ನ್ಯೂಯಾರ್ಕ್: 2026ರ ಫಿಫಾ ವಿಶ್ವಕಪ್ ಟೂರ್ನಿಯ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಬ್ರೆಜಿಲ್ ವಿರುದ್ಧ 2-1 ಗೋಲುಗಳ ರೋಚಕ ಗೆಲುವು ದಾಖಲಿಸಿರುವ ನಾರ್ವೆ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಫಿಫಾ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಾರ್ವೆ ಅಂತಿಮ ಎಂಟರ ಘಟ್ಟಕ್ಕೆ ಪ್ರವೇಶಿಸಿದೆ.
ಮತ್ತೊಂದೆಡೆ ಐದು ಬಾರಿಯ ಚಾಂಪಿಯನ್ ಬ್ರೆಜಿಲ್ ಕನಸು ಭಗ್ನಗೊಂಡಿದೆ.
ಹಾಲೆಂಡ್ ಅವಳಿ ಗೋಲು...
ನ್ಯೂಯಾರ್ಕ್‌ನ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ನಾರ್ವೆ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ಫಾರ್ವರ್ಡ್ ಆಟಗಾರ ಎರ್ಲಿಂಗ್ ಹಾಲೆಂಡ್ ಅವಳಿ ಗೋಲು ಬಾರಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಅಮೋಘ ಕಾಲ್ಚೆಂಡಿನ ಆಟ ಪ್ರದರ್ಶಿಸಿದ ಹಾಲೆಂಡ್, ಪಂದ್ಯದ 79 ಹಾಗೂ 90ನೇ ನಿಮಿಷಗಳಲ್ಲಿ ಗೋಲು ಗಳಿಸಿದ್ದಾರೆ.
ಬ್ರೆಜಿಲ್ ಪರ ನೇಮರ್ ಜೂನಿಯರ್ ಪಂದ್ಯದ ಅಂತಿಮ ಕ್ಷಣದಲ್ಲಿ ದೊರಕಿದ ಪೆನಾಲ್ಟಿ ಕಿಕ್ ಅವಕಾಶವನ್ನು (90+10) ಗೋಲು ಆಗಿ ಪರಿವರ್ತಿಸಿದರು. ಆದರೂ ಇದು ಗೆಲುವಿಗೆ ಸಹಕಾರಿಯಾಗಲಿಲ್ಲ.
ಭಾವುಕರಾದ ನೇಮರ್ ಕಣ್ಣೀರು ಸುರಿಸುತ್ತಾ ಮೈದಾನ ತೊರೆದಿದ್ದಾರೆ. ಅಲ್ಲದೆ ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ವಿದಾಯ ಘೋಷಿಸಿದ್ದಾರೆ.
ಗೋಲ್ಡನ್ ಬೂಟ್ ರೇಸ್
ಪ್ರಸಕ್ತ ಸಾಲಿನ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರ ಸಾಲಿನಲ್ಲಿಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಹಾಗೂ ಫ್ರಾನ್ಸ್‌ನ ಕೈಲಿಯನ್ ಎಂಬಾಪೆ ಸಾಲಿಗೆ ಹಾಲೆಂಡ್ ಸೇರ್ಪಡೆಯಾಗಿದ್ದಾರೆ. ಗೋಲ್ಡನ್ ಬೂಟ್ ರೇಸ್‌ನಲ್ಲಿ ಈ ಮೂವರು ಆಟಗಾರರು ತಲಾ ಏಳು ಗೋಲುಗಳೊಂದಿಗೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

