Dailyhunt Logo
  • Light mode
    Follow system
    Dark mode
    • Play Story
    • App Story
ಅನಾರೋಗ್ಯ ರಜೆಯ ನಿಯಮ ಬದಲು? ಮೊದಲ ದಿನವೇ ವೈದ್ಯರ ಪ್ರಮಾಣಪತ್ರ ಕಡ್ಡಾಯ

ಅನಾರೋಗ್ಯ ರಜೆಯ ನಿಯಮ ಬದಲು? ಮೊದಲ ದಿನವೇ ವೈದ್ಯರ ಪ್ರಮಾಣಪತ್ರ ಕಡ್ಡಾಯ

ರ್ಲಿನ್: ಉದ್ಯೋಗಿಗಳು ಅನಾರೋಗ್ಯದ ರಜೆ ಪಡೆದರೆ ಮೊದಲ ದಿನವೇ ವೈದ್ಯರ ಪ್ರಮಾಣಪತ್ರ ಸಲ್ಲಿಸುವುದನ್ನು ಕಡ್ಡಾಯಗೊಳಿಸುವ ಕಾನೂನು ಜಾರಿಗೆ ತರಲು ಜರ್ಮನಿ ಮುಂದಾಗಿದೆ.

ಚಾನ್ಸಲರ್ ಫ್ರಿಡ್ರಿಕ್ ಮರ್ಝ್ ನೇತೃತ್ವದ ಸರ್ಕಾರ ಅನಾರೋಗ್ಯ ರಜೆ ನಿಯಮಗಳಲ್ಲಿ ಬದಲಾವಣೆ ತರಲು ಮುಂದಾಗಿದ್ದು, ಕೋವಿಡ್-19 ಅವಧಿಯಲ್ಲಿ ಜಾರಿಗೊಂಡಿದ್ದ ದೂರವಾಣಿ ಮೂಲಕ ವೈದ್ಯರಿಂದ ಪ್ರಮಾಣಪತ್ರ ಪಡೆಯುವ ವ್ಯವಸ್ಥೆಯನ್ನು ರದ್ದುಗೊಳಿಸಲು ಉದ್ದೇಶಿಸಿದೆ.

ಈಗಿನ ನಿಯಮವೇನು?

ಪ್ರಸ್ತುತ ಜರ್ಮನಿಯಲ್ಲಿ ಉದ್ಯೋಗಿಯೊಬ್ಬರು ಮೂರು ದಿನಗಳವರೆಗೆ ಅನಾರೋಗ್ಯ ರಜೆ ಪಡೆದರೆ ವೈದ್ಯರ ಪ್ರಮಾಣಪತ್ರ ಸಲ್ಲಿಸುವ ಅಗತ್ಯವಿಲ್ಲ. ನಾಲ್ಕನೇ ದಿನದಿಂದ ಮಾತ್ರ ಪ್ರಮಾಣಪತ್ರ ಕಡ್ಡಾಯ. ಆದರೆ, ಹೊಸ ಪ್ರಸ್ತಾಪಿತ ನಿಯಮದ ಪ್ರಕಾರ ಉದ್ಯೋಗದಾತರು ಬೇಕಾದರೆ ಮೊದಲೇ ಪ್ರಮಾಣಪತ್ರ ಕೇಳುವ ಅಧಿಕಾರ ಹೊಂದಿರಲಿದ್ದಾರೆ.

ಹೊಸ ಪ್ರಸ್ತಾವದ ಪ್ರಕಾರ, ಅನಾರೋಗ್ಯದ ಮೊದಲ ದಿನದಿಂದಲೇ ವೈದ್ಯರ ಪ್ರಮಾಣಪತ್ರ ಸಲ್ಲಿಸಬೇಕಾಗುತ್ತದೆ. ಈ ಪ್ರಸ್ತಾವವನ್ನು ಚಾನ್ಸಲರ್ ಫ್ರಿಡ್ರಿಕ್ ಮರ್ಝ್ ಅವರ ಕ್ರಿಶ್ಚಿಯನ್ ಡೆಮಾಕ್ರಟಿಕ್ ಯೂನಿಯನ್ ಮತ್ತು ಆಡಳಿತ ಮೈತ್ರಿಕೂಟದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಒಪ್ಪಿಕೊಂಡಿವೆ.

ಇತ್ತಿಹಾದ್ ರೈಲು: ಅಬುಧಾಬಿ-ಫುಜೈರಾ ನಡುವೆ ಕೇವಲ 90 ನಿಮಿಷಗಳ ಪ್ರಯಾಣ!


ಸರ್ಕಾರದ ವಾದವೇನು?

'ಜರ್ಮನಿಯಲ್ಲಿ ಅನಾರೋಗ್ಯ ರಜೆ ಪಡೆಯುವವರ ಸಂಖ್ಯೆ ಭಾರಿ ಹೆಚ್ಚಾಗಿದೆ. ಕೆಲಸದಿಂದ ದೀರ್ಘಕಾಲ ದೂರ ಉಳಿಯುವುದರಿಂದ ದೇಶದ ಸ್ಪರ್ಧಾತ್ಮಕತೆಗೆ ಹಾನಿಯಾಗುತ್ತಿದೆ. ಕೋವಿಡ್‌ಗೂ ಮುನ್ನ ಇದ್ದ ವ್ಯವಸ್ಥೆಗೆ ಮರಳುತ್ತಿದ್ದೇವೆ. ಕೋವಿಡ್ ಬಳಿಕ ಅನಾರೋಗ್ಯ ರಜೆಯ ಪ್ರಮಾಣ ಅತಿಯಾದ ಮಟ್ಟಕ್ಕೆ ತಲುಪಿದೆ ಎಂದು ಮರ್ಝ್ ಹೇಳಿದ್ದಾರೆ.

ವೈದ್ಯರಿಂದ ವಿರೋಧ

ವೈದ್ಯರ ಸಂಘಟನೆಗಳು ಈ ಪ್ರಸ್ತಾವವನ್ನು ತೀವ್ರವಾಗಿ ವಿರೋಧಿಸಿವೆ.

‌'ಕೇವಲ ಪ್ರಮಾಣಪತ್ರಕ್ಕಾಗಿ ಸಾವಿರಾರು ಜನರನ್ನು ಆಸ್ಪತ್ರೆಗೆ ಅಥವಾ ಕ್ಲಿನಿಕ್‌ಗೆ ಕಳುಹಿಸುವುದು ಹುಚ್ಚುತನದ ನಿರ್ಧಾರದಂತಿದೆ. ಕೆಮ್ಮು ಅಥವಾ ಹೊಟ್ಟೆ ಸೋಂಕು ಇರುವವರು ಮನೆಯಲ್ಲೇ ವಿಶ್ರಾಂತಿ ಪಡೆಯಬೇಕು. ಜನದಟ್ಟಣೆ ಇರುವ ಆಸ್ಪತ್ರೆಗಳಲ್ಲಿ ಕಾಯಬಾರದು ಎಂದು ಸರ್ಕಾರಿ ಆರೋಗ್ಯ ವಿಮೆ ವ್ಯಾಪ್ತಿಯ ವೈದ್ಯರನ್ನು ಪ್ರತಿನಿಧಿಸುವ ಕೆಬಿವಿ ಸಂಘಟನೆ ಟೀಕಿಸಿದೆ.

ಒಂದು ಅಥವಾ ಎರಡು ದಿನಗಳ ವಿಶ್ರಾಂತಿಯಿಂದ ಗುಣವಾಗುವ ಸೋಂಕಿನ ರೋಗಿಗಳಿಂದ ಆಸ್ಪತ್ರೆಗಳ ನಿರೀಕ್ಷಣಾ ಕೊಠಡಿಗಳು ತುಂಬಿಹೋಗಲಿವೆ ಎಂದು ಸಾಮಾನ್ಯ ವೈದ್ಯರ ಸಂಘ ಎಚ್ಚರಿಕೆ ನೀಡಿದೆ.

ಜನ್ಮಸಿದ್ಧ ಪೌರತ್ವ: ಭಾರತ, ಅಮೆರಿಕ, ಗಲ್ಫ್ ರಾಷ್ಟ್ರಗಳ ಕಾನೂನು ಏನು ಹೇಳುತ್ತದೆ?

ಮೈತ್ರಿ ಸರ್ಕಾರದಲ್ಲೇ ಭಿನ್ನಾಭಿಪ್ರಾಯ

ಉಪ ಚಾನ್ಸಲರ್ ಹಾಗೂ ಎಸ್‌ಪಿಡಿ ನಾಯಕ ಲಾರ್ಸ್ ಕ್ಲಿಂಗ್‌ಬೈಲ್, ಈ ವಿಷಯದಲ್ಲಿ ಎಲ್ಲರಿಗೂ ಅನುಕೂಲವಾಗುವ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯಲಿದೆ ಎಂದು ಹೇಳಿದ್ದಾರೆ.

ಇನ್ನೊಂದೆಡೆ, ಕಾರ್ಮಿಕ ಸಚಿವೆ ಬರ್ಬೆಲ್ ಬಾಸ್, 'ಮೊದಲ ದಿನವೇ ವೈದ್ಯರ ಪ್ರಮಾಣಪತ್ರ ಕಡ್ಡಾಯಗೊಳಿಸುವ ಪ್ರಸ್ತಾವ ನನ್ನದಲ್ಲ. ಇದರಿಂದ ನಿಜವಾಗಿಯೂ ಪ್ರಯೋಜನವಾಗುತ್ತದೆಯೇ ಅಥವಾ ಸಮಸ್ಯೆಗಳು ಹೆಚ್ಚಾಗುತ್ತವೆಯೇ ಎಂಬುದನ್ನು ಪರಿಶೀಲಿಸುತ್ತೇವೆ' ಎಂದು ಹೇಳಿದ್ದಾರೆ.

ಸಿಡಿಯು ಬೆಂಬಲ

ಆದರೆ, ಸಿಡಿಯು ಸಂಸದೀಯ ನಾಯಕ ಜೆನ್ಸ್ ಸ್ಪಾನ್ ಈ ಪ್ರಸ್ತಾವವನ್ನು ಸಮರ್ಥಿಸಿಕೊಂಡಿದ್ದಾರೆ. 'ಐರೋಪ್ಯ ಒಕ್ಕೂಟ ರಾಷ್ಟ್ರಗಳ ಪೈಕಿ ಜರ್ಮನಿಯಲ್ಲಿ ಅನಾರೋಗ್ಯ ರಜೆ ತೆಗೆದುಕೊಳ್ಳುವವರ ಪ್ರಮಾಣ ಅತ್ಯಧಿಕವಾಗಿದೆ. ಒಬ್ಬ ಉದ್ಯೋಗಿ ವರ್ಷಕ್ಕೆ ಸರಾಸರಿ 18 ದಿನಗಳ ಅನಾರೋಗ್ಯ ರಜೆ ಪಡೆಯುತ್ತಿದ್ದಾರೆ. ನಿಜವಾಗಿಯೂ ಅನಾರೋಗ್ಯವಿದ್ದವರು ಮನೆಯಲ್ಲೇ ಉಳಿಯಬೇಕು. ಆದರೆ ವ್ಯವಸ್ಥೆಯ ದುರುಪಯೋಗವಾಗದಂತೆ ನೋಡಿಕೊಳ್ಳಬೇಕು' ಎಂದು ಅವರು ಹೇಳಿದ್ದಾರೆ.

ಆಧಾರ: ಬಿಬಿಸಿ ನ್ಯೂಸ್, ಜರ್ಮನ್ ಸರ್ಕಾರದ ಪ್ರಕಟಣೆಗಳು

ಎನ್‌ಆರ್‌ಐ ಸಚಿವಾಲಯ ಸ್ಥಾಪನೆಯ ಸಾಧಕ-ಬಾಧಕ: ಜಿ. ಪರಮೇಶ್ವರ ನೇತೃತ್ವದಲ್ಲಿ ಸಮಿತಿ
Dailyhunt
Disclaimer: This content has not been generated, created or edited by Dailyhunt. Publisher: Prajavani