Dailyhunt Logo
  • Light mode
    Follow system
    Dark mode
    • Play Story
    • App Story
ವಾರವೆಲ್ಲಾ ರೆಸ್ಟ್‌ ! ವೀಕೆಂಡ್‌ʼನಲ್ಲಿ ಎವರೆಸ್ಟ್‌ ?

ವಾರವೆಲ್ಲಾ ರೆಸ್ಟ್‌ ! ವೀಕೆಂಡ್‌ʼನಲ್ಲಿ ಎವರೆಸ್ಟ್‌ ?

Vishwavani 2 weeks ago

ಡಾ.ಶಶಿಕಿರಣ್ ಉಮಾಕಾಂತ್

ಬಿರುಸಿನ ವ್ಯಾಯಾಮ ಮಾಡುವುದಾದರೆ, ಹಂತ ಹಂತವಾಗಿ ಅವಧಿಯನ್ನು ಹೆಚ್ಚಿಸುತ್ತಾ ಹೋಗಬೇಕು. ವಾರಾಂತ್ಯದಲ್ಲಿ ಮಾತ್ರ ಬಿರುಸಿನ ವ್ಯಾಯಾಮ ತರವಲ್ಲ.

ಸೋಮವಾರದಿಂದ ಶುಕ್ರವಾರದವರೆಗೆ ಲ್ಯಾಪ್ ಟಾಪ್ ಮುಂದೆ ತಪಸ್ಸಿಗೆ ಕೂತವರ ಹಾಗೆ ಒಂದೇ ಭಂಗಿಯಲ್ಲಿ ಕುಳಿತು ಕೊಳ್ಳುವುದು; ಶನಿವಾರ-ಭಾನುವಾರ ಬಂತೆಂದರೆ ಸಾಕು, ಒಮ್ಮೆಲೇ ಟ್ರೆಕ್ಕಿಂಗ್, ಮ್ಯಾರಥಾನ್, ಜಿಮ್ ಅಂತ ರಾತ್ರೋರಾತ್ರಿ ಒಲಿಂಪಿಕ್ಸ್ ಮೆಡಲ್ ಗೆಲ್ಲುವವರ ಹಾಗೆ ಭಾರೀ ಕಸರತ್ತಿಗೆ ಇಳಿಯುವುದು!

ಇತ್ತೀಚಿನ ದಿನಗಳಲ್ಲಿ ಯುವ ವಲಯದಲ್ಲಿ ಇದೊಂದು ದೊಡ್ಡ ಟ್ರೆಂಡ್.

ವಾರಪೂರ್ತಿ ಜಿಮ್ ಕಡೆ ಮುಖ ಮಾಡಲಿಲ್ಲವಲ್ಲ ಎಂಬ ಅಪರಾಧಿ ಭಾವನೆ ಕಾಡುತ್ತಿರುತ್ತದೆ. ಆ ಐದು ದಿನಗಳ ಜಡತ್ವ ವನ್ನು ಶನಿವಾರ-ಭಾನುವಾರ ಎರಡೇ ದಿನದಲ್ಲಿ ಕರಗಿಸಿಬಿಡುವ ಆತುರ ಇವರದ್ದು! ಇಂಥವರನ್ನೇ ನಾವು ವೈದ್ಯಕೀಯ ಭಾಷೆಯಲ್ಲಿ 'ವಾರಾಂತ್ಯದ ಶೂರರು' ಅಂತ ಕರೆಯುತ್ತೇವೆ.

ನೋಡೋಕೆ ಇದು ಭಾರಿ ಉತ್ಸಾಹದ ವಿಷಯ ಅನ್ನಿಸಿದರೂ, ಒಬ್ಬ ವೈದ್ಯನಾಗಿ ನನ್ನ ಆತಂಕ ಬೇರೆಯೇ ಇದೆ. ಇದನ್ನು ಅರ್ಥಮಾಡಿಕೊಳ್ಳಲು ಒಂದು ಸರಳ ಉದಾಹರಣೆ ತೆಗೆದುಕೊಳ್ಳೋಣ. ಒಂದು ರಬ್ಬರ್ ಬ್ಯಾಂಡ್ ಅನ್ನು ನೀವು ತಿಂಗಳುಗಟ್ಟಲೆ ಬಳಸದೆ ಹಾಗೆಯೇ ಬಿಟ್ಟಿದ್ದೀರಿ ಅಂದು ಕೊಳ್ಳಿ. ದಿಢೀರನೆ ಒಂದೇ ಸಮನೆ ಅದನ್ನು ಜೋರಾಗಿ ಎಳೆದರೆ ಏನಾಗುತ್ತದೆ? ಪಟ್ ಅಂತ ತುಂಡಾ ಗುತ್ತದೆ ತಾನೇ? ಅದೇ ರಬ್ಬರ್ ಬ್ಯಾಂಡ್ ಅನ್ನು ಪ್ರತಿದಿನ ನಿಧಾನವಾಗಿ ಎಳೆದು ಅಭ್ಯಾಸ ಮಾಡಿದರೆ ಅದು ತನ್ನ ಹಿಗ್ಗುವ ಗುಣವನ್ನು ಉಳಿಸಿಕೊಳ್ಳುತ್ತದೆ. ನಮ್ಮ ದೇಹದ ಕಥೆಯೂ ಅಷ್ಟೇ!

Vishwavani Health: ಜೆನ್ ಝೀಗಳಲ್ಲಿ ಹೆಚ್ಚುತ್ತಿದೆ ಎಚ್‌ಐವಿ ಸೋಂಕಿತರ ಸಂಖ್ಯೆ; ಕಾರಣವೇನು?

ಐದು ದಿನಗಳ ಕಾಲ ನಮ್ಮ ಸ್ನಾಯುಗಳು ಮತ್ತು ಕೀಲುಗಳು ಸಂಪೂರ್ಣ ಜಡಾವಸ್ಥೆಯಲ್ಲಿರುತ್ತವೆ. ರಕ್ತಸಂಚಾರವೂ ಒಂದು ಮಿತಿಯಲ್ಲಿರುತ್ತದೆ. ವಾರಾಂತ್ಯದಲ್ಲಿ ದಿಢೀರನೆ ಭಾರೀ ವ್ಯಾಯಾಮ ಮಾಡಿದಾಗ, ನಮ್ಮ ದೇಹದ ಎಂಜಿನ್ ಆಗಿರುವ ಹೃದಯಕ್ಕೆ ಆಮ್ಲಜನಕದ ಬೇಡಿಕೆ ಒಮ್ಮೆಲೇ ನಾಲ್ಕೈದು ಪಟ್ಟು ಹೆಚ್ಚಾಗುತ್ತದೆ. ಇಷ್ಟೊಂದು ರಕ್ತವನ್ನು ಪಂಪ್ ಮಾಡಲು ಐದು ದಿನ ಮಲಗಿದ್ದ ಎಂಜಿನ್ ಸಿದ್ಧವಿರುವುದಿಲ್ಲ. ಬೆಚ್ಚಗಿನ ರಕ್ತನಾಳಗಳು ಒಮ್ಮೆಲೇ ಹಿಗ್ಗಲು ಮತ್ತು ಕುಗ್ಗಲು ಕಷ್ಟ ಪಡುತ್ತವೆ.

ಇತ್ತೀಚೆಗೆ ಯುವಕರಲ್ಲಿ ದಿಢೀರ್ ಹೃದಯ ಸ್ತಂಭನದಂತಹ ದಾರುಣ ಪ್ರಕರಣಗಳು ಹೆಚ್ಚಾಗಲು ಇದೂ ಒಂದು ಮುಖ್ಯ ಕಾರಣ. ಬೆಟ್ಟ ಹತ್ತುವ ಹುಮ್ಮಸ್ಸು ವಾರಾಂತ್ಯ ಬಂತು ಅಂದ್ರೆ ಸಾಕು, ಬೆನ್ನಿಗೆ ಬ್ಯಾಗ್ ಹಾಕಿಕೊಂಡು ಕುಮಾರಪರ್ವತ, ಮುಳ್ಳಯ್ಯನಗಿರಿ ಅಥವಾ ಹಿಮಾಲಯದ ಕಠಿಣ ಚಾರಣಕ್ಕೆ ಹೊರಡುವ ಯುವಕರ ಸಂಖ್ಯೆ ಕಡಿಮೆ ಇಲ್ಲ. ಇವರು ಸಾವಿರಾರು ರೂಪಾಯಿ ಕೊಟ್ಟು ಅತ್ಯುತ್ತಮ ಬ್ರ್ಯಾಂಡೆಡ್ ಟ್ರೆಕ್ಕಿಂಗ್ ಶೂ, ಬೆಚ್ಚಗಿನ ಜಾಕೆಟ್ ಖರೀದಿಸುತ್ತಾರೆ. ಆದರೆ, ಆ ಶೂ ಧರಿಸಿ ನಡೆಯಬೇಕಾದ ಕಾಲಿನ ಸ್ನಾಯುಗಳಿಗೆ ಮತ್ತು ಆಮ್ಲಜನಕ ಪೂರೈಸಬೇಕಾದ ಶ್ವಾಸಕೋಶಗಳಿಗೆ ತರಬೇತಿ ನೀಡಲು ಮಾತ್ರ ಮರೆತುಬಿಡುತ್ತಾರೆ!

ಸಮುದ್ರ ಮಟ್ಟದಿಂದ ಎತ್ತರಕ್ಕೆ ಹೋದಂತೆಲ್ಲಾ ಗಾಳಿಯಲ್ಲಿ ಆಮ್ಲಜನಕದ ಒತ್ತಡ ಕಡಿಮೆ ಯಾಗುತ್ತಾ ಹೋಗುತ್ತದೆ. ನಿತ್ಯವೂ ವ್ಯಾಯಾಮ ಮಾಡುವವರ ದೇಹ, ಇಂತಹ ಕಡಿಮೆ ಒತ್ತಡದ ವಾತಾವರಣಕ್ಕೆ ಸುಲಭವಾಗಿ ಹೊಂದಿಕೊಳ್ಳುತ್ತದೆ. ಆದರೆ ವಾರಪೂರ್ತಿ ಜುಮ್ಮಾಗಿ ಕುಳಿತು, ಯಾವತ್ತೋ ದಿಢೀರನೆ ಬೆಟ್ಟ ಹತ್ತಿದಾಗ, ಪ್ರತಿ ಉಸಿರಿಗೂ ಸಾಕಷ್ಟು ಆಮ್ಲಜನಕ ಸಿಗದೆ ನಮ್ಮ ಎಂಜಿನ್ ದುಪ್ಪಟ್ಟು ವೇಗದಲ್ಲಿ ಬಡಿದುಕೊಳ್ಳಲು ಶುರುಮಾಡುತ್ತದೆ. ಮೆದುಳಿಗೆ ರಕ್ತಸಂಚಾರ ಕಡಿಮೆಯಾಗುತ್ತದೆ. ಇದೇ ಕಾರಣಕ್ಕೆ ಯುವಕರು ಚಾರಣದ ಮಧ್ಯದಲ್ಲಿ ಕುಸಿದುಬಿದ್ದು ಪ್ರಾಣ

ಕಳೆದುಕೊಳ್ಳುವ ಸಾಧ್ಯತೆ ಇದೆ. ಇದರ ಜೊತೆಗೆ, ವಾರಾಂತ್ಯದಲ್ಲಿ ಮಾತ್ರ ಜಿಮ್‌ಗೆ ಹೋಗಿ ದಿಢೀರನೆ ಭಾರ ಎತ್ತುವುದರಿಂದ ಸ್ನಾಯುಗಳು ಹರಿದು ಕೊಳ್ಳುವುದು, ಮಂಡಿಚಿಪ್ಪು ಸವೆತ, ಮತ್ತು ಬೆನ್ನು ಹುರಿಯ ಸಮಸ್ಯೆಗಳು ಇಂತಹವರಲ್ಲಿ ಸಾಮಾನ್ಯ. ದೇಹಕ್ಕೆ ವಾರ್ಮ್‌ಅಪ್ ಇಲ್ಲದೆ, ಪಕ್ಕದವರು 50 ಕೆಜಿ ಎತ್ತಿದರು ಎಂದು ನಾವೂ ಎತ್ತಲು ಹೋದರೆ, ಬೆನ್ನುಹುರಿ ಉಳುಕಿಕೊಳ್ಳುವುದು ಗ್ಯಾರಂಟಿ.

ಪರಿಹಾರವೇನು?

ಪ್ರತಿದಿನ ಹದವಾಗಿಡಿ: ವಾರಕ್ಕೊಮ್ಮೆ ಭಾನುವಾರ ಒಮ್ಮೆಲೇ ಮೂರು ಗಂಟೆ ಜಿಮ್‌ನಲ್ಲಿ ಬೆವರು ಹರಿಸುವ ಬದಲು, ಪ್ರತಿದಿನ ಕೇವಲ ಮೂವತ್ತು ನಿಮಿಷ ವಾಕಿಂಗ್, ಜಾಗಿಂಗ್ ಅಥವಾ ಯೋಗ ಮಾಡಿ. ದೇಹದ ಎಂಜಿನ್ ಅನ್ನು ಪ್ರತಿದಿನ ಹದವಾಗಿಡಿ. ? ಹಂತ ಹಂತದ ಏರಿಕೆ ಮಾಡಿ: ಕಠಿಣ ಟ್ರೆಕ್ಕಿಂಗ್ ಅಥವಾ ಮ್ಯಾರಥಾನ್‌ಗೆ ಹೋಗುವ ಪ್ಲಾನ್ ಇದ್ದರೆ, ಕನಿಷ್ಠ ಒಂದೆರಡು ತಿಂಗಳ ಮುಂಚೆ ಯಿಂದಲೇ ಅದಕ್ಕೆ ತಕ್ಕಂತೆ ಪ್ರತಿದಿನ ಅಭ್ಯಾಸ ಶುರುಮಾಡಿ. ಶರೀರಕ್ಕೆ ಒಗ್ಗಿಕೊಳ್ಳಲು ಸಮಯ ಕೊಡಿ, ದಿಢೀರ್ ಸಾಹಸ ಬೇಡ.

ದೇಹದ ಮಾತು ಕೇಳಿ: ಟ್ರೆಕ್ಕಿಂಗ್ ಮಾಡುವಾಗ ಅಥವಾ ಓಡುವಾಗ ವಿಪರೀತ ಸುಸ್ತಾದರೆ, ಎದೆ ಭಾರ ಅನ್ನಿಸಿದರೆ, ಅತಿಯಾಗಿ ಬೆವರು ಬರುತ್ತಿ ದ್ದರೆ ಅಥವಾ ತಲೆ ತಿರುಗಿದಂತಾದರೆ, ನಾಚಿಕೆ ಬಿಟ್ಟು ಅಲ್ಲೇ ಕೂತುಬಿಡಿ. ನನ್ನ ಜೊತೆ ಬಂದವ ರೆಲ್ಲಾ ಮುಂದೆ ಹೋದರು, ನಾನು ಹಿಂದೆ ಬಿದ್ದರೆ ಅವಮಾನ ಎನ್ನುವ ಒಣ ಪ್ರತಿಷ್ಠೆ ಖಂಡಿತಾ ಬೇಡ. ನಿಮ್ಮ ಜೀವಕ್ಕಿಂತ ಹೀರೋಯಿಸಂ ದೊಡ್ಡದಲ್ಲ!

ನೆನಪಿರಲಿ: ಆರೋಗ್ಯ ಅನ್ನೋದು ನಾವೇ ದಿನೇ ದಿನೇ ಕಟ್ಟಿಕೊಳ್ಳುವ ಅರಮನೆ. ಅದಕ್ಕೆ ಪ್ರತಿದಿನ ಒಂದೊಂದು ಇಟ್ಟಿಗೆ ಇಡಬೇಕೇ ಹೊರತು, ವಾರಾಂತ್ಯದಲ್ಲಿ ಒಮ್ಮೆಲೇ ಪಿಲ್ಲರ್ ನಿಲ್ಲಿಸಲು ಹೋದರೆ ಕಟ್ಟಡ ಕುಸಿಯುವುದು ಖಂಡಿತ. ವ್ಯಾಯಾಮ ನಮ್ಮ ಆರೋಗ್ಯವನ್ನು ಹೆಚ್ಚಿಸಬೇಕೇ ವಿನಃ, ಆಯುಷ್ಯವನ್ನೇ ಕಸಿದುಕೊಳ್ಳಬಾರದು.

Dailyhunt
Disclaimer: This content has not been generated, created or edited by Dailyhunt. Publisher: Vishwavani