Dailyhunt Logo
  • Light mode
    Follow system
    Dark mode
    • Play Story
    • App Story
ಐದು ಬಾರಿಯ ಚಾಂಪಿಯನ್ ಬ್ರೆಜಿಲ್‌ಗೆ ಆಘಾತ: ನೇಮರ್ ಕಣ್ಣೀರಿನ ವಿದಾಯ

ಐದು ಬಾರಿಯ ಚಾಂಪಿಯನ್ ಬ್ರೆಜಿಲ್‌ಗೆ ಆಘಾತ: ನೇಮರ್ ಕಣ್ಣೀರಿನ ವಿದಾಯ

ನ್ಯೂಯಾರ್ಕ್: 2026ರ ಫಿಫಾ ವಿಶ್ವಕಪ್‌ ಪ್ರೀ-ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಬ್ರೆಜಿಲ್ ತಂಡವು ನಾರ್ವೆ ವಿರುದ್ಧ 1-2 ಗೋಲುಗಳ ಆಘಾತಕಾರಿ ಸೋಲು ಅನುಭವಿಸಿದೆ.

ಇದರ ಬೆನ್ನಲ್ಲೇ ಬ್ರೆಜಿಲ್ ತಂಡದ ತಾರೆ, ಫಾರ್ವಡ್ ಆಟಗಾರ ನೇಮರ್ ಜೂನಿಯರ್ ಅಂತರರಾಷ್ಟ್ರೀಯ ಫುಟ್‌ಬಾಲ್ ವೃತ್ತಿ ಜೀವನಕ್ಕೆ ಕಣ್ಣೀರಿನ ವಿದಾಯ ಘೋಷಿಸಿದ್ದಾರೆ.

ಮೆಟ್‌ಲೈಫ್ ಸ್ಟೇಡಿಯಂನಲ್ಲಿ ಭಾನುವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಅವಳಿ ಗೋಲು ಗಳಿಸಿದ ನಾರ್ವೆಯ ಯುವ ತಾರೆ ಎರ್ಲಿಂಗ್ ಹಾಲೆಂಡ್, ಬ್ರೆಜಿಲ್‌ನ ವಿಶ್ವಕಪ್ ಕನಸನ್ನು ಭಗ್ನಗೊಳಿಸಿದರು.

ಬ್ರೆಜಿಲ್ ವಿರುದ್ಧ ಐತಿಹಾಸಿಕ ಜಯ ಸಾಧಿಸಿದ ನಾರ್ವೆ, ಇದೇ ಮೊದಲ ಬಾರಿಗೆ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಕಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿತು.

ಬ್ರೆಜಿಲ್ ಪರ ಅತಿ ಹೆಚ್ಚು ಗೋಲು ಗಳಿಸಿದ ದಾಖಲೆ:

ಬ್ರೆಜಿಲ್ ಪರ ಸಾರ್ವಕಾಲಿಕ ಗರಿಷ್ಠ ಗೋಲು ಸರದಾರ ಎಂಬ ದಾಖಲೆಯೊಂದಿಗೆ ನೇಮರ್ ವಿದಾಯ ಘೋಷಿಸಿದ್ದಾರೆ.

ಪಂದ್ಯ ಮುಗಿದ ತಕ್ಷಣ ಭಾವುಕರಾದ 34 ವರ್ಷದ ನೇಮರ್, ತಮ್ಮ 16 ವರ್ಷಗಳ ಸುದೀರ್ಘ ಅಂತಾರರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಎಳೆದರು.

'ನಾನು ಸಾಕಷ್ಟು ಪ್ರಯತ್ನಿಸಿದೆ, ಆದರೆ ಈಗ ಎಲ್ಲವೂ ಮುಗಿದಿದೆ. ನಾನು ಎಲ್ಲಿಂದ ವೃತ್ತಿಜೀವನ ಆರಂಭಿಸಿದ್ದೆನೋ ಇಂದಿಗೆ ಇಲ್ಲೇ ಮುಗಿಸುತ್ತಿದ್ದೇನೆ' ಎಂದು ಕಣ್ಣೀರಿಡುತ್ತಲೇ ನೇಮರ್ ತಿಳಿಸಿದ್ದಾರೆ.

ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರೂ ಪಂದ್ಯದ ಅಂತಿಮ ಕ್ಷಣದಲ್ಲಿ ನೇಮರ್ ಬ್ರೆಜಿಲ್ ಪರ ಏಕೈಕ ಗೋಲು ಗಳಿಸಿದರು. ಈ ಗೋಲು ಪಂದ್ಯದ ದ್ವಿತಿಯಾರ್ಧದ ಇಂಜುರಿ ಟೈಮ್‌ನಲ್ಲಿ (90+10ನೇ ನಿಮಿಷ) ದಾಖಲಾಯಿತು.

ನೇಮರ್ ಜೂನಿಯರ್

ಬ್ರೆಜಿಲ್ ಪರ 80 ಗೋಲು:

ಈ ಗೋಲಿನೊಂದಿಗೆ ನೇಮರ್, ಬ್ರೆಜಿಲ್ ಪರ ಒಟ್ಟು 130 ಪಂದ್ಯಗಳಲ್ಲಿ 80 ಗೋಲು ಹಾಗೂ 59 ಅಸಿಸ್ಟ್‌ಗಳನ್ನು ದಾಖಲಿಸಿ, ಮಾಜಿ ದಿಗ್ಗಜ ಪೆಲೆ ಅವರ ದಾಖಲೆಯನ್ನು ಹಿಂದಿಕ್ಕಿ ದೇಶದ ಸಾರ್ವಕಾಲಿಕ ಶ್ರೇಷ್ಠ ಗೋಲು ಸ್ಕೋರರ್ ಎಂಬ ದಾಖಲೆ ನಿರ್ಮಿಸಿದ್ದಾರೆ.

1990ರ ಬಳಿಕ ಬ್ರೆಜಿಲ್ ತಂಡವು ಟೂರ್ನಿಯಿಂದ ಇಷ್ಟು ಬೇಗ ಹೊರಬಿದ್ದಿರುವುದು ಇದೇ ಮೊದಲಾಗಿದೆ. ನೇಮರ್ ಅವರ ವಿದಾಯದೊಂದಿಗೆ ಬ್ರೆಜಿಲ್ ಫುಟ್‌ಬಾಲ್‌ನ ಸುವರ್ಣ ಯುಗವೊಂದು ಅಂತ್ಯಗೊಂಡಂತಾಗಿದೆ. ಇದು ಅಭಿಮಾನಿಗಳಲ್ಲಿ ಬೇಸರಕ್ಕೆ ಕಾರಣವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani