ಹೊಸ ದೆಹಲಿ, ಜು. 7: ಇತ್ತೀಚೆಗೆ ಆನ್‌ಲೈನ್ ಆಯಪ್ ಬಳಕೆದಾರರಿಗೆ ಬಹಳಷ್ಟು ನೆರವಾಗುತ್ತಿದೆ. ಯಾವುದೇ ಅಗತ್ಯ ವಸ್ತು ಬೇಕು ಅಂದಾಗ ತಕ್ಷಣಕ್ಕೆ ಆರ್ಡರ್ ಮಾಡಿ ಉಪಯೋಗಿಸಿಕೊಳ್ಳಬಹುದು. ಆದರೆ ಇದೀಗ ಆನ್‌ಲೈನ್ ಆಯಪ್‌ಗಳು ಕೇವಲ ವಸ್ತುಗಳನ್ನು ತಲುಪಿಸುವುದು ಮಾತ್ರವಲ್ಲ, ತುರ್ತು ವೈದ್ಯಕೀಯ ನೆರವನ್ನು ಕೂಡ ನೀಡುತ್ತಿವೆ.
ಹೌದು, ವೈದ್ಯಕೀಯ ಸೇವೆಯನ್ನು ಕ್ವಿಕ್ ಕಾಮರ್ಸ್ ಸಂಸ್ಥೆ ಬ್ಲಿಂಕ್‌ಇಟ್ ಆರಂಭಿಸಿದೆ. ಉಚಿತ ಆಂಬ್ಯುಲೆನ್ಸ್ ಸೇವೆಯ ಮೂಲಕ ರೋಗಿಗಳಿಗೆ ನೆರವಾಗುತ್ತಿದೆ. ಈ ಆಯಪ್‌ನ ನೆರವಿನಿಂದ ವೃದ್ಧೆಯೊಬ್ಬರ ಪ್ರಾಣ ಉಳಿದ ವಿಚಾರ ಇದೀಗ ವೈರಲ್(Viral News) ಆಗಿದೆ.
ವೈದ್ಯಕೀಯ ತುರ್ತು ಪರಿಸ್ಥಿತಿಗಳು ಬಂದಾಗ, ಪ್ರತಿ ನಿಮಿಷವೂ ಮುಖ್ಯವಾಗುತ್ತದೆ. ಸಕಾಲಕ್ಕೆ ಚಿಕಿತ್ಸೆ ಒದಗಿಸಲು ಆಂಬ್ಯುಲೆನ್ಸ್‌ಗೆ ಕರೆ ಮಾಡುತ್ತೇವೆ. ಆದರೆ ಭಾರತದ ಅನೇಕ ಕುಟುಂಬಗಳಿಗೆ, ಆಂಬ್ಯುಲೆನ್ಸ್ ಅನ್ನು ತ್ವರಿತವಾಗಿ ವ್ಯವಸ್ಥೆ ಮಾಡುವುದು ಕಷ್ಟ. ಇದೀಗ ಹರಿಯಾಣದ ಗುರುಗ್ರಾಮದ ಕಂಟೆಂಟ್ ಕ್ರಿಯೇಟರ್ ಕೋಮಲ್ ಖಂಡೇಲ್ವಾಲ್ ತಮ್ಮ ನೆರೆಮನೆಯಲ್ಲಿ ವಾಸಿಸುವ ವೃದ್ಧೆಯೊಬ್ಬರಿಗೆ ದಿಢೀರ್ ಹೃದಯಾಘಾತವಾದಾಗ ಬ್ಲಿಂಕ್‌ಇಟ್‌ನ ಉಚಿತ ಆಂಬ್ಯುಲೆನ್ಸ್ ವ್ಯವಸ್ಥೆ ಹೇಗೆ ಸಹಕಾರಿಯಾಯಿತು ಎಂಬುದನ್ನು ತಿಳಿಸಿದ್ದಾರೆ.
ವಿಡಿಯೊ ನೋಡಿ:
ಬ್ಲಿಂಕ್‌ಇಟ್‌ನ ಉಚಿತ ಆಂಬ್ಯುಲೆನ್ಸ್ ತುರ್ತು ಪರಿಸ್ಥಿತಿಯಲ್ಲಿ ನೆರೆಹೊರೆಯವರಿಗೆ ಹೇಗೆ ಸಹಾಯ ಮಾಡಿತು ಎಂಬುದನ್ನು ಮಹಿಳೆ ಹಂಚಿಕೊಂಡಿದ್ದಾರೆ. ʼʼನೆರೆ ಮನೆಯ ವೃದ್ಧೆಯೊಬ್ಬರು ಹೃದಯಾಘಾತದಿಂದ ಬಳಲುತ್ತಿದ್ದು, ತುರ್ತಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಬೇಕಾಗಿತ್ತು. ಆಂಬ್ಯುಲೆನ್ಸ್‌ಗಾಗಿ ಹುಡುಕಿದಾಗ 10,000 ರುಪಾಯಿಂದ 15,000 ರುಪಾಯಿವರೆಗೆ ಬೆಲೆ ಇತ್ತು. ಇದನ್ನು ತಕ್ಷಣ ಭರಿಸಲು ಬಡ ಕುಟುಂಬಕ್ಕೆ ಸಾಧ್ಯವಾಗಲಿಲ್ಲʼʼ ಎಂದು ಹೇಳಿದ್ದಾರೆ.
ಭೀಕರ ಅಲೆಗಳಿಂದ ವೃದ್ಧರ ಪ್ರಾಣ ಉಳಿಸಿ ಕಪಾಳಮೋಕ್ಷ ಮಾಡಿದ ಯುವಕ
ʼʼಆದರೆ ಬಡ ಮತ್ತು ಮಧ್ಯಮ ವರ್ಗದವರಿಗೆ ಆಸ್ಪತ್ರೆಯ ಖರ್ಚುಗಳ ಮಧ್ಯೆ ಇಷ್ಟೊಂದು ದೊಡ್ಡ ಮೊತ್ತ ಭರಿಸುವುದು ಕಷ್ಟವಾಗುತ್ತದೆ. ಈ ಕಷ್ಟದ ಸಮಯದಲ್ಲಿ ಅಲ್ಲಿದ್ದ ವ್ಯಕ್ತಿಯೊಬ್ಬರು ಬ್ಲಿಂಕ್‌ಇಟ್‌ನ ಉಚಿತ ಆಂಬ್ಯುಲೆನ್ಸ್ ಸೇವೆ ಬಳಸಲು ಸಲಹೆ ನೀಡಿದರು. ಅದರಂತೆ ಆಯಪ್ ಮೂಲಕ ಬುಕ್ ಮಾಡಿದ ತಕ್ಷಣ ಆಂಬ್ಯುಲೆನ್ಸ್ ಸ್ಥಳಕ್ಕೆ ಆಗಮಿಸಿತು. ಇದರಲ್ಲಿ ವ್ಹೀಲ್ ಚೇರ್, ಸ್ಟ್ರೆಚರ್, ತರಬೇತಿ ಪಡೆದ ಸಿಬ್ಬಂದಿ, ಅಗತ್ಯ ಔಷಧಗಳು ಮತ್ತು ಉಪಕರಣಗಳಿ ಇದ್ದವುʼʼ ಎಂದು ತಿಳಿಸಿದ್ದಾರೆ.
'ʼಬ್ಲಿಂಕ್‌ಇಟ್ ಈಗ ದೊಡ್ಡ ಮಟ್ಟದಲ್ಲಿ ಲಾಭ ಗಳಿಸುತ್ತಿರಬಹುದು. ಆದರೆ ಅದು ತೋರಿರುವ ಈ ಮಾನವೀಯತೆ ನಿಜಕ್ಕೂ ಮಾದರಿ. ಪ್ರತಿಯೊಬ್ಬರ ಜೀವನವು ಬಹಳ ಮುಖ್ಯ. ಯಾರಿಗಾದರೂ ಹಣವಿಲ್ಲದಿದ್ದರೆ, ಅದು ಅವರ ಪ್ರಾಣವನ್ನು ಕಳೆದುಕೊಳ್ಳಲು ಕಾರಣವಾಗಬಾರದು. ಸಮಯಕ್ಕೆ ಸರಿಯಾಗಿ ಆಸ್ಪತ್ರೆಯನ್ನು ತಲುಪುವಲ್ಲಿ ಆಂಬ್ಯುಲೆನ್ಸ್ ದೊಡ್ಡ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ನಿಮ್ಮ ಬೆಂಬಲ ಹೀಗೆ ಇರಲಿ, ನಾವು ಬ್ಲಿಂಕ್‌ಇಟ್‌ನಿಂದ ಬಹಳಷ್ಟು ಆರ್ಡರ್ ಮಾಡುತ್ತೇವೆ. ತುಂಬಾ ಧನ್ಯವಾದಗಳುʼʼ ಎಂದಿದ್ದಾರೆ.
ಹಲವರು ಬ್ಲಿಂಕಿಟ್‌ನ ಈ ಸೇವೆಯನ್ನು ಶ್ಲಾಘಿಸಿದ್ದಾರೆ. ಒಬ್ಬರು, ʼʼಸರ್ಕಾರವು ಈ ಮೂಲಭೂತ ಸೇವೆಯನ್ನು ನೀಡಬೇಕಿತ್ತು. ಆದರೆ ಈ ಸೌಲಭ್ಯ ಖಾಸಗಿಯಾಗಿ ಬಳಕೆ ಮಾಡುವಂತೆ ಆಗಿದೆʼʼ ಎಂದು ಹೇಳಿದ್ದಾರೆ.

