Dailyhunt Logo
  • Light mode
    Follow system
    Dark mode
    • Play Story
    • App Story
ಅಡಿಕೆ ವಾರ್ಷಿಕ ವಹಿವಾಟು ₹58,664 ಕೋಟಿ, ಅವಲಂಬಿತ ಕುಟುಂಬದವರು 60 ಲಕ್ಷ !

ಅಡಿಕೆ ವಾರ್ಷಿಕ ವಹಿವಾಟು ₹58,664 ಕೋಟಿ, ಅವಲಂಬಿತ ಕುಟುಂಬದವರು 60 ಲಕ್ಷ !

ವಿಶ್ವ ಆರೋಗ್ಯ ಸಂಸ್ಥೆ ಹಂತ ಹಂತವಾಗಿ ತನ್ನ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಅಡಿಕೆ ಬೆಳೆಗಾರರು ಇಂದಿಗೂ "ಅದೆಲ್ಲಾ ಸುಳ್ಳು" ಎಂದು ಚರ್ಚೆ ಮಾಡಿ, ಯಾರು ಮಾತನಾಡುತ್ತಾರೆ ಅವರನ್ನೇ ಕುಗ್ಗಿಸುತ್ತೇವೆ. ಮತ್ತೂ ಮಾತನಾಡಿದರೆ, " ಅವನಿಗೆ ವಿರೋಧ ಮಾಡುವುದೇ ಕೆಲಸ" ಎಂದೂ ಹೇಳುತ್ತೇವೆ.

ಈಗ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ.

ಈಗ ಗುಟ್ಕಾ ಮತ್ತು ತಂಬಾಕು ಅಥವಾ ನಿಕೋಟಿನ್ ಹೊಂದಿರುವ ಪಾನ್‌ಮಸಾಲಾ ಉತ್ಪನ್ನ ರಾಜ್ಯದಲ್ಲೂ ನಿಷೇಧವಾಗುತ್ತಿದೆ. ಇದೂ ವಿಶ್ವ ಆರೋಗ್ಯ ಸಂಸ್ಥೆಯ ಒಂದು ಕಾರ್ಯಯೋಜನೆ.

ಕರ್ನಾಟಕ ಸರ್ಕಾರ ಗುಟ್ಕಾ ಮತ್ತು ತಂಬಾಕು ಅಥವಾ ನಿಕೋಟಿನ್ ಹೊಂದಿರುವ ಪಾನ್‌ಮಸಾಲಾ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ಸಾಗಾಟ, ವಿತರಣೆ ಮತ್ತು ಮಾರಾಟದ ಮೇಲೆ ಒಂದು ವರ್ಷದ ನಿಷೇಧ ಜಾರಿಗೊಳಿಸಿದೆ. ಆಗಸ್ಟ್‌ 10 ರಿಂದ ಈ ಆದೇಶ ಜಾರಿಗೆ ಬಂದಿದೆ.

ಸಾರ್ವಜನಿಕ ಆರೋಗ್ಯದ ಕಾಳಜಿಯ ಹಿನ್ನೆಲೆಯಲ್ಲಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಇದು. ಸಾರ್ವಜನಿಕ ಆರೋಗ್ಯದ ವಿಚಾರದಲ್ಲಿ ಸರ್ಕಾರ ಕೈಗೊಳ್ಳುವ ನಿರ್ಧಾರವನ್ನು ಅಡಿಕೆ ಬೆಳೆಗಾರರ ಜೊತೆ ಹೋಲಿಸುವ ಅಗತ್ಯವಿಲ್ಲ.

ಒಂದು ಕಡೆ ಆರೋಗ್ಯ ನೀತಿ ರೂಪಿಸುವ ಸರ್ಕಾರವೇ ಮತ್ತೊಂದು ಕಡೆ ಆ ನೀತಿಯ ಪರಿಣಾಮ ಎದುರಿಸಬೇಕಾದ ಕೃಷಿಕರ ಭದ್ರತೆಯ ಬಗ್ಗೆಯೂ ಯೋಚಿಸಬೇಕಾಗುತ್ತದೆ. ಇದೇ ಈಗ ಅಡಿಕೆ ಬೆಳೆಗಾರರ ಮುಂದಿರುವ ಮೂಲ ಪ್ರಶ್ನೆ. ಗುಟ್ಕಾ-ಪಾನ್‌ಮಸಾಲಾ ನಿಷೇಧವಾಗುತ್ತದೆಯೇ ಎಂಬುದು ಪ್ರಶ್ನೆಯಲ್ಲ. ನಿಷೇಧದ ನಂತರ ಅಡಿಕೆ ಮಾರುಕಟ್ಟೆಗೆ ಏನಾಗುತ್ತದೆ ಎಂಬುದೇ ಪ್ರಶ್ನೆ.

ನಿಷೇಧದ ಬಗ್ಗೆ ಯಾವ ಕೃಷಿಕರೂ ಆತಂಕಕ್ಕೆ ಒಳಗಾಗಬೇಕಾಗಿಲ್ಲ. ಸರ್ಕಾರಗಳೇ ಅಡಿಕೆ ಹಾನಿಕಾರಕ ಅಲ್ಲ ಎನ್ನುವ ಅಧ್ಯಯನ ವರದಿಯನ್ನು ಅಧಿವೇಶನದಲ್ಲಿಯೇ ನೀಡಿದೆ. ಇನ್ನಷ್ಟು ಅಧ್ಯಯನ ನಡೆಯುತ್ತಿರುವ ಬಗ್ಗೆಯೂ ಸರ್ಕಾರವೇ ಹೇಳಿದೆ, ಅನುದಾನ ಕೂಡಾ ನೀಡಿದೆ. ಈಗ ಅಡಿಕೆ ಮಾರುಕಟ್ಟೆಯ ಬಗ್ಗೆ , ಭವಿಷ್ಯದ ಬಗ್ಗೆ ಮಾತ್ರಾ ಇರುವ ಆತಂಕ ನಿವಾರಣೆಯಾಗಬೇಕಿದೆ.

ಅಡಿಕೆ ಬೆಳೆಗಾರರ ಹಕ್ಕಿನ ಬಗ್ಗೆ ಮಾತನಾಡುವುದು ಎಂದರೆ ಗುಟ್ಕಾ ಅಥವಾ ಪಾನ್‌ಮಸಾಲಾವನ್ನು ಬೆಂಬಲಿಸುವುದಲ್ಲ. ಸಾರ್ವಜನಿಕ ಆರೋಗ್ಯದ ನೀತಿಗೆ ಸರ್ಕಾರಕ್ಕೆ ಸಂಪೂರ್ಣ ಹಕ್ಕಿದೆ. ಆದರೆ ಆ ನೀತಿಯ ಪರಿಣಾಮದಿಂದ ಉಂಟಾಗುವ ಆರ್ಥಿಕ ಅಪಾಯವನ್ನು ಎದುರಿಸಲು ರೈತನಿಗೆ ಯಾವುದೇ ವ್ಯವಸ್ಥೆ ಇಲ್ಲದಿರುವುದು ಮಾತ್ರ ಪ್ರಶ್ನಾರ್ಹ.

ಇಂದು ಭಾರತದಲ್ಲಿ ಅಡಿಕೆ ಉತ್ಪಾದನೆ ಸುಮಾರು 14 ಲಕ್ಷ ಟನ್‌ನಿಂದ 15.29 ಲಕ್ಷ ಟನ್‌ವರೆಗೆ ಏರಿದೆ. ಬೆಳೆ ಪ್ರದೇಶ 9.49 ಲಕ್ಷ ಹೆಕ್ಟೇರ್‌ನಿಂದ 11.06 ಲಕ್ಷ ಹೆಕ್ಟೇರ್‌ವರೆಗೆ ವಿಸ್ತರಿಸಿದೆ. ಸುಮಾರು 60 ಲಕ್ಷ ಜನರು ಈ ಕ್ಷೇತ್ರದ ಮೇಲೆ ಅವಲಂಬಿತರಾಗಿದ್ದಾರೆ ಮತ್ತು ದೇಶೀಯ ಮಾರುಕಟ್ಟೆಯ ಅಂದಾಜು ಮೌಲ್ಯ ₹58,664 ಕೋಟಿ. ಸಾಕಷ್ಟು ತೆರಿಗೆಯೂ ಈ ಕ್ಷೇತ್ರದಲ್ಲಿ ಉತ್ಪಾದನೆಯಾಗುತ್ತಿದೆ. ಇಂತಹ ಕ್ಷೇತ್ರದ ಭವಿಷ್ಯವನ್ನು ಒಂದು ಮಾರುಕಟ್ಟೆ ನೀತಿಯ ಬದಲಾವಣೆಗೆ ಬಿಟ್ಟುಕೊಡಲು ಸಾಧ್ಯವಿಲ್ಲ.

ಭಾರತದ ಅಡಿಕೆ ಕ್ಷೇತ್ರ ಇಂದು ಒಂದು ದೊಡ್ಡ ಕೃಷಿ-ವಾಣಿಜ್ಯ ವ್ಯವಸ್ಥೆಯಾಗಿದೆ. ರೈತ, ಕೃಷಿ ಕಾರ್ಮಿಕ, ವ್ಯಾಪಾರಿ, ಸಹಕಾರಿ ಸಂಸ್ಥೆ, ಸಾಗಾಟಗಾರ, ಸಂಸ್ಕರಣಾ ಘಟಕ ಮತ್ತು ಅಂತಿಮ ಮಾರುಕಟ್ಟೆ .. ಹೀಗೇ ಎಲ್ಲವೂ ಸೇರಿಕೊಂಡಿದೆ. ಸರ್ಕಾರಿ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ 11.06 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 14 ಲಕ್ಷ ಟನ್ ಅಡಿಕೆ ಉತ್ಪಾದನೆಯಾಗಿದೆ. ಅದರಲ್ಲಿ ಕರ್ನಾಟಕದ ಪಾಲು 6.76 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 10 ಲಕ್ಷ ಟನ್. ದೇಶದ ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕದ ಸ್ಥಾನ ಎಷ್ಟು ಮಹತ್ವದ್ದು ಎನ್ನುವುದನ್ನು ಈ ಅಂಕಿ ತೋರಿಸುತ್ತದೆ. ಇದೇ ಅವಧಿಯಲ್ಲಿ ಅಡಿಕೆಯ ಅಂದಾಜು ದೇಶೀಯ ಮಾರುಕಟ್ಟೆ ಮೌಲ್ಯ ₹58,664 ಕೋಟಿ ಎಂದು ನೀಡಲಾಗಿದೆ. ಅಡಿಕೆ ಕ್ಷೇತ್ರದ ಮೇಲೆ ನೇರ ಅಥವಾ ಪರೋಕ್ಷವಾಗಿ ಅವಲಂಬಿತರಾಗಿರುವವರ ಸಂಖ್ಯೆ ಸುಮಾರು 60 ಲಕ್ಷ ಎಂದು ಅಂದಾಜಿಸಲಾಗಿದೆ.

ಅಂದರೆ ಅಡಿಕೆ ಕ್ಷೇತ್ರವು ಸಣ್ಣದಾಗುತ್ತಿಲ್ಲ, ಅದು ಇನ್ನಷ್ಟು ವಿಸ್ತರಿಸುತ್ತಿದೆ ಎನ್ನುವುದರ ಸಾಕ್ಷಿ ಇದು. ಇದಲ್ಲದೆ ಇನ್ನಷ್ಟು ವಿಸ್ತರಣೆಯಾಗಿರುವ ಸಾಧ್ಯತೆಯೇ ಹೆಚ್ಚಿದೆ. ಹೀಗಿರುವಾಗ ಅಡಿಕೆಯ ಬಳಕೆ ಕ್ಷೇತ್ರವೊಂದರಲ್ಲಿ ನೀತಿ ಬದಲಾವಣೆಯಾದಾಗ ಅದರ ಪರಿಣಾಮವನ್ನು ಕೇವಲ ಒಂದು ಉದ್ಯಮದ ಸಮಸ್ಯೆ ಎಂದು ನೋಡುವುದು ಸಾಧ್ಯವಿಲ್ಲ. ಅದು ಕೃಷಿ ಮಾರುಕಟ್ಟೆಯ ಪ್ರಶ್ನೆಯೂ ಹೌದು, ಕೃಷಿಕನ ಆತಂಕವೂ ಹೌದು.

ಕರ್ನಾಟಕದಲ್ಲಿ ಗುಟ್ಕಾ ಮತ್ತು ತಂಬಾಕು-ನಿಕೋಟಿನ್ ಹೊಂದಿರುವ ಪಾನ್‌ಮಸಾಲಾ ಉತ್ಪನ್ನಗಳ ಮೇಲೆ ಇದೇ ರೀತಿಯ ನಿಷೇಧ 2013ರಲ್ಲೂ ಜಾರಿಯಾಗಿತ್ತು. ಆಗ ನಿಷೇಧದ ನಂತರ ಅಡಿಕೆ ಮಾರುಕಟ್ಟೆಯಲ್ಲಿ ತಕ್ಷಣವೇ ಆತಂಕ ಉಂಟಾಗಿತ್ತು.

2013 ರ ಜೂನ್‌ 1 ರ ವರದಿಯ ಪ್ರಕಾರ, ಕೆಂಪಡಿಕೆ ಮಾರುಕಟ್ಟೆ ಇಳಿದಿತ್ತು. ಅಡಿಕೆ ಬೆಳೆಗಾರರು ಮತ್ತು ವ್ಯಾಪಾರಿಗಳು ನಿಷೇಧದ ಪರಿಣಾಮದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಆ ಸಂದರ್ಭದಲ್ಲಿ ಅಡಿಕೆ ಬೆಳೆಗಾರರ ಸಂಘಟನೆಗಳು ಮತ್ತು ಕ್ಯಾಂಪ್ಕೊ ಕೂಡ ಸರ್ಕಾರದ ಮಧ್ಯಪ್ರವೇಶದ ಅಗತ್ಯವನ್ನು ಒತ್ತಿಹೇಳಿತ್ತು. ಆಗ ಮಾರುಕಟ್ಟೆ ಪರಿಸ್ಥಿತಿ ಸಂಪೂರ್ಣ ಕುಸಿತಕ್ಕೆ ತಿರುಗಲಿಲ್ಲ.

ಅಂದಿನ ಸರ್ಕಾರವೂ ಅಡಿಕೆ ಬೆಳೆಗಾರರು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿ, ಬೆಲೆ ಕುಸಿದರೆ ತುರ್ತು ಆರ್ಥಿಕ ನೆರವು ನೀಡುವ ಭರವಸೆ ನೀಡಿತ್ತು. ಪರ್ಯಾಯ ಬೆಳೆ ಮತ್ತು ಅಂತರಬೆಳೆಗಳಿಗೂ ಉತ್ತೇಜನ ನೀಡುವ ಬಗ್ಗೆ ಸರ್ಕಾರ ಹೇಳಿತ್ತು.

ಈ ಬಾರಿ ಕೂಡ ಅದೇ ರೀತಿಯ ಪರಿಣಾಮ ಉಂಟಾಗುತ್ತದೆಯೇ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ ನಿಷೇಧದ ನಂತರ ಅಡಿಕೆ ಮಾರುಕಟ್ಟೆಯಲ್ಲಿ ಕುಸಿತದ ಆತಂಕ ಈಗಾಗಲೇ ವ್ಯಕ್ತವಾಗಿದೆ. ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ ಅವರು ನಿಷೇಧದ ಬಳಿಕ ಅಡಿಕೆ ಮಾರುಕಟ್ಟೆಯಲ್ಲಿ ಕುಸಿತ ಉಂಟಾಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದ್ದಾರೆ.

ಇಂದು ಅಡಿಕೆಯ ಎಲ್ಲಾ ಬಳಕೆಯೂ ಗುಟ್ಕಾ ಅಥವಾ ಪಾನ್‌ಮಸಾಲಾಕ್ಕೆ ಮಾತ್ರ ಸೀಮಿತವಾಗಿದೆ ಎನ್ನುವುದು ಸರಿಯಾದ ವಿಶ್ಲೇಷಣೆಯಾಗುವುದಿಲ್ಲ.ಅಡಿಕೆಗೆ ವಿವಿಧ ಬಳಕೆ ಮತ್ತು ಮಾರುಕಟ್ಟೆಗಳಿವೆ. ಆದರೆ ಪಾನ್‌ಮಸಾಲಾ ಮತ್ತು ಜಗಿಯುವ ಉತ್ಪನ್ನಗಳ ಉದ್ಯಮವು ಅಡಿಕೆಯ ದೊಡ್ಡ ವಾಣಿಜ್ಯ ಬಳಕೆ ಕ್ಷೇತ್ರಗಳಲ್ಲಿ ಒಂದಾಗಿರುವುದರಿಂದ, ಆ ಕ್ಷೇತ್ರದ ಮೇಲೆ ಸರ್ಕಾರದ ನಿರ್ಬಂಧವು ಬೇಡಿಕೆ ಮತ್ತು ಮಾರುಕಟ್ಟೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ನಿರ್ಲಕ್ಷಿಸಲಾಗದು.

ಹೀಗಾಗಿ ಅಡಿಕೆ ಬೆಳೆಗಾರರು "ನಿಷೇಧದಿಂದ ಅಡಿಕೆಯ ಸಂಪೂರ್ಣ ಮಾರುಕಟ್ಟೆ ಮುಗಿಯುತ್ತದೆ" ಎಂಬ ಭೀತಿಯನ್ನೂ ನಂಬಬಾರದು. ಹಾಗೆಂದು "ಯಾವುದೇ ಪರಿಣಾಮ ಆಗುವುದಿಲ್ಲ" ಎಂಬ ಅತಿಯಾದ ವಿಶ್ವಾಸವೂ ಸರಿಯಲ್ಲ. ಭವಿಷ್ಯದ ಮಾರುಕಟ್ಟೆಯ ಮೇಲೆ ಗಮನ ನೀಡುವ ಅಗತ್ಯ ಇದೆ.

(ಲೇಖಕ: ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ)

ವಾಸ್ತವದಲ್ಲಿ ಏನಾಗಿದೆ, ಏನಾಗುತ್ತಿದೆ ಎಂಬುದಕ್ಕೆ ಅಧ್ಯಯನ ಬೇಕಾಗಿದೆ. ಈಗ ಅಡಿಕೆ ಬೆಳೆಗಾರರಿಗೆ ಬೇಕಾಗಿರುವುದು ಆತಂಕವಲ್ಲ. ಮಾರುಕಟ್ಟೆಯ ನಿಜವಾದ ಡಾಟಾಗಳು. ಅಡಿಕೆಯ ಬೇಡಿಕೆ ಎಲ್ಲಿ, ಯಾವುದಕ್ಕೆ ಎಷ್ಟಿದೆ ಎಂಬುದು. ಇದಿಷ್ಟೇ ಈಗ ಅಡಿಕೆ ಮಾರುಕಟ್ಟೆಯ ಭವಿಷ್ಯ ಮತ್ತು ದಿಕ್ಕನ್ನು ಭದ್ರವಾಗಿಸುತ್ತದೆ.ಅಧ್ಯಯನ ಆಗಲಿ
Dailyhunt
Disclaimer: This content has not been generated, created or edited by Dailyhunt. Publisher: Prajavani