Dailyhunt Logo
  • Light mode
    Follow system
    Dark mode
    • Play Story
    • App Story
ಅಂದು ಮಗುವಿಗೆ ಸ್ನಾನ ಮಾಡಿಸಿದ್ದ ಮೆಸ್ಸಿ: ಈಗ ಅದೇ ಮಗುವಿನ ಎದುರು ಮಹಾಸಮರ!

ಅಂದು ಮಗುವಿಗೆ ಸ್ನಾನ ಮಾಡಿಸಿದ್ದ ಮೆಸ್ಸಿ: ಈಗ ಅದೇ ಮಗುವಿನ ಎದುರು ಮಹಾಸಮರ!

ಯಾವುದೋ ಸಿನಿಮಾ ಕಥೆಯನ್ನೂ ಮೀರಿಸುವಂತಹ ರೋಚಕತೆಯೊಂದು ಕ್ರೀಡಾಲೋಕದಲ್ಲಿ ಸೃಷ್ಟಿಯಾಗಿದೆ. ಸುಮಾರು 19 ವರ್ಷಗಳ ಹಿಂದೆ ಉದ್ದನೆಯ ಕೂದಲಿನ 20 ವರ್ಷದ ಲಯೊನೆಲ್ ಮೆಸ್ಸಿ ಮುದ್ದಾಡಿದ್ದ ಆ ಪುಟ್ಟ ಮಗುವಿನ ವಿರುದ್ಧವೇ 2026ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ಮಹಾಸಮರದಲ್ಲಿ ಸೆಣಸಾಡಲು ಸಜ್ಜಾಗಿದ್ದಾರೆ!

ಅಂದು ಮಗುವನ್ನು ಮುದ್ದಾಡಿದ ಆಟಗಾರ ಹಾಗೂ ಆ ಪುಟ್ಟ ಮಗು ಮುಂದೊಂದು ದಿನ ಜಗತ್ತಿನಲ್ಲೇ ಪ್ರಸಿದ್ಧಿ ಪಡೆಯುವ ಆಟಗಾರರಾಗುತ್ತಾರೆ ಎಂದು ಯಾರೂ ಕನಸಿನಲ್ಲೂ ಯೋಚಿಸಿರಲಿಲ್ಲ!

ಅಂದು ಮೆಸ್ಸಿಯ ಮಡಿಲಲ್ಲಿ ಬಾತ್ ಟಬ್‌ನಲ್ಲಿ ಕುಳಿತು ಮಿಂದಿದ್ದ ಆ ನಾಲ್ಕು ತಿಂಗಳ ಮಗು ಮತ್ಯಾರೂ ಅಲ್ಲ. ಇಂದು ಇಡೀ ಫುಟ್‌ಬಾಲ್ ಜಗತ್ತಿನಲ್ಲಿ ವಿಸ್ಮಯ ಮಾಡಿರುವ ಸ್ಪೇನ್ ತಂಡದ 19 ವರ್ಷದ ಹದಿಹರೆಯದ ತಾರೆ ಲಮಿನ್ ಯಮಾಲ್

ಆ ಅಪರೂಪದ ಫೋಟೋಶೂಟ್ ಇಂದು ಇತಿಹಾಸದ ಮುನ್ನುಡಿಯಂತೆ ಭಾಸವಾಗುತ್ತಿದೆ. 2007ರಲ್ಲಿ ನಡೆದಿದ್ದ ಈ ಅಪರೂಪದ ಫೋಟೋಶೂಟ್‌ನ ಚಿತ್ರವನ್ನು ಯಮಾಲ್ ಅವರ ತಂದೆ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಅದಕ್ಕೆ ಅವರು 'ಇಬ್ಬರು ದಂತಕಥೆಗಳ ಉಗಮದ ಕ್ಷಣ' ಎಂದು ಬರೆದುಕೊಂಡಿದ್ದರು. ಈ ಒಂದೇ ಒಂದು ಪೋಸ್ಟ್ ಇಡೀ ಕ್ರೀಡಾಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿತು.

2007ರಲ್ಲಿ ಬಾರ್ಸಿಲೋನಾದ ಪ್ರಸಿದ್ಧ 'ಕ್ಯಾಂಪ್ ನೌ' ಕ್ರೀಡಾಂಗಣದ ಪ್ರವಾಸಿ ಆಟಗಾರರ ಡ್ರೆಸ್ಸಿಂಗ್ ಕೋಣೆಯಲ್ಲಿ ಈ ಫೋಟೊಶೂಟ್ ನಡೆದಿತ್ತು. ಸ್ಥಳೀಯ ಪತ್ರಿಕೆ 'ಡಿಯಾರಿಯೋ ಸ್ಪೋರ್ಟ್' ಮತ್ತು ವಿಶ್ವಸಂಸ್ಥೆಯ ಮಕ್ಕಳ ನಿಧಿ (UNICEF) ಜಂಟಿಯಾಗಿ ಪ್ರತಿವರ್ಷ ನಡೆಸುವ ಚಾರಿಟಿ ಕ್ಯಾಲೆಂಡರ್‌ಗಾಗಿ ಈ ಫೋಟೋಶೂಟ್ ಹಮ್ಮಿಕೊಳ್ಳಲಾಗಿತ್ತು.

ಅಂದು ಫೋಟೋ ಕ್ಲಿಕ್ಕಿಸಿದ್ದ ಛಾಯಾಗ್ರಾಹಕ 56 ವರ್ಷದ ಜೋನ್ ಮಾನ್‌ಫೋರ್ಟ್ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. 'ಯೂನಿಸೆಫ್‌ನ ಬಾರ್ಸಿಲೋನಾದ ರೊಕಾಫೊಂಡಾ ಎಂಬ ಬಡ ಮಧ್ಯಮ ವರ್ಗದ ಜನವಸತಿ ಪ್ರದೇಶದಲ್ಲಿ ಒಂದು ಸ್ಪರ್ಧೆ ಆಯೋಜಿಸಲಾಗಿತ್ತು. ಅದರಲ್ಲಿ ವಿಜೇತರಾಗುವ ಕುಟುಂಬಕ್ಕೆ ಬಾರ್ಸಿಲೋನಾ ಕ್ಲಬ್‌ನ ಆಟಗಾರರೊಂದಿಗೆ ಫೋಟೋಶೂಟ್‌ನಲ್ಲಿ ಪಾಲ್ಗೊಳ್ಳುವ ಅವಕಾಶವಿತ್ತು. ಯಮಾಲ್ ಅವರ ಪೋಷಕರು ಈ ಲಕ್ಕಿ ಡ್ರಾದಲ್ಲಿ ಅದೃಷ್ಟವಶಾತ್ ಗೆದ್ದಿದ್ದರು. ಆದರೆ ತಮಗೆ ಯಾವ ಆಟಗಾರ ಸಿಗಲಿದ್ದಾರೆ ಎಂಬುದು ಅವರಿಗೆ ತಿಳಿದಿರಲಿಲ್ಲ. ವಿಧಿಯ ಆಟ ನೋಡಿ, ಅಲ್ಲಿ ಅವರಿಗೆ ಎದುರಾಗಿದ್ದು ಅಂದಿನ ಉದಯೋನ್ಮುಖ ತಾರೆ ಲಯೊನೆಲ್ ಮೆಸ್ಸಿ ಎಂದು ಮಾನ್‌ಫೋರ್ಟ್ ನೆನಪಿಸಿಕೊಳ್ಳುತ್ತಾರೆ.

'ಮೆಸ್ಸಿ ತುಂಬಾ ಅಂತರ್ಮುಖಿ. ರೂಮ್‌ಗೆ ಬಂದು ನೋಡಿದಾಗ ನೀರಿನ ಟಬ್ ಮತ್ತು ಮಗು ಇತ್ತು. ಆರಂಭದಲ್ಲಿ ಆ ಪುಟ್ಟ ಮಗುವನ್ನು ಕೈಯಲ್ಲಿ ಹೇಗೆ ಎತ್ತಿಕೊಳ್ಳಬೇಕು ಎಂಬುದೇ ಅವರಿಗೆ ತೋಚುತ್ತಿರಲಿಲ್ಲ. ತುಂಬಾ ಕಷ್ಟಪಟ್ಟು ಸಂಕೋಚದಿಂದಲೇ ಮಗುವನ್ನು ಹಿಡಿದುಕೊಂಡಿದ್ದರು,' ಎಂದು ಫೋಟೋಗ್ರಾಫರ್ ಮಾನ್‌ಫೋರ್ಟ್ ಆ ಕ್ಷಣವನ್ನು ಸ್ಮರಿಸುತ್ತಾರೆ. ಈ ಫೋಟೋಶೂಟ್‌ನಲ್ಲಿ ಯಮಾಲ್ ಅವರ ತಾಯಿಯೂ ಇದ್ದರು.

ಅಂದು ಕಾಕತಾಳೀಯ ಎಂಬಂತೆ ನಡೆದ ಈ ಭೇಟಿ ಇಂದು ಫುಟ್‌ಬಾಲ್ ಇತಿಹಾಸದ ರೋಚಕ ಕ್ಷಣವಾಗಿ ಮಾರ್ಪಾಟ್ಟಿದೆ. ಸ್ಪೇನ್ ಹಾಗೂ ಅರ್ಜೆಂಟೀನಾ ಮುಖಾಮುಖಿ ಕೇವಲ ವೈಯಕ್ತಿಕ ಹಣಾಹಣಿಯಲ್ಲ. ಇಬ್ಬರೂ ಆಟಗಾರರು ಬಾರ್ಸಿಲೋನಾ ಕ್ಲಬ್‌ನ ವಿಶ್ವವಿಖ್ಯಾತ 'ಲಾ ಮಸಿಯಾ' ಅಕಾಡೆಮಿಯಲ್ಲೇ ಪಳಗಿದವರು ಎಂಬುದು ವಿಶೇಷ. ಮೆಸ್ಸಿ ಅಕಾಡೆಮಿಯಲ್ಲಿ ಕಲಿತ ಅದೇ ತಂತ್ರಗಾರಿಕೆ ಹಾಗೂ ಕೌಶಲಗಳನ್ನು ವರ್ಷಗಳ ನಂತರ ಯಮಾಲ್ ಕೂಡ ಕರಗತ ಮಾಡಿಕೊಂಡಿದ್ದಾರೆ.

'ಮೆಸ್ಸಿ ಅಂದು ಯಮಾಲ್ ಮೇಲೆ ಚಿಮುಕಿಸಿದ ನೀರು ಕೇವಲ ನೀರಲ್ಲ, ಅದು ಫುಟ್‌ಬಾಲ್ ಜಾದೂವಿನ ದೀಕ್ಷೆ' ಎಂದು ಸ್ಪ್ಯಾನಿಷ್ ಮಾಧ್ಯಮಗಳು ಬಣ್ಣಿಸಿವೆ.

39ರ ಹರೆಯದ ಲಯೊನೆಲ್ ಮೆಸ್ಸಿ ಈ ವಿಶ್ವಕಪ್‌ನಲ್ಲಿ ಎಂಟು ಗೋಲುಗಳನ್ನು ಗಳಿಸಿ, ಅರ್ಜೆಂಟೀನಾ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಮತ್ತೊಂದೆಡೆ, ಕೇವಲ 19 ವರ್ಷದ ಯಮಾಲ್ ತಮ್ಮ ಅದ್ಭುತ ಆಟದ ಮೂಲಕ ಇತಿಹಾಸ ಬರೆಯುತ್ತಿದ್ದಾರೆ. ಪ್ರಮುಖ ಟೂರ್ನಿಗಳಲ್ಲಿ ಯಮಾಲ್ ಕಣಕ್ಕಿಳಿದು ಆಡಿದ ಎಲ್ಲಾ ಪಂದ್ಯಗಳಲ್ಲೂ ಸ್ಪೇನ್ ಜಯಭೇರಿ ಬಾರಿಸಿದೆ. ಒಟ್ಟಿನಲ್ಲಿ ಫೈನಲ್ ಪಂದ್ಯವು ಮತ್ತಷ್ಟು ರೋಚಕತೆಗೆ ಸಾಕ್ಷಿಯಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani