Dailyhunt Logo
  • Light mode
    Follow system
    Dark mode
    • Play Story
    • App Story
ಜನ್ಮಸಿದ್ಧ ಪೌರತ್ವ: ಭಾರತ, ಅಮೆರಿಕ, ಗಲ್ಫ್ ರಾಷ್ಟ್ರಗಳ ಕಾನೂನು ಏನು ಹೇಳುತ್ತದೆ?

ಜನ್ಮಸಿದ್ಧ ಪೌರತ್ವ: ಭಾರತ, ಅಮೆರಿಕ, ಗಲ್ಫ್ ರಾಷ್ಟ್ರಗಳ ಕಾನೂನು ಏನು ಹೇಳುತ್ತದೆ?

ಒಂದು ಮಗು ಯಾವುದೇ ದೇಶದಲ್ಲಿ ಜನಿಸಿದರೆ, ಆ ದೇಶದ ಪೌರತ್ವ ಸ್ವಯಂಚಾಲಿತವಾಗಿ ಸಿಗುತ್ತದೆಯೇ? ಈ ಪ್ರಶ್ನೆ ಇತ್ತೀಚೆಗೆ ಮತ್ತೆ ಜಾಗತಿಕ ಚರ್ಚೆಗೆ ಬಂದಿದೆ. ಪಾಸ್‌ಪೋರ್ಟ್ ಪೌರತ್ವದ ಪುರಾವೆಯಲ್ಲ ಎಂದು ಭಾರತ ಸರ್ಕಾರ ಹೇಳಿರುವುದು ಹಾಗೂ ಅಮೆರಿಕದಲ್ಲಿ ಜನ್ಮಸಿದ್ಧ ಪೌರತ್ವ ಕುರಿತ ಕಾನೂನು ಮತ್ತು ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ವಿವಿಧ ದೇಶಗಳ ಪೌರತ್ವ ಕಾನೂನುಗಳು ಮತ್ತೆ ಗಮನ ಸೆಳೆದಿವೆ.

ವಾಸ್ತವವಾಗಿ, ಜಗತ್ತಿನ ಬಹುತೇಕ ದೇಶಗಳಲ್ಲಿ ಜನಿಸಿದರೆ ಮಾತ್ರ ಪೌರತ್ವ ಸಿಗುವುದಿಲ್ಲ. ಪೌರತ್ವವು ಸಾಮಾನ್ಯವಾಗಿ ಮಗುವಿನ ಪೋಷಕರ ರಾಷ್ಟ್ರೀಯತೆಯನ್ನು ಆಧರಿಸಿ ನಿರ್ಧಾರವಾಗುತ್ತದೆ. ಆದರೆ ಕೆಲವು ದೇಶಗಳು ಮಾತ್ರ ತಮ್ಮ ಭೂಭಾಗದಲ್ಲಿ ಜನಿಸಿದ ಮಕ್ಕಳಿಗೆ ಯಾವುದೇ ಹೆಚ್ಚುವರಿ ಷರತ್ತುಗಳಿಲ್ಲದೆ ಸ್ವಯಂಚಾಲಿತವಾಗಿ ಪೌರತ್ವ ನೀಡುತ್ತವೆ.

ಯುದ್ಧಭೂಮಿಯ ಹೊರಗೆ ಗುಪ್ತ ಸಂಘರ್ಷ: ಟ್ರಂಪ್-ಸಲ್ಮಾನ್ ನಡುವೆ ಬಿರುಕು ಮೂಡಿದ್ದೇಕೆ?

ಜನ್ಮಸಿದ್ಧ ಪೌರತ್ವ ಎಂದರೇನು?

ಜನ್ಮದ ಆಧಾರದಲ್ಲಿ ಪೌರತ್ವ ನೀಡುವ ವ್ಯವಸ್ಥೆಯನ್ನು ಜಸ್ ಸೋಲಿ (Jus Soli) ಅಥವಾ 'Right of the Soil' ಎಂದು ಕರೆಯಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಒಂದು ಮಗು ಆ ದೇಶದ ಭೂಭಾಗದಲ್ಲಿ ಜನಿಸಿದರೆ, ಸಾಮಾನ್ಯವಾಗಿ ಆ ದೇಶದ ಪ್ರಜೆಯಾಗುತ್ತದೆ (ವಿದೇಶಿ ರಾಜತಾಂತ್ರಿಕರ ಮಕ್ಕಳಂತಹ ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ).

ಮತ್ತೊಂದು 'ಜಸ್ ಸ್ಯಾಂಗ್ವಿನಿಸ್' (Jus Sanguinis) ಅಥವಾ 'Right of Blood' ವ್ಯವಸ್ಥೆಯಲ್ಲಿ, ಮಗುವಿನ ಪೌರತ್ವವನ್ನು ಪೋಷಕರ ಪೌರತ್ವವೇ ನಿರ್ಧರಿಸುತ್ತದೆ. ವಿಶ್ವದ ಬಹುತೇಕ ರಾಷ್ಟ್ರಗಳು ಇದೇ ವ್ಯವಸ್ಥೆಯನ್ನು ಅನುಸರಿಸುತ್ತಿವೆ.

ಹುಟ್ಟಿನಿಂದ ಪೌರತ್ವ ಎತ್ತಿಹಿಡಿದ ಅಮೆರಿಕ ನ್ಯಾಯಾಲಯ: ಭಾರತೀಯರು ಏನಂತಾರೆ?

ಯಾವ ದೇಶಗಳು ಜನ್ಮಸಿದ್ಧ ಪೌರತ್ವ ನೀಡುತ್ತವೆ?

ಪ್ರಸ್ತುತ ವಿಶ್ವದಲ್ಲಿ ಸುಮಾರು 35-36 ರಾಷ್ಟ್ರಗಳು ಮಾತ್ರ ಷರತ್ತುಗಳಿಲ್ಲದ ಜನ್ಮಸಿದ್ಧ ಪೌರತ್ವ ನೀಡುತ್ತಿವೆ.

  • ಅಮೆರಿಕ

  • ಕೆನಡಾ

  • ಮೆಕ್ಸಿಕೊ

  • ಬೆಲೀಸ್

  • ಕೋಸ್ಟಾ ರಿಕಾ

  • ಎಲ್ ಸಾಲ್ವಡೋರ್

  • ಗ್ವಾಟೆಮಾಲಾ

  • ಹೊಂಡುರಾಸ್

  • ನಿಕರಾಗುವಾ

  • ಪನಾಮಾ

  • ಆಂಟಿಗುವಾ ಮತ್ತು ಬಾರ್ಬುಡಾ

  • ಬಾರ್ಬಡೋಸ್

  • ಕ್ಯೂಬಾ

  • ಡೊಮಿನಿಕಾ

  • ಗ್ರೆನೆಡಾ

  • ಜಮೈಕಾ

  • ಸೇಂಟ್ ಕಿಟ್ಸ್ ಮತ್ತು ನೆವಿಸ್

  • ಸೇಂಟ್ ಲೂಸಿಯಾ

  • ಸೇಂಟ್ ವಿನ್ಸೆಂಟ್ ಮತ್ತು ಗ್ರೆನೆಡೈನ್ಸ್

  • ಟ್ರಿನಿಡಾಡ್ ಮತ್ತು ಟೊಬಾಗೊ

  • ಅರ್ಜೆಂಟಿನಾ

  • ಬೊಲಿವಿಯಾ

  • ಬ್ರೆಜಿಲ್

  • ಚಿಲಿ

  • ಈಕ್ವೆಡಾರ್

  • ಗಯಾನಾ

  • ಪರಾಗ್ವೆ

  • ಪೆರು

  • ಉರುಗ್ವೆ

  • ವೆನೆಜುವೆಲಾ

  • ಚಾಡ್

  • ಲೆಸೊಥೊ

  • ಟಾಂಜಾನಿಯಾ

  • ಪಾಕಿಸ್ತಾನ

  • ಫಿಜಿ

  • ಟುವಾಲು

ಭಾರತದಲ್ಲಿ ಏನು ನಿಯಮ?

ಭಾರತದಲ್ಲಿ ಮೊದಲು ಜನ್ಮಸಿದ್ಧ ಪೌರತ್ವ ಹಕ್ಕು ಇತ್ತು. ಆದರೆ ಅಕ್ರಮ ವಲಸೆ ಸೇರಿದಂತೆ ಹಲವು ಕಾರಣಗಳಿಂದ ಪೌರತ್ವ ಕಾಯ್ದೆಗೆ ತಿದ್ದುಪಡಿಗಳನ್ನು ತರಲಾಯಿತು.

1950 ಜನವರಿ 26 - 1987 ಜೂನ್ 30

ಈ ಅವಧಿಯಲ್ಲಿ ಭಾರತದಲ್ಲಿ ಜನಿಸಿದ ಯಾವುದೇ ವ್ಯಕ್ತಿಗೆ ಸ್ವಯಂಚಾಲಿತವಾಗಿ ಭಾರತೀಯ ಪೌರತ್ವ ದೊರೆಯುತ್ತಿತ್ತು.

1987 ಜುಲೈ 1 - 2004 ಡಿಸೆಂಬರ್ 2

ಈ ಅವಧಿಯಲ್ಲಿ ಭಾರತದಲ್ಲಿ ಜನಿಸಿದ ಮಗುವಿನ ಪೋಷಕರಲ್ಲಿ ಕನಿಷ್ಠ ಒಬ್ಬರು ಭಾರತೀಯ ಪ್ರಜೆಯಾಗಿದ್ದರೆ ಮಾತ್ರ ಪೌರತ್ವ ಸಿಗುತ್ತಿತ್ತು.

2004ರ ಡಿಸೆಂಬರ್ 3 ಇಂದಿನವರೆಗೆ

ಪ್ರಸ್ತುತ ನಿಯಮಗಳ ಪ್ರಕಾರ ಪೋಷಕರಲ್ಲಿ ಒಬ್ಬರು ಭಾರತೀಯ ಪ್ರಜೆಯಾಗಿರಬೇಕು, ಇನ್ನೊಬ್ಬರು ಅಕ್ರಮ ವಲಸಿಗರಾಗಿರಬಾರದು. ಅಂದರೆ, ಭಾರತದಲ್ಲಿ ಜನಿಸಿದರೆ ಮಾತ್ರ ಭಾರತೀಯ ಪೌರತ್ವ ಸಿಗುವುದಿಲ್ಲ.

ಪಾಸ್‌ಪೋರ್ಟ್‌ ಪೌರತ್ವ ಪುರಾವೆ ಅಲ್ಲ: ಸರ್ಕಾರಿ ಮೂಲಗಳ ಸ್ಪಷ್ಟನೆ

ಪಶ್ಚಿಮ ಏಷ್ಯಾದಲ್ಲಿ ಏನಿದೆ?

ಪಶ್ಚಿಮ ಏಷ್ಯಾದ ಯಾವುದೇ ರಾಷ್ಟ್ರದಲ್ಲಿ ಅಮೆರಿಕ ಅಥವಾ ಕೆನಡಾದ ಮಾದರಿಯಲ್ಲಿ ಷರತ್ತುಗಳಿಲ್ಲದ ಜನ್ಮಸಿದ್ಧ ಪೌರತ್ವ ನೀಡುವ ನಿಯಮಗಳಿಲ್ಲ. ಈ ಪ್ರದೇಶದ ಬಹುತೇಕ ರಾಷ್ಟ್ರಗಳಲ್ಲಿ ಪೌರತ್ವವು ಪೋಷಕರ ರಾಷ್ಟ್ರೀಯತೆಯನ್ನು ಆಧರಿಸಿರುತ್ತದೆ.

ಸೌದಿ ಅರೇಬಿಯಾ, ಯುಎಇ, ಕತಾರ್, ಕುವೈತ್, ಬಹರೇನ್, ಒಮಾನ್, ಇರಾನ್, ಇರಾಕ್, ಇಸ್ರೇಲ್, ಜೋರ್ಡಾನ್, ಲೆಬನಾನ್, ಸಿರಿಯಾ, ಯೆಮನ್ ಈ ದೇಶಗಳಲ್ಲಿ ಜನ್ಮಸಿದ್ಧ ಪೌರತ್ವ ಇಲ್ಲ.

ಉದಾಹರಣೆಗೆ, ಯುಎಇಯಲ್ಲಿ ಲಕ್ಷಾಂತರ ಭಾರತೀಯರು ಹಾಗೂ ಇತರ ವಿದೇಶಿಗರು ಹಲವು ವರ್ಷಗಳಿಂದ ವಾಸಿಸುತ್ತಿದ್ದರೂ, ಅಲ್ಲಿಯೇ ಜನಿಸಿದ ಮಕ್ಕಳಿಗೆ ಪೌರತ್ವ ದೊರೆಯುವುದಿಲ್ಲ. ಇದೇ ನಿಯಮ ಸೌದಿ ಅರೇಬಿಯಾ, ಕತಾರ್ ಮತ್ತು ಕುವೈತ್‌ನಲ್ಲೂ ಇದೆ.

ಗಲ್ಫ್‌ನಲ್ಲಿ ವಾಸಿಸುವ ಭಾರತೀಯರಿಗೆ ಏನು ಪರಿಣಾಮ?

ಯುಎಇ, ಸೌದಿ ಅರೇಬಿಯಾ, ಕತಾರ್, ಕುವೈತ್, ಬಹರೇನ್ ಮತ್ತು ಒಮಾನ್‌ನಲ್ಲಿ ಲಕ್ಷಾಂತರ ಭಾರತೀಯರು, ಅದರಲ್ಲೂ ಸಾವಿರಾರು ಕನ್ನಡಿಗರು ಹಲವು ದಶಕಗಳಿಂದ ಉದ್ಯೋಗ, ವ್ಯಾಪಾರ ಮತ್ತು ವೃತ್ತಿ ಕಾರಣಗಳಿಗೆ ನೆಲೆಸಿದ್ದಾರೆ.

ಆದರೆ ಈ ದೇಶಗಳಲ್ಲೇ ಅವರ ಮಕ್ಕಳು ಜನಿಸಿದರೂ, ಕೇವಲ ಜನ್ಮದ ಆಧಾರದಲ್ಲಿ ಆ ದೇಶದ ಪೌರತ್ವ ದೊರೆಯುವುದಿಲ್ಲ. ಬಹುತೇಕ ಸಂದರ್ಭಗಳಲ್ಲಿ ಮಗುವಿನ ಪೌರತ್ವವು ಪೋಷಕರ ರಾಷ್ಟ್ರೀಯತೆಯನ್ನು ಆಧರಿಸಿ ನಿರ್ಧಾರವಾಗುತ್ತದೆ. ಭಾರತೀಯ ಪೋಷಕರ ಮಕ್ಕಳಿಗೆ ಸಾಮಾನ್ಯವಾಗಿ ಭಾರತೀಯ ಕಾನೂನುಗಳ ಅನ್ವಯ ಭಾರತೀಯ ಪೌರತ್ವ ಅಥವಾ ಭಾರತೀಯ ಪಾಸ್‌ಪೋರ್ಟ್ ಪಡೆಯುವ ಅವಕಾಶವಿರುತ್ತದೆ.

ಹೀಗಾಗಿ, ಗಲ್ಫ್ ರಾಷ್ಟ್ರಗಳಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವುದು ಅಥವಾ ಅಲ್ಲಿಯೇ ಜನಿಸಿರುವುದು ಮಾತ್ರ ಆ ದೇಶದ ನಾಗರಿಕತ್ವ ಪಡೆಯಲು ಸಾಕಾಗುವುದಿಲ್ಲ. ಆಯಾ ದೇಶಗಳ ಪೌರತ್ವ ಕಾನೂನುಗಳ ಪ್ರಕಾರ ಅಥವಾ ಇತರ ವಿಶೇಷ ಕಾನೂನುಬದ್ಧ ಮಾರ್ಗಗಳ ಮೂಲಕವೇ ನಾಗರಿಕತ್ವ ಪಡೆಯಲು ಅವಕಾಶವಿರುತ್ತದೆ.

ಸಾಗರೋತ್ತರ ಪೌರತ್ವ ಹೊಂದಿರುವವರಿಗೆ ಕೇಂದ್ರದ ಹೊಸ ಸೌಲಭ್ಯ: ಇ-ಒಸಿಐಗೆ ಚಾಲನೆ

ಕೆಲವು ದೇಶಗಳಲ್ಲಿ ಸೀಮಿತ ವಿನಾಯಿತಿ

ಕೆಲವು ರಾಷ್ಟ್ರಗಳಲ್ಲಿ ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಪೌರತ್ವಕ್ಕೆ ಅವಕಾಶವಿದೆ.

ಇರಾನ್: ಕೆಲವು ಕಾನೂನುಬದ್ಧ ಷರತ್ತುಗಳನ್ನು ಪೂರೈಸಿದರೆ ಅವಕಾಶವಿದೆ.

ಬಹರೇನ್: ಸೀಮಿತ ಸಂದರ್ಭಗಳಲ್ಲಿ ಮಾತ್ರ ಅವಕಾಶವಿದೆ.

ಇಸ್ರೇಲ್: ಜನ್ಮದಿಂದಲೇ ಪೌರತ್ವ ಸಿಗುವುದಿಲ್ಲ. ಆದರೆ ಕೆಲವು ಮಕ್ಕಳು ನಂತರ ಕಾನೂನಿನಡಿ ಅರ್ಜಿ ಸಲ್ಲಿಸಬಹುದು.

ಅನೇಕ ರಾಷ್ಟ್ರಗಳು ದೇಶರಹಿತ ಮಕ್ಕಳಿಗೆ ವಿಶೇಷ ಕಾನೂನುಗಳ ಮೂಲಕ ಪೌರತ್ವ ನೀಡುವ ಅವಕಾಶ ಹೊಂದಿವೆ.

ಯುರೋಪಿನ ಬಹುತೇಕ ರಾಷ್ಟ್ರಗಳು ಸಹ ಷರತ್ತುಗಳಿಲ್ಲದ ಜನ್ಮಸಿದ್ಧ ಪೌರತ್ವ ನೀಡುವುದಿಲ್ಲ. ಬ್ರಿಟನ್, ಫ್ರಾನ್ಸ್, ಜರ್ಮನಿ, ಐರ್ಲೆಂಡ್, ಬೆಲ್ಜಿಯಂ, ಪೋರ್ಚುಗಲ್ ಹಾಗೂ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಪೋಷಕರ ಪೌರತ್ವ, ಶಾಶ್ವತ ನಿವಾಸ ಅಥವಾ ನಿರ್ದಿಷ್ಟ ಅವಧಿಯ ಕಾನೂನುಬದ್ಧ ವಾಸದಂತಹ ಷರತ್ತುಗಳನ್ನು ಪೂರೈಸಿದರೆ ಮಾತ್ರ ಪೌರತ್ವ ಸಿಗುತ್ತದೆ.

ಅಮೆರಿಕ ಪೌರತ್ವ: ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಭಾರತೀಯರಿಗೆ ನಿರಾಳ ಯಾಕೆ?

ಜನ್ಮಸಿದ್ಧ ಪೌರತ್ವ ಮತ್ತು ಶಾಶ್ವತ ನಿವಾಸ

ಒಂದು ದೇಶದಲ್ಲಿ ಜನಿಸುವುದು, ಆ ದೇಶದಲ್ಲಿ ಹಲವು ವರ್ಷ ವಾಸಿಸುವುದು, ಶಾಶ್ವತ ನಿವಾಸ ಪಡೆಯುವುದು ಮತ್ತು ಆ ದೇಶದ ಪೌರತ್ವ ಪಡೆಯುವುದು-ಇವೆಲ್ಲವೂ ವಿಭಿನ್ನ ಕಾನೂನು ಪ್ರಕ್ರಿಯೆಗಳು.

ಹಲವು ರಾಷ್ಟ್ರಗಳಲ್ಲಿ ಹಲವು ವರ್ಷ ಕಾನೂನುಬದ್ಧವಾಗಿ ವಾಸಿಸಿದ ಬಳಿಕ ಪೌರತ್ವ ಪಡೆಯಬಹುದು. ಆದರೆ ಇದು ಜನ್ಮಸಿದ್ಧ ಪೌರತ್ವವಲ್ಲ.

ಅಮೆರಿಕ ಖಂಡದಲ್ಲೇ ಹೆಚ್ಚು ಏಕೆ?

19ನೇ ಶತಮಾನದಲ್ಲಿ ಸ್ವಾತಂತ್ರ್ಯ ಪಡೆದ ಬಳಿಕ ವಲಸಿಗರನ್ನು ಆಕರ್ಷಿಸಲು, ಜನಸಂಖ್ಯೆ ಹೆಚ್ಚಿಸಲು ಮತ್ತು ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡಲು ಅಮೆರಿಕ ಖಂಡದ ಅನೇಕ ರಾಷ್ಟ್ರಗಳು ಜನ್ಮಸಿದ್ಧ ಪೌರತ್ವ ವ್ಯವಸ್ಥೆಯನ್ನು ಅಳವಡಿಸಿಕೊಂಡವು. ಯುರೋಪ್, ಏಷ್ಯಾ ಮತ್ತು ಮಧ್ಯಪ್ರಾಚ್ಯದ ಬಹುತೇಕ ರಾಷ್ಟ್ರಗಳು ವಂಶಪಾರಂಪರ್ಯ ಆಧಾರಿತ ಪೌರತ್ವ ವ್ಯವಸ್ಥೆಯನ್ನೇ ಮುಂದುವರಿಸಿಕೊಂಡಿವೆ.

(ಪೌರತ್ವ ಕಾನೂನುಗಳು ಕಾಲಕಾಲಕ್ಕೆ ಬದಲಾಗಬಹುದು. ಆದ್ದರಿಂದ ಆಯಾ ದೇಶಗಳ ಪೌರತ್ವ ಕಾನೂನನ್ನು ಪರಿಶೀಲಿಸಿ)

ಆಧಾರ: ಪ್ಯೂ ರಿಸರ್ಚ್ ಸೆಂಟರ್, ವಿಶ್ವ ಜನಸಂಖ್ಯೆ ಹಿನ್ನೋಟ, ಭಾರತ ಹಾಗೂ ವಿವಿಧ ದೇಶಗಳ ಪೌರತ್ವ ಕಾನೂನು

ಅತ್ಯಂತ ಕೆಟ್ಟ ಸಂಗತಿ:ಜನ್ಮಸಿದ್ಧ ಪೌರತ್ವ ಕುರಿತ ಕೋರ್ಟ್ ತೀರ್ಪು ಖಂಡಿಸಿದ ಟ್ರಂಪ್
Dailyhunt
Disclaimer: This content has not been generated, created or edited by Dailyhunt. Publisher: Prajavani