Dailyhunt
ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀ ಸರ್ಕಾರದ ಯೋಜನೆಗಳಿಗೆ ಮಹಾನ್ ಸ್ಫೂರ್ತಿ: ಪ್ರಲ್ಹಾದ್‌ ಜೋಶಿ

ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀ ಸರ್ಕಾರದ ಯೋಜನೆಗಳಿಗೆ ಮಹಾನ್ ಸ್ಫೂರ್ತಿ: ಪ್ರಲ್ಹಾದ್‌ ಜೋಶಿ

Vishwavani 0 months ago

ತುಮಕೂರು, ಏ.1: "ಅನ್ನ-ಅಕ್ಷರ-ಆಶ್ರಯ' ನೀಡಿ ತ್ರಿವಿಧ ದಾಸೋಹಿಯಾದ ಸಿದ್ಧಗಂಗಾ ಶ್ರೀಗಳು ಸರ್ಕಾರದ ಅನೇಕ ಯೋಜನೆಗಳಿಗೆ ಮಹಾನ್ ಸ್ಫೂರ್ತಿಯಾಗಿದ್ದಾರೆ" ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಸ್ಮರಿಸಿದರು.

ತುಮಕೂರಿನಲ್ಲಿ ಬುಧವಾರ ಶ್ರೀ ಶಿವಕುಮಾರ ಮಹಾಸ್ವಾಮಿಗಳ 119ನೇ ಜಯಂತ್ಯುತ್ಸವದಲ್ಲಿ ನುಡಿ ನಮನ ಸಲ್ಲಿಸುತ್ತಾ, ಕೇಂದ್ರ ಸರ್ಕಾರದಲ್ಲಿ ನಾವಿಂದು ಅನುಷ್ಠಾನಕ್ಕೆ ತರುತ್ತಿರುವ ಅನೇಕ ಜನಪರ ಯೋಜನೆಗಳಿಗೆ ಈ ಮಠದ ದಾಸೋಹ ತತ್ವವೇ ಸ್ಫೂರ್ತಿಯಾಗಿದೆ ಎಂದು ಬಣ್ಣಿಸಿದರು.

ನಮ್ಮ ಸರ್ಕಾರದ 'ಅಂತ್ಯೋದಯ' ಕಲ್ಪನೆಗೆ ಸಿದ್ದಗಂಗಾ ಮಠವೇ ದಾರಿದೀಪವಾಗಿದೆ. ಹಸಿದವರಿಗೆ ಅನ್ನ ನೀಡುವ 'ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆʼ' ಇರಲಿ, ಬಡ ಮಕ್ಕಳಿಗೆ ಶಿಕ್ಷಣದ ಹಕ್ಕು ನೀಡುವ ನೀತಿಗಳಿರಲಿ, ಸರ್ವರಿಗೂ ಸಮಾನ ಅವಕಾಶ ನೀಡುವ ನಮ್ಮ ಧೈಯವಿರಲಿ ಎಲ್ಲದೂ ಸಿದ್ಧಗಂಗಾ ಶ್ರೀಗಳು ಹಾಕಿಕೊಟ್ಟ ದಾಸೋಹದ ಬುನಾದಿಯಾಗಿದೆ ಎಂದು ಹೇಳಿದರು.

ಆಧುನಿಕ ಭಾರತದ ಸಾಂಸ್ಕೃತಿಕ ಕೇಂದ್ರ

ತುಮಕೂರು ಸಿದ್ದಗಂಗಾ ಮಠ ಕೇವಲ ಮಠವಲ್ಲ, ಇದು ಆಧುನಿಕ ಭಾರತದ ಸಂಸ್ಕಾರದ ಕೇಂದ್ರ. ಇಲ್ಲಿ ಪ್ರತಿ ದಿನವೂ ನಡೆಯುವ 'ಅನ್ನ ದಾಸೋಹ', 'ಅಕ್ಷರ ದಾಸೋಹ" ವಿಶ್ವದ ಯಾವುದೇ ದೊಡ್ಡ ವಿಶ್ವವಿದ್ಯಾಲಯಕ್ಕೆ ಮತ್ತು ಸರ್ಕಾರಕ್ಕೆ ಮಾದರಿ ಎಂದು ಹೇಳಿದರು.

ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳು ಮಹಾನ್ ಸಂತರಷ್ಟೇ ಅಲ್ಲ ಅವರೊಂದು ದಿವ್ಯಶಕ್ತಿ. ಅವರು ಪ್ರಾರಂಭಿಸಿದ "ಅನ್ನದಾಸೋಹ'' ಕೇವಲ ಊಟವಲ್ಲ. ಸಮಾನತೆಯ ಸಂದೇಶ. ಜಾತಿ-ಧರ್ಮ-ಬಡತನವೆಂಬ ಬೇಧ ತೊಡೆದು ಹಾಕಿ ಜಗತ್ತಿಗೆ ಮಾನವೀಯ ಮಂತ್ರವನ್ನು ಸಾರಿದ ದೈವಪುರುಷರು ಎಂದು ಸ್ಮರಿಸಿದರು.

1930ರಲ್ಲಿ ಮಠದ ಜವಾಬ್ದಾರಿ ವಹಿಸಿಕೊಂಡು ದೀನ ದಲಿತರು, ನಿರ್ಗತಿಕರಿಗಾಗಿ ಶ್ರೀಗಳು ಪಟ್ಟ ಶ್ರಮ ಕಣ್ಣ ಮುಂದಿದೆ. ಬಸವಣ್ಣನವರ "ಕಾಯಕವೇ ಕೈಲಾಸ" ತತ್ವವನ್ನು ಅಕ್ಷರಶಃ ಪಾಲಿಸಿದವರು ಶ್ರೀಗಳು. ಜೀವನದ 111 ವರ್ಷಗಳಲ್ಲಿ ಅವರು ಒಂದು ದಿನವೂ ವಿಶ್ರಮಿಸಲಿಲ್ಲ. ಅವರ ಹಣೆಯಲ್ಲಿ ವಿಭೂತಿ ಮಾತ್ರವಲ್ಲ ಸದಾ ಸಮಾಜದ ಹಿತಚಿಂತನೆ ಇರುತ್ತಿತ್ತು. ಅವರದ್ದು ಅನ್ನ-ಅರಿವು ಮತ್ತು ಆಧ್ಯಾತ್ಮದ "ತ್ರಿವಿಧ ದಾಸೋಹ" ವಾಗಿತ್ತು ಎಂದು ಹೇಳಿದರು.

ಸಿದ್ಧಗಂಗಾ ಮಠದಲ್ಲಿ ಪ್ರತಿದಿನ 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಯಾತ್ರಿಕರಿಗೆ ಉಚಿತವಾಗಿ ಆಹಾರ, ವಸತಿ ಕಲ್ಪಿಸಲಾಗುತ್ತಿದೆ. ನರ್ಸರಿಯಿಂದ ತಾಂತ್ರಿಕ (SIT), ಪಾಲಿಟೆಕ್ನಿಕ್, ಬಿ.ಎಡ್, ಮತ್ತು ಸಂಸ್ಕೃತ ಪಾಠಶಾಲೆಗಳವರೆಗೆ 124ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿದೆ ಎಂದು ಶ್ಲಾಘಿಸಿದರು.

ಅನ್ನದಾಸೋಹದ ಒಲೆ ನಿರಂತರ

ಶ್ರೀಮಠ ಗ್ರಾಮೀಣ, ಬಡ ವಿದ್ಯಾರ್ಥಿಗಳಿಗೆ ಉಚಿತ ಆಶ್ರಯ ನೀಡಿ, ಸ್ವಾವಲಂಬಿಗಳಾಗಲು ನೆರವಾಗಿದೆ. ಸಹಾಯ ಮಾಡಿದೆ. ಅಂಧ ಮಕ್ಕಳಿಗಾಗಿ ವಿಶೇಷ ಶಾಲೆಗಳನ್ನು ನಡೆಸಿ ಪುನರ್ವಸತಿ ಕಲ್ಪಿಸಿದೆ. ಶ್ರೀಮಠದ ವಿಶೇಷತೆ ಅಂದರೆ, 90 ವರ್ಷ ಮೊದಲು ಹಚ್ಚಿದ ಅಡುಗೆ ಮನೆಯ ಒಲೆ ಇನ್ನೂ ಉರಿಯುತ್ತಲೇ ಇದ್ದು, ಇದು ನಿರಂತರವಾಗಿರುತ್ತದೆ ಎಂದು ಸಚಿವ ಜೋಶಿ ಆಶಿಸಿದರು.

ಶ್ರೀ ಸಿದ್ಧಗಂಗಾ ಮಠದ ಕೊಡುಗೆಯಿಂದಲೇ ಕರುನಾಡು ಇಂದು ದಾಸೋಹದ ನಾಡಾಗಿದೆ ಎಂದರೆ ತಪ್ಪಾಗಲಾರದು. ಲಕ್ಷಾಂತರ ಜನರು ಉತ್ತಮ ಹುದ್ದೆ, ಉನ್ನತ ಸ್ಥಾನಕ್ಕೇರಿದ್ದಾರೆ, ಅತ್ಯುತ್ತಮ ಸಾಧನೆ ತೋರಿದ್ದಾರೆ ಎಂದರೆ ಅದಕ್ಕೆ ಕಾರಣ ಶ್ರೀಗಳ ತ್ರಿವಿಧ ದಾಸೋಹವೆಂದು ಬಣ್ಣಿಸಿದರು.

ದಾಸೋಹ ದಿನ ಘೋಷಣೆ ಪಾಲಿಸಲಿ ರಾಜ್ಯ ಸರ್ಕಾರ

ರಾಜ್ಯದಲ್ಲಿ ಈ ಹಿಂದೆ ಬಸವರಾಜ ಬೊಮ್ಮಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ಬಿಜೆಪಿ ಸರ್ಕಾರ 'ಜನವರಿ 21' ಅನ್ನು "ದಾಸೋಹ ದಿನ" ವಾಗಿ ಘೋಷಿಸಿದ್ದು, ಇಂದಿನ ರಾಜ್ಯ ಸರ್ಕಾರ ಅದನ್ನು ಪಾಲಿಸುವ ಮೂಲಕ ಶ್ರೀಗಳಿಗೆ ಗೌರವ ಸೂಚಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಇದೇ ವೇಳೆ ಆಗ್ರಹಿಸಿದರು.‌

ಶೀಘ್ರದಲ್ಲೇ ಹುಬ್ಬಳ್ಳಿ-ಬೆಂಗಳೂರು-ಹೈದರಾಬಾದ್ ಮಧ್ಯೆ fly91 ವಿಮಾನಯಾನ ಸೇವೆ

ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿದ್ಧಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಜಿ, ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ಧೇಶ್ವರ ಸ್ವಾಮಿಜಿ, ಕೇಂದ್ರ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ‌, ರಾಜ್ಯ ಸರ್ಕಾರದ ಸಚಿವರು ಉಪಸ್ಥಿತರಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Vishwavani