ ಎಂದು ದೂರುದಾರರು ಆರೋಪಿಸಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡೈಮಂಡ್ ಹಾರ್ಬರ್ ಸಂಸದರಾದ ಅಭಿಷೇಕ್ ಬ್ಯಾನರ್ಜಿ ಅವರ ಪೋಸ್ಟ್‌ನ್ನು ತೀವ್ರ ಜವಾಬ್ದಾರಿಯಿಲ್ಲದ್ದು ಎಂದು ಹೇಳಿದ ಅರ್ನಬ್ ಕಾಂತಿ ದಾಸ್ ಎಂಬುವವರು ಭವಾನಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೇ 2ರಂದು ಮಾಡಲಾಗಿದ್ದ ಆ ಸಾಮಾಜಿಕ ಜಾಲತಾಣದ ಪೋಸ್ಟ್‌ನ ಪ್ರತಿಯನ್ನೂ ದೂರು ಜೊತೆ ಸಲ್ಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರಿನಲ್ಲಿ ಉಲ್ಲೇಖಿಸಲಾದ ಪೋಸ್ಟ್‌ನಲ್ಲಿ ಕಲ್ಯಾಣ್ ಬ್ಯಾನರ್ಜಿ ಅವರು, ತಮ್ಮ ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಫಾಲ್ಟಾದಲ್ಲಿ ತೃಣಮೂಲ ಕಾಂಗ್ರೆಸ್ ಅನ್ನು ಸೋಲಿಸಲು ಕೇಂದ್ರ ಸರ್ಕಾರ ಹಾಗೂ ಭಾರತೀಯ ಚುನಾವಣಾ ಆಯೋಗಕ್ಕೆ ಸವಾಲು ಹಾಕುತ್ತಿರುವುದನ್ನು ತೋರಿಸಲಾಗಿದೆ. ಫಾಲ್ಟಾದಲ್ಲಿ ಮರುಮತದಾನ ಘೋಷಿಸಲಾದ ದಿನವೇ ಈ ಪೋಸ್ಟ್ ಮಾಡಲಾಗಿತ್ತು.

ರೌಡಿಗಳ ಹೆಡೆಮುರಿ ಕಟ್ಟಿ ಅರೆಬೆತ್ತಲೆ ಮೆರವಣಿಗೆ ನಡೆಸಿದ ಪೊಲೀಸರು: ಬದಲಾಗುತ್ತಿದೆ ಪಶ್ಚಿಮ ಬಂಗಾಳ

"ನನ್ನ ಡೈಮಂಡ್ ಹಾರ್ಬರ್ ಮಾದರಿಗೆ ನಿಮ್ಮ ಬಂಗಾಳ ವಿರೋಧಿ ಗುಜರಾತಿ ತಂಡ ಮತ್ತು ಅವರ ಕೈಗೊಂಬೆ ಜ್ಞಾನೇಶ್ ಕುಮಾರ್ ಅವರಿಂದ ಒಂದು ಸಣ್ಣ ಹಾನಿಯನ್ನೂ ಉಂಟುಮಾಡಲು ಹತ್ತು ಜನ್ಮಗಳಾದರೂ ಸಾಕಾಗುವುದಿಲ್ಲ. ನಿಮ್ಮ ಬಳಿ ಇರುವ ಎಲ್ಲ ಶಕ್ತಿಯನ್ನೂ ಬಳಸಿ. ನಾನು ಸಂಪೂರ್ಣ ಭಾರತ ಒಕ್ಕೂಟಕ್ಕೆ ಸವಾಲು ಹಾಕುತ್ತೇನೆ. ಫಾಲ್ಟಾಗೆ ಬನ್ನಿ. ನಿಮ್ಮ ಅತ್ಯಂತ ಬಲಿಷ್ಠರನ್ನು ಕಳುಹಿಸಿ. ದೆಹಲಿಯ ದೊಡ್ಡ ನಾಯಕರಲ್ಲಿ ಒಬ್ಬರನ್ನು ಕಳುಹಿಸಿ. ಧೈರ್ಯವಿದ್ದರೆ ಫಾಲ್ಟಾದಲ್ಲಿ ಸ್ಪರ್ಧಿಸಿ" ಎಂದು ಸವಾಲು ಹಾಕಿದ್ದರು.

"ಪೋಸ್ಟ್‌ನಲ್ಲಿ ಗುಜರಾತಿ ಸಮುದಾಯಕ್ಕೆ ಗ್ಯಾಂಗ್ ಎಂಬ ಪದ ಬಳಕೆ ಮಾಡಿರುವುದು ಅಸಮಂಜಸವಾಗಿದೆ. ಇದು ಅಪರಾಧ, ಭೂಗತ ಲೋಕಕ್ಕೆ ಸಂಬಂಧಿಸಿದ ಪದ" ಎಂದು ದೂರುದಾರರು ಆರೋಪಿಸಿದ್ದಾರೆ. "ಇಡೀ ಸಮುದಾಯವನ್ನು ಗುಂಪು ಎಂದು ಬಣ್ಣಿಸುವುದು ಕಾನೂನಿನ ಮೂಲತತ್ವಕ್ಕೆ ವಿರುದ್ಧವಾಗಿದೆ. ದೇಶದ ಸಾಮಾಜಿಕ ರಚನೆಯ ಸ್ಫೂರ್ತಿ ಮತ್ತು ನಮ್ಮ ದೇಶದ ವೈವಿಧ್ಯತೆಯಲ್ಲಿ ಏಕತೆಯ ಮನೋಭಾವಕ್ಕೆ ಇದು ವಿರುದ್ಧವಾಗಿದೆ" ಎಂದು ದಾಸ್ ದೂರಿನಲ್ಲಿ ಬರೆದಿದ್ದಾರೆ.

"ದೂರಿನ ನಂತರ, ಪ್ರಾಥಮಿಕ ತನಿಖೆಯನ್ನು ಪ್ರಾರಂಭಿಸಲಾಗಿದೆ. ನಾವು ದೂರನ್ನು ಸ್ವೀಕರಿಸಿದ್ದೇವೆ. ಜೊತೆಗೆ ಅದರಲ್ಲಿ ಉಲ್ಲೇಖಿಸಲಾದ ಆರೋಪಗಳ ಬಗ್ಗೆ ಪ್ರಾಥಮಿಕ ತನಿಖೆಯನ್ನು ಪ್ರಾರಂಭಿಸಿದ್ದೇವೆ. ವಿಚಾರಣೆಯ ಆಧಾರದ ಮೇಲೆ ಅಗತ್ಯ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು" ಎಂದು ಕೋಲ್ಕತ್ತಾದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚುನಾವಣಾ ಪ್ರಚಾರದ ಸಮಯದಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಬಿಧಾನ್‌ನಗರ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಬ್ಯಾನರ್ಜಿ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಕೆಲವು ದಿನಗಳ ನಂತರ ಈ ದೂರು ನೀಡಲಾಗಿದೆ.

ಆ ರ್ಯಾಲಿಯಲ್ಲಿ, ಬಿಜೆಪಿಗೆ ಬ್ಯಾನರ್ಜಿ ಸವಾಲು ಹಾಕಿದ್ದರು. ಮೇ 4 ರ ಮಧ್ಯರಾತ್ರಿಯ ನಂತರ ಅವರನ್ನು ರಕ್ಷಿಸಲು ಯಾರು ಬರುತ್ತಾರೆ ಎಂದು ನೋಡುತ್ತೇನೆ ಎಂದು ಹೇಳಿದ್ದರು ಎನ್ನಲಾಗಿತ್ತು. ಇದು ಭಾರಿ ರಾಜಕೀಯ ವಿವಾದಕ್ಕೆ ಕಾರಣವಾಯಿತು.

Dailyhunt
Disclaimer: This content has not been generated, created or edited by Dailyhunt. Publisher: Vishwavani